ಝೆನ್: ಕೆಲವು ಉಪದೇಶಗಳು: ನಿರ್ಲಿಪ್ತಿ

ಝೆನ್: ಕೆಲವು ಉಪದೇಶಗಳು: ನಿರ್ಲಿಪ್ತಿ

ಬರಹ

ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ:
ಈ ಭೂಮಿಯ ಬಗ್ಗೆ, ನೆಲದ ಬಗ್ಗೆ, ವ್ಯಾಮೋಹ ಬೆಳೆಸಿಕೊಳ್ಳದಂತೆ ಬದುಕುವುದೇ ಝೆನ್ ವಿದ್ಯಾರ್ಥಿಯ ಲಕ್ಷಣ.
ಇತರರ ಒಳ್ಳೆಯ ಕೆಲಸಗಳನ್ನು ನೋಡಿದಾಗ ನೀನೂ ಹಾಗೆ ಮಾಡುವಂತೆ ನಿನ್ನನ್ನೇ ಪ್ರಚೋದಿಸಿಕೋ. ಇತರರ ಕೆಟ್ಟ ಕೆಲಸಗಳನ್ನು ಕಂಡಾಗ ನಾನು ಹಾಗೆ ಮಾಡಬಾರದು ಎಂದು ಎಚ್ಚರಿಕೆ ಹೇಳಿಕೋ.
ನೀನೊಬ್ಬನೇ ಕತ್ತಲೆಯ ಕೋಣೆಯಲ್ಲಿರುವಾಗ ಕೂಡ ನಿನ್ನೆದುರಿಗೆ ಅಪರೂಪದ ಅತಿಥಿ ಇದ್ದಾನೆಂದು ಭಾವಿಸಿ, ಹಾಗೆಯೇ ವರ್ತಿಸು. ನಿನ್ನ ಸಹಜ ಸ್ವಭಾವವನ್ನು ಎಂದೂ ಮೀರಬೇಡ.
ಬಡತನವೇ ನಿನ್ನ ಐಶ್ವರ್ಯ. ಸುಲಭದ ಬದುಕಿನ ಆಸೆಗೆ ಅದನ್ನು ಕಳೆದುಕೊಳ್ಳಬೇಡ.
ಮನುಷ್ಯನೊಬ್ಬ ಮೂರ್ಖನಂತೆ ಕಂಡರೂ ಅವನು ಮೂರ್ಖನಲ್ಲದಿರಬಹುದು, ತನ್ನ ವಿವೇಕವನ್ನು ಜತನದಿಂದ ಕಾಪಾಡಿಕೊಳ್ಳುವವನಿರಬಹುದು.
ಸದ್ಗುಣಗಳು ಸಹಜವೇನಲ್ಲ. ಮಳೆ. ಅಥವ ಮಂಜಿನಂತೆ ಆಕಾಶದಿಂದ ಸುರಿಯುವುದಿಲ್ಲ. ಸ್ವ ನಿಯಂತ್ರಣದಿಂದಲೇ ಅವನ್ನು ಸಂಪಾದಿಸಿಕೊಳ್ಳಬೇಕು.
ಸೌಜನ್ಯವು ಉಳಿದೆಲ್ಲ ಗುಣಗಳ ತಳಹದಿ. ನಿನ್ನ ಪರಿಚಯವನ್ನು ನೀನೇ ಮಾಡಿಕೊಳ್ಳುವ ಬದಲು ನೀನು ಎಂಥವನು ಎಂಬುದನ್ನು ನಿನ್ನ ನೆರೆಯವರು ತಾವೇ ಗುರುತಿಸುವಂತಾಗಬೇಕು.
ಉದಾತ್ತ ಹೃದಯವು ಎಂದೂ ಪ್ರದರ್ಶನಕ್ಕೆ ಎಳೆಸುವುದಿಲ್ಲ. ಅಮೂಲ್ಯ ವಜ್ರಗಳು ಕಾಣುವುದು ಅಪರೂಪವಾದಂತೆಯೇ ಉದಾತ್ತ ಹೃದಯದ ನುಡಿ ಕೂಡ ಕೇಳುವುದು ಅಪರೂಪವಾಗಿಯೇ.
ಇತರರನ್ನು ನಿಂದಿಸಬೇಡ, ನಿನ್ನನ್ನೇ ನೀನು ವಿಮರ್ಶಿಸಿಕೋ. ಸರಿ ತಪ್ಪುಗಳನ್ನು ಕುರಿತು ವಾದಮಾಡಬೇಡ.
ಸರಿಯಾದ ಅನೇಕ ಸಂಗತಿಗಳನ್ನು ಹಲವಾರು ತಲೆಮಾರುಗಳವರೆಗೆ ತಪ್ಪೆಂದೇ ತಿಳಿಯಲಾಗಿತ್ತು. ಸರಿತನದ ಮೌಲ್ಯ ಅನೇಕ ಶತಮಾನಗಳ ನಂತರವೇ ತಿಳಿಯುವುದಾದ್ದರಿಂದ ತತ್‌ ಕ್ಷಣವೇ ನಿನಗೆ ಮೆಚ್ಚುಗೆ ಸಿಗಬೇಕೆಂದು ಬಯಸಬೇಡ.
ಮಾಡಬೇಕಾದ ಕೆಲಸಗಳನ್ನು ಮಾಡು. ಫಲಿತಾಂಶಗಳನ್ನು ವಿಶ್ವದ ನಿಯಮಗಳಿಗೆ ಬಿಟ್ಟುಬಿಡು. ಪ್ರತಿದಿನವೂ ಶಾಂತವಾಗಿ ಧ್ಯಾನವನ್ನು ಮಾಡು.