ಝೆನ್ ಕಥೆಗಳು
ಝೆನ್ ಕಥೆಗಳು ಒಂದು ರೀತಿಯಲ್ಲಿ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ರೀತಿಯವು. ಹೆಚ್ಚಿನವುಗಳು ಚಿಕ್ಕ ಕಥೆಗಳಾದರೂ ಇವುಗಳಲ್ಲಿ ತುಂಬಿರುವ ಅರ್ಥ ಅಗಾಧ. ಒಂದು ಬಾರಿ ಒಂದು ರೀತಿಯ ಅರ್ಥ ನೀಡುವಂತೆ ಭಾಸವಾಗುವ ಈ ಕಥೆಗಳು ಇನ್ನೊಂದು ಬಾರಿ ಓದಿದರೆ ಬೇರೆಯದೇ ಅರ್ಥ ಕೊಡುತ್ತವೆ. ಕೊನೆಗೆ ಎಲ್ಲಾ ಗೋಜಲಾಗಿ ಏನೂ ಅರ್ಥವಾಗದ ಕಥೆಗಳೂ ಇವೆ. ಆದರೂ ಇವುಗಳನ್ನು ಓದಿದಲ್ಲಿ ಏನೋ ಸಮಾಧಾನ ಆಗುವುದಂತೂ ಖಂಡಿತ.
ಕೆಲವು ಝೆನ್ ಕಥೆಗಳು ಇಲ್ಲಿವೆ.
ಘಂಟೆ ಹಾಗೂ ಗುರು
ಗುರುವಿಗೆ ಹೊಸ ಶಿಷ್ಯನೊಬ್ಬ ಕೇಳುತ್ತಾನೆ. "ಗುರುಗಳೇ ನಿಮ್ಮಿಂದ ಅಗಾಧ ಜ್ಞಾನವನ್ನು ನಾನೂ ಹೇಗೆ ಪಡೆಯಬಲ್ಲೆ? ಇದಕ್ಕಾಗಿ ನಾನು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು?". ಸ್ವಲ್ಪ ಯೋಚಿಸಿದ ಗುರುಗಳು ಹೇಳುತ್ತಾರೆ "ನೀನು ಮೊದಲು ಘಂಟೆ ಬಾರಿಸುವುದನ್ನು ಕಲಿಯಬೇಕು". ಶಿಷ್ಯ ಗೊಂದಲಗೊಂಡದ್ದನ್ನು ಗಮನಿಸಿದ ಗುರು ಹೇಳುತ್ತಾರೆ "ಗುರುವೊಬ್ಬ ಘಂಟೆಯಿದ್ದಂತೆ. ನೀನು ಮೆಲ್ಲಗೆ ಬಾರಿಸುವೆಯೋ, ಮೆಲುದನಿ ಮೂಡುತ್ತದೆ. ಅದೇ ನೀನು ಜೋರಾಗಿ ಬಾರಿಸುತ್ತೀಯೋ, ಪ್ರತಿಧ್ವನಿ ಸಹಿತವಾದ ನಾದ ಮೊಳಗುತ್ತದೆ. ಹೇಗೆ ಬಾರಿಸಬೇಕೆಂಬುದು ನಿನಗೆ ಬಿಟ್ಟಿದ್ದು."
ಏಕಾಗ್ರತೆ
ಆತನೊಬ್ಬ ಪ್ರಚಂಡ ಬಿಲ್ಲುಗಾರ. ಎಂತೆಂಥಾ ಘಟಾನುಘಟಿ ಬಿಲ್ಲುಗಾರರನ್ನೂ ಮಣಿಸಿದಾತ. ಝೆನ್ ಗುರುವೊಬ್ಬ ಬಿಲ್ವಿದ್ಯೆಯಲ್ಲಿ ಭಾರೀ ಪರಿಣಿತ ಎಂದು ಕೇಳಿ ತಿಳಿದ ಬಿಲ್ಲುಗಾರ ಅಲ್ಲಿಗೆ ಬರುತ್ತಾನೆ. ಗುರುಗಳ ಆಶ್ರಮದಲ್ಲಿ ದೂರದಲ್ಲಿದ್ದ ಗುರಿಯೊಂದನ್ನು ಬಾಣವೊಂದರಿಂದ ಛೇದಿಸಿ, ಆ ಬಾಣವನ್ನೂ ಇನ್ನೊಂದರಿಂದ ತುಂಡರಿಸಿ, ಗುರುವಿಗೆ ಇದನ್ನು ಮೀರಿಸಿ ತೋರಿಸಲು ಆಹ್ವಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಗುರು ಆತನನ್ನು ಹತ್ತಿರದ ಪರ್ವತದ ತುತ್ತತುದಿಯಲ್ಲಿದ್ದ ಎತ್ತರವಾದ ಚೂಪುಬಂಡೆಗಲ್ಲಿನ ಮೇಲೆ ಕರೆದೊಯ್ಯುತ್ತಾರೆ. ಎದುರಲ್ಲಿ ಭಾರೀ ಪ್ರಪಾತ, ತಲೆ ತಿರುಗುವಂಥಾ ಅನುಭವ. ಅಲ್ಲಿಂದ ಗುರು ದೂರದಲ್ಲಿದ್ದ ಮರದ ತುದಿಯ ಹಣ್ಣೊಂದನ್ನು ಹೊಡೆದು ಉರುಳಿಸುತ್ತಾರೆ. ಈಗ ಇದನ್ನು ಮೀರಿಸಲು ಬಿಲ್ಲುಗಾರನ ಸರದಿ. ಏನು ಮಾಡಿದರೂ ಆತನಿಗೆ ಕಲ್ಲಿನ ತುದಿಯಲ್ಲಿ ನಿಂತು ಮುಂದಿನ ನೋಟವನ್ನು ನೋಡಲು ಸಾಧ್ಯವಾಗಲಿಲ್ಲ, ಭಯಪಟ್ಟುಕೊಳ್ಳುತ್ತಾನೆ ಹಾಗೂ ಸೋಲೊಪ್ಪುತ್ತಾನೆ.
ಆಗ ಗುರು ಹೇಳುತ್ತಾರೆ "ನೀನು ಬಿಲ್ಲು ಬಾಣದ ಮೇಲೆ ಮಾತ್ರ ನಿಯಂತ್ರಣ ಸಾಧಿಸಿದ್ದೀಯ ಅಷ್ಟೇ. ಮನಸ್ಸಿನ ಮೇಲಿನ ನಿಯಂತ್ರಣ, ಏಕಾಗ್ರತೆ ಎಂಬುದು ನಿನ್ನಲ್ಲಿ ಇಲ್ಲವೇ ಇಲ್ಲ".
ಕನಸು
ಶಿಷ್ಯನೊಬ್ಬ ಗುರುವಿಗೆ ಹೇಳುತ್ತಾನೆ. "ಗುರುಗಳೇ ನಾನು ನಿನ್ನೆ ಅದ್ಭುತ ಕನಸೊಂದನ್ನು ಕಂಡೆ. ಅದರಲ್ಲಿ ನಾನು ಒಂದು ಚಿಟ್ಟೆಯಾಗಿದ್ದೆ. ಹೂವಿಂದ ಹೂವಿಗೆ ಹಾರಿ ಹಾರಿ ಹೋಗುತ್ತಿದ್ದೆ. ಅದೇ ಕನಸು ಒಡೆದು ನೋಡುತ್ತೇನೆ ನಾನು ಮಲಗಿದ್ದಲ್ಲಿಯೇ ಇದ್ದೆ. ಇದೇ ಆಶ್ರಮದಲ್ಲಿಯೇ ನಿಮ್ಮ ಶಿಷ್ಯನಾಗಿಯೇ ಇದ್ದೆ". ಸ್ವಲ್ಪ ಯೋಚಿಸಿದ ಗುರು ಕೇಳುತ್ತಾರೆ "ನನಗೆ ಒಂದು ಸಂಶಯ. ನೀನು ಈಗ ಏನಾಗಿದ್ದೀಯ? ಚಿಟ್ಟೆಯಾಗಿದ್ದೆ ಎಂದು ಕನಸು ಕಂಡ ಮನುಷ್ಯನೋ, ಯಾ, ಮನುಷ್ಯನಾಗಿದ್ದೇನೆಂಬ ಭಾವನೆಯಲ್ಲಿರುವ ಚಿಟ್ಟೆಯೋ?". ಶಿಷ್ಯ ಗೊಂದಲಗೊಂಡ, ಹಾಗೂ ಯೋಚಿಸಲು ಪ್ರಾರಂಭಿಸಿದ!!