ಝೆನ್ ಪ್ರಸಂಗ: ಕಲಿಕೆ ಶುರು

ಝೆನ್ ಪ್ರಸಂಗ: ಕಲಿಕೆ ಶುರು

ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ ಮುಗಿದೀತೆಂದು ದಿನ ಲೆಕ್ಕ ಹಾಕುತ್ತಿದ್ದ.

ಕೊನೆಗೂ ಆ ದಿನ ಬಂದಿತು. ಅವತ್ತು ಮುಂಜಾನೆ ಉತ್ಸಾಹದಿಂದ ಎದ್ದ ಆ ವಿದ್ಯಾರ್ಥಿ. ನಿತ್ಯಕಾರ್ಯಗಳನ್ನು ಪೂರೈಸಿ, ತನ್ನ ಮನೆಗೆ ಮರಳಲು ತಯಾರಾದ. ಗುರುಗಳ ಅನುಮತಿ ಪಡೆಯಲಿಕ್ಕಾಗಿ ಅವರ ನಿವಾಸಕ್ಕೆ ಹೋದ. ಗುರುಗಳು ಎಂದಿನಂತೆ ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಧ್ಯಾನ ಕೋಣೆಯ ಬಾಗಿಲಿನೆದುರು ಕಾದು ನಿಂತ ವಿದ್ಯಾರ್ಥಿ. ಸುಮಾರು ಒಂದು ತಾಸು ಕಳೆಯಿತು.

ಧ್ಯಾನ ಮುಗಿಸಿ, ಧ್ಯಾನ ಕೋಣೆಯಿಂದ ಹೊರಬಂದ ಗುರುಗಳು, ಪಾಠಶಾಲೆಯತ್ತ ನಡೆಯುತ್ತ ವಿದ್ಯಾರ್ಥಿಯನ್ನು ಗಮನಿಸಿದರು. “ಇಲ್ಲಿ ಯಾಕೆ ಬಂದಿದ್ದಿ?” ಎಂದು ಕೇಳಿದರು. "ಗುರುಗಳೇ, ಮನೆಗೆ ಹಿಂತಿರುಗಲು ನಿಮ್ಮ ಅನುಮತಿ ಕೊಡಿ; ಆವಾಗಿನಿಂದ ಕಾದಿದ್ದೇನೆ” ಎಂದ ವಿದ್ಯಾರ್ಥಿ.

“ಏನು, ಮನೆಗೆ ಹಿಂತಿರುಗುತ್ತೀಯಾ? ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ವಿದ್ಯಾರ್ಥಿಯ ಉತ್ತರ, "ಹೌದು ಗುರುಗಳೇ, ಇಲ್ಲಿ ಬಂದು ೧೫ ವರುಷವಾಯಿತು. ನಾನಿಲ್ಲಿ ಕಲಿತು ಮುಗಿಸಿದೆ.”

“ಏನಂದಿ? ಕಲಿತಾಯಿತೇ? ಹಾಗಿದ್ದರೆ, ನೀನು ಆವಾಗಿನಿಂದ ಕಾಯುತ್ತಾ ನಿಂತಿದ್ದೆಯಲ್ಲ, ನಿನ್ನೆದುರಿನ ಬಾಗಿಲಿನ ಚೌಕಟ್ಟಿನ ಮೂಲೆಯಲ್ಲಿ ಏನಿತ್ತು?” ಎಂಬ ಗುರುಗಳ ಮರುಪ್ರಶ್ನೆಗೆ ವಿದ್ಯಾರ್ಥಿಯ ಉತ್ತರ, "ಆ ಬಾಗಿಲಿನ ಚೌಕಟ್ಟಿನ ಮೂಲೆಯಲ್ಲೊಂದು ಕೋಲು ಇದ್ದ ಹಾಗಿತ್ತು, ಗುರುಗಳೇ." ಗುರುಗಳು ಮತ್ತೆ ಪ್ರಶ್ನಿಸಿದರು, “ಕೋಲು ಇದ್ದ ಹಾಗಿತ್ತೋ ಅಥವಾ ಅಲ್ಲಿ ಕೋಲು ಇತ್ತಾ?” ಈಗೊಮ್ಮೆ ಕಂಪಿಸಿದ ವಿದ್ಯಾರ್ಥಿ, ನಡುಗುವ ಧ್ವನಿಯಲ್ಲಿ ಉತ್ತರಿಸಿದ, “ಹಾಗಲ್ಲ ಗುರುಗಳೇ, ಅಲ್ಲಿ ಒಂದು ಕೋಲಿತ್ತು.”

“ಓ ಹಾಗೋ, ಆ ಕೋಲಿನ ತುದಿಯಲ್ಲಿ ಏನಿತ್ತು?” ಎಂದು ಮುನ್ನಡೆಯುತ್ತಾ ವಿದ್ಯಾರ್ಥಿಯನ್ನು ಪುನಃ ಪ್ರಶ್ನಿಸಿದರು ಗುರುಗಳು. ಈಗ ವಿದ್ಯಾರ್ಥಿ ತಲ್ಲಣಿಸಿದ. "ಕ್ಷಮಿಸಿ ಗುರುಗಳೇ, ಅದನ್ನು ನಾನು ಗಮನ ಕೊಟ್ಟು ನೋಡಲಿಲ್ಲ" ಎಂದ.

“ಇದೇನಿದು? ಕಲಿತಾಯಿತು ಅನ್ನುತ್ತೀಯಲ್ಲ! ನೀನು ಬದುಕಿನ ಮೊದಲ ಪಾಠಗಳನ್ನೇ ಕಲಿತಿಲ್ಲ. ಹೋಗು, ಹೋಗು, ಕಲಿಯಲು ಶುರು ಮಾಡು" ಎಂದು ಆದೇಶಿಸಿದರು ಗುರುಗಳು. ಪೆಚ್ಚಾದ ವಿದ್ಯಾರ್ಥಿ, ಗುರುಗಳ ಕಾಲಿಗೆರಗಿ, ಇನ್ನೊಂದು ದೀರ್ಘಾವಧಿಯ ಕಲಿಕೆ ಶುರು ಮಾಡಲು ಸಿದ್ಧನಾದ.