ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು

ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು

ಬರಹ
ಒಬ್ಬಾತನ ಹೆಂಡತಿಗೆ ಬಹಳ ಕಾಯಿಲೆಯಾಗಿತ್ತು. ಗಂಡನನ್ನು ಸಮೀಪಕ್ಕೆ ಕರೆದು ಹೇಳಿದಳು-- “ನನಗೆ ನಿನ್ನ ಮೇಲೆ ತುಂಬ ಪ್ರೀತಿ. ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ ಸಾವು ಸಮೀಪವಿದೆ. ನಿನ್ನನ್ನು ಬಿಟ್ಟು ಇರಲಾರೆ. ನನ್ನ ಪ್ರೀತಿಗೆ ನೀನು ಮೋಸ ಮಾಡಲಾರೆಯೆಂಬ ನಂಬಿಕೆ ನನಗಿದೆ. ನಾನು ಸತ್ತ ಮೇಲೆ ನೀನು ಬೇರೆಯ ಹೆಂಗಸರನ್ನು ನೋಡುವುದಿಲ್ಲ, ಮದುವೆಯಾಗುವುದಿಲ್ಲ ಎಂದು ನನಗೆ ಮಾತು ಕೊಡಬೇಕು. ನೀನು ಮಾತಿಗೆ ತಪ್ಪಿದರೆ ಭೂತವಾಗಿ ಬಂದು ಕಾಡುತ್ತೇನೆ” ಹೆಂಡತಿ ಸತ್ತ ಕೆಲವು ತಿಂಗಳು ಗಂಡ ಬೇರೆ ಯಾವ ಹೆಂಗಸಿನ ಮುಖವನ್ನೂ ನೋಡಲಿಲ್ಲ. ಆದರೆ, ಒಮ್ಮೆ ಒಬ್ಬಾಕೆಯನ್ನು ಕಂಡು ಅವನ ಮನಸ್ಸಿನಲ್ಲಿ ಪ್ರೀತಿ ಹುಟ್ಟಿಬಿಟ್ಟಿತು. ಅವರ ಮದುವೆಯ ನಿಶ್ಚಿತಾರ್ಥದ ದಿನವೂ ಸಮೀಪಿಸಿತು. ಒಂದು ರಾತ್ರಿ ಅವನ ಮೊದಲ ಹೆಂಡತಿಯ ಭೂತ ಕಾಣಿಸಿಕೊಂಡಿತು. ಕೊಟ್ಟ ಮಾತು ಮುರಿದವನು ಎಂದು ಅವನನ್ನು ಭೂತ ನಿಂದಿಸಿತು. ಅಂದಿನಿಂದ ಪ್ರತಿರಾತ್ರಿಯೂ ತಪ್ಪದೆ ಬಂದು ಗಂಡನನ್ನು ಟೀಕಿಸಿ, ಕೆಣಕಿ, ಕಾಡಿಸಿ ಹೋಗುತ್ತಿತ್ತು. ಆಯಾ ದಿನ ಆತ ತನ್ನವಳಾಗಲಿರುವ ಹೊಸ ಹೆಂಡತಿಯೊಡನೆ ಏನೇನು ಮಾತನಾಡಿದ ಎಂಬುದನ್ನೆಲ್ಲ ಒಂದಕ್ಷರ ಬಿಡದೆ ಭೂತ ವಿವರ ವಿವರವಾಗಿ ವರ್ಣಿಸತೊಡಗಿತು. ಹೀಗಾಗಿ ದಿನವೂ ರಾತ್ರಿ ನಿದ್ರೆಯಿಲ್ಲದೆ ಗಂಡ ಒದ್ದಾಡತೊಡಗಿದ. ಹತಾಶನಾಗಿ ಆ ಊರಿನಲ್ಲಿದ್ದ ಝೆನ್ ಗುರುವಿನ ಬಳಿಗೆ ಹೋದ, ಗಂಡ. ಅವನ ಕತೆಯನ್ನೆಲ್ಲ ಕೇಳಿದ ಗುರು ಹೇಳಿದ—“ನಿಜವಾಗಲೂ ಇದು ಬಲು ಜಾಣ ಭೂತ.” “ಹೌದು, ಹೌದು. ನಾನು ದಿನವೂ ಏನೇನು ಮಾಡಿದೆ, ಮಾತನಾಡಿದೆ ಎಂಬುದನ್ನೆಲ್ಲ ಜ್ಞಾಪಕವಿಟ್ಟುಕೊಂಡು ಬಂದು ವರದಿ ಒಪ್ಪಿಸುತ್ತದೆ. ಗುರು ಮುಗುಳ್ನಕ್ಕ. “ಇಂಥ ಜಾಣ ಭೂತವನ್ನು ಮೆಚ್ಚಿಕೊಳ್ಳತಕ್ಕದ್ದೇ ಸರಿ. ಆದರೂ ಅದು ಇವತ್ತು ನಿನ್ನ ಬಳಿಗೆ ಬಂದಾಗ ನಾನು ಹೇಳಿದಂತೆ ಮಾಡು” ಎಂದ ಗುರು. ಅವತ್ತು ರಾತ್ರಿಯೂ ಹೆಂಡತಿಯ ಭೂತ ಬಂದಿತು. ಗುರು ಹೇಳಿಕೊಟ್ಟಂತೆ ಗಂಡ ಹೇಳಿದ: “ನೀನು ಬಹಳ ಜಾಣ ಭೂತ. ನಾನು ನಿನ್ನಿಂದ ಏನನ್ನೂ ಮುಚ್ಚಿಡಲಾರೆ. ಎಲ್ಲವನ್ನೂ ನೀನು ತಿಳಿದುಬಿಡುವೆ. ನಾನು ನಿನ್ನನ್ನು ಒಂದು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಹೇಳಿದರೆ ಸಾಕು. ನನ್ನ ಹೊಸ ನಿಶ್ಚಿತಾರ್ಥ ಮುರಿದು ಬಿಡುತ್ತೇನೆ. ನಾನು ಬದುಕಿರುವವರೆಗೂ ನಿನ್ನ ನೆನಪಿನಲ್ಲೇ ಕಾಲ ಕಳೆಯುತ್ತೇನೆ.” “ಏನದು, ಪ್ರಶ್ನೆ ಕೇಳು” ಎಂದಿತು ಭೂತ. ಗಂಡ ಎದ್ದು ಹೋಗಿ ಮೂಲೆಯಲ್ಲಿದ್ದ ಗೋಧಿಯ ಚೀಲದಿಂದ ಒಂದು ಮುಷ್ಟಿ ಗೋಧಿಯನ್ನು ಎತ್ತಿಕೊಂಡು ಬಂದ. ನನ್ನ ಕೈಯಲ್ಲೀಗ ಎಷ್ಟು ಗೋಧಿಯ ಕಾಳುಗಳಿವೆ, ಸರಿಯಾಗಿ ಹೇಳಬೇಕು” ಎಂದ. ಅಂದಿನಿಂದ ಹೆಂಡತಿಯ ಭೂತ ಮತ್ತೆ ಕಾಣಿಸಲಿಲ್ಲ. [ನಮಗೆ ಏನು ಗೊತ್ತಿರುವುದಿಲ್ಲವೋ ಅದು ಭೂತಕ್ಕೆ ಕೂಡ ಗೊತ್ತಿರುವುದಿಲ್ಲ, ಅಲ್ಲವೇ? ಭೂತ ನಮ್ಮದೇ ಮನಸ್ಸಿನ ಸೃಷ್ಟಿ.]