ಝೆನ್ ೧: ನಗುವ ಬುದ್ಧ
ಝೆನ್ ೧
ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.
ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.
ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.
ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.
ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ.
“ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ.
ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.