ಝೆನ್ ಪ್ರಸಂಗ: ಚಾಚೂ ತಪ್ಪದೆ ಮಾತಿನ ಪಾಲನೆ
ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು.
ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ ಹಲವಾರು ಅನುಯಾಯಿಗಳೂ ಗುರು ಬಂಕೆಯ ಮಾತು ಕೇಳಲು ಹೋಗುತ್ತಿದ್ದುದು ಈತನ ಮತ್ಸರಕ್ಕೆ ಕಾರಣವಾಗಿತ್ತು.
ಅದೊಂದು ದಿನ ಗುರು ಬಂಕೆ ಪ್ರವಚನ ನೀಡುತ್ತಿದ್ದ ಮಂದಿರಕ್ಕೆ ಈ ಅರ್ಚಕ ನುಗ್ಗಿದ. ಗುರು ಬಂಕೆಗೆ ಏರು ಧ್ವನಿಯಲ್ಲಿ ಸವಾಲೆಸೆದ, “ಏ ಝೆನ್ ಗುರುವೇ, ಇಲ್ಲಿ ಕೇಳು! ನಿನ್ನ ಮಾತನ್ನು ಯಾರು ಬೇಕಾದರೂ ಅನುಸರಿಸಲಿ, ಆದರೆ ನಾನು ಪಾಲಿಸಲಾರೆ. ಅದೇನು ಮಾಡುತ್ತಿ ನೋಡೋಣ. ನಿನ್ನ ಮಾತನ್ನು ನಾನು ಪಾಲಿಸುವಂತೆ ಮಾಡು ನೋಡೋಣ."
ಆ ಸಭೆಯಲ್ಲಿದ್ದ ಎಲ್ಲರೂ ಅವಾಕ್ಕಾದರು. ಗುರು ಬಂಕೆ ನಸು ನಗುತ್ತ ಅರ್ಚಕನನ್ನು ಕರೆದರು, “ಇಲ್ಲಿ ಬಾ, ನನ್ನ ಹತ್ತಿರ ಬಾ.” ಜನರ ನಡುವೆ ದಾರಿ ಮಾಡಿಕೊಂಡು ಬಂದು, ಗುರು ಬಂಕೆಯ ಎದುರು ನಿಂತ ಬುಸುಗುಡುತ್ತಿದ್ದ ಅರ್ಚಕ.
ಈಗ ಗುರು ಬಂಕೆ ಮುಗುಳ್ನಗುತ್ತಾ ಹೇಳಿದರು, “ನೀನು ಇತ್ತ ಎಡಗಡೆಗೆ ಬಂದು ನಿಲ್ಲು.” ಗುರುವಿನ ಎಡ ಬದಿಗೆ ಬಂದ ಅರ್ಚಕ.
ಅಷ್ಟರಲ್ಲಿ ಗುರು ಬಂಕೆ ಹೀಗೆಂದರು, “ಇಲ್ಲ, ನೀನು ನನ್ನ ಬಲಗಡೆಗೆ ಬಂದರೆ ಚೆನ್ನಾಗಿತ್ತು. ನಾವು ಮಾತನಾಡಬಹುದು.” ಅವರೆಂದಂತೆ ಬಲಬದಿಗೆ ಹೋಗಿ ನಿಂತು ಗುರುಗಳತ್ತ ನೋಡಿದ ಅರ್ಚಕ.
ಇದೀಗ ಗುರು ಬಂಕೆ ಹೇಳಿದರು, "ನೋಡಿದೆಯಾ! ನೀನು ನನ್ನ ಪ್ರತಿಯೊಂದು ಮಾತನ್ನೂ ಪಾಲಿಸಿದೆ, ನಾನು ಹೇಳಿದಂತೆಯೇ ಮಾಡಿದೆ. ನೀನು ಒಬ್ಬ ಒಳ್ಳೆಯ ಮನುಷ್ಯ ಅಂತೇನೆ ನಾನು. ಈಗ ಅಲ್ಲಿ ಸುಮ್ಮನೆ ಕುಳಿತುಕೋ. ನನ್ನ ಮಾತು ಕೇಳು.”