ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !

ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿನ ಕಳೆದಂತೆ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾದ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯದ ವಿಷಯವಾಗಿರುವುದರಿಂದ ವಿಕೋಪಕ್ಕೂ ಹೋಗುತ್ತಿದೆ. ಒಂದೆಡೆ ದೇಶದ ಅಲ್ಲಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಹೆಣ್ಣುಮಕ್ಕಳ ಹತ್ಯೆಯ ಸಂಗತಿ ಚರ್ಚೆಗೀಡಾಗುತ್ತಿರುವಂತೆಯೇ ಅಂತಾರಾಷ್ಟ್ರೀಯ ಖ್ಯಾತಿಯ, ಪ್ರತಿಷ್ಟಿತ ಪದಕಗಳನ್ನು ಪಡೆದಿರುವ ಕ್ರೀಡಾಪಟುಗಳೇ ದೌರ್ಜನ್ಯವನ್ನು ಎದುರಿಸಿದ್ದಾರೆ ಎನ್ನುವ ಸಂಗತಿ ಸಾಧಾರಣವಾದುದಲ್ಲ.

ಇದರಲ್ಲಿ ಉದ್ದೇಶ ಶುದ್ಧಿ ಎಷ್ಟಿದೆ ಎಂಬುದರ ಹೊರತಾಗಿಯೂ ಇಂಥದ್ದೊಂದು ಪ್ರಕರಣ ದೀರ್ಘ ಕಾಲ ಪ್ರತಿಭಟನೆಯ ಹಂತದಲ್ಲೇ ಇದೆಯೆನ್ನುವುದು ಆತಂಕಕಾರಿ. ಇಂಥ ಪ್ರಕರಣವನ್ನು ಆರಂಭದಲ್ಲೇ ಮುಗಿಸಬೇಕಿತ್ತು. ಅಂದರೆ ಸತ್ಯಾಸತ್ಯತೆಯನ್ನು ತಿಳಿಯುವ ತಾಕತ್ತು ಸರ್ಕಾರಕ್ಕೆ ಇದ್ದೇ ಇತ್ತು. ಮೇಲ್ನೋಟಕ್ಕೆ ನೋಡಿದರೂ ಇದು ಟೂಲ್ ಕಿಟ್ ನ ಒಂದು ಭಾಗ ಎನ್ನುವುದು ಕಾಣಿಸುತ್ತದೆ. ಏಕೆಂದರೆ ತಾನು ಸಂಸದನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದ ಕ್ರೀಡಾಪಟುವೊಬ್ಬರು ಈ ಪ್ರಕರಣದ ನಂತರ ಕೂಡ ಅವರ ಸಂಪರ್ಕದಲ್ಲಿದ್ದರು. ಕೆಲವು ಸಮಯದವರೆಗೆ ಈ ಪ್ರಕರಣ ಮುಖ್ಯ ಎನಿಸಿರಲಿಲ್ಲ. ಅಲ್ಲದೆ ಆಕೆಯ ವಿವಾಹ ಸಮಾರಂಭದಲ್ಲೂ ಸಂಸದರಾಗಿದ್ದ ಆ ವ್ಯಕ್ತಿಯನ್ನು ಅವರು ಆಹ್ವಾನಿಸಿದ್ದರು. ಆದರೆ ಅದೇ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗಿದ್ದರು ಎಂದರೆ ಎಂಥವರಿಗಾದರೂ ಸಂದೇಹ ಬಾರದೇ ಇರದು.  

ದೌರ್ಜನ್ಯಕ್ಕೊಳಗಾದವರು ಯಾವುದೋ ಒತ್ತಡಕ್ಕೆ ಒಳಗಾಗಿರಬಹುದು ಎನ್ನುವುದನ್ನೂ ಒಪ್ಪಿಕೊಳ್ಳೋಣ. ಅದನ್ನು ಖಂಡಿಸಲು, ದೂರು ನೀಡಲು ಕ್ರೀಡಾಪಟುವಿಗೆ ಸೂಕ್ತ ವೇದಿಕೆಗಳಿದ್ದವು. ಆದರೆ ಕ್ರೀಡಾಪಟು ತನಗೆ ನ್ಯಾಯ ಸಿಗದ ಕಾರಣ ಪ್ರತಿಭಟನೆಯ ದಾರಿ ಹಿಡಿದೆ ಎನ್ನುತ್ತಿದ್ದಾರೆ. ಆದರೆ ಇಂಥ ಗಂಭೀರವಾದ ವಿಷಯವನ್ನು ನಿರ್ಲಕ್ಷ್ಯ ಮಾಡುವಷ್ಟು ಸಂವೇದನಾರಹಿತ ಗುಣ ಸದ್ಯದ ಸರ್ಕಾರಕ್ಕಿಲ್ಲ ಎನ್ನುವ ತರ್ಕವನ್ನೂ ನಾವಿಲ್ಲಿ ಗಮನಿಸಬೇಕಾಗಿದೆ. ಹಾಗಾದರೆ ಆಗಿದ್ದೇನು?

ಅದಕ್ಕೆ ಇಂದಿನ ಘಟನಾವಳಿಗಳೇ ಉತ್ತರವನ್ನು ನೀಡುತ್ತಿವೆ. ಜಂತರ್ ಮಂಥರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ನಾಯಕರು ಶಕ್ತಿ ತುಂಬುತ್ತಿದ್ದಾರೆ. ರೈತ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿದ್ದ ರಾಕೇಶ್ ಟಿಕಾಯತ್ ಕೂಡ ಅದರಲ್ಲಿ ಭಾಗವಹಿಸಿದ್ದಾರೆ. ಕೇಜ್ರಿವಾಲ್ ಕೂಡ ಪಾಲ್ಗೊಂಡಿದ್ದಾರೆ. ಇದ್ದಕ್ಕಿದ್ದಂತೆ ಎಲ್ಲೆಲ್ಲಿಂದಲೋ ಬಂದವರು ಆಜಾದಿ ಘೋಷಣೆಯನ್ನು ಕೂಗಿದ್ದಾರೆ. ನೋಡನೋಡುತ್ತಲೇ ಎಲ್ಲಾ ಪ್ರತಿಭಟನೆಗಳಂತೆ ಇದು ಕೂಡ ದೇಶ ವಿರೋಧಿ ಪ್ರತಿಭಟನೆಗಳಾಗಿ ಬದಲಾಗಿದೆ. ಅಷ್ಟಕ್ಕೂ ಇದರ ಸ್ವರೂಪವನ್ನು ನೋಡಿದರೆ ಇದರ ಆರಂಭ ಟೂಲ್ ಕಿಟ್ ಶೂರರ ಮತ್ತು ಆಜಾದಿ ಗ್ಯಾಂಗಿನವರ ಹುನ್ನಾರವೇನೂ ಆಗಿರಲಾರದು ಎನ್ನಿಸುತ್ತದೆ. ಆದರೆ ಈ ವಿಷಯದಲ್ಲಿ ಸರ್ಕಾರ ತೋರಿದ ಧೋರಣೆಯಿಂದ ಇದು ಟೂಲ್ ಕಿಟ್ ನ ಭಾಗವಾಗಿ ಬದಲಾಗಿದೆ ! ಏಕೆಂದರೆ ತಮ್ಮ ಪಾಡಿಗೆ ತಾವಿರುವ ಕ್ರೀಡಾಪಟುಗಳನ್ನು ಮರಳುಗೊಳಿಸುವುದು ರೈತರನ್ನು ದಿಕ್ಕುತಪ್ಪಿಸಿದವರಿಗೆ ದೊಡ್ದ ಕಷ್ಟವೇನಲ್ಲ. ಇದರಲ್ಲಿ ನಿಜವಾಗಿಯೂ ಬಲಿಯಾದವರು ಕ್ರೀಡಾಪಟುಗಳು. ಒಟ್ಟಿನಲ್ಲಿ ಕಡ್ಡಿಯಿಂದ ಆಗುವ ಕೆಲಸ ಈಗ ಗುದ್ದಲಿಯಿಂದಲೂ ಅಸಾಧ್ಯ ಎನ್ನುವಂತಾಗಿದೆ. ಟೂಲ್ ಕಿಟ್ ಬಳಗಕ್ಕೆ ಮೃಷ್ಟಾನ್ನವೇ ಸಿಕ್ಕಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೩೧-೦೫-೨೦೨೩