ಝೆನ್ ಪ್ರಸಂಗ: ಧರ್ಮದ ಮರ್ಮ

ಝೆನ್ ಪ್ರಸಂಗ: ಧರ್ಮದ ಮರ್ಮ

ಎಂಬತ್ತು ವರುಷ ವಯಸ್ಸಿನ ಕನ್‌ಫ್ಯೂಷಿಯನ್ ಪಂಡಿತನೊಬ್ಬ, ತಾನೆಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಭಾವಿಸಿದ್ದ.

ದೂರದ ರಾಜ್ಯದಲ್ಲಿ ಝೆನ್ ಗುರುವೊಬ್ಬರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಈ ಸಂಗತಿ ತಿಳಿದಾಗ, ಆತನ ಜ್ನಾನ ತನ್ನದಕ್ಕಿಂತ ಮಿಗಿಲಾದುದೇ ಎಂದು ಪರೀಕ್ಷಿಸಬೇಕೆಂಬ ತುಡಿತ ಬಲವಾಯಿತು ಪಂಡಿತನಲ್ಲಿ. ಕೊನೆಗೊಂದು ದಿನ ಆ ರಾಜ್ಯಕ್ಕೆ ಪ್ರಯಾಣ ಆರಂಭಿಸಿದ.

ಹಲವಾರು ದಿನಗಳು ನಡೆದು ಆ ರಾಜ್ಯ ತಲಪಿದ ಪಂಡಿತ. ಝೆನ್ ಗುರುಗಳನ್ನು ಕಂಡು, ತನ್ನ ಭೇಟಿಯ ಉದ್ದೇಶ ತಿಳಿಸಿದ. ತಾನು ಕಲಿತ ವಿಷಯಗಳನ್ನು ಝೆನ್ ಗುರುಗಳಿಗೆ ವಿವರಿಸಿದ. ಅದೆಲ್ಲವನ್ನೂ ಝೆನ್ ಗುರುಗಳು ಮೌನವಾಗಿ ಕೇಳಿದರು.

ಅನಂತರ, ವಯೋವೃದ್ಧ ಪಂಡಿತ ಕೇಳಿದ, “ನಿಮ್ಮ ಝೆನ್ ಧರ್ಮ ಏನು ಹೇಳುತ್ತದೆ. ವಿವರಿಸಿ ಹೇಳಿ.” ಕೆಲವು ಕ್ಷಣಗಳ ಮೌನದ ನಂತರ ಝೆನ್ ಗುರು ಹೇಳಿದ್ದು, “ಕೆಟ್ಟ ಕೆಲಸ ಮಾಡಬೇಡ, ಒಳ್ಳೆಯ ಕೆಲಸವನ್ನೇ ಮಾಡು. ಇದುವೇ ಬುದ್ಧನ ಉಪದೇಶ.”

ವಯೋವೃದ್ಧ ಪಂಡಿತ ಪೆಚ್ಚಾದ. ತೀವ್ರ ಅಸಮಾಧಾನದಿಂದ ಪಂಡಿತ ರೇಗಿದ, “ಇದೇನಿದು? ನಾನು ಎಂಬತ್ತು ವರುಷ ವಯಸ್ಸಿನ ಮುದುಕ. ಹಲವಾರು ದಿನ ಕಾಡುಮೇಡಿನಲ್ಲಿ ನಡೆದು ಬಂದಿದ್ದೇನೆ. ನಿನ್ನ ಧರ್ಮದ ಬಗ್ಗೆ ನನಗೆ ಇಷ್ಟೇ ಹೇಳಲಿಕ್ಕಿರುವುದೇ? ಇದನ್ನು ಮೂರು ವರುಷದ ಮಗು ಕೂಡ ಹೇಳುತ್ತದೆ.”

ಝೆನ್ ಗುರು ಶಾಂತಚಿತ್ತದಿಂದ ಉತ್ತರಿಸಿದರು, "ನಿಮಗೆ ಹಾಸ್ಯ ಮಾಡಬೇಕೆಂದು ನಾನು ಹಾಗೆ ಹೇಳಿದ್ದಲ್ಲ. ಮೂರು ವರುಷದ ಮಗುವೂ ನಾನು ಹೇಳಿದ್ದನ್ನೇ ಹೇಳುತ್ತದೆ ಅನ್ನೋದು ನಿಜ. ಆದರೆ, ಎಂಬತ್ತು ವರುಷದ ವಯೋವೃದ್ಧರೂ ಆ ಸರಳ ಹೇಳಿಕೆಯಂತೆಯೇ ಬದುಕಲಾಗದೆ ಸೋಲುತ್ತಾರೆ ಎಂಬುದೂ ನಿಜ.”