ಝೆನ್ ಪ್ರಸಂಗ: ಬದುಕಿನ ಏಕೈಕ ನಗು
ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.
ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು ಅಂತಿಮ ಸಂದೇಶ ನೀಡಿದರು: “ಹಲವಾರು ವರುಷಗಳಿಂದ ನೀವೆಲ್ಲ ನನ್ನ ಶಿಷ್ಯರಾಗಿದ್ದೀರಿ. ಈಗ ಹೇಳಿ ನೋಡೋಣ, ಝೆನ್ ಎಂದರೆ ಏನಂತ. ನಿಮ್ಮಲ್ಲಿ ಝೆನ್‌ನ ಸ್ಪಷ್ಟ ಅರ್ಥ ತಿಳಿಸುವವನೇ ಮುಂದಿನ ಗುರು. ಅವನಿಗೇ ಸಿಗುತ್ತದೆ ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾಪಾತ್ರೆ.”
ಅಲ್ಲಿ ಮೌನ ನೆಲೆಸಿತು. ಎಲ್ಲ ಶಿಷ್ಯರೂ ಗುರುಗಳ ಗಂಭೀರ ಮುಖ ನೋಡುತ್ತಾ ನಿಂತರು. ಅನೇಕ ವರುಷಗಳಿಂದ ಗುರುಗಳ ಜೊತೆಗಿದ್ದ ಎಂಕೋ ನಿಧಾನವಾಗಿ ಗುರುಗಳ ಹಾಸಿಗೆಯ ಬಳಿಗೆ ಬಂದ. ಔಷಧದ ಬಟ್ಟಲನ್ನು ಆತ ಗುರುಗಳೆಡೆಗೆ ಸರಿಸಿದ.
ಆಗ ಗುರುಗಳ ಮುಖಭಾವ ಕಠಿಣವಾಯಿತು. ಮೆಲುವಾದ ಸ್ವರದಲ್ಲಿ ಗುರುಗಳು ಪ್ರಶ್ನಿಸಿದರು, “ಇಷ್ಟೇ ಏನು ನಿನಗೆ ಅರ್ಥವಾಗಿದ್ದು?"
ಎಂಕೋ ಏನೂ ಉತ್ತರಿಸಲಿಲ್ಲ. ಆದರೆ ಔಷಧ ಬಟ್ಟಲನ್ನು ಹಿಂದಕ್ಕೆ ಸರಿಸಿದ. ಆಗ ಗುರುಗಳ ಮುಖದಲ್ಲಿ ಮೂಡಿತು ಮುಗುಳುನಗು - ಅದುವೇ ಅವರ ಬದುಕಿನ ಏಕೈಕ ನಗು. ಆ ಕ್ಷಣದಲ್ಲಿ ಮುಗುಳ್ನಗುತ್ತಾ ಗುರುಗಳು ನೀಡಿದ ಅಂತಿಮ ಸಂದೇಶ: “ಎಂತಹ ಮುಠ್ಠಾಳ ನೀನು! ಕಳೆದ ಹತ್ತು ವರುಷ ನನ್ನ ಜೊತೆಗಿದ್ದು ಕಲಿತರೂ ನನ್ನ ದೇಹದ ಬಗ್ಗೆ ನೀನು ಸರಿಯಾಗಿ ತಿಳಿದುಕೊಳ್ಳಲಿಲ್ಲ. ನನ್ನ ಕಾಷಾಯ ವಸ್ತ್ರ ಮತ್ತು ಭಿಕ್ಷಾ ಪಾತ್ರೆ ತಗೋ, ಇನ್ನು ಅವು ನಿನ್ನವು.”