ಝೆನ್ ಕಥೆ : ಹೌದೇ?

ಝೆನ್ ಕಥೆ : ಹೌದೇ?

ಜಪಾನಿನ ಒಂದು ಗ್ರಾಮದಲ್ಲಿ ಹಾಕ್ಯುನ್ ಎಂಬ ಝೆನ್ ಗುರುಗಳಿದ್ದರು. ಇವರ ವಿಶೇಷತೆ ಎಂದರೆ ಮಾತು ಕಡಿಮೆ, ಪ್ರವಚನವೂ ಕಡಿಮೆ. ಯಾವಾಗಲೂ ಧ್ಯಾನಸ್ಥರಾಗಿರುತ್ತಿದ್ದರು. ಗ್ರಾಮದ ಜನರು ಏನಾದರೂ ಸಹಾಯ ಬೇಕಿದ್ದರೆ ಅವರನ್ನು ಕೇಳುತ್ತಿದ್ದರು. ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಆಳು ಕಡಿಮೆ ಬಿದ್ದಾಗ, ಹಾಕ್ಯುನ್ ಅವರಿಗೆ ಹೇಳಿದರೆ, ಅವರು ಬೆಳಿಗ್ಗೆನೇ ಬಂದು ಕೆಲಸ ಪೂರ್ತಿ ಮುಗಿಸಿ, ತಮ್ಮ ಕುಟೀರಕ್ಕೆ ಮರಳುತ್ತಿದ್ದರು. ಹಲವು ಬಾರಿ ಸಂಜೆಯಾದ ನಂತರವೂ, ಆ ದಿನದ ಬಿತ್ತನೆ ಕೆಲಸ ಮುಗಿಸಬೇಕಾದರೆ ಬೆಳದಿಂಗಳಲ್ಲಿ ಕೆಲಸ ಮಾಡುತ್ತಿದ್ದರು. ಇದು ಲೋಕ ಕಲ್ಯಾಣಕ್ಕಾಗಿ ಎಂದು ಹೇಳುತ್ತಾ, ಯಾವುದೇ ಪ್ರತಿಫಲ ಪಡೆಯುತ್ತಿರಲಿಲ್ಲ.

ಒಂದು ಸಲ ರೈತನೊಬ್ಬನ ಮನೆಯಲ್ಲಿ ಹಲವು ದಿನ ಕೃಷಿ ಕೆಲಸಕ್ಕೆ ಸಹಾಯ ಮಾಡಿದ್ದರು. ಆದಾಗಿ ಒಂದೆರಡು ತಿಂಗಳುಗಳಲ್ಲಿ, ಆ ರೈತನ ಮಗಳು ಗರ್ಭಿಣಿಯಾದಳು. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ರೈತನಿಗೆ ಅಸಾಧ್ಯ ಕೋಪ ಬಂತು. ಮಗಳನ್ನು ಹೆದರಿಸಿ, ಈ ಸ್ಥಿತಿಗೆ ಯಾರು ಕಾರಣ ಎಂದು ಕೇಳಿದ.

ಆ ಮಗಳು ಹೆದರಿ, ಹಾಕ್ಯುನ್ ಅವರ ಆಶ್ರಮದತ್ತ ಬೆರಳು ತೋರಿಸಿದಳು. ರೈತನು ಕೋಪದಿಂದ ಹಾಕ್ಯುನ್ ಅವರ ಕುಟೀರಕ್ಕೆ ಬಂದು, ತನ್ನ ಮಗಳು ಗರ್ಭಿಣಿಯಾಗಲು ನೀವೇ ಕಾರಣ ಎನ್ನುತ್ತಿದ್ದಾಳೆ ಎಂದು ಗದರಿದ. "ಹೌದೇ?" ಎಂದ ಹಾಕ್ಯೂನ್ ಗುರು, ತಮ್ಮ ಧ್ಯಾನವನ್ನು ಮುಂದುವರಿಸಿದರು.

ಇದಾಗಿ ಕೆಲವು ತಿಂಗಳುಗಳಲ್ಲಿ ಆ ರೈತನ ಮಗಳಿಗೆ ಮಗು ಹುಟ್ಟಿತು. ಆ ಮಗುವನ್ನು ಹಾಕ್ಯುನ್ ಅವರ ಕುಟೀರಕ್ಕೆ ತಂದು ಬಿಟ್ಟು 'ಈ ಮಗುವನ್ನು ಸಾಕುವುದು ನಿಮ್ಮ ಜವಾಬ್ದಾರಿ' ಎಂದ ಆ ರೈತ.

"ಹೌದೇ?" ಎಂದು ಉದ್ಗರಿಸಿದರು ಗುರುಗಳು. ಹಲವು ತಿಂಗಳುಗಳ ಕಾಲ ಮಗುವನ್ನು ಸಾಕಿದರು. ಆ ಮಗುವಿಗೆ ಬೇಕಾದ ಹಾಲು ತಂದು, ಆಹಾರವನ್ನು ತಯಾರಿಸಿ ಮಗುವನ್ನು ಬೆಳೆಸಿದರು.

ಈ ನಡುವೆ ರೈತನ ಮಗಳು ಆಗಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದುದನ್ನು ಆಕೆಯ ತಾಯಿ ಗಮನಿಸಿದಳು. 'ಯಾಕಮ್ಮಾ ಅಳುತ್ತಿದ್ದೀಯಾ?' ಎಂದು ಹಲವು ಬಾರಿ ಸಮಾಧಾನದಿಂದ ಕೇಳಿದಾಗ, ರೈತನ ಮಗಳು ಹೇಳಿದಳು 'ಮಗುವಿನ ನಿಜವಾದ ತಂದೆಯು ಊರಿನ 'ಪಟೇಲನ ಮಗ'. ರೈತನಿಗೆ ಮತ್ತೆ ಕೋಪ ಬಂತು. ಪಟೇಲನ ಬಳೀ ಹೋಗಿ ಈ ವಿಚಾರ ಹೇಳಿ, ಆತನ ಮಗನು ತನ್ನ ಮಗಳನ್ನು ಮದುವೆಯಾಗಬೇಕು ಎಂದು ತಾಕೀತು ಮಾಡಿದ. ಊರವರೆಲ್ಲಾ ಸೇರಿ ಪಂಚಾಯಿತಿ ನಡೆಸಿ, ಪಟೇಲನ ಮಗನು ರೈತನ ಮಗಳನ್ನು ಮದುವೆಯಾಗಬೇಕೆಂದೂ, ಆ ಮಗುವನ್ನು ಅವರಿಬ್ಬರೂ ಸಾಕಬೇಕೆಂದೂ ತೀರ್ಮಾನಿಸಿದರು.

ರೈತನು ಹಾಕ್ಯುನ್ ಗುರುಗಳ ಕುಟೀರಕ್ಕೆ ಬಂದು, ನಮಸ್ಕರಿಸಿ, ಪಂಚಾಯತಿಯ ತೀರ್ಮಾನ ತಿಳಿಸಿ, 'ಮಗುವನ್ನು ವಾಪಾಸು ಕೊಡಬೇಕು' ಎಂದು ವಿನಂತಿಸಿದ. ಹಾಕ್ಯುನ್ ಗುರುಗಳು ರೈತನ ಮಾತುಗಳನ್ನೇ ಕೇಳಿ "ಹೌದೇ?" ಎಂದು ಅಚ್ಚರಿಯಿಂದ ಉದ್ಗರಿಸಿ, ಮಗುವನ್ನು ರೈತನಿಗೆ ಹಸ್ತಾಂತರಿಸಿದರು.

-ಶಶಾಂಕ್ ಮುದೂರಿ (ವಿಶ್ವವಾಣಿ ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ