ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

ಬರಹ

ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು.
ಒಂದು ದಿನ ಎನ್ಕೋ ಯಮಒಕ ತೆಷು ಎಂಬ ಸಾಮಾನ್ಯ ಮನುಷ್ಯನೊಬ್ಬನನ್ನು ಭೇಟಿಯಾದ. ತೆಷು ಅದಾಗಲೇ ತನ್ನ ಸಾಧನೆಯಲ್ಲಿ ಮುಂದುವರೆದಿದ್ದು ಸ್ವತಃ ಝೆನ್ ಗುರುವಾಗುವಷ್ಟು ಬೆಳೆದಿದ್ದ. “ನೀನು ನಮ್ಮ ನಾಡಿನಲ್ಲೇ ಪ್ರಸಿದ್ಧನಾದ ಕತೆಗಾರನೆಂದು ಕೇಳಿದ್ದೇನೆ,” ತೆಷು ಹೇಳಿದ, “ಕೇಳುಗರು ನೀನು ಬಯಸುವ ಭಾವವನ್ನು ಅನುಭವಿಸುವಂತೆ ಕತೆ ಹೇಳುತ್ತೀಯಂತೆ. ನನಗೆ ಅಂಜೂರ ಹಣ್ಣಿನ ಹುಡುಗನ ಕತೆಯೆಂದರೆ ಬಹಳ ಇಷ್ಟ. ದಯವಿಟ್ಟು ಆ ಕತೆ ಹೇಳು. ನಾನು ಚಿಕ್ಕವನಿದ್ದಾಗ ನಮ್ಮ ಅಮ್ಮ ಆ ಕತೆ ಹೇಳುತ್ತಿದ್ದಳು. ನಾನು ಅಮ್ಮನ ಪಕ್ಕ ಮಲಗಿರುತ್ತಿದ್ದೆ. ಅಮ್ಮ ಅರ್ಧ ಕತೆ ಹೇಳುವ ಹೊತ್ತಿಗೆ ನಿದ್ದೆ ಬಂದುಬಿಡುತ್ತಿತ್ತು. ಅಮ್ಮ ಹೇಳುತ್ತಿದ್ದ ರೀತಿಯಲ್ಲೆ ಆ ಕತೆಯನ್ನು ಹೇಳು” ಎಂದು ಕೋರಿದ.
ಎನ್ಕೊಗೆ ಕತೆ ಹೇಳುವ ಧೈರ್ಯ ಬರಲಿಲ್ಲ. ಕೊಂಚ ಸಮಯ ಕೊಟ್ಟರೆ ತೆಷು ಬಯಸುವಂತೆ ಕತೆ ಹೇಳುವುದನ್ನು ಕಲಿತು ಬರುತ್ತೇನೆ ಎಂದ.
ಕೆಲವು ತಿಂಗಳು ಕಳೆದವು. “ಈಗ ಕತೆ ಹೇಳಲೇ” ಎಂದು ಎನ್ಕೊ ಕೇಳಿದ.
“ಬೇಡ, ಇನ್ನು ಯಾವಾಗಲಾದರೂ ಹೇಳುವೆಯಂತೆ” ಎಂದ ತೆಷು.
ಎನ್ಕೊಗೆ ನಿರಾಸೆಯಾಯಿತು. ಮತ್ತಷ್ಟು ಅಭ್ಯಾಸ ಮಾಡಿದ. ಅವನು ಪ್ರತಿ ಬಾರಿ ಕತೆ ಹೇಳಲು ತೊಡಗಿದಾಗಲೂ ತೆಷು ಅವನನ್ನು ತಡೆದು “ಸಾಕು ನಿಲ್ಲಿಸು, ನೀನು ನಮ್ಮ ಅಮ್ಮನ ಹಾಗೆ ಹೇಳುತ್ತಿಲ್ಲ” ಅಂದುಬಿಡುತ್ತಿದ್ದ.
ತೆಷುನ ಅಮ್ಮ ಅವನಿಗೆ ಕತೆ ಹೇಳುತ್ತಿದ್ದ ರೀತಿಯಲ್ಲೆ, ಅದೇ ಭಾವದಲ್ಲಿ ಕತೆ ಹೇಳುವುದನ್ನು ಕಲಿಯಲು ಎನ್ಕೊಗೆ ಐದು ವರ್ಷ ಬೇಕಾಯಿತು. ಕೊನೆಗೂ ಅಮ್ಮ ಹೇಳುತ್ತಿದ್ದ ರೀತಿಯಲ್ಲೆ ಕತೆ ಹೇಳಿದ.
ಎನ್ಕೊಗೆ ಹೀಗೆ ತೆಷು ಝೆನ್ ಪಾಠ ಹೇಳಿಕೊಟ್ಟ.

[ನಮ್ಮ ಇಚ್ಛೆಯಂತೆ ಕತೆ ಹೇಳುವುದು ಬರಿಯ ಕೌಶಲ. ಕೇಳುಗರ ಬಗ್ಗೆ ಪ್ರೀತಿ ಮಮತೆ ತುಂಬಿದ ತಾಯಿಯಾಗಿ ಕತೆ ಹೇಳುವುದಕ್ಕೆ ಸಾಧ್ಯವಾದರೆ ಅದು ಝೆನ್. ತಾಯಿಯ ಮಮತೆ ಇರದ ಕಲೆ ಬರಿಯ ಜಾಣತನವಷ್ಟೆ!]