ಝೆನ್ ಪ್ರಸಂಗ: ಅಂತಿಮ ಗುರಿ ಏನು?
ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು.
ಅದೊಂದು ದಿನ ಉತ್ತರ ಗುರುಕುಲದ ಹುಡುಗನನ್ನು ಸಂಧಿಸಿದ ದಕ್ಷಿಣ ಗುರುಕುಲದ ಹುಡುಗ ಪ್ರಶ್ನಿಸಿದ, “ಎಲ್ಲಿಗೆ ಹೋಗೋದು ನೀನು?” ಉತ್ತರ ಗುರುಕುಲದ ಹುಡುಗ ಉತ್ತರಿಸಿದ, "ನನ್ನ ಕಾಲುಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಗೆ.”
ಇದನ್ನು ಕೇಳಿ ಗೊಂದಲಕ್ಕೆ ಒಳಗಾದ ದಕ್ಷಿಣ ಗುರುಕುಲದ ಹುಡುಗ ತನ್ನ ಗುರುಗಳಿಗೆ ನಡೆದ ಸಂಗತಿ ತಿಳಿಸಿದ. ಆಗ ಗುರುಗಳು, ಉತ್ತರ ಗುರುಕುಲದ ಹುಡುಗನ ಕೈ ಮೇಲಾಗಬಾರದೆಂದೂ, ಗೊಂದಲ ಪಡಬಾರದೆಂದೂ ತಿಳಿಸಿ, ಒಂದು ಉಪಾಯ ಸೂಚಿಸುತ್ತಾರೆ: "ನಾಳೆ ಅವನು ಎದುರಾದಾಗಲೂ ಇದೇ ಪ್ರಶ್ನೆ ಕೇಳು. ಅವನ ಉತ್ತರ ಅದೇ ಆಗಿರುತ್ತದೆ. ತಕ್ಷಣ ಇನ್ನೊಂದು ಪ್ರಶ್ನೆ ಕೇಳು: ನಿನಗೆ ಕಾಲುಗಳಿಲ್ಲ ಎಂದಿರಲಿ; ಆಗ ಎಲ್ಲಿಗೆ ಹೋಗುತ್ತಿ? ಈ ಪ್ರಶ್ನೆಯಿಂದ ನಿರುತ್ತರನಾಗುತ್ತಾನೆ ಅವನು.”
ಮರುದಿನ ಬೆಳಗ್ಗೆ ಪುನಃ ಇಬ್ಬರು ಹುಡುಗರ ಮುಖಾಮುಖಿ. “ಎಲ್ಲಿಗೆ ಹೋಗೋದು ನೀನು?” ಎಂಬ ಪ್ರಶ್ನೆಗೆ ಉತ್ತರ ಗುರುಕುಲದ ಹುಡುಗ ಉತ್ತರಿಸಿದ್ದು ಹೀಗೆ: "ಗಾಳಿ ಯಾವ ದಿಕ್ಕಿಗೆ ತೇಲಿಸಿ ಒಯ್ಯುತ್ತದೆಯೋ ಆ ದಿಕ್ಕಿಗೆ ಹೋಗುತ್ತೇನೆ.”
ಈ ಉತ್ತರದಿಂದ ಅಪ್ರತಿಭನಾದ ದಕ್ಷಿಣ ಗುರುಕುಲದ ಹುಡುಗ ತನ್ನ ಗುರುಗಳಿಗೆ ನಡೆದ ಸಂಗತಿ ನಿವೇದಿಸಿದ. ಒಂದು ಕ್ಷಣ ಯೋಚಿಸಿದ ಗುರುಗಳು ಹೀಗೆನ್ನುತ್ತಾರೆ: “ಇದಕ್ಕೆ ಸರಿಯಾದ ಉಪಾಯ ಹೇಳುತ್ತೇನೆ. ನಾಳೆ ಅವನು ನಿನಗೆ ಸಿಕ್ಕಿದಾಗಲೂ ಇದೇ ಪ್ರಶ್ನೆ ಕೇಳು. ಒಂದು ವೇಳೆ ಅವನು ಇವತ್ತಿನ ಉತ್ತರವನ್ನೇ ಕೊಟ್ಟರೆ, ನೀನು ಮರುಪ್ರಶ್ನೆ ಹಾಕು: ಗಾಳಿ ಬೀಸುತ್ತಿಲ್ಲ ಎಂದಿರಲಿ; ಆಗ ನೀನು ಹೋಗೋದೆಲ್ಲಿಗೆ?”
ಮರುದಿನ ಬೆಳಗ್ಗೆ ಹಾದಿಯಲ್ಲಿ ಇಬ್ಬರು ಹುಡುಗರು ಪುನಃ ಎದುರುಬದುರಾದರು. “ಎಲ್ಲಿಗೆ ಹೋಗೋದು ನೀನು?” ಎಂಬ ಪ್ರಶ್ನೆಗೆ ಉತ್ತರ ಗುರುಕುಲದ ಹುಡುಗನ ನೇರ ಉತ್ತರ: "ನಾನು ಗುರುಕುಲಕ್ಕೆ ತರಕಾರಿ ತರಲಿಕ್ಕಾಗಿ ಮಾರುಕಟ್ಟೆಗೆ ಹೋಗುತ್ತಿದ್ದೇನೆ.”