ಝೆನ್ ಕತೆ: ೨೪: ಸಾಯುವ ಸಮಯ

ಝೆನ್ ಕತೆ: ೨೪: ಸಾಯುವ ಸಮಯ

ಬರಹ
ಝೆನ್ ಗುರು ಇಕ್ಕ್ಯು ತನ್ನ ಚಿಕ್ಕಂದಿನಿಂದಲೇ ಚುರುಕು ಬುದ್ಧಿಗೆ ಪ್ರಸಿದ್ಧನಾಗಿದ್ದ. ಇಕ್ಕ್ಯುನ ಗುರುವಿನ ಬಳಿ ಒಂದು ಪ್ರಾಚೀನವಾದ, ಸುಂದರವಾದ, ಅತ್ಯಂತ ಬಲೆಬಾಳುವ, ಪಿಂಗಾಣಿಯ ಚಹಾ ಕಪ್ಪು ಇತ್ತು. ಇಕ್ಕ್ಯು ಒಮ್ಮೆ ಅದನ್ನು ಒರೆಸುತ್ತಿದ್ದಾಗ ಕೈ ಜಾರಿ ಬಿದ್ದು ಒಡೆದು ಹೋಯಿತು. ಏನುಮಾಡುವುದೆಂದು ತಿಳಿಯದೆ ಗೊಂದಲಗೊಂಡ. ಗುರುವಿನ ಹೆಜ್ಜೆ ಸದ್ದು ಕೇಳಿಸಿತು. ಸರಸರನೆ ಚಹಾ ಕಪ್ಪಿನ ಚೂರುಗಳನ್ನೆಲ್ಲ ಗುಡಿಸಿ, ತನ್ನ ಬೆನ್ನ ಹಿಂದೆ ಮರೆಮಾಡಿಕೊಂಡು, ಏನೂ ಅರಿಯದವನಂತೆ ನಿಂತ. ಗುರು ಬಂದ ಕೂಡಲೆ ಕೇಳಿದ: "ಗುರುವೇ, ಮನುಷ್ಯರು ಸಾಯುವುದು ಏಕೆ?" "ಸಾವು ಸಹಜ. ಪ್ರತಿಯೊಬ್ಬ ಮನುಷ್ಯನೂ, ಪ್ರತಿಯೊಂದು ವಸ್ತುವೂ ತನ್ನ ಕಾಲ ಮುಗಿದ ಮೇಲೆ ಸಾಯಲೇ ಬೇಕು" ಎಂದ ಗುರು. ಇಕ್ಕ್ಯು ಪಕ್ಕಕ್ಕೆ ಸರಿದು, ಚಹಾ ಕಪ್ಪಿನ ಚೂರುಗಳನ್ನು ತೋರಿಸುತ್ತಾ, "ಗುರುವೇ, ಇಂದು ನಿಮ್ಮ ಚಹಾ ಕಪ್ಪಿಗೆ ಸಾಯುವ ಸಮಯ ಬಂದಿತ್ತು" ಎಂದ.