ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?

ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?

ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ  ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು.

ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯೊಬ್ಬಳು. ಅಂದವಾದ ರೇಷ್ಮೆ ಉಡುಪು ಧರಿಸಿದ್ದ ಅವಳು ಆತಂಕದಲ್ಲಿದ್ದಳು. ಯಾಕೆಂದರೆ ರಸ್ತೆಯಲ್ಲಿ ಮೊಳಕಾಲೆತ್ತರದ ಕೆಸರು ನೀರು ಹರಿಯುತ್ತಿತ್ತು ಹಾಗೂ ಅವಳಿಗೆ ರಸ್ತೆ ದಾಟಿ ಹೋಗಬೇಕಿತ್ತು.

ತನ್‌ಜನ್ ಅವಳ ಪಕ್ಕಕ್ಕೆ ಹೋಗಿ, “ರಸ್ತೆ ದಾಟಬೇಕೇನು? ಬಾ" ಎನ್ನುತ್ತಾ ತೋಳುಗಳಿಂದ ಅವಳನ್ನು ಎತ್ತಿಕೊಂಡು, ರಸ್ತೆ ದಾಟಿ, ಆ ಬದಿಯಲ್ಲಿ ಕೆಳಗಿಳಿಸಿದ.

ಅನಂತರ, ಭಿಕ್ಷುಗಳಿಬ್ಬರೂ ಮುಂದೆ ಸಾಗಿದರು. ಒಂದೂ ಮಾತನ್ನಾಡದೆ ನಡೆದು ತಮ್ಮ ವಿಹಾರಕ್ಕೆ ಮರಳಿದರು.

ಆ ದಿನ ರಾತ್ರಿ, ಅವರಿಬ್ಬರೇ ಇದ್ದಾಗ, ಎಕಿಡೋ ಕೇಳಿದ, “ಅಲ್ಲಯ್ಯಾ, ನಾವು ಭಿಕ್ಷುಗಳು ಹೆಂಗಸರ ಹತ್ತಿರ ಹೋಗಬಾರದು. ಆ ಹುಡುಗಿಯೋ ಚೆಂದುಳ್ಳಿ ಚೆಲುವೆ. ನೀನು ಹಾಗೆ ಮಾಡಿದ್ದು ಸರಿಯಾ?”

ತನ್‌ಜೆನ್ ನೇರಾನೇರ ಉತ್ತರಿಸಿದ, “ಅಯ್ಯಾ, ನಿನ್ನದೊಳ್ಳೇ ಕತೆಯಾಯಿತಲ್ಲ! ನಾನು ಆ ಹುಡುಗಿಯನ್ನೆತ್ತಿ, ರಸ್ತೆ ದಾಟಿಸಿ, ಅಲ್ಲೇ ಕೆಳಕ್ಕಿಳಿಸಿ ಬಂದೆ. ನೀನು ಅವಳನ್ನು ಇನ್ನೂ ಹೊತ್ತುಕೊಂಡೇ ಇದ್ದೀಯಾ?”