ಝೆನ್ ಕತೆ: ೪: ಪ್ರಥಮ ಸೂತ್ರ
ಬರಹ
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ.
ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.
ಕೊಸೆನ್ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ. ಕೊಸೆನ್ ಮೊದಲ ಬಾರಿಗೆ ಅಕ್ಷರಗಳನ್ನು ಹಾಳೆಯ ಮೇಲೆ ಬರೆದಾಗ ಅವನೂ ಅಲ್ಲೇ ಇದ್ದ.
"ಗುರುವೇ, ಇದು ಚೆನ್ನಾಗಿಲ್ಲ" ಅಂದ.
ಗುರು ಮತ್ತೊಮ್ಮೆ ಬರೆದು "ಹೇಗಿದೆ?" ಎಂದು ಕೇಳಿದ.
"ಕೆಟ್ಟದಾಗಿದೆ, ಮೊದಲಿನದೇ ಎಷ್ಟೋ ವಾಸಿ" ಅಂದ ಶಿಷ್ಯ.
ಗುರು ತಾಳ್ಮೆಯಿಂದ ಮತ್ತೆ ಬರೆದ. ಶಿಷ್ಯನಿಗೆ ಅದೂ ಇಷ್ಟವಾಗಲಿಲ್ಲ. ಮತ್ತೆ ಬರೆದ. ಮತ್ತೆ ಚೆನ್ನಾಗಿಲ್ಲ ಅನ್ನುವ ಮಾತು ಕೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳು ರಾಶಿಯಾಗಿ ಬಿದ್ದವು. ಶಿಷ್ಯ ಯಾವುದನ್ನೂ ಒಪ್ಪಲಿಲ್ಲ.
ವಿಮರ್ಶಕ ಶಿಷ್ಯ ಕೊಂಚ ಹೊತ್ತು ಹೊರಗೆ ಹೋಗಬೇಕಾಗಿ ಬಂತು. "ಅವನ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸಮಯ" ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.
ವಾಪಸ್ಸು ಬಂದ ಶಿಷ್ಯ "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.
[ಸದಾ ದೋಷಗಳನ್ನು ಹುಡುಕುವುದಲ್ಲ; ಎಲ್ಲವೂ ಹೀಗೇ ಇರತಕ್ಕದ್ದು ಎಂಬುದೂ ಅಲ್ಲ; ಇನ್ನೊಬ್ಬರ ಮೆಚ್ಚುಗೆ ಬಯಸುವುದೂ ಅಲ್ಲ; ನಿರಾಳವಾಗಿರುವುದು ಝೆನ್]