ಟುಟ್ಟೂ ಗಿಳಿಯ ಲೋಕಸಂಚಾರ

ಟುಟ್ಟೂ ಗಿಳಿಯ ಲೋಕಸಂಚಾರ

ಹಲವಾರು ವರುಷಗಳ ಮುಂಚೆ ರೈತನೊಬ್ಬ ಪಂಜರದಲ್ಲಿ ಗಿಳಿಯೊಂದನ್ನು ಸಾಕಿದ್ದ. ಅದರ ಹೆಸರು ಟುಟ್ಟೂ. ಅವನ ಕುಟುಂಬದ ಎಲ್ಲರಿಗೂ, ಹಳ್ಳಿಯ ಎಲ್ಲರಿಗೂ ಟುಟ್ಟೂ ಎಂದರೆ ಅಚ್ಚುಮೆಚ್ಚು. ಯಾಕೆಂದರೆ ಅದು ಮನುಷ್ಯರಂತೆಯೇ ಮಾತಾಡುತ್ತಿತ್ತು.

ಎಲ್ಲರೂ ಮೆಚ್ಚುತ್ತಿದ್ದ ಕಾರಣ ಗಿಳಿಗೆ ಅಹಂಕಾರ ಬೆಳೆಯಿತು. ತನಗೆಲ್ಲವೂ ಗೊತ್ತಿದೆ ಎಂದು ಟುಟ್ಟೂ ಭಾವಿಸಿತು. ಕ್ರಮೇಣ ಅದು ಇತರರನ್ನು ಹೀಯಾಳಿಸುತ್ತಾ ಬಯ್ಯಲು ಶುರು ಮಾಡಿತು.

ಮುದಿಯಾದ ಮನೆನಾಯಿಯನ್ನು ಗಿಳಿ ನಿಂದಿಸಿದ್ದು ಹೀಗೆ: “ಏ ನಾಯಿ, ಎಷ್ಟು ಲಕ್ಷಣಗೆಟ್ಟ ಪ್ರಾಣಿ ನೀನು! ನಿನ್ನ ಗೋಜಲು ಕೂದಲಿನಿಂದ ಮುದ್ದೆಮುದ್ದೆಯಾಗಿ ಕಾಣಿಸುತ್ತಿ. ಕುರೂಪಿ ನೀನು, ನನ್ನಿಂದ ದೂರವಿರು.”

ಕೋಳಿ ಮತ್ತು ಅದರ ಮರಿಗಳನ್ನು ಗಿಳಿ ಗೇಲಿ ಮಾಡಿದ್ದು ಹೀಗೆ: “ಏ ಕೋಳಿ, ಬೆಳಗಾಗುತ್ತಲೇ ಅದೇನು ಕೂಗಲು ಶುರು ಮಾಡುತ್ತಿ! ಕಿವಿ ತಮ್ಮಟೆ ಒಡೆಯುವಂತೆ ಕಿರಿಚುತ್ತಿ! ನಿನ್ನ ಮರಿಗಳೋ, ಅವಕ್ಕೆ ಆಟವಾಡೋದೊಂದೇ ಗೊತ್ತು. ಅವನ್ನು ಹದ್ದುಬಸ್ತಿನಲ್ಲಿಡು. ನಿನಗಂತೂ ಸುಮ್ಮನಿರಲಿಕ್ಕೇ ಗೊತ್ತಿಲ್ಲ.”

ಜೇನ್ನೊಣವನ್ನು ಗಿಳಿ ಅಪಹಾಸ್ಯ ಮಾಡಿದ್ದು ಹೀಗೆ: “ಏ ಜೇನ್ನೊಣ, ಇಷ್ಟು ಸಣ್ಣಗಿದ್ದಿ ನೀನು. ಆದರೆ ಯಾವಾಗಲೂ ಝೇಂಕರಿಸುತ್ತಿ. ಯಾವಾಗಲೂ ಹಾರಾಡುತ್ತಾ ಅದೇನು ಮಾಡುತ್ತಿ?”

ಸಂಜೆ ಹೊಲದಿಂದ ಹಿಂತಿರುಗಿದ ಎತ್ತು ಹಟ್ಟಿಯಲ್ಲಿ ನಿಧಾನವಾಗಿ ಮೇವನ್ನು ಮೆಲುಕಿ ಹಾಕುತ್ತಿರುವಾಗ ಗಿಳಿ ಅದನ್ನು ಬಯ್ದದ್ದು ಹೀಗೆ: "ಬೆಳಗ್ಗೆಯಿಂದ ಸಂಜೆ ವರೆಗೆ ಹಳ್ಳಿಯಲ್ಲೆಲ್ಲ ಅಡ್ಡಾಡುತ್ತಿ ನೀನು. ಈಗ ಆರಾಮವಾಗಿ ಮೆಲುಕು ಹಾಕುತ್ತಿದ್ದಿ. ಮತ್ತೇನು ಕೆಲಸ ನಿನಗೆ?"

ಈ ಗಿಳಿಯ ಸ್ವಭಾವ ನಾಯಿ, ಕೋಳಿ, ಜೇನ್ನೊಣ ಮತ್ತು ಎತ್ತು - ಇವಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಅವರು ಯಾರೂ ಗಿಳಿಯ ಚುಚ್ಚುಮಾತುಗಳಿಗೆ ಉತ್ತರ ಕೊಡುತ್ತಿರಲಿಲ್ಲ. ಅವರೆಲ್ಲರೂ ಗಿಳಿಯನ್ನು ನಿರ್ಲಕ್ಷಿಸಿದ್ದರು. ಯಾಕೆಂದರೆ ಗಿಳಿ ದುರಹಂಕಾರಿ ಮತ್ತು ಅದರೊಂದಿಗೆ ಮಾತಾಡೋದೇ ವ್ಯರ್ಥ ಎಂದವರಿಗೆ ಅರ್ಥವಾಗಿತ್ತು.

ಅದೊಂದು ದಿನ, ರೈತನ ಮಗಳು ಗಿಳಿಗೆ ಆಹಾರ ಹಾಕಿ, ಪಂಜರದ ಬಾಗಿಲು ಮುಚ್ಚಲು ಮರೆತು ಬಿಟ್ಟಳು. ಟುಟ್ಟೂ ಗಿಳಿ ಪಂಜರದಿಂದ ನಿಧಾನವಾಗಿ ಹೊರಗೆ ಬಂತು. ಆ ತನಕ ಅದು ಪಂಜರದ ಹೊರಗೆ ಬಂದಿರಲೇ ಇಲ್ಲ. ಅದೀಗ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಮನೆಯ ಮುಂಭಾಗಕ್ಕೆ ಬಂತು. ನಂತರ ಮನೆಯಿಂದ ಹೊರ ಬಂದು ತೋಟಕ್ಕೆ ಹೋಯಿತು.

ಜೇನ್ನೊಣವು ಹೂಗಳಿಂದ ಹೀರಿದ ಮಕರಂದವನ್ನು ಜೇನುಗೂಡಿಗೆ ಒಯ್ಯುವುದನ್ನು ಟುಟ್ಟೂ ನೋಡಿತು. “ಜೇನ್ನೊಣವೇ, ಅದ್ಯಾಕೆ ಮಕರಂದ ಹೀರುತ್ತಿ ಮತ್ತು ಅದನ್ನೇನು ಮಾಡುತ್ತಿ?" ಎಂದು ಗಿಳಿ ಕೇಳಿತು.

“ಅದನ್ನು ನೋಡಬೇಕೆಂದಾದರೆ ನನ್ನ ಹಿಂದೆಯೇ ಬಾ" ಎಂದು ಜೇನ್ನೊಣ ಗಿಳಿಗೆ ದಾರಿ ತೋರಿಸಿತು. ಆಲದ ಮರದ ಹತ್ತಿರ ಬಂದ ಜೇನ್ನೊಣ, ಮರದಲ್ಲಿದ್ದ ಜೇನುಗೂಡನ್ನು ತೋರಿಸಿ ಹೇಳಿತು, "ಆ ಜೇನುಗೂಡನ್ನು ನಾವೆಲ್ಲರೂ ಬಹಳ ಕೆಲಸ ಮಾಡಿ ಕಟ್ಟಿದ್ದೇವೆ. ಜೇನುಗೂಡಿನಲ್ಲಿ ಮಕರಂದ ಸಂಗ್ರಹಿಸಿದ್ದೇವೆ. ದಿನದಿನವೂ ಸ್ವಲ್ಪಸ್ವಲ್ಪ ಮಕರಂದ ತಂದು ಕೂಡಿಟ್ಟ ಕಾರಣ ನಮ್ಮ ಜೇನುಹುಟ್ಟು ಅಷ್ಟು ದೊಡ್ಡದಾಗಿದೆ. ನಮಗೀಗ ಆಹಾರ ಕಡಿಮೆಯಾಗುತ್ತದೆ ಎಂಬ ಚಿಂತೆಯಿಲ್ಲ.”  

“ಓ, ಹಾಗಾಗಿಯೇ ಜೇನ್ನೊಣ ಯಾವಾಗಲೂ ಓಡಾಡುತ್ತಿರುತ್ತದೆ” ಎಂದು ಯೋಚಿಸಿತು ಟುಟ್ಟೂ. ಅಷ್ಟರಲ್ಲಿ ಆಲದ ಮರದ ಹತ್ತಿರ ಕೋಳಿಯನ್ನು ಕಂಡಿತು ಟುಟ್ಟೂ. ಕೋಳಿ ಮತ್ತು ಅದರ ಆರು ಮರಿಗಳು ಆಹಾರ ಹುಡುಕುತ್ತಾ ಮಣ್ಣನ್ನು ಕೆದಕುತ್ತಿದ್ದವು. ಹಠಾತ್ತನೆ, ಕೋಳಿ ಕೂಗಿತು ಮತ್ತು ದೂರದಲ್ಲಿದ್ದ ಕೋಳಿ ಮರಿಗಳೆಲ್ಲ ಅಮ್ಮನ ಬಳಿ ಓಡಿ ಬಂದು, ಅದರ ರೆಕ್ಕೆಯಡಿಯಲ್ಲಿ ಅವಿತುಕೊಂಡವು.

ಟುಟ್ಟೂಗೆ ಈಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಹಾಗಾಗಿ ಕೋಳಿ ಹೂಗಿ ಹೇಳಿತು, “ಹೇ ಟುಟ್ಟೂ, ಆ ಪೊದೆಯಲ್ಲಿ ಅಡಗಿಕೋ.”

ತಕ್ಷಣವೇ ಹತ್ತಿರದಲ್ಲಿದ್ದ ಪೊದೆಯಲ್ಲಿ ಟುಟ್ಟೂ ಅವಿತುಕೊಂಡಿತು. ಅದರ ರೆಂಬೆಗಳೆಡೆಯಲ್ಲಿ ಟುಟ್ಟೂ ಕಂಡದ್ದೇನು? ಒಂದು ಹದ್ದು ಆಕಾಶದಿಂದ ಬಿರುಸಾಗಿ ನೆಲಕ್ಕಿಳಿದು ಬಂತು.

 ಕೋಳಿಮರಿಗಳನ್ನು ಹೊತ್ತೊಯ್ಯಲು ಕೆಳಕ್ಕಿಳಿದು ಬಂದಿತ್ತು ಆ ಹದ್ದು. ಆದರೆ ಮರಿಗಳನ್ನು ತನ್ನ ರೆಕ್ಕೆಗಳೊಳಗೆ ಅಡಗಿಸಿಟ್ಟು, ತನ್ನ ಕೊಕ್ಕನ್ನು ಸಿಟ್ಟಿನಿಂದ ಹದ್ದಿನತ್ತ ಮುಂಚಾಚಿತು ಕೋಳಿ. ಕೋಳಿಯ ಹತ್ತಿರ ಹೋಗಲು ಹೆದರಿದ ಹದ್ದು, ಬೇಗನೇ ಅಲ್ಲಿಂದ ದೂರಕ್ಕೆ ಹಾರಿ ಹೋಯಿತು.

“ಸುಮ್ಮನಿರಲಿಕ್ಕೆ ಗೊತ್ತಿಲ್ಲ” ಎಂದು ಕೋಳಿಯನ್ನು ನಿಂದಿಸಿದ್ದಕ್ಕೆ ಈಗ ಟುಟ್ಟೂ ಪಶ್ಚಾತ್ತಾಪ ಪಟ್ಟಿತು. ವೈರಿಗಳಿಂದ ತನ್ನನ್ನು ಮತ್ತು ಮರಿಗಳನ್ನು ರಕ್ಷಿಸಲಿಕ್ಕಾಗಿ ಕೋಳಿ ಯಾವತ್ತೂ ಎಚ್ಚರದಿಂದ ಇರಬೇಕೆಂದು ಗಿಳಿಗೆ ಈಗ ಅರ್ಥವಾಯಿತು.
 
ಅಲ್ಲಿಂದ ತೋಟದತ್ತ ಹೋಯಿತು ಟುಟ್ಟೂ. ಎತ್ತು ಅಲ್ಲಿ ಕೆಲಸ ಮಾಡೋದನ್ನು ಕಂಡಿತು. “ಓ, ಈ ಎತ್ತು ಇಲ್ಲಿ ದಿನವಿಡೀ ಕೆಲಸ ಮಾಡುತ್ತದೆ. ಆದ್ದರಿಂದಲೇ ಸಂಜೆ ವಿರಮಿಸಿ, ಮೇವನ್ನು ಮೆಲುಕು ಹಾಕುತ್ತದೆ" ಎಂದು ತನ್ನಲ್ಲೇ ಹೇಳಿಕೊಂಡಿತು ಟುಟ್ಟೂ.

ಅನಂತರ ಮನೆಯತ್ತ ಹೋಯಿತು ಟುಟ್ಟೂ. ಮನೆಯ ಹತ್ತಿರ ಬಂದಾಗ, ಕಾಡು ಬೆಕ್ಕೊಂದು ಟುಟ್ಟೂಗೆ ಮುಖಾಮುಖಿಯಾಯಿತು. ಗಿಳಿಯತ್ತ ಜಿಗಿಯಿತು ಕಾಡು ಬೆಕ್ಕು. ಟುಟ್ಟೂ ಪಕ್ಕಕ್ಕೆ ಹಾರಿ ಕಾಡುಬೆಕ್ಕಿನ ಉಗುರುಗಳಿಂದ ಕೂದಲಂತರದಲ್ಲಿ ಪಾರಾಯಿತು. ಪುನಃ ಟುಟ್ಟೂ ಮೇಲೆ ಜಿಗಿಯಲು ಕಾಡು ಬೆಕ್ಕು ತಯಾರಾಗುತ್ತಿದ್ದಾಗ, ನಾಯಿ ಬೊಗಳುತ್ತ ಅಲ್ಲಿಗೆ ಬಂತು. ಆಗ ಕಾಡು ಬೆಕ್ಕು ಅಲ್ಲಿಂದ ಓಡಿ ಹೋಯಿತು.

ಟುಟ್ಟೂ ಭಯದಿಂದ ನಡುಗುತ್ತಿತ್ತು. “ಓ ನಾಯಿ, ನಿನ್ನ ಸಹಾಯಕ್ಕೆ ಬಹಳ ಥ್ಯಾಂಕ್ಸ್. ನೀನು ಸರಿಯಾದ ಸಮಯಕ್ಕೆ ಇಲ್ಲಿಗೆ ಬಂದೆ; ಇಲ್ಲವಾದರೆ ನನಗೆ ಅಪಾಯವಿತ್ತು" ಎಂದಿತು ಟುಟ್ಟೂ.

ಆ ದಿನದ ತನ್ನ ಅನುಭವಗಳನ್ನೆಲ್ಲ ನಾಯಿಗೆ ಹೇಳಿತು ಟುಟ್ಟೂ. ಮುಂಚೆ ಬೇರೆಯವರನೆಲ್ಲ ಕೀಳಾಗಿ ಕಂಡದ್ದಕ್ಕಾಗಿ ತನ್ನನ್ನು
ಕ್ಷಮಿಸಬೇಕೆಂದು ಬೇಡಿಕೊಂಡಿತು.

ಇದನ್ನು ಕೇಳಿದ ನಾಯಿ ನಕ್ಕು ಹೇಳಿತು, “ನಿನ್ನನ್ನು ಪಂಜರದಲ್ಲಿಟ್ಟು ಆಹಾರ ಕೊಡುತ್ತಾರೆ. ಹಾಗಾಗಿ ನಿನಗೆ ಜಗತ್ತು ಹೇಗಿದೆಯೆಂದು ಸರಿಯಾಗಿ ಗೊತ್ತಿಲ್ಲ. ಟುಟ್ಟೂ, ಒಂದು ಸಂಗತಿ ತಿಳಿದುಕೋ. ಪ್ರತಿಯೊಬ್ಬರೂ ತಮ್ಮ ಬದುಕಿನ ಜವಾಬ್ದಾರಿ ವಹಿಸಬೇಕು. ಎಲ್ಲ ಜೀವಿಗಳು ಕಷ್ಟ ಪಡಬೇಕಾಗುತ್ತದೆ ಮತ್ತು ಯಾವಾಗಲೂ ತಮ್ಮ ವೈರಿಗಳಿಂದ ರಕ್ಷಿಸಿಕೊಳ್ಳಲಿಕ್ಕಾಗಿ ಎಚ್ಚರದಿಂದ ಇರಬೇಕಾಗುತ್ತದೆ. ಇನ್ನು ಮುಂದೆ ನಿನ್ನ ಪುಟ್ಟ ಪಂಜರದಲ್ಲಿ ವಾಸ ಮಾಡುತ್ತಾ ನಿನ್ನ ಬಗ್ಗೆ ಮಾತ್ರ ಯೋಚಿಸಬೇಡ. ಹೊರಗಿನ ಜಗತ್ತನ್ನು ಸರಿಯಾಗಿ ನೋಡು. ಬೇರೆಯವರ ಸ್ಥಾನದಲ್ಲಿ ನೀನಿದ್ದರೆ ಎಂದು ಯೋಚಿಸಿ, ಸತ್ಯವನ್ನು ತಿಳಿದುಕೋ. ಈ ರೀತಿಯಲ್ಲಿದ್ದರೆ ನೀನು ಬುದ್ಧಿವಂತ ಮತ್ತು ತಿಳಿವಳಿಕೆಯ ಪಕ್ಷಿಯಾಗುತ್ತಿ.”

"ಹೌದು, ಹೌದು. ನಿನ್ನ ಮಾತು ನನಗೆ ಅರ್ಥವಾಗುತ್ತದೆ” ಎಂದಿತು ಟುಟ್ಟೂ. ನಂತರ ತನ್ನ ಪುಟ್ಟ ಪಂಜರದೊಳಗೆ ಹೋಯಿತು. ಅದಕ್ಕೆ ಹಸಿವಾಗಿತ್ತು. ಅಲ್ಲಿದ್ದ ಪೇರಳೆ ಹಣ್ಣನ್ನು ಹೊಟ್ಟೆ ತುಂಬ ತಿಂದು ವಿರಮಿಸಿತು.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಕ್ವಾ ಟುನ್