ಝೆನ್ ಪ್ರಸಂಗ: ಅಂತಿಮ ಅವಕಾಶ: ಮೂರೇ ದಿನ
ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ.
ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು ಕೇಳು.”
ಅದಾಗಿ ಮೂರು ವರುಷಗಳು ದಾಟಿದವು. ಆದರೆ “ಒಂದೇ ಕೈಯ ಚಪ್ಪಾಳೆ ಸದ್ದಿ"ನ ಅಧ್ಯಯನದ ಪರೀಕ್ಷೆಯಲ್ಲಿ ಆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಹತಾಶನಾದ ಆತ ಒಂದು ದಿನ ಗುರುಗಳ ಬಳಿ ಬಂದು ಹೇಳಿದ, "ಜ್ನಾನ ಗಳಿಸದವನಾಗಿ ನಮ್ಮಊರಿಗೆ ಹಿಂತಿರುಗಬೇಕಾದ ಅವಮಾನ ನನ್ನ ಪಾಲಿಗೆ ಕಾದಿದೆ. ನಿಮ್ಮ ಒಗಟನ್ನು ಬಿಡಿಸುವುದು ಹೇಗೆಂದು ನನಗೆ ತಿಳಿಯುತ್ತಿಲ್ಲ.”
ಗುರು ಸ್ವಿವೋ ಆ ವಿದ್ಯಾರ್ಥಿಗೆ ಧೈರ್ಯ ತುಂಬುತ್ತಾ ಹೇಳಿದ, “ಚಿಂತಿಸಬೇಡ. ಇನ್ನೂ ಒಂದು ವಾರ ಎಡೆಬಿಡದೆ ಆ ಒಗಟಿನ ಬಗ್ಗೆ ಧ್ಯಾನ ಮಾಡು." ಒಂದು ವಾರದವಧಿ ಸರಿಯಿತು. ಆದರೆ ವಿದ್ಯಾರ್ಥಿ ಉತ್ತೀರ್ಣನಾಗಲಿಲ್ಲ. ಗುರು ಸ್ವಿವೋ ಪುನಃ ಆ ವಿದ್ಯಾರ್ಥಿಯನ್ನು ಹುರಿದುಂಬಿಸಿದ, “ಇನ್ನೊಂದು ವಾರ ಶ್ರದ್ಧೆಯಿಂದ ಧ್ಯಾನ ಮಾಡು." ಆದರೆ ವಿದ್ಯಾರ್ಥಿಯ ಪಾಲಿಗೆ ನಿರಾಸೆಯೇ ಕಾದಿತ್ತು.
ಮೂರನೆಯ ಬಾರಿ “ಮತ್ತೊಂದು ವಾರ”ದ ಗಡುವು ನೀಡಿದ ಗುರು ಸ್ವಿವೋ. ಆದರೆ ವಿದ್ಯಾರ್ಥಿ ಪುನಃ ವಿಫಲನಾದ. ಹತಾಶೆಯಿಂದ ಗುರುಗಳನ್ನು ಬೇಡಿಕೊಂಡ, “ಇನ್ನು ನನ್ನಿಂದಾಗದು, ಗುರುಗಳೇ. ನಾನು ವಾಪಾಸು ಹೋಗುತ್ತೇನೆ.”
ಆದರೆ ಗುರುವಿಗೆ ಶಿಷ್ಯನ ಬಗ್ಗೆ ಇನ್ನೂ ಭರವಸೆಯಿತ್ತು. ಹಾಗಾಗಿ, ಇನ್ನೂ ಐದು ದಿನ ಪ್ರಚಂಡ ಏಕಾಗ್ರತೆಯಿಂದ ಧ್ಯಾನ ಮಾಡಲು ಆಗ್ರಹಿಸಿದ. ಆದರೆ ವಿದ್ಯಾರ್ಥಿ ಸೋತು ಸುಣ್ಣವಾದ.
ಅಂತಿಮವಾಗಿ ಗುರು ಸ್ವಿವೋ ಆದೇಶಿಸಿದ, "ನಿನಗೆ ಕೊನೆಯ ಅವಕಾಶ ಕೊಡುತ್ತೇನೆ. ಇನ್ನು ಮೂರೇ ದಿನ ಧ್ಯಾನದಲ್ಲಿ ಮುಳುಗು. ಅನಂತರವೂ ನಿನಗೆ ಜ್ನಾನೋದಯ ಆಗದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳೋದೇ ನಿನಗೆ ಉಳಿದ ದಾರಿ!"
ಇದಾಗಿ ಎರಡನೆಯ ದಿನವೇ ಆ ವಿದ್ಯಾರ್ಥಿ ಒಗಟು ಬಿಡಿಸಿದ. ಆ ಕ್ಷಣದಲ್ಲಿ ಅವನಿಗಾಯಿತು ಜ್ನಾನೋದಯ!