ಝೆನ್ ಬೆರಗು (ಸಂಪುಟ ೧)
ಝೆನ್ ಬೆರಗು (ಸಂಪುಟ- ೧)’ ಕನ್ನಡದ ಝೆನ್ ಕತೆಗಳು ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಅನುವಾದಿತ ಕತಾ ಸಂಕಲನ. ಈ ಕೃತಿಗೆ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಝೆನ್ ಎಂದರೆ 'ಧ್ಯಾನ' ಎಂದೇ ಅರ್ಥ. ಇದು ಬೌದ್ಧ ಪರಂಪರೆಯ ಮಾತು. 'ಝೆನ್ ಬುದ್ಧಿಸಂ' ಒಂದುಂಟು. ನಾವು ಮಾಡುವ 'ಝೆನ್ ಮಂತ್ರ' ಕತೆಯ ಆಕಾರ ತಾಳಿದಾಗ ಎಷ್ಟೆಷ್ಟು ಬಗೆಯ ವೈವಿಧ್ಯತೆಗೆ ಅವಕಾಶ ಕೊಡುಬಹುದೆಂಬುದನ್ನು ಜಿ.ಆರ್. ಪರಿಮಳಾ ರಾವ್ ತಮ್ಮ 'ಝೆನ್ ಬೆರಗು' ಕತೆಗಳ ಮಾಲೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಜಿ. ವೆಂಕಟೇಶ್ ಅವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...
“ಕತೆ ಕಿರಿದಾದರೂ ಹಿರಿದಾದುದು. ಆದರೆ ಆಶಯವು ಹಿರಿದು. ಆಕೃತಿ ಕಿರಿದೇನೋ ಸರಿ. ಅದು ಕೊಡುವ ಪರಿಣಾಮ ಮಾತ್ರ ಹಿರಿದು. ಈ ಹಿರಿಯ ಕತೆ ಧ್ಯಾನವಾಗಿದೆ. ಜಪಾನೀ ಭಾಷೆಯಲ್ಲಿ ಝೆನ್ ಎಂದರೆ ’ಧ್ಯಾನ’ ಎಂದೇ ಅರ್ಥ. ಆ ಪರಂಪರೆಯ ಕತೆ, ಒಗಟು, ಕವಿತೆಗಳನ್ನು ಸಾಹಿತ್ಯ ಪ್ರಪಂಚಕ್ಕೆ ಜೀವದಾನ ಮಾಡಿದೆ. ಝೆನ್ ಒಂದು ಮೌನ. ಝೆನ್ ಒಂದು ಪರಿಮಳ, ಝೆನ್ ಒಂದು ಬೆರಗು. ಮಧ್ಯಯುಗೀನ ಸಾಹಿತ್ಯದ ಅಲ್ಲಮನೂ ಒಬ್ಬ ಝೆನ್ ಕವಿಯೇ. ಅವನ ವಚನಗಳು ಝೆನ್ ಗೆ ಸಮೀಪ. ಇಷ್ಟ ಮಾತ್ರವಲ್ಲ ಅವೆಲ್ಲವೂ ಝೆನ್ ಮಂತ್ರವೇ ಆಗಿದೇ! ನಾವು ಮಾಡುವ ’ಝೆನ್ ಮಂತ್ರ’ ಕತೆಯ ಆಕಾರ ತಾಳಿದಾಗ ಎಷ್ಟೆಷ್ಟು ಬಗೆಯ ವೈವಿಧ್ಯತೆಗೆ ಅವಕಾಶ ಕೊಡಬಹುದೆಂಬುದನ್ನು, ಜಿ.ಆರ್. ಪರಿಮಳಾ ರಾವ್ ತಮ್ಮ ‘ಝೆನ್ ಬೆರಗು’ ಕತೆಗಳ ಮಾಲೆಯಲ್ಲಿ ತೋರಿಸಿಕೊಟ್ಟಿದ್ದಾರೆ.
ಇವು ಅಪ್ಪಟ ಕನ್ನಡದ ಝೆನ್ ಕತೆಗಳು. ಕನ್ನಡದ ಮೊತ್ತ ಮೊದಲ ಝೆನ್ ಕತೆಗಳೆಂದರೆ ತಪ್ಪಾಗಲಾರದು. ಈ ಲೋಕವು ಮಂತ್ರದಂತೆ ಪವಿತ್ರ, ಉಸಿರಿನಂತೆ ಮೌನ, ದೀಪದಂತೆ ಬೆಳಕು, ಶ್ರೀಮತಿ ಜಿ.ಆರ್.ಪರಿಮಳಾ ರಾವ್ ನಾಲಕ್ಕು ನೂರು ಕತೆಗಳನ್ನು ಬರೆದಿದ್ದಾರೆ. ಇಲ್ಲಿಯ ಕತೆಗಳು ವಿಸ್ಮಯ, ಕೌಶಲ್ಯ, ಒಳಮರ್ಮ, ರಹಸ್ಯ ಈ ಬಗೆಯ ಆಶಯಗಳನ್ನು ಒಳಗೊಂಡಿದೆ. ಒಂದೊಂದು ಝೆನ್ ಕತೆಗಳದೂ ಒಂದೊಂದು ಪರಿ. ಒಂದು ಕತೆಯಂತೆ ಮತ್ತೊಂದು ಕತೆಯಿಲ್ಲ. ಒಂದು ಕತೆಯಲ್ಲಿ ಕೌಶಲ್ಯ ಇದ್ದರೆ; ಮತ್ತೊಂದು ಕತೆಯಲ್ಲಿ ವಿಸ್ಮಯ ಕಾಣಿಸುತ್ತದೆ. ಮಗದೊಂದು ಕತೆಯಲ್ಲಿ ರಹಸ್ಯವಿದ್ದರೆ; ಮತ್ತಿನ್ನೊಂದು ಕತೆಯಲ್ಲಿ ಒಳ ಮರ್ಮ ಅವಿತು ಕೂತಿರುತ್ತದೆ. ಇಲ್ಲಿಯ ಕತೆಗಳಿಗೆ ಕಟ್ಟುಗಳನ್ನು ನಾವು ಹಾಕುವಂತಿಲ್ಲ.
ನಾವು ಕಟ್ಟುಗಳನ್ನು ಹಾಕಿದರೆ ಅರ್ಥಕ್ಕೆ ಮಿತಿ ಬರುತ್ತದೆ. ನಾವು ತೋರಿಕೆಗೆ ಕಟ್ಟುಹಾಕಬೇಕು ಅಷ್ಟೆ. ಅಂಥ ತೋರಿಕೆಯ ಕಟ್ಟುಗಳನ್ನು ಮುರಿದುಕೊಳ್ಳುವುದು ಓದುಗನ ಭಾಗ್ಯ! ಪ್ರತಿಯೊಬ್ಬ ಓದುಗನೂ ಝೆನ್ ಗೆ ಬೆರಗಾಗುವುದು ಅನಿವಾರ್ಯ ಎನಿಸುತ್ತದೆ. ಝೆನ್ ಎಂಬುದು ಧ್ಯಾನವಷ್ಟೆ. ಈ ಧ್ಯಾನವು ಬೆರಗು. ನಮ್ಮ ಕನ್ನಡದ ಅನುಭಾವೀ ಪರಂಪರೆಯೂ ’ಬೆರಗು’ ಎಂದೇ ಹೇಳುತ್ತದೆ. ’ಬೆಳಗಿನೊಳಗಣ ಮಹಾ ಬೆರಗು’ ಎಂದು ವಚನವೊಂದು ಉಲಿಯುತ್ತದೆ. ಅಲ್ಲಮನ ಮಾತಿನಲ್ಲೇ ಅದು ’ಉರಿಯ ಉಯ್ಯಾಲೆ’ ಮತ್ತು ’ಉಲಿಯ ಉಯ್ಯಾಲೆ’ ಹೌದು! ಕತೆಗಳು ಒಂದು ಕಡೆ ಸಾಮಾಜಿಕ ಆಶಯದ ಕೊಂಡಿಯೂ ಹೌದು; ಇನ್ನೊಂದು ಕಡೆ ರಹಸ್ಯ ತಾಣದ ಸಂಗತಿಯೂ ಹೌದು! ಇವೆರಡನ್ನೂ ಕೂಡಿಸುವುದು ಝೆನ್ಗೆ ಇರುವ ತಂತ್ರ ಶಕ್ತಿ.
ಈ ತಂತ್ರವು ಸ್ವತಂತ್ರವಾದುದು. ಝೆನ್ ಕೂಡ ಒಂದು ತಂತ್ರವೇ. ಈ ಕೆಳಗಿನ ಎರಡು ಕತೆಗಳನ್ನು ಗಮನಿಸಿರಿ.
ಕಥೆ: 64 ಸಾಗುವುದು ಎಲ್ಲಿಗೆ
ಕಥೆ: 56 ನಾನು ಎಲ್ಲಿಗೆ
ಝೆನ್ ಕತೆಗಳು ಮಾತಿನಿಂದ ಆರಂಭವಾಗುವುದಿಲ್ಲ. ಅವುಗಳಿಗೆ ಮೌನ ಬೇಕು. ಮೌನ ಮಾತಿನಿಂದ ಹುಟ್ಟುತ್ತದೆ. ಮೌನದಲ್ಲಿ ಲೀನವಾಗುತ್ತದೆ. ಮಾತು ಜ್ಯೋತಿರ್ಲಿಂಗವೆಂದು ಅಲ್ಲಮ ಹೇಳಿದನಷ್ಟೆ. ಈ ಮಾತಿನ ಆಶಯ ಅರ್ಥವಾಗಬೇಕಾದರೆ ಝೆನ್ ಗೆ ಮೊರೆ ಹೋಗಬೇಕು. ಅಲ್ಲಿ ಅಲ್ಲಮನ ಮಾತಿಗೆ ಅರ್ಥದ ಹಲವು ಎಳೆಗಳು ದೊರಕುತ್ತದೆ. ಝೆನ್ ನುಡಿಯುವುದು ಒಂದು ತಂತಿಯಲ್ಲೇ. ಆದರೆ ಅದರ ಸುನಾದ ಮಾತ್ರ ಹಲವು ಶೃತಿಗಳಿಂದ ಕೂಡಿದ್ದು, ಆ ಶೃತಿಯು ಕೇವಲ ಮಂದ್ರವಲ್ಲ, ಮಧ್ಯಮವಲ್ಲ, ತಾರವಲ್ಲ. ಅದು ಮೂರನ್ನು ಒಳಗೊಂಡದ್ದು. ಮೂರು ತಾಸಿನ ಶೃತಿಗೆ ಜೀವನದ ರಹಸ್ಯ ತಿಳಿಸುವ ಶಕ್ತಿ ಉಂಟು. ಕೆಳಗಿನ ಮೂರು ಕತೆಗಳನ್ನು ಗಮನಿಸಿ.
ಕಥೆ: 8 ಮೌನದಲ್ಲಿ ಉತ್ತರ
ಕಥೆ: 1 ಧ್ಯಾನ ಸರಪಳಿ
ಕಥೆ: 42 ಪಾಠ.
ನಮ್ಮ ಬದುಕು ಮೌನಕ್ಕೆ ಹೆಚ್ಚು ಬೆಲೆ ಕೊಟ್ಟಿಲ್ಲ, ಅದು ಗದ್ದಲಕ್ಕೆ ಹೆಚ್ಚು ಬೆಲೆ ಕೊಟ್ಟಿದೆ. ಬದುಕಿನ ಗದ್ದಲ ಇರಬೇಕೆಂದು ನಾವು ಬಯಸುತ್ತೇವೆ. ಈ ಗದ್ದಲ-ಗಜಲುಗಳು ಮನಸ್ಸಿಗೆ ವಿಕಾರವನ್ನು ತಂದು ಕೊಡುತ್ತವೆ. ಈ ವಿಕಾರಗಳು ಬದುಕಿನ ಅಂತಃಪಟಲವನ್ನು ತೆರೆದು ತೋರಿಸುವುದಿಲ್ಲ. ಗದ್ದಲವು ಮೌನವನ್ನು ನುಂಗುತ್ತದೆ. ಮೌನವು ಇಲ್ಲಿ ಆತ್ಮ. ಇಲ್ಲಿ ಪ್ರಾಣ! ದೇಹ ವಿಕಾರವಾಗಿರುವುದು. ಆದರೆ ಆತ್ಮ ವಿಕಾರ ಆಗಿರ ಕೂಡದು. ಜೀವವು ಶುದ್ಧತೆಯನ್ನು ಬೇಡುತ್ತದೆ. ಅದು ಮನಸ್ಸಿನ ಪರಿಶುಭ್ರತೆಯನ್ನು ಕೋರುತ್ತದೆ.
ಜಿ.ಆರ್.ಪರಿಮಳಾ ರಾವ್ ಅವರ ಝೆನ್ ಕತೆಗಳು ಬಲುಹೊಸದಾಗಿವೆ.ಕತೆಗಳು ಆರಂಭಕ್ಕೆ ಯಾವುದೋ ಶೂನ್ಯದ ಬಿಂದುವನ್ನು ಹೇಳುತ್ತಿವೆಯೆಂಬುದು ನಮಗನಿಸುತ್ತದೆ!ಆದರೆ, ಕತೆಯ ಮುಕ್ತಾಯಕ್ಕೆ ಬಂದೊಡನೆ ಝಗ್ಗನೆ ಬೆಳಕು ಹತ್ತಿಕೊಂಡಂತೆ ಹತ್ತಿಕೊಳ್ಳುತ್ತದೆ. ಇದೊಂದು ಸೊಗಸೇ ಸರಿ. ಇಷ್ಟು ಸೊಗಸಾದ ಕತೆಗಳು ಇಲ್ಲಿ ಹೂ ಅರಳಿದಂತೆ ಮಗಮಗಿಸಿವೆ. ಹಣ್ಣು ಬಿರಿದು ಮಧು ನೆಲಕ್ಕೆ ಸ್ರವಿಸುವಂತೆ ಪಕ್ವವಾಗಿದೆ. ಇಲ್ಲಿ ಕನ್ನಡ ಕಥನವು ಹೂವಿನ ಪರಿಮಳದಂತೆ ಪರಮಲೀನವೇ ಹೌದು! ’ವರ್ಣದಲ್ಲಿ ಉತ್ತರ’ ಕತೆ ಆರಂಭ ಮತ್ತು ಕೊನೆ ಎರಡೂ ಒಂದಕ್ಕೊಂದು ಸ್ಪರ್ಶಿಸಿ ಹೊಸ ಜೀವವನ್ನೇ ಉತ್ಪಾದಿಸಿ ಬಿಡುತ್ತದೆ. ಇದು ಕನ್ನಡದ ಸೌಭಾಗ್ಯ. ಈ ಸೌಭಾಗ್ಯಕ್ಕೆ ಅತ್ತ ಅಲ್ಲಮ ಇತ್ತ ಬೇಂದ್ರೆ, ಅತ್ತ ಬುದ್ಧ ಇತ್ತ ಯೇಸುವೂ ಹೌದು. ಈ ನಡುವೆ ಮೌನದ ಉಪಾಸಕರು ಬರುತ್ತಾರೆ. ಅವರು ಬಂದಾಗ ಹೊಸ ಉಸಿರು ಅಮೂರ್ತ ಆಕಾರಪಡೆಯುತ್ತದೆ!” ಸುಮಾರು ೧೬೦ ಪುಟಗಳ ಈ ಝೆನ್ ಕಥಾ ಸಂಕಲನವನ್ನು ಒಮ್ಮೆ ಓದಿದಾಗ ಒಂದು ಅರ್ಥ ಕೊಟ್ಟರೆ ಮತ್ತೆ ಮತ್ತೆ ಓದಿದಾಗ ಹಲವಾರು ಅರ್ಥಗಳನ್ನು ಕೊಡುತ್ತದೆ.