ಝೆನ್ ಪ್ರಸಂಗ: ತೋಟ ಬೆಳೆಸುವ ಪಾಠ

ಝೆನ್ ಪ್ರಸಂಗ: ತೋಟ ಬೆಳೆಸುವ ಪಾಠ

ಅದೊಂದು ದಿನ ರಾಜನಿಗೊಂದು ಅಭಿಲಾಷೆ ಉಂಟಾಯಿತು: ಝೆನ್ ತತ್ವಗಳ ಅನುಸಾರ ತೋಟವೊಂದನ್ನು ಬೆಳೆಸಬೇಕೆಂಬಾಶೆ.

ಆತ ಹೆಸರುವಾಸಿ ಝೆನ್ ಗುರುವನ್ನು ಭೇಟಿಯಾಗಿ ತನ್ನ ಅಭಿಲಾಷೆ ತಿಳಿಸಿದ. ಆ ಗುರುಗಳು ಈ ವಿಚಾರದಲ್ಲಿ ರಾಜನಿಗೆ ಮಾರ್ಗದರ್ಶನ ಮಾಡಲು ಸಮ್ಮತಿಸಿದರು. ವಿಶಾಲವಾದ ಜಮೀನನ್ನು ತೋಟ ಬೆಳೆಸಲಿಕ್ಕಾಗಿ ಗುರುತಿಸಿದ ರಾಜ. ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುಭವಿ ಕೆಲಸಗಾರರನ್ನು ಕರೆ ತಂದ. ದಿನದಿನವೂ ತೋಟಕ್ಕೆ ಬಂದು ಕೆಲವು ತಿಂಗಳು ಆ ಗುರುಗಳಿಂದ ಮಾರ್ಗದರ್ಶನ.

ತನ್ನ ಮಾರ್ಗದರ್ಶನದ ಅನುಸಾರವೇ ತೋಟ ಬೆಳೆಸಬೇಕೆಂಬುದು ಗುರುಗಳ ಷರತ್ತು. ತೋಟದಲ್ಲಿ ನೆಟ್ಟ ಗಿಡಗಳೆಲ್ಲ ಬೆಳೆಯ ತೊಡಗಿದವು. ಅವು ಬೆಳೆದು ಮರಗಳಾಗಲು ಮೂರು ವರುಷ ಕಾಯಬೇಕಾಗಿತ್ತು. ಹಾಗಾಗಿ, ಮೂರು ವರುಷಗಳ ನಂತರ ರಾಜನ ಝೆನ್ ತೋಟಕ್ಕೆ ಮರುಭೇಟಿ; ಆಗ ಗಿಡಗಳ ಬೆಳವಣಿಗೆಯ ಪರಿಶೀಲನೆ ಎಂಬುದಾಗಿ ಗುರುಗಳಿಂದ ರಾಜನಿಗೆ ಸಂದೇಶ.

ಮೂರು ವರುಷಗಳ ನಂತರ ತೋಟದ ಭೇಟಿಗೆ ದಿನ ನಿಗದಿ ಪಡಿಸಿ ಗುರುಗಳ ಆಗಮನ. ತೋಟದಲ್ಲಿ ಕಂಗೊಳಿಸುವ ಮರಗಳು. ಗುರುಗಳನ್ನು ತೋಟದ ಉದ್ದಗಲಕ್ಕೆ ಕರೆದೊಯ್ದು ಮರಗಳನ್ನು ತೋರಿಸಿದ ರಾಜ. ಆತನಿಗೆ ಗುರುಗಳ ಪ್ರತಿಕ್ರಿಯೆ ಏನಿರಬಹುದೆಂಬ ಆತಂಕ. ಗುರುಗಳ ಮುಖದಲ್ಲಿ ಮಂದಹಾಸ.

ಕೊನೆಗೆ ರಾಜನಿಗೆ ಗುರುಗಳು ಕೇಳಿದ ಪ್ರಶ್ನೆ: “ಅದ್ಯಾಕೆ, ಈ ತೋಟದಲ್ಲಿ ಎಲ್ಲಿಯೂ ಮರದಿಂದ ಉದುರಿ ಕೆಳಗೆ ಬಿದ್ದ ಎಲೆಗಳು ಕಾಣಿಸುತ್ತಿಲ್ಲ?”

ರಾಜ ನಿಧಾನವಾಗಿ ಉತ್ತರಿಸಿದ, "ಗುರುಗಳೇ, ತೋಟದಲ್ಲೆಲ್ಲ ಎಲೆಗಳು ಉದುರಿ ಬಿದ್ದಿದ್ದವು. ಆದರೆ ನೀವು ತೋಟವನ್ನು ಪರಿಶೀಲನೆ ಮಾಡಲು ಬರುವಾಗ ತೋಟ ಚಂದ ಕಾಣಬೇಕೆಂಬುದು ನನ್ನ ಇರಾದೆ. ಅದಕ್ಕಾಗಿ ತೋಟದ ಒಣ ಎಲೆಗಳನ್ನೆಲ್ಲ ಬಾಚಿ ಮೂಲೆಗೆ ಹಾಕಬೇಕೆಂದು ಕೆಲಸಗಾರರಿಗೆ ಹೇಳಿದ್ದೆ.”

ರಾಜನನ್ನು ನಖಶಿಖಾಂತ ನೋಡಿದ ಗುರುಗಳು, “ಮರಗಳಿಂದ ಉದುರಿದ ಆ ಎಲೆಗಳನ್ನು ತರಿಸಿ ತೋಟದಲ್ಲೆಲ್ಲ ಹಾಕಿಸು" ಎಂದರು. ಅಲ್ಲಿಂದ ನಿರ್ಗಮಿಸುತ್ತಾ ಗುರುಗಳು ರಾಜನಿಗಿತ್ತ ಆದೇಶ: “ಕಳೆದ ಮೂರು ವರುಷಗಳಲ್ಲಿ ಕಲಿಯಬೇಕಾದ್ದನ್ನು ನೀನು ಕಲಿತಿಲ್ಲ. ಇನ್ನು ನಿನ್ನ ಪರೀಕ್ಷೆ ಮೂರು ವರುಷಗಳ ನಂತರ. ಆಗ ನೋಡೋಣ."