ಟೂತ್ ಪೇಸ್ಟ್ ನುಂಗಿ ಬಿಟ್ಟೀರಿ ಜೋಕೆ !
Do not swallow- ಈ ಎಚ್ಚರಿಕೆಯ ಇಂಗ್ಲಿಷ್ ಪದಪುಂಜವನ್ನು ನೀವು ಯಾವುದೇ ಟೂತ್ ಪೇಸ್ಟ್ ಕವರ್ ರಾಪರ್ ನ ಮೇಲೆ ಖಂಡಿತ ಕಾಣುತ್ತೀರಿ . ಇದರರ್ಥ, ಈ ಟೂತ್ ಪೇಸ್ಟನ್ನು ನುಂಗಬೇಡಿ' ಎಂದು ! ನೀವೇನಾದರೂ ಈ ಟೂತ್ ಪೇಸ್ಟ್ ನ ತಯಾರಿಕಾ ಘಟಕಗಳು (ಕಚ್ಚಾವಸ್ತುಗಳು) ಯಾವುದೆಂದು ತಿಳಿದಿರೋ ನೀವು ಟೂತ್ ಪೇಸ್ಟ್ ನುಂಗುವುದಿರಲಿ ಅದರ ಬಳಕೆಯನ್ನೇ ನಿಲ್ಲಿಸಿ ಬಿಡುತ್ತಿರೇನೋ?
ಟೂತ್ ಪೇಸ್ಟ್ ಇತಿಹಾಸ: ನಾವು ಈಗ ಬಳಸುವ ಟೂತ್ ಪೇಸ್ಟ್ ಬಳಕೆಗೆ ಬಂದು ನೂರು ವರ್ಷಗಳಾಗಿರಬಹುದೇನೋ? ಇದು ಜನಪ್ರಿಯವಾಗಿದ್ದು ಪ್ರಥಮ ಮಹಾಯುದ್ಧದ ನಂತರ. ‘ನಿಮ್ಮ ಹೊಳೆಯುವ ಹಲ್ಲಿಗಾಗಿ' ಎಂಬ ಮರುಳು ಮಾಡುವಂಥ ಜಾಹೀರಾತಿನೊಂದಿಗೆ ಅನೇಕ ಕಂಪೆನಿಗಳು ಟೂತ್ ಪೇಸ್ಟ್ ತಯಾರಿಕೆ ಶುರು ಮಾಡಿಯೇಬಿಟ್ಟವು. ಅದರಲ್ಲಿ ಯಶಸ್ಸನ್ನು ಗಿಟ್ಟಿಸಿಯೂ ಬಿಟ್ಟವು. ಆಮೇಲೆ ಜಗತ್ತಿನಲ್ಲಿ ಎರಡನೇ ಮಹಾಯುದ್ಧವೂ ನಡೆಯಿತು. ಆದರೆ ಜನ ಟೂತ್ ಪೇಸ್ಟ್ ಬಿಟ್ಟು ಬದುಕದಾದರು. ಟೂತ್ ಪೇಸ್ಟನ್ನು ಮನೆಗೆ ತಂದೊಡನೆ ನಮಗಾರಿಗೂ ಅದರ ಹೊರ ಕವಚದ ಮೇಲೆ ಬರೆದಿರುವ ತಯಾರಿಕಾ ವಸ್ತುಗಳು ಯಾವುವು ಎಂದು ಓದುವ ತಾಳ್ಮೆ ಖಂಡಿತಾ ಇರುವುದಿಲ್ಲ ಬಿಡಿ. ಹಲ್ಲು ಹೊಳೆಯುವಂತಾಗಲು ದಿನಕ್ಕೆ ೨-೩ ಸಲ ಉಜ್ಜಿ, ಕನ್ನಡಿಯಲ್ಲಿ ಫಳಫಳನೆ ಹೊಳೆಯುವ ಹಲ್ಲುಗಳನ್ನು ನೋಡಿದ್ದೇ ನೋಡಿದ್ದು!
ಪೇಸ್ಟ್ ನಲ್ಲಿ ಏನಿದೆ? : ಬನ್ನಿ, ನಾವು ಬಳಸುವ ಟೂತ್ ಪೇಸ್ಟಿನಲ್ಲಿ ೧೦ ತರಹದ ಬಗೆಬಗೆಯ ವಸ್ತುಗಳಿವೆ. ಅವೆಂದರೆ ೧. ಫಾಮಾಲ್ಡಿಹೈಡ್ ೨. ಸಾಬೂನು (ಡಿಟರ್ಜಂಟ್) ೩. ಸಮುದ್ರ ಕಳೆ ೪. ಪೆಪ್ಪರ್ ಮಿಂಟ್ ಎಣ್ಣೆ ೫. ಮೇಣ ೬. ಗ್ಲಿಸರಿನ್ ೭. ಸುಣ್ಣ ೮. ಟೈಟಾನಿಯಂ ಡೈ ಆಕ್ಸೈಡ್ ೯. ಸ್ಯಾಕರೀನ್ ೧೦. ಕರ್ಪೂರ. ಇವು ನಮ್ಮ ದೇಹದ ಒಳಕ್ಕೆ ಹೋದರೆ ಏನಾಗುತ್ತದೆ ಗೊತ್ತಾ?
ಫಾರ್ಮಾಲ್ಡಿಹೈಡ್: ಫಾರ್ಮಾಲ್ಡಿಹೈಡ್ ಹೇಳಿ ಕೇಳಿ ಒಂದು ಕ್ರಿಮಿನಾಶಕ. ನಿಮ್ಮ ಹಲ್ಲಿನ ಸಂದುಗೊಂದುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಇದನ್ನು ಸೇರಿಸಲಾಗಿರುತ್ತದೆ. ನೀವೇನಾದರೂ ಹೆಚ್ಚು ಪ್ರಮಾಣದಲ್ಲಿ ಟೂತ್ ಪೇಸ್ಟನ್ನು ನುಂಗಿದಿರೋ ಅಪಾಯ ಕಟ್ಟಿಟ್ಟ ಬುತ್ತಿ ! ಇದು ಅರಶಿನ ಕಾಮಾಲೆ (ಜಾಂಡೀಸ್), ಮೂತ್ರಪಿಂಡ ವೈಫಲ್ಯ, ಯಕೃತ್ತಿನ ಹಾನಿ ಮುಂತಾದ ತೊಂದರೆಗಳನ್ನು ತರಬಲ್ಲದು.
ಸಾಬೂನು: ನೀವು ಹಲ್ಲನ್ನು ಉಜ್ಜುವಾಗ ಹೆಚ್ಚು ಹೆಚ್ಚು ನೊರೆ ಬಂದಷ್ಟೂ ನಿಮಗೆ ಮಹದಾನಂದ ಅಲ್ಲವೇ? ಇದಕ್ಕೆ ಕಾರಣ ಈ ಸಾಬೂನು (ಡಿಟರ್ಜಂಟ್). ಈ ನೊರೆ ಅಥವಾ ಗುಳ್ಳೆಗಳು ನಮಗೆ ತಮಾಷೆಯಾಗಿ ಕಂಡರೂ ಇದನ್ನು ನುಂಗಿದರೆ ಅನ್ನನಾಳದ ಉರಿಯೂತ ಗ್ಯಾರಂಟಿ ! ಇದರಿಂದ ಜೀರ್ಣಾಂಗ ತೊಂದರೆಗಳೂ ಕಟ್ಟಿಟ್ಟ ಬುತ್ತಿ.
ಸಮುದ್ರ ಕಳೆ: ನಿಮ್ಮ ಟೂತ್ ಪೇಸ್ಟ್ ಬ್ರಶ್ ನ ಮೇಲೆ ಎಳೆಎಳೆಯಾಗಿ ಬಳುಕುತ್ತಾ ಬೀಳುವ ಪರಿಯನ್ನು ನೋಡುವುದೇ ಒಂದು ಆನಂದ. ಇದಕ್ಕೆ ಕಾರಣ ಸಮುದ್ರ ಕಳೆ (ಪಾಚಿ). ಇದಿಲ್ಲದಿದ್ದರೆ ನಿಮ್ಮ ಟೂತ್ ಪೇಸ್ಟ್ ನಿಮ್ಮ ಅಳತೆಗೇ ಸಿಕ್ಕುವುದಿಲ್ಲ. ಒಂದು ಸಂತಸದ ಸುದ್ದಿಯೆಂದರೆ ಈ ಸಮುದ್ರ ಕಳೆ ವಿಷಕಾರಿಯಲ್ಲ. ಈ ಸಮುದ್ರ ಕಳೆ ಸತ್ವಯುತ ಆಹಾರವೂ ಹೌದು. ಅಂದ ಮಾತ್ರಕ್ಕೆ ಟೂತ್ ಪೇಸ್ಟನ್ನು ನುಂಗಲು ಹೋಗಬೇಡಿ !
ಪೆಪ್ಪರ್ ಮಿಂಟ್ ಎಣ್ಣೆ: ನಿಮ್ಮ ಶ್ವಾಸವನ್ನು ಸುಗಂಧಯುತವನ್ನಾಗಿ ಮಾಡಲು ಈ ಎಣ್ಣೆ ಬೇಕೇ ಬೇಕು. ಇದೊಂದು ಸುವಾಸನಾ ಎಣ್ಣೆ. ಬಹುಷಃ ಟೂತ್ ಪೇಸ್ಟ್ ನಲ್ಲಿ ಇದೇ ದೊಡ್ದ ಮೋಸಗಾರ. ಈ ಸುವಾಸನೆಯಿಂದಾಗಿಯೇ ಕೆಲವರು (ವಿಶೇಷವಾಗಿ ಮಕ್ಕಳು) ರುಚಿ ನೋಡುವ ಚಪಲಕ್ಕೆ ಬಲಿ ಬೀಳಬಹುದು. ಇದರ ಸೇವನೆಯಿಂದ ನಾಡಿಬಡಿತ ಮಂದವಾಗುವಿಕೆ, ಹೃದಯದ ಉರಿ ಮತ್ತು ಮಾಂಸಖಂಡಗಳ ನಡುಕ ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು.
ಮೇಣ: ಬೆಳ್ಳಗೆ ಹೊಳೆಯುವ ಟೂತ್ ಪೇಸ್ಟ್ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಈ ಹೊಳೆಯುವ ಗುಣವನ್ನು ನೀಡುವುದೇ ನಮ್ಮ ಪ್ಯಾರಾಫಿನ್ ಮೇಣ. ಇದನ್ನು ಪೆಟ್ರೋಲಿಯಂ ಉತ್ಪನ್ನಗಳಿಂದ ಪಡೆಯಲಾಗುತ್ತದೆ. ಮೇಣವನ್ನು ಯಾರು ತಾನೇ ತಿನ್ನಲು ಇಷ್ಟ ಪಟ್ಟಾರು? ಆದರೆ ಇದು ಟೂತ್ ಪೇಸ್ಟ್ ಮೂಲಕ ಹೊಟ್ಟೆ ಸೇರಿದರೆ ಹೊಟ್ಟೆ ನೋವು, ವಾಕರಿಕೆ, ವಾಂತಿ, ತೀವ್ರ ಮಲಬದ್ಧತೆ ಕಾಣಿಸಿಕೊಳ್ಳಬಹುದು.
ಗ್ಲಿಸರಿನ್: ನೀವು ಪರೀಕ್ಷೆ ಮಾಡಿ ನೋಡಿ; ಟೂತ್ ಪೇಸ್ಟ್ ತಂದು ತಿಂಗಳುಗಳೇ ಕಳೆದರೂ ಅದು ಯಾವ ಕಾರಣಕ್ಕೂ ಒಣಗಿ ಗಟ್ಟಿಯಾಗುವುದೇ ಇಲ್ಲ. ಒಟ್ಟಿನಲ್ಲಿ ಟೂತ್ ಪೇಸ್ಟ್ ಚಿರನೂತನ. ಇದಕ್ಕೆ ಕಾರಣ ಗ್ಲಿಸರಿನ್. ಒಂದು ಸಮಾಧಾನದ ಸಂಗತಿ ಎಂದರೆ ಗ್ಲಿಸರಿನ್ ವಿಷಕಾರಿಯಲ್ಲ. ಅಂದ ಮಾತ್ರಕ್ಕೆ ಇದನ್ನು ತಿನ್ನಬಹುದು ಎಂದುಕೊಳ್ಳಬೇಡಿ. ಅಪ್ಪಿತಪ್ಪಿ ತಿಂದರೆ, ವಾಕರಿಕೆ ಗ್ಯಾರಂಟಿ.
ಸುಣ್ಣ: ನಿಮ್ಮ ಹಲ್ಲಿನ ಮೇಲೆ ಕೂತಿರುವ ಪಾಚಿಯಂತಹ ಗಟ್ಟಿ ಪದಾರ್ಥವನ್ನು ಉಜ್ಜಿ ತೆಗೆಯಲು ಇನ್ನೊಂದು ಗಟ್ಟಿ ಪದಾರ್ಥ ಬೇಕು. ಅದೇ ಸುಣ್ಣ. ಆದರೆ ಇದು ಸಾಮಾನ್ಯ ಸುಣ್ಣವಲ್ಲ. ಟೂತ್ ಪೇಸ್ಟ್ ನಲ್ಲಿ ಬಳಸುವ ಸುಣ್ಣವನ್ನು ಮೂಳೆಗಳಿಂದ ತಯಾರಿಸುತ್ತಾರೆ. ಇವು ಅತ್ಯಂತ ಗಟ್ಟಿಯಾದ ಕಣಗಳು ! ಇವು ಶ್ವಾಸಕೋಶದ ತೊಂದರೆಗಳನ್ನು ತರುವುದರ ಜೊತೆಗೆ ಆಂತರಿಕ ರಕ್ತಸ್ರಾವವನ್ನೂ ಉಂಟುಮಾಡಬಲ್ಲವು.
ಟೈಟಾನಿಯಂ ಡೈಆಕೈಡ್: ಇದೊಂದು ಬಿಳಿ ಬಣ್ಣದ ರಾಸಾಯನಿಕ ವಸ್ತು. ನಿಮ್ಮ ಹಲ್ಲುಗಳು ಹೊಳೆಯುವಂತೆ ಕಾಣಲು ಮಾಡುವುದೇ ಇದು. ಇದರ ಸೇವನೆ ಅಪಾಯಕಾರಿ ಅಲ್ಲದಿದ್ದರೂ ದೇಹಕ್ಕೆ ಸೇರುವುದು ಸೂಕ್ತವಲ್ಲ.
ಸ್ಯಾಕರೀನ್: ಟೂತ್ ಪೇಸ್ಟ್ ನಲ್ಲಿರುವ ಬೇರೆಲ್ಲಾ ಘಟಕಗಳ ವಾಸನೆ ಮತ್ತು ರುಚಿಗಳನ್ನು ಹೋಗಲಾಡಿಸಬೇಕೆಂದರೆ ಈ ಸ್ಯಾಕರೀನ್ ಸೇರಿಸುವುದು ಅನಿವಾರ್ಯ. ಇದೊಂದು ಅತಿ ಸಿಹಿಯಾದ ವಸ್ತು. ಇಂದಿಗೂ ಸ್ಯಾಕರೀನ್ ಸೇವನೆ ಚರ್ಚೆಯ ವಿಷಯವಾಗಿಯೇ ಇದೆ. ಅಮೇರಿಕವು ಸ್ಯಾಕರೀನ್ ಅನ್ನು ಬಹಿಷ್ಕರಿಸಬೇಕೆಂದು ಹೇಳುತ್ತಲೇ ಇದೆ. ಒಟ್ಟಿನಲ್ಲಿ ಇದನ್ನು ಸೇವಿಸದಿರುವುದೇ ಒಳ್ಳೆಯದು.
ಕರ್ಪೂರ: ನಿಮ್ಮ ಬಾಯಿಯನ್ನು ಯಾವಾಗಲೂ ತಾಜಾ ಆಗಿಡಲು ಮತ್ತು ದುರ್ವಾಸನೆಯನ್ನು ಹೊಡೆದೋಡಿಸಲು ಇದರ ಸೇವಿಸುವಿಕೆ ಅನಿವಾರ್ಯ. ಇದನ್ನು ಟೂತ್ ಪೇಸ್ಟ್ ಮೂಲಕ ಸೇವಿಸುವುದಕ್ಕಿಂತ ಒಂದು ಮಿಂಟ್ ಚಪ್ಪರಿಸುವುದು ಒಳ್ಳೆಯದು.
ಟೂತ್ ಪೇಸ್ಟ್ ಯಾವುದೇ ಇರಲಿ, ನೆನಪಿಡಿ. ಯಾವುದನ್ನೂ ಅಪ್ಪಿತಪ್ಪಿಯೂ ನುಂಗಬೇಡಿ !
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ