ಜ್ಯಾಕ್ ಮೊಲ
ಮರುಭೂಮಿಯಲ್ಲಿ ಅತಿ ಉಷ್ಣತೆಗೆ ತಕ್ಕ ಹಾಗೆ ಇಲ್ಲಿನ ಪ್ರಾಣಿಗಳ ದೇಹ ಕೂಡ ಮಾರ್ಪಾಟು ಹೊಂದಿರುತ್ತದೆ. ಹೆಚ್ಚಿನ ಮರಳುಗಾಡು ಪ್ರಾಣಿಗಳು ವೇಗವಾಗಿ ಚಲಿಸಬಲ್ಲವು. ಆಹಾರಕ್ಕೆ ಬಹಳ ದೂರ ಓಡಾಡಬೇಕಿರುವುದರಿಂದ ಈ ಪ್ರಾಕೃತಿಕ ಕೊಡುಗೆ ಅವಕ್ಕೆ ದಕ್ಕಿದೆ. ಜೊತೆಗೆ, ತಮ್ಮನ್ನು ಬೇಟೆಯಾಡಲು ಬರುವ ಶತ್ರುವಿನಿಂದಲೂ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಅದಕ್ಕಿದೆ. ಉದಾಹರಣೆಗೆ, ಅಮೇರಿಕದ ಮರುಭೂಮಿಯ ‘ಜ್ಯಾಕ್ ಮೊಲ' ಎಷ್ಟು ವೇಗವಾಗಿ ಓಡುತ್ತದೆ ಎಂದರೆ ಎಷ್ಟೋ ಸಲ ತೋಳ ನರಿಗಳೆಲ್ಲ ಇದನ್ನು ಹಿಡಿಯುವ ಪ್ರಯತ್ನ ಕೂಡ ಮಾಡುವುದಿಲ್ಲ.!
***
ಮೀನುಗಳೇ ನೀವೆಷ್ಟು ಅದೃಷ್ಟಶಾಲಿಗಳು !
ಅನೇಕ ಮೀನುಗಳು ಈಜು ಕೋಶ (ಸ್ವಿಮ್ ಬ್ಲಾಡರ್) ಎಂಬ ಅಂಗವನ್ನು ಹೊಂದಿರುತ್ತವೆ. ಇದು ಹೆಚ್ಚುವರಿ ಶಕ್ತಿಯನ್ನು ಬಳಸದೇ ನೀರಿನಲ್ಲಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಲು ಸಹಾಯ ಮಾಡುತ್ತದೆ. ಈಜು ಕೋಶವನ್ನು ಅನಿಲವನ್ನು ಹಿಡಿದಿಟ್ಟುಕೊಳ್ಳುವ ಚೀಲ ಎನ್ನಬಹುದು. ಮೀನುಗಳೇ ಅದೃಷ್ಟವಂತರು. ಹೆಚ್ಚಿನ ಪರಿಶ್ರಮವಿಲ್ಲದೆಯೇ ತೇಲಬೇಕೆನಿಸಿದಾಗ ತೇಲಬಹುದು. ಮುಳುಗಬೇಕೆನ್ನಿಸಿತಾ? ಸುಲಭವಾಗಿ ಮುಳುಗಬಹುದು. ಮುಳುಗಲು ಅಥವಾ ತೇಲಲು ಅಗತ್ಯವಿರುವ ಸಾಂದ್ರತೆಗೆ ಅನುಗುಣವಾಗಿ ತಮ್ಮ ಈಜುಕೋಶವನ್ನು ತುಂಬಿಕೊಂಡರಾಯಿತು ಅಥವಾ ಖಾಲಿ ಮಾಡಿದರಾಯಿತು. ಹೆಚ್ಚು ಅನಿಲ ತುಂಬಿಸಿಕೊಂಡರೆ ಅವು ಮೇಲಕ್ಕೆ ತೇಲಬಹುದು. ಅನಿಲ ಕಡಿಮೆ ಇದೆಯೆಂದರೆ ಮುಳುಗಬಹುದು. ನಮಗೂ ಇಂತಹ ಒಂದು ಈಜುಕೋಶವಿದ್ದರೆ ಚೆನ್ನಾಗಿತ್ತು ಅಲ್ಲವಾ? ಆದರೆ ಮೀನುಗಳ ಅಗತ್ಯಕ್ಕೆ ತಕ್ಕಂತೆ ಅವುಗಳ ದೇಹಾಕಾರವಿದೆ. ಅವು ತಮ್ಮ ರಕ್ತದಲ್ಲಿರುವ ಆಮ್ಲಜನಕವನ್ನು ತಮ್ಮ ಈಜು ಕೋಶದ ಒಳಗೆ ಅಥವಾ ಹೊರಗೆ ವರ್ಗಾಯಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.
ವಿ.ಸೂ: ಈ ಮೀನಿನ ಅದೃಷ್ಟದ ಸಂಗತಿ ಬಾಣಲೆಯಲ್ಲಿ ಫ್ರೈ ಆಗುತ್ತಿರುವ ಮೀನಿನ ಬಂಧುಬಾಂಧವರಿಗೆ ಅನ್ವಯಿಸುವುದಿಲ್ಲ…
***
ಯಾವುದು ದಪ್ಪ ರಕ್ತ ಅಥವಾ ನೀರು?
‘ರಕ್ತವು ನೀರಿಗಿಂತ ದಪ್ಪ' (Blood is thicker than water) ಎಂಬ ಆಂಗ್ಲ ಭಾಷೆಯ ಉಕ್ತಿಯನ್ನು ನೀವು ಎಂದಾದರೂ ಕೇಳಿರಬಹುದು. ಅಂದರೆ ಎಲ್ಲ ಸಂಬಂಧಗಳಿಗಿಂತ ರಕ್ತ ಸಂಬಂಧ ಹೆಚ್ಚು ಗಟ್ಟಿಯಾದದ್ದು ಎಂದರ್ಥ. ವೈಜ್ಞಾನಿಕವಾಗಿಯೂ ಇದು ಸತ್ಯ. ರಕ್ತದಲ್ಲಿ ಕೆಂಪು ರಕ್ತ ಕಣಗಳು, ಪ್ಲೇಟ್ ಲೇಟ್ ಗಳು ಮುಂತಾದ ಕಣಗಳಿರುವುದರಿಂದ ಅದು ನೀರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು ಸ್ನಿಗ್ಧತೆಯನ್ನು ಆದರೆ ರಕ್ತದ ಸ್ನಿಗ್ಧತೆ ತುಂಬಾ ಹೆಚ್ಚಾದರೂ ಸಹ ಅದು ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ. ಏಕೆಂದರೆ ನಿಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸರಬರಾಜು ಮಾಡುವ ಕೆಲಸ ಹೃದಯದ್ದು. ಹಾಗಾಗಿ ರಕ್ತದ ಸ್ನಿಗ್ಧತೆ ಹೆಚ್ಚಾದರೆ ಹೃದಯಕ್ಕೆ ರಕ್ತವನ್ನು ಪಂಪ್ ಮಾಡುವುದು ಸಹ ತುಂಬಾ ಕಷ್ಟವಾಗುತ್ತದೆ. ಆರೋಗ್ಯಕರ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ, ಧೂಮಪಾನ ಮಾಡದಿರುವುದು ಮುಂತಾದವು ನಿಮ್ಮ ರಕ್ತವನ್ನು ತೆಳುವಾಗಿಡಲು ಸಹಾಯ ಮಾಡುತ್ತದೆ.
***
ನೀರಿನ ಬಾಟಲಿನ ಅವಧಿ
ನೀರಿನ ಬಾಟಲಿಗಳಲ್ಲಿ ಅವಧಿ ಮುಕ್ತಾಯದ ದಿನಾಂಕ (Expiry Date) ಹಾಕಿರುತ್ತಾರೆ. ನೋಡಿರುವಿರಲ್ಲಾ? ಈ ಅವಧಿ ಮುಕ್ತಾಯ ನೀರಿಗೋ, ಬಾಟಲಿಗೋ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ವಾಸ್ತವದಲ್ಲಿ ಆ ದಿನಾಂಕವನ್ನು ನಿಗದಿಪಡಿಸುವುದು ಬಾಟಲಿಗೆ. ಸೂಚಿಸಿರುವ ಅವಧಿ ಮುಗಿದ ನಂತರ ಆ ಬಾಟಲಿಯು ಬಳಸಲು ಯೋಗ್ಯವಿರುವುದಿಲ್ಲ. ಹಳೇ ನೀರಿನ ಬಾಟಲಿಗಳನ್ನು ವರ್ಷಗಟ್ಟಲೇ ಬಳಸುವುದು ಆರೋಗ್ಯಕರವಲ್ಲ.
***
(ಮಾಹಿತಿ ಸಂಗ್ರಹ: ಸೂತ್ರ ಪತ್ರಿಕೆ)