ಟೂರಿಂಗ್ ಟಾಕೀಸ್

ಟೂರಿಂಗ್ ಟಾಕೀಸ್

ಇವತ್ ಬ್ಯಾಂಕಿನ್ಯಾಗ ಯಾರೋ ಗ್ರಾಹಕರು ಕೇಳಿದರು, "ಸರ್ ಹಬ್ಬಕ್ಕ ಊರಿಗೆ ಹೋಗಬೇಕೆನ್ರಿ?"  ಅಂತ. ನಾ ಅಂದೆ "ಸರ್ಕಾರಿ ನೌಕರರೀಪಾ, ಟೂರಿಂಗ್ ಟಾಕೀಸ್ ನಮ್ದು, ನಾವಿದ್ದಲ್ಲೇ ಹಬ್ಬ" ಅಂತ. ಆವಾಗ ಹಂಗ ಒಂದ ಹರಟಿ ಬರೀಲಿಕ್ಕೆ ಟೈಟಲ್ ಸಿಕ್ಕಂಗಾತು.

ಈ ಮ್ಯಾಲಿನ ಟೈಟಲ್ ನೋಡಿದ ಕೂಡಲೇ ಯಾರಯಾರಿಗೆ ಹಳೇ ನೆನಪು ಹಸರಾಗತಾವ? ನಾವ ನೀವೆಲ್ಲಾ ನೋಡಿದ ಸಿನಿಮಾಗಳು, ಅದರ ನಾಯಕ ನಾಯಕಿಯರು ನೆನಪಾಗತಿರಬೇಕಲಾ? ಜೀತೇಂದ್ರ, ರಾಜೇಶ್ ಖನ್ನಾ, ಆಶಾ ಪಾರೇಖ್, ಸಾಯರಾಬಾನು, ರಾಜಕುಮಾರ್, ವಿಷ್ಣುವರ್ಧನ್, ಜಯಂತಿ, ಹರಿಣಿ, ಎಲ್ಲಾರ ಮಾರಿ ಕಣ್ಣ ಮುಂದ ಬಂತ ಹೌದಲ್ಲೋ?
ಅವಾಗ ಈಗಿನಂಥಾ ಸಿಮೆಂಟ್ ಕಟ್ಟಡದ ಟಾಕೀಸಗಳು ದೊಡ್ಡ ಶಹರಗಳಿಗಷ್ಟ ಸೀಮಿತ ಆಗಿಬಿಟ್ಟಿದ್ವು. ಇನ್ನs ತಾಲೂಕಿನಂಥ ಊರಾಗ ಇದ್ರ ಒಂದ ಇತ್ತು ಇಲ್ಲಾಂದ್ರ ಇಲ್ಲ. ಆದರ ಹತ್ತಾರು ಹಳ್ಳಿ-ಹೋಬಳಿ ನಡುವ ಒಂದರೆ ಟೂರಿಂಗ್ ಟಾಕೀಸ್ ಇದ್ದs ಇರತಿತ್ತು. ಇವಕ್ಕ ಟೂರಿಂಗ್ ಟಾಕೀಸ್ ಅಂತ ಯಾಕ ಅಂತಿದ್ರು ಅಂದ್ರ, ಅದರ ಮಾಲಕಗ ವರ್ಷಿಡೀ ಸಿನಿಮಾ ನಡಸೋ ಲೈಸೆನ್ಸ್ ಫೀ ಭರಸೋದು ಕಷ್ಟಾಗತಿತ್ತು. ಅದಕ್ಕ ಟೂರಿಂಗ್ ಟಾಕೀಸ್ ಅಂತ ಲೈಸನ್ಸ್ ತೊಗೊಂಡು ಮಳಿಗಾಲದಾಗ ಒಂದ ತಿಂಗಳು ಬಂದ ಇಡತಿದ್ರು.
ಮುಂಬೈ ಬೆಂಗಳೂರನ್ಯಾಗ ಬಿಡುಗಡೆ ಆಗಿ ಎಷ್ಟೋ ದಿನದ ಮ್ಯಾಲೆ ಸಿನಿಮಾಗಳು ಈ ಟೂರಿಂಗ್ ಟಾಕೀಸಿಗೆ ಬರತಿದ್ವು. ವಾರಕ್ಕೊಂದ ಸಿನಿಮಾ ಬದಲಿ ಆಗೋದು, ಒಬ್ಬ ಆಳ ಮನಷ್ಯಾಗ ಸೈಕಲ್ ಕೊಟ್ಟು, ಎರಡೂ ಕಡೆ ಬಿದರ ತಟ್ಟಿಗೆ ಹಚ್ಚಿದ್ದ ಸಿನಿಮಾ ಪೋಸ್ಟರ್ ಹಚ್ಚಿ ಊರಾಗೆಲ್ಲಾ ಅಡ್ಡಾಡಿಸಿ ಅಡ್ವರ್ಟೈಸ್ ಮಾಡಸತಿದ್ರು. ಅವನ ಕೈಯಾಗೊಂದು ಪಂವ್sss ಅನ್ನೂ ಭೋಂಗಾ ಬ್ಯಾರೇ. ಭೋಂಗಾ ಒದರಿತೋ ಇಲ್ಲೋ, ಓಣ್ಯಾಗಿನ ಹುಡ್ರೋಷ್ಟರು ಸೈಕಲ್ ಬೆನ್ನ ಹತ್ತಿಬಿಡಾವ್ರು. ಸಿನಿಮಾ ಬ್ಲ್ಯಾಕ್ ಅಂಡ್ ವೈಟ್ ಇದ್ರೂ ಪೋಸ್ಟರ್ ಬಣ್ಣದ್ದಿರತಿತ್ತು. 
ಒಂದ ಟಿಕೀಟಗೆ ಎಷ್ಟ್ ರೊಕ್ಕಂತೀರಿ ಅವಾಗ? ಚೇರಿಗೆ ಐವತ್ ಪೈಸಾ (ಒಂದೈವತ್ ಚೇರ್ ಅಷ್ಟ), ನೆಲಕ್ಕ ಇಪ್ಪತ್ತು ಅಥವಾ ಇಪ್ಪತ್ತೈದು ಪೈಸಾ. ನೆಲದ ಮ್ಯಾಲೇ ಬೇಕಾದಷ್ಟ ಮಂದಿ ಕೂಡ್ರಿ. *ಹೌಸಫುಲ್* ಅನ್ನೋ ಶಬ್ದನs ಇಲ್ಲ ಅವರ ಡಿಕ್ಷನರಿ ವಳಗ.
ನಾ ಸಣ್ಣಂವಿದ್ದಾಗ ಬೆಂಗಳೂರನ್ಯಾಗೂ ನಾಕಾರ ಟೆಂಟ್ ಇದ್ವು. ನಮ್ಮನಿ ಹತ್ರ (ಹನುಮಂತನಗರ) "ರಾಜಲಕ್ಷ್ಮಿ" ಮತ್ "ಮಂಜುನಾಥ" ಅಂತ ಇದ್ವು. ಅಂದಾಜು ೧೫೦×೭೫ ಫೂಟ್ ಅಳತಿ ಒಳಗ ತೆಂಗಿನ ಗರಿ, ಬಿದರ ತಡಿಕಿ, ಮ್ಯಾಲೆ ತಗಡು ಹಾಕಿ ಮಾಡಿರತಿದ್ರು, ಎಂಟು ಧೋತರ ಕೂಡಿಸಿ ಹೊಲದು ಪರದೆ ಏರಸಿರತಿದ್ರು. ಹೆಚ್ಚಾನ ಹೆಚ್ಚು ೬೦-೭೦ ರ ದಶಕದ್ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ಎಲ್ಲಾ ನಮ್ಮಮ್ಮನ ಜೊತಿ ಟೆಂಟಿನ್ಯಾಗ ನೋಡೇನಿ. ಉದಾಃ ರತ್ನ ಮಂಜರಿ, ಸಂಧ್ಯಾರಾಗ, ಸತ್ಯಹರಿಶ್ಚಂದ್ರ, ಬಾಲನಾಗಮ್ಮ, ಕಿತ್ತೂರು ರಾಣಿ ಚನ್ನಮ್ಮ, ರಾಜದುರ್ಗದ ರಹಸ್ಯ. ಬಿಡ್ರಿ ಲಿಸ್ಟ್ ಭಾಳ ಅದ.
ಇನ್ನ ನಾವ ಸೂಟಿಗೆ ಅಂತ ನಮ್ ಅತ್ಯಾನ ಊರಿಗೆ ಹೋಗತಿದ್ವಿ, ಹಾನಗಲ್ ತಾಲೂಕಿನ ಗಡಿಗ್ರಾಮ ತಿಳವಳ್ಳಿ ಅಂತ. ಅಲ್ಲೂ ಒಂದು "ಮಾಲತೇಶ ಟೂರಿಂಗ್ ಟಾಕೀಸ್" ಇತ್ತು. ಹೆಗಡಿಕಟ್ಟಿ ಸಿದ್ದಪ್ಪ ಅಂತ ಅದರ ಸಾವಕಾರ್ರು. ಬಹದ್ದೂರ್ ಗಂಡು, ಸೊಸೆ ತಂದ ಸೌಭಾಗ್ಯ, ಸಹೋದರರ ಸವಾಲ್ ಎಲ್ಲಾ ಅಲ್ಲೇ ನೋಡಿದ್ದ ನೆನಪು. ಸಂಜಿ ಆರಕ್ಕೊಂದು, ರಾತ್ರಿ ಒಂಭತ್ತಕ್ಕೊಂದು ಎರಡ ಶೋ ಇರತಿದ್ವು. ಸಿನಿಮಾ ಸುರು ಆಗೋಕಿಂತ ಮದಲ ಲೌಡ್ ಸ್ಪೀಕರ್ ನ್ಯಾಗ ನಾಕ ಹಳೇ ಹಿಂದಿ ಹಾಡ ಹಾಕೋರು. ಜನಮ್ ಜನಮ್ ಕೇ ಫೇರೆ ಸಿನಿಮಾದ್ದು " ಜ಼ರಾ ಸಾಮನೆತೋ ಆವೋ ಛಲಿಯೇ" ಇತ್ಯಾದಿ. ಅಮ್ಯಾಲೇ ಪಿಲ್ಮ್ ಡಿವಿಷನ್ ದವರದೊಂದು ಡಾಕ್ಯುಮೆಂಟರಿ ಕಡ್ಡಾಯ ತೋರಿಸಲಿಕ್ಕೇ ಬೇಕು. ಅದಾತು ಅಂದ್ರ ಸುರು ಸಿನಿಮಾ, ಸಿಳ್ಳಿ, ಸೀಟಿ, ಕ್ಯಾಕಿ, ಫೈಟಿಂಗ್ ಬಂದ್ರ ಜನರs ಒದರ್ಯಾಡೋವ್ರು " ಹಾಕ್ಕಲೇ, ಇಕ್ಕಲೇ" ಅಂತ. ಇನ್ನ ಸಿನಿಮಾದ ಲಾಸ್ಟ್ ಡೇ ಇತ್ತಂದ್ರ ಸೈಕಲ್ ನಂವಗ ಫುಲ್ ಕೆಲಸ. ಊರ ತುಂಬ "ಕಡೇ ಆಟ, ಕಡೇ ಆಟ" ಅಂತ ಒದರಿದ್ದs ಒದರಿದ್ದು.
ಇದ ಹಿಂಗ ಹೇಳಕೋತ ಹೊಂಟ್ರ ರಾತ್ರಿ ಕಳದು ಬೆಳಕ ಹರೀತದ.

ಇವತ್ತಿನ ಮಲ್ಟಿಪ್ಲೆಕ್ಸ್ ಮೇನಿಯಾದೊಳಗ ಶಹರದ ಟಾಕೀಸ್ ಗಳ ಮಂಕಾಗಿಬಿಟ್ಟಾವ. ಐದು ಸ್ಕ್ರೀನ್, ಒಂಬತ್ ಸ್ಕ್ರೀನ್ ಅನಕೋತ ಒಂದ ಸಿನಿಮಾ ಹೊಳ್ಳ ಬಳ್ಳ ತೋರಸತಾರ. ಹಂಗ ರೊಕ್ಕಾನೂ ಈಡಾಗಿ ಕಸಗೋತಾರ ಖೋಡಿಗೋಳು. ನಮ್ಮನಿ ಇಂದ ನೀರಿನ ಬಾಟಲಿನೂ ಒಯ್ಯಂಗಿಲ್ಲಂತ. ಇಪ್ಪತ್ತಾರು ಕಾಳಿನ ಜ್ವಾಳದ ಅರಳಿಗೆ ನೂರಾಇಪ್ಪತ್ ರೂಪಾಯಿ, ದೊಡ್ಡ ಹಜಾಮತಿ ಅವರದು. ಎಲ್ಲರೇ ಬೂದಿ ಹಚಗೊಂಡ ಹೋದಾರು.

*ನಮ್ ಟೂರಿಂಗ್ ಟಾಕೀಸ್ ಕಾಲ ಬಂಗಾರದ ಕಾಲ* 
*ಏನಂತೀರಿ?*

©ಅಜಿತ್ ಕಾಶೀಕರ್, ೩೦/೧೦/೨೦೧೮
೯೪೪೯೦೦೯೪೬೨