ಝೆನ್ ಪ್ರಸಂಗ: ಮಾತಿಗೆ ಮೀರಿದ್ದು
ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ.
ಆ ಯುವ ಶಿಷ್ಯ ಮುಂಚೆಯೂ ಹಲವಾರು ಸಲ ಫ್ಯುಜಿ ಪರ್ವತ ಏರಿದ್ದ. ಈ ಭೇಟಿಯಲ್ಲಿ ಗುರುವಿನೊಂದಿಗೆ ಪರ್ವತ ಏರುತ್ತಿದ್ದಂತೆ ಪರ್ವತವನ್ನು ಹೊಸ ನೆಲೆಯಿಂದ ಕಾಣಲು ಅವನಿಗೆ ಸಾಧ್ಯವಾಯಿತು.
ಹಿಮದಿಂದ ಆವರಿಸಿದ ಆ ಪರ್ವತದ ಚೆಲುವಿನ ಹಾಗೂ ವಿಸ್ಮಯದ ಬಗ್ಗೆ ಅವನು ಉತ್ಸಾಹದಿಂದ ಬಣ್ಣಿಸ ತೊಡಗಿದ. ಅಲ್ಲಿನ ಮರಗಳ ಹಸುರು, ಪೈನ್ ಮರಗಳ ಶಂಖಾಕೃತಿ, ಹಕ್ಕಿಗಳ ಸ್ವರಮೇಳ ಹಾಗೂ ಹಾರಾಟ, ಕಾಡು ಹೂಗಳ ಬಣ್ಣಬಣ್ಣದ ವಿನ್ಯಾಸ, ಮುಂಬೆಳಗಿನ ಪರಿ - ಇವೆಲ್ಲದರ ವರ್ಣನೆ ಮಾಡತೊಡಗಿದ. "ಗುರುಗಳೇ, ಇವೆಲ್ಲ ಪ್ರಕೃತಿಯ ಅದ್ಭುತಗಳು, ಅಲ್ಲವೇ? ಆ ಹೂವಿನ ವರ್ಣಸಂಯೋಜನೆಯೋ… ಆ ಹಕ್ಕಿಯ ಹಾಡಿನ ಮಾಧುರ್ಯವೋ… ಹಿಮತುಂಬಿದ ಶ್ವೇತಮಯ ಪರಿಸರವೋ… ಇಲ್ಲಿ ಎಲ್ಲವೂ ಪವಾಡ. ಇನ್ನೇನೆಂದು ಹೇಳಲಿ?”
ಯುವ ಶಿಷ್ಯ ಇಷ್ಟೆಲ್ಲ ವರ್ಣನೆ ಮಾಡುತ್ತಿರುವಾಗ, ಗುರು ಮೌನವಾಗಿ ಮುಂದೆ ಸಾಗುತ್ತಿದ್ದ. ನಿಸರ್ಗದ ಮನಮೋಹಕತೆಯನ್ನು ಮಾತಿಗಿಳಿಸುವುದರಲ್ಲಿ ಮುಳುಗಿದ್ದ ಶಿಷ್ಯ ಗುರುವಿನ ಮೌನವನ್ನು ಗಮನಿಸಲಿಲ್ಲ. ಕೊನೆಗೊಮ್ಮೆ ಗುರು ಏನೂ ಮಾತನಾಡುತ್ತಿಲ್ಲ ಎಂಬುದು ಶಿಷ್ಯನ ಗಮನಕ್ಕೆ ಬಂತು. “ನೀವೆನನ್ನುತ್ತೀರಿ ಗುರುಗಳೇ? ಈ ಪರ್ವತ, ಕಣಿವೆ, ಕಾಡು, ನದಿ, ಹೂಗಳು, ಹಕ್ಕಿಗಳು, ಬೆಳಗು ಎಲ್ಲವೂ ಪವಾಡ ಅಲ್ಲವೇ?” ಎಂದು ಕೇಳಿದ.
ವೃದ್ಧ ಗುರು ಈಗ ಶಿಷ್ಯನತ್ತ ತಿರುಗಿ ಉದ್ಗರಿಸಿದ, "ಹೌದು! ಅದು ಮಾತಿಗೆ ಮೀರಿದ್ದು. ಆದರೆ ನೀನು ಅದನ್ನೆಲ್ಲ ಬಾಯಿ ಬಿಟ್ಟು ಮಾತಿನಲ್ಲಿ ಹೇಳುತ್ತಿದ್ದಿಯಲ್ಲ!”