ಟರ್ನಿಂಗ್ ಪಾಯಿಂಟ್ಸ್
ಡಾ.ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ ‘ವಿಂಗ್ಸ್ ಆಫ್ ಫಯರ್' (ಕನ್ನಡದಲ್ಲಿ :ಅಗ್ನಿಯ ರೆಕ್ಕೆಗಳು). ಪ್ರಸ್ತುತ ‘ಟರ್ನಿಂಗ್ ಪಾಯಿಂಟ್ಸ್' ನಲ್ಲಿ ಅವರ ಆಮೇಲಿನ, ನಂಬಲಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು ಮಹತ್ವಪೂರ್ಣವಾದ ವಿವಾದಾತ್ಮಕ ವಿಷಯಗಳನ್ನು ಮೊಟ್ಟಮೊದಲ ಬಾರಿಗೆ ಚರ್ಚಿಸಿದ್ದಾರೆ. ಈವರೆಗೆ ಅಷ್ಟಾಗಿ ತಿಳಿದಿರದ ಅವರ ವೃತ್ತಿಜೀವನದ ಹಾಗೂ ಅವರು ರಾಷ್ಟ್ರಪತಿಯಾದ ನಂತರದ ಅನುಭವಗಳು ಇಲ್ಲಿ ಹರಳುಗಟ್ಟಿವೆ. ಡಾ.ಕಲಾಂ ಅವರ ಅದ್ವಿತೀಯ ವ್ಯಕ್ತಿತ್ವದ ಬಗೆಗೆ ಅಪೂರ್ವ ಒಳನೋಟಗಳಿರುವ ಈ ಕೃತಿಯಲ್ಲಿ ಮಹಾನ್ ಪರಂಪರೆಯುಳ್ಳ ಒಂದು ದೇಶ ದುಡಿಮೆಯ ಮೂಲಕ, ಸತತ ಪ್ರಯತ್ನದ ಮೂಲಕ, ಆತ್ಮವಿಶ್ವಾಸದ ಮೂಲಕ ಅಪೂರ್ವವಾದುದನ್ನು ಸಾಧಿಸಿ ಹೇಗೆ ಒಂದು ಬೃಹತ್ ರಾಷೃವಾಗಿ ರೂಪುಗೊಳ್ಳಬಹುದೆಂಬ ಕಾಣ್ಕೆಯಿದೆ. ಹಾಗೆ ನೋಡಿದರೆ ಇದೊಂದು ಮುಂದುವರಿದಿರುವ ಕಥನವಷ್ಟೇ ಅಲ್ಲ, ಭಾರತವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ೨೦೨೦ಕ್ಕೂ ಅದರಾಚೆಗೂ ಕರೆದೊಯ್ಯುವ ವೈಯಕ್ತಿಕ ಹಾಗೂ ಸಾಮೂಹಿಕ ಯಾತ್ರೆಯೂ ಹೌದು. ಎಂದು ಬೆನ್ನುಡಿಯಲ್ಲಿ ಮಾಹಿತಿ ಇದೆ.
ಡಾ.ಕಲಾಂ ಬರೆದಿರುವಂತೆ ಇದೊಂದು ಸವಾಲುಗಳ ಜೊತೆಗೊಂದು ಪಯಣ. “ಟರ್ನಿಂಗ್ ಪಾಯಿಂಟ್ಸ್ ಎಂಬ ಪುಸ್ತಕವನ್ನು ನಾನು ಬರೆಯುತ್ತಿದ್ದ ಹಾಗೆಯೇ, ಇದನ್ನು ಯಾಕೆ ಬರೆಯುತ್ತಿದ್ದೇನೆ ಎಂಬ ಜಿಜ್ಞಾಸೆಯೂ ಉಂಟಾಯಿತು. ನನ್ನ ಕಥೆ ಅನೇಕ ಭಾರತೀಯರ ಕಾಳಜಿ, ಆತಂಕ ಹಾಗೂ ಆಶೋತ್ತರಗಳನ್ನು ಪ್ರತಿಧ್ವನಿಸುತ್ತದೆ ಎಂದು ಬೇಕಾದರೆ ಹೇಳಬಹುದು. ಅವರಂತೆ ನಾನೂ ಸಹ ನನ್ನ ಜೀವನವನ್ನು ಏಣಿಯ ಮೊದಲ ಮೆಟ್ಟಿಲಿನಿಂದಲೇ ಪ್ರಾರಂಭ ಮಾಡಿದೆ. ನನ್ನ ಮೊದಲ ಉದ್ಯೋಗ ಒಬ್ಬ ವಿಜ್ಞಾನ ಸಹಾಯಕನಾಗಿ, ನಂತರ ಹಂತಹಂತವಾಗಿ ಹೆಚ್ಚಿನ ಹೊಣೆಗಾರಿಕೆಯ ಕೆಲಸಗಳು ಬಂದವು, ಕೊನೆಯಲ್ಲಿ ಭಾರತದ ರಾಷ್ಟ್ರಪತಿ ಸ್ಥಾನವೂ ಬಂತು. ಕಳೆದ ಒಂದು ದಶಕ ಅಥವಾ ದಶಕಕ್ಕಿಂತಲೂ ಹೆಚ್ಚಿನ ಈ ಅವಧಿಯಲ್ಲಿ ತುಂಬಾ ವಿದ್ಯಮಾನಗಳು ಘಟಿಸಿವೆ, ಅವುಗಳನ್ನು ಹೇಳಬೇಕಾದ್ದಿದೆ. ಅದು ಒಂದು ತೀವ್ರವಾದ ಅನುಭವ ಎಂದೇ ಹೇಳಬಹುದು.” ಎನ್ನುತ್ತಾರೆ ಕಲಾಂ ಸರ್.
ಡಾ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆರಿಸಿದ ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇವರು ಡಾ.ಕಲಾಂ ಅವರಿಗೆ ಕರೆ ಮಾಡಿದ್ದರು. ಈ ಬಗ್ಗೆ ಡಾ.ಕಲಾಂ ವಿವರಿಸುವುದು ಹೀಗೆ “ಎಂದಿನಂತೆ ಅದೊಂದು ಸಾಮಾನ್ಯ ದಿನ. ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ‘ವಿಷನ್ ಟು ಮಿಷನ್' ಎಂಬ ವಿಷಯದ ಬಗ್ಗೆ ನಾನೊಂದು ಉಪನ್ಯಾಸ ನೀಡಿದ್ದೆ. ಒಂದು ತಾಸಿನ ಅದರ ಅವಧಿ ಎರಡು ತಾಸಿನವರೆಗೆ ಮುಂದುವರೆದಿತ್ತು. ಆಮೇಲೆ ಸಂಶೋಧನ ವಿದ್ಯಾರ್ಥಿಗಳ ಒಂದು ತಂಡದ ಜೊತೆ ಊಟ ಮಾಡಿ ಮತ್ತೆ ತರಗತಿಗೆ ಹಿಂದಿರುಗಿದೆ. ಸಂಜೆ ನನ್ನ ಕೊಠಡಿಗೆ ಹಿಂತಿರುಗುತ್ತಿರುವಾಗ ಜೊತೆಗೆ ಬಂದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕಲಾನಿಧಿಯವರು ‘ಬೆಳಗಿನಿಂದಲೂ ಯಾರೋ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು' ಎಂದರು. ನಾನು ಕೊಠಡಿಯನ್ನು ಪ್ರವೇಶಿಸುವಾಗಲೂ ಟೆಲಿಫೋನ್ ಹೊಡೆದುಕೊಳ್ಳುತ್ತಿತ್ತು. ಆ ಕಡೆಯಿಂದ ‘ಪ್ರಧಾನಿಯವರು ನಿಮ್ಮ ಜೊತೆ ಮಾತಾಡಬಯಸಿದ್ದಾರೆ...' ಎಂಬ ಒಂದು ಧ್ವನಿ. ಕೆಲವು ತಿಂಗಳ ಹಿಂದೆಯಷ್ಟೆ ನಾನು ಪ್ರಧಾನಿಯ ಮುಖ್ಯ ವೈಜ್ಞಾನಿಕ ಸಲಹೆಗಾರನೆಂಬ ಸಂಪುಟ ದರ್ಜೆಯ ಹುದ್ದೆಯನ್ನು ಬಿಟ್ಟು ಅಧ್ಯಾಪಕ ವೃತ್ತಿಗೆ ಹಿಂತಿರುಗಿದ್ದೆ. ಈಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಮಾತನಾಡುತ್ತಿದ್ದಂತೆ ನನ್ನ ಜೀವನ ಅನಿರೀಕ್ಷಿತವಾದ ಒಂದು ಬದಲಾವಣೆಗೆ ಸಿದ್ಧವಾಗುವಂತಾಯಿತು.”
ಪುಸ್ತಕದಲ್ಲಿ ಅಬ್ದುಲ್ ಕಲಾಂ ಅವರ ಬಗ್ಗೆ ಸುಮಾರು ೧೬ ಪುಟಗಳ ವರ್ಣಚಿತ್ರಗಳಿವೆ. ಇವರು ರಾಷ್ಟ್ರಪತಿಯಾದ ಬಳಿಕದ ದಿನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪುಸ್ತಕದ ಕೊನೆಗೆ ವಿಷಯ ಸೂಚಿಯನ್ನು ನೀಡಲಾಗಿದೆ. ಇದರಿಂದಾಗಿ ನೀವು ನಿಮಗೆ ಬೇಕಾದ ವಿಷಯವನ್ನು ಕೂಡಲೇ ಯಾವ ಪುಟದಲ್ಲಿದೆ ಎಂದು ಹುಡುಕಿ ತೆಗೆಯಬಹುದು. ಸುಮಾರು ೧೮೦ ಪುಟಗಳ ಈ ಪುಸ್ತಕವನ್ನು ಓದಿದರೆ ಡಾ. ಕಲಾಂ ಅವರ ರಾಷ್ಟಪತಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.