ಝೆನ್ ಕಥೆ : ಇದಲ್ಲ ಇದಲ್ಲ !

ಎಯ್ ಹೆಯ್ ಆಶ್ರಮದಲ್ಲಿ ಧ್ಯಾನ ಕಲಿಕೆಯ ವಿದ್ಯಾರ್ಥಿಯಾಗಿದ್ದ ಕಿತಾನೋ ಗೆಂಪೋ ಸನ್ಯಾಸ ಸ್ವೀಕರಿಸಿ ತನ್ನ ೨೦ರ ಹರೆಯದಲ್ಲಿ ಪಾರಿವ್ರಾಜಕನಾಗಿ ಅಲೆಯುತ್ತಿದ್ದಾಗ ಒಂದು ದಿನ ಅವನಿಗೆ ತಂಬಾಕು ಸೇದುವವನೊಬ್ಬನ ಪರಿಚಯವಾಯಿತು. ಆ ಪರ್ವತಮಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಸಿಕ್ಕ ಈ ಅಪರಿಚಿತ ವ್ಯಕ್ತೊಯೊಂದಿಗೆ ಸಾಗುತ್ತಿದ್ದಾಗ ಸಹಜವಾಗಿ ಕಿತಾನೋನ ಗಮನ ಆತನ ಬಳಿಯಿದ್ದ ತಂಬಾಕಿಬ ಚಿಲುಮೆಯತ್ತ ಹರಿಯಿತು. ಕೊನೆಗೆ ಇಬ್ಬರೂ ಮರವೊಂದರ ಬುಡವನ್ನು ತಲುಪಿದರು. ವಿಶ್ರಾಂತಿಗಾಗಿ ಅಲ್ಲೇ ಕುಳಿತರು.
ಸಹ ಪ್ರಯಾಣಿಕ ಚಿಲುಮೆ ಸೇದುತ್ತ, ಕಿತಾನೋಗೆ ಧೂಮಪಾನದ ಸವಿಯನ್ನು ಸವಿಯಲು ಅವಕಾಶ ಮಾಡಿಕೊಟ್ಟ.
‘ಎಷ್ಟು ಚಂದ ಈ ಸೇದಾಟ !’ ಎಂದು ಕಿತಾನೋ ಮೆಚ್ಚುಗೆಯಿಂದ ಉದ್ಗರಿಸಿದ.
ಸಹ ಪ್ರಯಾಣಿಕ ಕಿತಾನೋಗಾಗಿ ಪ್ರತ್ಯೇಕ ಚಿಲುಮೆಯನ್ನೂ ತಂಬಾಕನ್ನೂ ಕೊಟ್ಟ. ಕೊನೆಗೆ ಅವರು ಒಬ್ಬರನೊಬ್ಬರು ಅಗಲಿದರು.
ಪ್ರಯಾಣ ಮುಂದುವರಿಸುತ್ತ ಕಿತಾನೋ ಅಂದುಕೊಂಡ -’ಈ ಚಿಲುಮೆ, ಈ ತಂಬಾಕು ಚಂದದ ವಸ್ತುಗಳೇನೋ ಹೌದು. ಆದರೆ ಇವು ನನ್ನ ಧ್ಯಾನವನ್ನು ಖಂಡಿತ ಕೆಡಿಸಿಯಾವು. ಈ ಸೇದಾಟ ಅತಿಯಾದರೆ ಎಲ್ಲೋ ಇರುವವನು ಎಲ್ಲೋ ಹೋಗಿ ಬಿದ್ದೇನು ! ಇದಕ್ಕೊಂದು ಕೊನೆ ಬೇಕೇ ಬೇಕು’ ಹೀಗಂದುಕೊಂಡವನೇ ತನ್ನಲ್ಲಿದ್ದ ಚಿಲುಮೆಯನ್ನೂ ತಂಬಾಕನ್ನೂ ಎಸೆದು ಬಿಟ್ಟ.
ಅವನಿಗೆ ೨೩ ವರ್ಷಗಳಾದಾಗ ವಿಶ್ವತತ್ವಕ್ಕೆ ಸಂಬಂಧಿಸಿದ ವಿದ್ಯೆಯಾದ ‘ಇ - ಕಿಂಗ್’ ನ ಅಧ್ಯಯನ ಆರಂಭಿಸಿದ. ಅದು ಚಳಿಗಾಲವಾಗಿತ್ತು. ಬೆಚ್ಚಗಿನ ಬಟೆಗಳ ಅಗತ್ಯವಿತ್ತು. ಅವನು ತನ್ನ ಗುರುವಿಗೊಂದು ಪತ್ರ ಬರೆದು, ಹೆಚ್ಚುವರಿ ವಸ್ತ್ರ ಬೇಕೆಂದೂ ಆದಷ್ಟು ಬೇಗ ಕಳಿಸಿಕೊಡಬೇಕೆಂದೂ ನಿವೇದಿಸಿಕೊಂಡ. ಗುರು ಅವನಿದ್ದಲ್ಲಿಂದ ನೂರು ಮೈಲುಗಳಷ್ಟು ದೂರದ ಊರಲ್ಲಿದ್ದರು. ಕಿತಾನೋ ಒಬ್ಬ ಯಾತ್ರಿಕನ ಮೂಲಕ ಪತ್ರವನ್ನು ಕಳಿಸಿಕೊಟ್ಟ. ಚಳಿಗಾಲ ಮುಗಿಯುತ್ತ ಬಂದರೂ ಗುರುವಿನಿಂದ ಬಟ್ಟೆಗಳಾಗಲಿ ಉತ್ತರವಾಗಲಿ ಬರಲಿಲ್ಲ. ಉಪಾಯಗಾಣದೆ ಅವನು ಬಟ್ಟೆಯ ಚಿಂತೆಯನ್ನು ಕೈಬಿಟ್ಟು ಮತ್ತೆ ಅಧ್ಯಯನಕ್ಕೆ ಮನಸ್ಸು ಕೊಟ್ಟ.
ಕೆಲವು ದಿನಗಳು ಉರುಳಿದವು. ‘ಇ -ಕಿಂಗ್’ ವಿದ್ಯೆ ಇನ್ನೇನು ಕರಗತವಾಯಿತು ಅನ್ನಿಸಿದಾಗ ಅವನಲ್ಲಿ ಇನ್ನೊಂದು ಯೋಚನೆ ಮೂಡಿತು. ಈ ವಿದ್ಯೆಯ ಮೇಲೆ ಇಷ್ಟೊಂದು ಕರಾರುವಕ್ಕಾಗಿ ಮನಸ್ಸು ನೆಟ್ಟರೆ ತನ್ನ ಧ್ಯಾನ ಪ್ರಕ್ರಿಯೆ ಹಿಂದೆ ಬೀಳಬಹುದು ಅನ್ನಿಸಿತು. ಹಾಗಾಗಿ ಅವನು ‘ಇ - ಕಿಂಗ್’ ಅಧ್ಯಯನವನ್ನು ಒಮ್ಮಿಂದೊಮ್ಮೆಗೆ ಕೈಬಿಟ್ಟು ಮರಳಿ ಧ್ಯಾನಾಭ್ಯಾಸ ಮುಂದುವರೆಸಿದ.
೨೮ರ ಹರೆಯದಲ್ಲಿ ಅವನು ಧ್ಯಾನಾಭ್ಯಾಸದ ಜೊತೆ ಜೊತೆಗೇ ಚೀನೀ ಲಿಪಿಶಾಸ್ತ್ರ ಹಾಗೂ ಕಾವ್ಯ ಶಾಸ್ತ್ರ ಅಧ್ಯಯನವನ್ನು ಆರಂಭಿಸಿದ. ಮುಂದೆ ಅವನು ಕಾವ್ಯರಚನೆಯಲ್ಲಿ ಎಷ್ಟೊಂದು ಪರಿಣಿತಿ ಸಾಧಿಸಿದನೆಂದರೆ, ಅವನ ಗುರು ಅವನನ್ನು ಕಂಠೋಕ್ತಿಯಾಗಿ ಹೊಗಳಲಾರಂಭಿಸಿದರು.
ಕಿತಾನೋ ಅಂದುಕೊಂಡ -’ನಾನೀಗ ಇದನ್ನು ನಿಲ್ಲಿಸದೆ ಹೋದರೆ, ನಾನೊಬ್ಬ ಕವಿಯಾದೇನು ಹೊರತು ಬೋಧಕನಾಗಲಾರೆ’
ಈ ಯೋಚನೆ ಮೂಡಿದ್ದೇ ಆತ ಕವಿತಾ ರಚನೆಯನ್ನು ಕೈಬಿಟ್ಟ. ಮತ್ತೆ ಧ್ಯಾನಸಾಧನೆಯ ಮೇಲೆ ಮನಸ್ಸು ನೆಟ್ಟ. ಮತ್ತೆಂದೂ ಕವಿತೆ ಬರೆಯಲು ಮುಂದಾಗಲಿಲ್ಲ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ