ಟೀನಾ ಮತ್ತು ಚಿಟ್ಟೆಗಳು

ಟೀನಾ ಮತ್ತು ಚಿಟ್ಟೆಗಳು

‘ಟೀನಾ ಮತ್ತು ಚಿಟ್ಟೆಗಳು’ ಎಂಬ ಪುಟ್ಟ ಮಕ್ಕಳ ಕಥೆಯನ್ನು ಬರೆದವರು ಡಾ। ಕೆ.ಪಿ.ಸಂಧ್ಯಾ ರಾವ್. ಇವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿಎ. ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಬಾಲ್ಯದಿಂದಲೂ ಇವರಿಗೆ ಬರವಣಿಗೆಯ ಹವ್ಯಾಸ. ಇವರು ಆಂಗ್ಲ ಭಾಷೆಯಲ್ಲಿ ಬರೆದ ಹಲವಾರು ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಪುಟ್ಟ ಪುಟ್ಟ ಮಕ್ಕಳ ಕಥೆಗಳನ್ನು ಓದಲು ಬಹಳ ಸೊಗಸಾಗಿರುತ್ತದೆ. ಆ ಕಥೆಯಲ್ಲಿನ ಅದ್ಬುತ ಕಲ್ಪನೆಗಳು ಮಕ್ಕಳಿಗೆ ಮಾತ್ರವಲ್ಲ ದೊಡ್ದವರಿಗೂ ಮುದ ನೀಡುತ್ತವೆ. ಆಂಗ್ಲಭಾಷೆಯಲ್ಲಿ ಬರೆದಿರುವ ಇವರ ಮಕ್ಕಳ ಕಥೆಗಳಲ್ಲಿ ಕೆಲವನ್ನು ಕನ್ನಡ ಅನುವಾದ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ಸಂಪದದಲ್ಲಿ ಪ್ರಕಟಿಸಲಿದ್ದೇವೆ. 

***

ಟೀನಾ ಮತ್ತು ಚಿಟ್ಟೆಗಳು 

ಟೀನಾ ಎಂಬ ಪುಟ್ಟ ಹುಡುಗಿಯು ತನ್ನ ತಂದೆ ಹಾಗೂ ತಾಯಿಯ ಜೊತೆಯಲ್ಲಿ ಒಂದು ಪುಟ್ಟ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದಳು. ಅವಳು ಬಹಳ ತುಂಟ ಹುಡುಗಿಯಾಗಿದ್ದಳು. ಅವಳು ಮನೆಯಲ್ಲಿರುವ ಸುಂದರ ವಸ್ತುಗಳನ್ನು ಯಾವಾಗಲೂ ಒಡೆದು ಹಾಕುತ್ತಾ ಇರುತ್ತಿದ್ದಳು. ಅವಳ ಈ ತುಂಟತನವು ಅವಳ ಹೆತ್ತವರಿಗೆ ಬಹಳ ಬೇಸರ ತರಿಸುತ್ತಿತ್ತು. ಅವಳ ತಂದೆ ಮನೆಯ ಎದುರುಗಡೆ ಬಹಳ ಸುಂದರವಾದ ಉದ್ಯಾನವನವನ್ನು ನಿರ್ಮಾಣ ಮಾಡಿದ್ದರು. ಉದ್ಯಾನದಲ್ಲಿ ಬಹಳ ಸುಂದರವಾದ ಹೂವುಗಳು ಅರಳುತ್ತಿದ್ದವು. ಈ ಹೂವುಗಳ ಮಕರಂದವನ್ನು ಹೀರಲು ಸುಂದರವಾದ ಚಿಟ್ಟೆಗಳು ಬರುತ್ತಿದ್ದವು. ಪುಟ್ಟ ಪುಟ್ಟ ಹಕ್ಕಿಗಳ ಕಲರವವೂ ಕೇಳಿಬರುತ್ತಿತ್ತು.

ಟೀನಾ ಉದ್ಯಾನದೊಳಗೆ ಹೋಗಿ ಚಿಟ್ಟೆಗಳಿಗೆ, ಹಕ್ಕಿಗಳಿಗೆ ಕಲ್ಲು ಬಿಸಾಕುವುದು ಮಾಡುತ್ತಿದ್ದಳು. ಒಂದು ದಿನ ಅವಳು ಉದ್ಯಾನವನಕ್ಕೆ ಬಂದು ಅಲ್ಲಿದ್ದ ಚಿಟ್ಟೆಗಳನ್ನು ಹಿಡಿದು ಅದರ ಸುಂದರವಾದ ರೆಕ್ಕೆಗಳನ್ನು ಕತ್ತರಿಸಿ ಹಾಕಿದಳು. ಆ ಬಳಿಕ ಒಂದು ಸಣ್ಣ ಗುಂಡಿಯನ್ನು ತೋಡಿ ಅದರಲ್ಲಿ ಆ ಚಿಟ್ಟೆಗಳನ್ನು ಹಾಕಿದಳು. ಅದರ ಮೇಲೆ ಮಣ್ಣು ಹಾಕಿ ಮುಚ್ಚಿದಳು. ಪಾಪದ ಚಿಟ್ಟೆಗಳು, ಗುಂಡಿಯಲ್ಲಿ ಹಾಕುವಾಗ ಅವುಗಳಿಗೆ ಸ್ವಲ್ಪ ಜೀವವಿತ್ತು. ಆದರೂ ಕರುಣೆ ತೋರಿಸದ ಟೀನಾ ಅವುಗಳನ್ನು ಹೂತು ಹಾಕಿದಳು.

ಮರುದಿನ ಅದೇ ಜಾಗಕ್ಕೆ ಬಂದು ತಾನು ತೋಡಿದ ಹೊಂಡದ ಮಣ್ಣನ್ನು ತೆಗೆದು ಆ ಚಿಟ್ಟೆಗಳನ್ನು ನೋಡಿದಳು. ಅವುಗಳೆಲ್ಲಾ ಸತ್ತು ಹೋಗಿದ್ದವು. ಈ ಘಟನೆಯನ್ನು ಅವಳ ತಂದೆ ನೋಡಿದರು. ಅವರಿಗೆ ತಮ್ಮ ಮಗಳ ಈ ಕೆಲಸದಿಂದ ಬಹಳ ನೋವಾಯಿತು. ಅವರು ಅವಳನ್ನು ಕರೆದು ಹೇಳಿದರು ‘ಟೀನಾ ಪುಟ್ಟಿ, ನೀನು ಆ ಪುಟ್ಟ ಚಿಟ್ಟೆಗಳಿಗೆ ಹಾಗೆ ಹಿಂಸೆ ಕೊಟ್ಟು ಕೊಲ್ಲಬಾರದು. ಅವುಗಳು ನಮ್ಮಂತೆಯೇ ಜೀವವಿರುವ ಪ್ರಾಣಿಗಳು. ದೇವರು ಎಲ್ಲಾ ಪ್ರಾಣಿ ಪಕ್ಷಿಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದ್ದು ಯಾಕೆ ಗೊತ್ತಾ? ಅವುಗಳೆಲ್ಲಾ ಸ್ನೇಹ-ಸೌಹಾರ್ದತೆ-ಶಾಂತಿಯಿಂದ ಬದುಕಬೇಕೆಂದು. ಹಸಿವಾಗದೇ ಇದ್ದರೆ ಹುಲಿಯೂ ಬೇಟೆಯಾಡುವುದಿಲ್ಲ. ಹಾಗಿರುವಾಗ ನೀನು ದೇವರ ಸುಂದರ ಸೃಷ್ಟಿಯಾದ ಚಿಟ್ಟೆಗಳನ್ನು ಹಿಂಸೆ ನೀಡಿ ಕೊಂದು ಬಿಟ್ಟಿರುವೆ. ಇದು ತಪ್ಪು. ಇನ್ನು ಹೀಗೆ ಮಾಡಬೇಡ. ನೀನು ಅವುಗಳ ಸೌಂದರ್ಯವನ್ನು ನೋಡು, ಆಟ ಆಡು, ಹಿಂಸೆ ನೀಡಬೇಡ, ಸರಿತಾನೇ?” ಅಂದರು.

ಟೀನಾ ತನ್ನ ತಂದೆ ಹೇಳಿದೆಲ್ಲವನ್ನು ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಹೊರಗೆ ಬಿಟ್ಟು ಬಿಟ್ಟಳು. ಮರುದಿನವೂ ಅವಳು ಉದ್ಯಾನವನಕ್ಕೆ ತೆರಳಿ ಅದೇ ಕಾರ್ಯವನ್ನು ಮುಂದುವರೆಸಿದಳು. ಚಿಟ್ಟೆಗಳನ್ನು ಹಿಡಿದು ಅದರ ರೆಕ್ಕೆಯನ್ನು ಕತ್ತರಿಸಿ, ಅವುಗಳನ್ನು ಹೊಂಡಕ್ಕೆ ಹಾಕಿ ಕೊಲ್ಲುವಾಗ ಅವಳಿಗೆ ಒಂದು ರೀತಿಯ ಆನಂದ ಉಂಟಾಗುತ್ತಿತ್ತು. ಈ ಕೆಲಸವನ್ನು ಅವಳು ಪ್ರತೀ ದಿನ ಮಾಡತೊಡಗಿದಳು. ಈ ವಿಚಾರವನ್ನು ಗಮನಿಸಿದ ಅವಳ ತಂದೆ ಟೀನಾಳಿಗೆ ಬುದ್ಧಿ ಕಲಿಸಲೇ ಬೇಕೆಂದು ನಿರ್ಧಾರ ಮಾಡಿದರು.

ಒಂದು ದಿನ ಟೀನಾ ಉದ್ಯಾನದಲ್ಲಿ ಆಡುತ್ತಾ ಚಿಟ್ಟೆಗಳನ್ನು ಹಿಡಿಯುವ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಅವಳ ಅಪ್ಪ, ಅವಳನ್ನು ಹಿಡಿದು, ಕೈಕಾಲುಗಳನ್ನು ಬಿಗಿಯಾಗಿ ಕಟ್ಟಿ ಒಂದು ದೊಡ್ಡ ಮರದ ಪೆಟ್ಟಿಗೆಯೊಳಗೆ ಹಾಕಿದರು. ಆ ಪೆಟ್ಟಿಗೆಯನ್ನು ಮನೆಯ ನೆಲಮಾಳಿಗೆಯಲ್ಲಿಟ್ಟರು. ಆ ಪೆಟ್ಟಿಗೆಯೊಳಗೆ ಕತ್ತಲು ಇದ್ದುದರಿಂದ ಟೀನಾಳಿಗೆ  ಹೆದರಿಕೆಯಾಯಿತು. ಗಾಳಿ ಬರುತ್ತಿಲ್ಲವಾದುದರಿಂದ ಉಸಿರಾಡಲೂ ಕಷ್ಟವಾಯಿತು. ಅವಳು ಜೋರಾಗಿ ‘ಅಪ್ಪಾ, ಅಪ್ಪಾ.. ನನ್ನನ್ನು ಈ ಪೆಟ್ಟಿಗೆಯಿಂದ ಹೊರ ತೆಗೆ. ಇಲ್ಲವಾದಲ್ಲಿ ನಾನು ಉಸಿರು ಕಟ್ಟಿ ಸತ್ತೇ ಹೋಗುವೆ' ಎಂದು ಕರೆದಳು. ಅವಳ ಅಪ್ಪ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಆಗ ಟೀನಾ ಮತ್ತಷ್ಟು ಹೆದರಿದಳು.

ಟೀನಾಳಿಗೆ ಆಗ ತನ್ನ ತಪ್ಪಿನ ಅರಿವಾಯಿತು. ಅವಳು ಕೂಡಲೇ ‘ಅಪ್ಪಾ, ನನ್ನನ್ನು ಕ್ಷಮಿಸಿ, ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ. ಇನ್ನೆಂದೂ ನಾನು ಚಿಟ್ಟೆಗಳಿಗೆ ಹಿಂಸೆ ಕೊಟ್ಟು ಕೊಲ್ಲುವುದಿಲ್ಲ' ಎಂದಳು. ತಂದೆ ಕೂಡಲೇ ಆ ಪೆಟ್ಟಿಗೆಯ ಮುಚ್ಚಳವನ್ನು ತೆರೆದರು. ಹೆದರಿ ನಡುಗುತ್ತಿದ್ದ ಟೀನಾ ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡಳು. ಅಪ್ಪ ಹೇಳಿದರು “ಟೀನಾ, ನೀನು ಪೆಟ್ಟಿಗೆಯ ಒಳಗಿದ್ದ ಸಮಯ ಅತೀ ಸ್ವಲ್ಪ. ಆದರೂ ನಿನಗೆ ಅದರ ಒಳಗೆ ಇರಲು ಆಗಲಿಲ್ಲ. ಹೆದರಿಕೆಯಾಯಿತು, ನೋವಾಯಿತು, ಸಾಯುತ್ತೇನೆಂದು ಭಯವಾಯಿತು. ನೀನು ರೆಕ್ಕೆಯನ್ನು ಕತ್ತರಿಸುತ್ತಿದ್ದಾಗ ಆ ಚಿಟ್ಟೆಗಳಿಗೆ ಎಷ್ಟು ನೋವಾಗಿರಬೇಕು? ಆಲೋಚನೆ ಮಾಡು. ಅವುಗಳನ್ನು ನೀನು ಹೊಂಡದಲ್ಲಿ ಹಾಕಿ ಮುಚ್ಚುವಾಗ ಅವುಗಳಿಗೆ ರೆಕ್ಕೆಗಳಿಲ್ಲದೇ ಹಾರಿ ಹೋಗಲೂ ಆಗುತ್ತಿರಲಿಲ್ಲ. ಅಲ್ಲೇ ನರಳಿ ಸತ್ತುಹೋಗುತ್ತಿದ್ದವು. ಈಗ ನಿನಗೆ ಆ ಪಾಪದ ಚಿಟ್ಟೆಗಳ ನೋವು ಅರಿವಾಗಿರಬೇಕು ಎಂದು ನಾನು ಅಂದುಕೊಳ್ಳುವೆ. ಇನ್ನಾದರೂ ನೀನು ಚಿಟ್ಟೆಗಳ ಸೌಂದರ್ಯವನ್ನು ನೋಡಿ ಆಟವಾಡುವುದನ್ನು ಕಲಿ” 

ಟೀನಾಳಿಗೆ ತನ್ನ ತಪ್ಪಿನ ಅರಿವಾಯಿತು. ತಾನು ಕೊಂದು ಹಾಕಿದ ಚಿಟ್ಟೆಗಳ ಸಾವಿಗಾಗಿ ಅವಳು ಬಹಳ ಪಶ್ಚಾತ್ತಾಪ ಪಟ್ಟಳು. ಅವಳು ತಂದೆಯ ಬಳಿ ಹೇಳಿದಳು “ಅಪ್ಪಾ ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಕ್ಷಮೆ ಕೇಳುವೆ. ಇನ್ನು ನಾನು ಯಾವತ್ತೂ ಚಿಟ್ಟೆಗಳಿಗೆ ಅಥವಾ ಪ್ರಾಣಿ ಪಕ್ಷಿಗಳಿಗೆ ಹಿಂಸೆ ಮಾಡುವುದಿಲ್ಲ. ದೇವರು ಸೃಷ್ಟಿಸಿದ ಸುಂದರ ಜೀವಿಗಳ ಜೊತೆ ಬದುಕುವುದನ್ನು ಕಲಿಯುವೆ. ನಾನಿನ್ನು ಒಳ್ಳೆಯ ಹುಡುಗಿಯಾಗಿ ನಿಮಗೆ ತೋರಿಸುವೆ. ಇನ್ನೆಂದೂ ನೀವು ನನಗೆ ಜೋರು ಮಾಡದಂತೆ ನಡೆದುಕೊಳ್ಳುವೆ'

ಮಗಳ ಮನಸ್ಸು ಪರಿವರ್ತನೆ ಆದುದಕ್ಕೆ ಅಪ್ಪನಿಗೆ ಬಹಳ ಸಂತೋಷವಾಯಿತು. ಕಡೆಗೂ ತನ್ನ ಮುದ್ದು ಟೀನಾ ಬುದ್ದಿ ಕಲಿತಳು ಎಂದು ಆನಂದವಾಯಿತು. ನಂತರದ ದಿನಗಳಲ್ಲಿ ಟೀನಾ ಪ್ರತೀ ದಿನ ಉದ್ಯಾನವನಕ್ಕೆ ಹೋಗಿ ಚಿಟ್ಟೆಗಳನ್ನು ಗಮನಿಸುತ್ತಿದ್ದಳು. ಅದರ ಸುಂದರ ರೆಕ್ಕೆಯನ್ ಮೇಲಿನ ಬಣ್ಣ, ಚಿತ್ತಾರಗಳನ್ನು ನೋಡಿ ಖುಷಿ ಪಡುತ್ತಿದ್ದಳು. ಅವಳು ನಂತರ ಎಂದೂ ಪ್ರಾಣಿ ಪಕ್ಷಿಗಳಿಗೆ ಕಲ್ಲು ಎಸೆಯಲಿಲ್ಲ. ಬದಲಾಗಿ ಅವುಗಳಿಗಾಗಿ ನೀರು, ಆಹಾರ ಇರಿಸುತ್ತಿದ್ದಳು. ಆಹಾರಕ್ಕಾಗಿ ಹಲವಾರು ಅಪರೂಪದ ಪಕ್ಷಿಗಳು ಅವಳ ಉದ್ಯಾನವನಕ್ಕೆ ಬರುತ್ತಿದ್ದವು. ಸೊಗಸಾಗಿ ಹಾಡುತ್ತಿದ್ದವು. ನವಿಲುಗಳು ರೆಕ್ಕೆ ಬಿಚ್ಚಿ ಕುಣಿಯುತ್ತಿದ್ದವು. ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗೆ ಬದುಕುವ ಸಮಾನ ಹಕ್ಕು ಇದೆ ಎಂಬ ವಿಷಯ ಟೀನಾಳಿಗೆ ಕೊನೆಗೂ ಮನದಟ್ಟಾಯಿತು. 

ಆಂಗ್ಲ ಮೂಲ: ಡಾ। ಕೆ.ಪಿ.ಸಂಧ್ಯಾ ರಾವ್