ಝೆನ್ ಪ್ರಸಂಗ: ತುಂಬಿದ ಲೋಟ

ಝೆನ್ ಪ್ರಸಂಗ: ತುಂಬಿದ ಲೋಟ

ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್‌ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ.

ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ. ಆತನೆದುರು ಚಹಾ ಲೋಟವನ್ನಿಟ್ಟು ಗುರು ತಾನೇ ಚಹಾ ಸುರಿಯತೊಡಗಿದ. ಲೋಟದಲ್ಲಿ ಚಹಾ ತುಂಬಿ ಚೆಲ್ಲ ತೊಡಗಿತು. ಆದರೂ ಗುರು ಚಹಾ ಸುರಿಯುತ್ತಲೇ ಇದ್ದ.

ಇದನ್ನು ಕಂಡು ದೂರದಿಂದ ಬಂದವನಿಗೆ ಗೊಂದಲವಾಯಿತು. "ಗುರುಗಳೇ, ಲೋಟದಲ್ಲಿ ಚಹಾ ತುಂಬಿ ಹೊರಕ್ಕೆ ಚೆಲ್ಲುತ್ತಿದೆ” ಎಂದ.

ಆಗ ಗುರು ಚಹಾ ಸುರಿಯುವುದನ್ನು ನಿಲ್ಲಿಸಿ, ಬಂದಿದ್ದವನತ್ತ ನೆಟ್ಟ ನೋಟದಿಂದ ನೋಡುತ್ತಾ ಕೇಳಿದ, "ಹೌದು, ಲೋಟದಲ್ಲಿ ಚಹಾ ತುಂಬಿದೆ. ಹಾಗೆಯೇ ನಿನ್ನಲ್ಲಿ ನಿನ್ನ ಚಿಂತನೆಗಳೇ ತುಂಬಿವೆ. ನೀನು ಅವನ್ನು ಬಿಟ್ಟು ಖಾಲಿಯಾಗದಿದ್ದರೆ, ನಿನ್ನಲ್ಲಿ ನಾನು ಝೆನ್ ಹೇಗೆ ಸುರಿಯಲಿ?"