ಟಿಕೆಟ್ ಪ್ಲೀಸ್
‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು, ಅಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳು, ಯುದ್ಧಾನಂತರದ ಯುವಕರ ಕೊರೆತಯಿಂದಾಗಿ ಕೆಲಸ, ಕೈಗಾರಿಕೆ, ನಗರ ವ್ಯವಸ್ಥೆ ಇತ್ಯಾದಿಗಳಲ್ಲಿ ಉಂಟಾದ ಬದಲಾವಣೆಗೆ ತೆರೆದುಕೊಳ್ಳುತ್ತ ಹೋದ ಸ್ತ್ರೀಯರ ವೃತ್ತಿ ವೈವಿಧ್ಯಗಳು ಮತ್ತು ಈ ಬದಲಾವಣೆಗಳು ಹೊಸಕಾಲದ ಯುವತಿಯರಿಗೆ ತಂದುಕೊಟ್ಟ ವಿಶ್ವಾಸದ ಮನಸ್ಥಿತಿಯಲ್ಲಿ ಇವುಗಳೆಲ್ಲದರ ಮೂಲಕ ನಗರದಲ್ಲಿ ಚಲಿಸುವ ಟ್ರಾಮುಗಳಲ್ಲಿ ಕಂಡಕ್ಟರುಗಳಾದ ಯುವತಿಯರ ಕಥೆಯನ್ನು, ಅವರನ್ನು ಏಮಾರಿಸಿ, ಸಿಕ್ಕಿಹಾಕಿಕೊಳ್ಳುವ ಗಂಡು ಹಮ್ಮಿನ ಯುವ ಇನ್ಸ್ ಪೆಕ್ಟರಿನ ಕಥೆಯನ್ನು ಲಾರೆನ್ಸ್ ಹೇಳುತ್ತಾನೆ. ಒಟ್ಟಾರೆಯಾಗಿ ಈ ಕತೆಯಲ್ಲಿ ಅನ್ಶಿಯ ಮನಸ್ಸಿನ ನೋವು ಸಹೃದಯರನ್ನು ಕಾಡುತ್ತದೆ.
‘ಕೊನೆ ಎಲೆ’ ಕಥೆಯಲ್ಲಿ ಕಲಾವಿದನೊಬ್ಬನ ಮಹಾನ್ ಕಲಾಕೃತಿಯನ್ನು ಸೃಷ್ಟಿಸಿ ಅದರ ಮೂಲಕ ಸಾಯುವಂತಹ ಜೀವ ಒಂದಕ್ಕೆ ಬದುಕಬೇಕು ಎಂಬ ಆತ್ಮವಿಶ್ವಾಸವನ್ನು ತುಂಬಿದ ಸಾರ್ಥಕ ಕಥೆಯಾಗಿದೆ. ‘ಖುಷಿ ರಾಜಕುಮಾರ’ ಕಥೆಯಲ್ಲಿ ಚಿಕ್ಕ ಪಕ್ಷಿ ಮತ್ತು ರಾಜಕುಮಾರ ತಮ್ಮ ಚಟುವಟಿಕೆಗಳ ಮೂಲಕ ದೇವರಿಗೆ ಪ್ರಿಯರಾಗುತ್ತಾರೆ ಎನ್ನುವುದನ್ನು ತಿಳಿಸಲಾಗಿದೆ. ‘ಕನಸು’ ಕಥೆಯು ಪ್ರೀತಿ, ಪ್ರೇಮ, ಆದರ್ಶ, ತ್ಯಾಗ ಇಂತಹ ಸೂಕ್ಷ್ಮಭಾವನೆಗಳೂ ಕಥೆಗಳಲ್ಲಿ ಕಲಾತ್ಮಕವಾಗಿ ಅನಾವರಣಗೊಂಡಿವೆ.
ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಿಂಧು ರಾವ್ ಟಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
ಅನುವಾದಗಳು ಜಗತ್ತಿನ ಇತರ ಭಾಷಾ ಸಾಹಿತ್ಯಕ್ಕೆ ಓದುಗರಿಗೆ ಇರುವ ದಾರಿಗಳು. ಕನ್ನಡಕ್ಕೆ ಭಾರತೀಯೇತರ ಭಾಷೆಗಳಿಂದ ಬಂದ ಸಾಕಷ್ಟು ಅನುವಾದಗಳು ಮೊದಲು ಮೂಲಭಾಷೆಯಿಂದ ಇಂಗ್ಲಿಷಿಗೆ ಅನುವಾದವಾಗಿ ನಂತರ ಕನ್ನಡಕ್ಕೆ ಬಂದವು. ಕೆಲವು ಭಾರತೀಯ ಭಾಷೆಗಳ ಸಾಹಿತ್ಯ ಕೂಡಾ ಇಂಗ್ಲಿಷ್ ಅಥವಾ ಹಿಂದಿಗೆ ಅನುವಾದವಾಗಿ ನಂತರ ಕನ್ನಡಕ್ಕೆ ಬಂದಿವೆ. ಶ್ರೀಯುತ ವಿಕ್ರಮ್ ಚದುರಂಗ ಅವರು ಅನುವಾದಕ್ಕೆ ಆರಿಸಿಕೊಂಡವು ಇಂಗ್ಲಿಷ್, ರಷ್ಯನ್ ಮತ್ತು ಅಮೆರಿಕನ್ ಕಥೆಗಳು.
ಐರಿಷ್ ಲೇಖಕ ಆಸ್ಕರ್ ವೈಲ್ಡ್ನ 'ಹ್ಯಾಪಿ ಪ್ರಿನ್ಸ್' ಕಥೆ, ಬ್ರಿಟಿಷ್ ಲೇಖಕ ಡಿ.ಎಚ್. ಲಾರೆನ್ಸ್ ಬರೆದ 'ಟಿಕೆಟ್ ಫೀಸ್' ಕಥೆ ಮತ್ತು ರಷ್ಯನ್ ಲೇಖಕ ಮ್ಯಾಕ್ಸಿಂ ಗೋರ್ಕಿ ಬರೆದ ಆತ್ಮಕಥಾನಕ ರೂಪದ ಮೈ ಯೂನಿವರ್ಸಿಟೀಸ್ ನೀಳತೆ ಮತ್ತು ಓ ಹೆನ್ರಿಯ 'ದಿ ಲಾಸ್ಟ್ ಲೀಫ್' ಎಂಬ ಪುಟ್ಕಥೆ. ಸಾಮಾನ್ಯವಾಗಿ ನನಗೆ ಓದಲು ಲಭ್ಯವಿರುವ ಇಂಗ್ಲಿಷ್ ಸಾಹಿತ್ಯವನ್ನು ನಾನು ಮೂಲದಲ್ಲಿ ಓದಬಯಸುತ್ತೇನೆ. ಹಾಗಾಗಿ ಈ ಕಥೆಗಳನ್ನು ವಿಕ್ರಮ್ ಅವರು ಓದಲು ಕೊಟ್ಟಾಗ ತುಸು ಅನುಮಾನದಿಂದಲೆ ತೆಗೆದುಕೊಂಡೆ. ಎಲ್ಲ ಕಥೆಗಳನ್ನೂ ಒಂದೊಂದಾಗಿ ಓದಿದೆ. ಎಲ್ಲವೂ ಓದಲೇಬೇಕಾದ ಕಥೆಗಳು. ಈ ಎಲ್ಲ ಕಥೆಗಳೂ ಮೊದಲು ಬೇರೆ ಬೇರೆಯವರ ಅನುವಾದದಿಂದ ಕನ್ನಡಕ್ಕೆ ಬಂದಿವೆ. ಅನುವಾದದ ಮೂಲ ಕಥೆಗಳು ಬದುಕಿನ ಹಲವು ಆಯಾಮಗಳನ್ನು ಸಾಕಷ್ಟು ಪರಿಶೋಧಿಸಿ ಯಶಸ್ವಿಯಾದ ಲೇಖಕರ ಅತ್ಯಂತ ಸಮರ್ಥ ಕಥೆಗಳು. ಮೂಲದಲ್ಲಿಯಾಗಲೀ ಅಥವಾ ಕನ್ನಡದಲ್ಲೇ ಆಗಲಿ ಓದಲೇಬೇಕಾದ ಅತ್ಯುತ್ತಮ ಕಥೆಗಳು. ಬದುಕಿನ ಹಲವಾರು ತಿರುವುಗಳಲ್ಲಿ ಎದುರಾಗುವ ಸಂದಿಗ್ಧಗಳು, ಅವುಗಳ ಪರಿಹಾರ ಮತ್ತು ಪರಿಣಾಮ ಎಲ್ಲವೂ ಈ ಕಥೆಗಳಲ್ಲಿ ಚಿತ್ರಕವಾಗಿ ಮೂಡಿಬಂದಿವೆ. ವಿಕ್ರಮ್ ಅವರು ಈ ಕಥೆಗಳ ಜೀವನಾಡಿಯನ್ನು ಗ್ರಹಿಸಿ ಅದನ್ನು ಕನ್ನಡದಲ್ಲಿಯೂ ಮಿಡಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ.
ಈ ನಾಲ್ಕೂ ಕಥೆಗಳು ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ತೆರೆದಿಡುತ್ತವೆ. ಈ ಕಾರಣದಿಂದಲೇ ಬಹುಶಃ ಈ ಕಥೆಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಅನುವಾದದ ಪ್ರಯತ್ನ ಸಫಲವಾಗಿದೆ. ಸಾಮಾನ್ಯವಾಗಿ ಮೂಲಲೇಖಕರ ಭಾವಕೋಶವನ್ನು ಹಾಗೆ-ಹಾಗೆಯೇ ತಂದರೆ ಅನುವಾದಿಸಲ್ಪಡುತ್ತಿರುವ ಭಾಷೆಯ (ಇಲ್ಲಿ ಕನ್ನಡ) ಜಾಯಮಾನ, ನುಡಿಗಟ್ಟುಗಳು ಉಸಿರುಗಟ್ಟುತ್ತವೆ. ಹಾಗಂತ ಭಾವಾನುವಾದ ಮಾಡಲೂ ಆಗದು. ಇವೆರಡೂ ದಾರಿಗಳನ್ನು ಬಿಟ್ಟು ಕಥೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುತ್ತ, ನಮಗೆ ಪರಿಚಿತವಿರಬಹುದಾದ ನೆಲೆಗಳಿಂದ. ಸೂಕ್ಷ ಸಂವೇದಕ ನಿರೂಪಣೆಯಿಂದ ಕಥೆಯನ್ನು ನಮಗೆ ತಲುಪಿಸುವ ಪ್ರಯತ್ನವನ್ನು ಅನುವಾದಕರು ಮಾಡಿದ್ದಾರೆ. ಇವರ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಹಿಡಿತ ಈ ಅನುವಾದಕ್ಕೆ ಬೆನ್ನೆಲುಬಾಗಿದೆ. ಇದಲ್ಲದೆ ನಾನು ಮೊದಲೇ ಹೇಳಿದಂತೆ ಈ ಕಥೆಗಳ ತಿರುಳೇ ನಮಗೆ ಒಳಗಿನ ಲೋಕವೊಂದನ್ನು ಅನಾವರಣ ಮಾಡುವುದಾಗಿರುವುದರಿಂದ, ಈ ಒಳಲೋಕಕ್ಕೆ ರಹದಾರಿಗಳು ದೇಶಾತೀತವಾಗಿ, ಕಾಲಾತೀತವಾಗಿ ಮತ್ತು ಭಾಷಾತೀತ ವಾಗಿ ನಮ್ಮ ತೆರೆದ ಮನಸ್ಸುಗಳ ಮೂಲಕ, ಹೊಸದನ್ನು ಪರಿಶೀಲಿಸಲು ಸಿದ್ಧವಿರುವ, ಕೇಳುವುದಕ್ಕೆ ಅನುವಾಗಿರುವ ಮನಸ್ಥಿತಿಯ ಮೂಲಕವೇ ಇರುತ್ತವೆ. ಆ ವಿಚಾರ ಇಲ್ಲಿನ ಅನುವಾದಗಳಿಗೆ ಹೆಚ್ಚು ಅರ್ಥಗಾರಿಕೆಯನ್ನು ದಯಪಾಲಿಸಿದೆ. ತಾಂತ್ರಿಕವಾಗಿ ಹೇಳುವುದಾದರೆ ಅನುವಾದವು ಮೂಲ ಆಕರದ ವಿಷಯ, ಭಾವ ಮತ್ತು ದನಿ, ಹಾಗೂ ಶಿಲ್ಪಕ್ಕೆ ನಿಷ್ಠವಾಗಿರಬೇಕು. ಹಾಗೆಂದು ಅನುವಾದಿಸಲ್ಪಡುವ ಭಾಷೆಗೆ ತೀರಾ ಪೆಡಸಾಗಿಯೂ ಇರಬಾರದು. ಈ ಎಲ್ಲವನ್ನೂ ಪ್ರಯತ್ನಪೂರ್ವಕವಾಗಿ ಮಾಡಿದಾಗ ಅನುವಾದ ತಾಂತ್ರಿಕವಾಗಿ ಸರಿಯಿದ್ದಾಗ್ಯೂ ಓದಲು ಹಿಡಿಸದೆ ಹೋಗಬಹುದು. ಅದಕ್ಕೆ ಕಾರಣ ಅನುವಾದಿಸುವವರಿಗೆ ಆ ಮೂಲ ಆಕರ ಎಷ್ಟು ಆಳದಲ್ಲಿ ಗ್ರಹಿಕೆಗೆ ಬಂದಿದೆ ಮತ್ತು ಅನುವಾದಕರ ಹಿಡಿತಕ್ಕೆ ಮೂಲ ಆಕರದ ಜೀವನಾಡಿ ಸಿಕ್ಕಿದೆಯೇ, ಅರ್ಥವಾಗಿದೆಯೇ ಎಂಬುದಾಗಿರುತ್ತದೆ. ಇದನ್ನು ನಮ್ಮ ನಡುವಿನ ಹಿರಿಯ ಮಾದರಿ ಅನುವಾದಕ ಎಸ್. ದಿವಾಕರ್ ಅವರು 'ಟೋನ್' ಎಂದು ಕರೆದಿದ್ದಾರೆ. ಮೂಲದ ದನಿ, ಭಾವ, ಏಕೆ ಆ ಕಥೆ ಹೇಳಲೇಬೇಕಿತ್ತು ಎಂಬ ತುರ್ತು ಅನುವಾದದಲ್ಲಿಯೂ ಪ್ರತಿಫಲಿಸದೆ ಇದ್ದರೆ ಆ ಕಥೆಯು ಮೂಲದಷ್ಟು ಸೊಗಯಿಸುವುದಿಲ್ಲ. ಓದಲು ಅಷ್ಟೊಂದು ಸುಲಭವೂ ಆಗುವುದಿಲ್ಲ. ಮೂಲದ ಟೋನ್ ವಿಕ್ರಮ್ ಚದುರಂಗ ಅವರಿಗೆ ಬಹು ಸುಲಭವಾಗಿ ದಕ್ಕಿದೆ. ಜೊತೆಗೆ ಕನ್ನಡ ಅನುವಾದದಲ್ಲಿ ಈ ಟೋನ್ ಪ್ರತಿಫಲಿತವಾಗಿದೆ.
ಹೆಚ್ಚಿನ ವಿವರಣೆಗಳು ಈ ಕಥೆಗಳಿಗಿರುವ ಸಾಂದ್ರತೆಯನ್ನು ದುರ್ಬಲಗೊಳಿಸ ಬಹುದು. ಏಕೆಂದರೆ ಈ ಕಥೆಗಳನ್ನು ಓದುವಾಗಲೆ ನಿಮಗೆ ಅವು ದಕ್ಕುವುದು. ಅದೇನೇ ಆದರೂ ಒಂದು ಒಳ್ಳೆಯ ಓದಲೇಬೇಕಾದ ಕಥೆಯು ಓದಲು ಯಾವ ತೊಡರುವಿಕೆಯೂ ಇಲ್ಲದ ಹಾಗೆ ಅನುವಾದವಾಗಿದೆ.
ಈ ಕಥೆಗಳ ಆಯ್ಕೆಯಲ್ಲಿ ವಿಕ್ರಮರ ವ್ಯಕ್ತಿತ್ವದ ಒಂದು ಕುಡಿನೋಟ ಸಿಗುತ್ತದೆ. ಈಗ ಹುಡುಕಿದರೆ ಬಹಳ ಅಪರೂಪವೆನಿಸುವ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಸದಭಿರುಚಿ, ಸಹೃದಯತೆಯೇ ಮೈವೆತ್ತಿದಂತಿರುವ ಈ ಅಪರೂಪದ ವ್ಯಕ್ತಿಗೆ ಈ ಕಥೆಗಳ ಮೂಲ ಟೋನ್ ದಕ್ಕಲು ಬೇಕಾಗುವ ಸಮರ್ಥ ಪಾತಳಿಯಿದೆ ಎಂಬುದು ಗೊತ್ತಾಗುತ್ತದೆ. ಈ ಅನುವಾದಿತ ಕಥೆಗಳ ಸೊಗಸಾದ ಓದನ್ನು ಒದಗಿಸಿ, ಈ ಕಿರಿಯಳ ಅನಿಸಿಕೆಯ ಕುರಿತು ವಿಶ್ವಾಸವಿಟ್ಟ ಹಿರಿಯರಾದ ವಿಕ್ರಮ್ ಚದುರಂಗ ಅವರಿಗೆ ನನ್ನ ಧನ್ಯವಾದಗಳು” ೧೦೪ ಪುಟಗಳ ಈ ಪುಟ್ಟ ಕೃತಿ ಮಹತ್ವದ ಐದು ಅನುವಾದಿತ ಕತೆಗಳನ್ನು ಹೊಂದಿದ್ದು ಉತ್ತಮ ಓದಿಗೆ ಸಹಕಾರಿ.