ಟೆಂಟಿನೊಳಗೆ ಅರ್ಧಾಯುಷ್ಯವನ್ನು ಮುಗಿಸಿದ ಯಜಮಾನ
ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನ. ಯಜಮಾನಿಕೆಗೂ ‘ಅರ್ಹತೆಯಿದೆ’ ಮತ್ತು ‘ಅರ್ಹತೆ ಬೇಕು’ ಎಂದು ಅನುಷ್ಠಾನಿಸಿ ತೋರಿಸಿದವರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದವರು. ಪೌರಾಣಿಕ ಪ್ರಸಂಗ-ಪಾತ್ರಗಳ ಆವರಣ ಮತ್ತು ಬದುಕಿನ ಆಸಕ್ತಿಗಳನ್ನು ಮಿಳಿತಗೊಳಿಸಿದರು. ರಂಗ ಒಪ್ಪುವ ಪ್ರದರ್ಶನಗಳನ್ನು ಸ್ಮರಣೀಯವಾಗಿ ಸಂಪನ್ನಗೊಳಿಸಿದರು. ತುಂಬು ತೊಂಭತ್ತೊಂದು ವರುಷದ ಜೀವನವನ್ನು ಅನುಭವಿಸಿದ ವರದರಾಯ ಪೈಗಳು 2016 ಜುಲೈ 17 ರಂದು ದೈವಾಧೀನರಾದರು. ಅರ್ಧಾಯುಷ್ಯವನ್ನು ಚೌಕಿಯಲ್ಲೇ ಕಳೆದಿದ್ದರು!
‘ಶ್ರೀ ಮಹಮ್ಮಾಯಿ ಕೃಪಾಪೋಶಿತ ಯಕ್ಷಗಾನ ಮಂಡಳಿ, ಸುರತ್ಕಲ್’ – ಯಕ್ಷಗಾನಕ್ಕೆ ವಾಙ್ಮಯ ವೈಭವವನ್ನು ತಂದು ಕೊಟ್ಟ ಮೇಳ. ಸೊಂಟತ್ರಾಣದ ಬದಲಿಗೆ ಪಾತ್ರತ್ರಾಣ, ಭಾವ-ಭಾವನೆಗಳಿಗೆ ಮಾನ, ಬುದ್ಧಿಗೆ ಗ್ರಾಸ, ಶಿಸ್ತಿನ ಬಣ್ಣದ ಮನೆ, ಶಿಸ್ತಿನ ಪ್ರೇಕ್ಷಕರು, ಪೌರಾಣಿಕ ಜಾಡಿನಲ್ಲಿ ಕಾಲ್ಪನಿಕ ಪ್ರಸಂಗ.. ಹೀಗೆ ಮೇಳದ ಒಂದೊಂದು ವಿಭಾಗವನ್ನು ಪೋಸ್ಟ್ಮಾರ್ಟಂ ಮಾಡಿದರೆ ಅಪ್ಪಟ ಯಕ್ಷಗಾನದ ಜೀವಂತಿಕೆ ಮಿಣುಕುತ್ತದೆ. ‘ಸುರತ್ಕಲ್ ಮೇಳವು ನಮ್ಮದು’ ಎನ್ನುವ ಸಾವಿರಾರು ಮನಸ್ಸುಗಳನ್ನು ಗೆಲ್ಲುವುದು ಸಣ್ಣ ಕೆಲಸವಲ್ಲ. ಅದು ವರದರಾಯ ಪೈಗಳ ಜಾಣ್ಮೆಯ ನಿರ್ವಹಣೆ.
ಮೇಳ ಕಟ್ಟುವುದು ಯೌವನದ ಕನಸು. 1955ರ ಹಿಂದೆ ಮುಂದೆ. ಅಚಾನಕ್ಕಾಗಿ ಅದೃಷ್ಟಕ್ಕೆ ಒಲಿದ ಐದು ಸಾವಿರ ರೂಪಾಯಿ ಮೂಲ ಬಂಡವಾಳ. ಅಣ್ಣ ಕಸ್ತೂರಿ ವಾಸುದೇವ ಪೈಯೊಂದಿಗೆ ಹೊಸ ಮೇಳದ ರೂಪೀಕರಣ. ಸಾಮಾಜಿಕ ಸ್ಥಿತಿ-ಗತಿ, ವೈಯಕ್ತಿಕ ಬದುಕು, ಕಲಾವಿದರ ಜೋಡಣೆ, ಮೇಳ ನಿರ್ವಹಣೆ.. ಹೀಗೆ ಸವಾಲುಗಳನ್ನು ಎದುರಿಸಿದ ಪೈ ಸಹೋದರರ ಮೇಳವು ಒಂದೊಂದೇ ಹೆಜ್ಜೆಯೂರಿತು. ತ್ರಿವಿಕ್ರಮನಾಗಿ ಬೆಳೆದು ನಿಂತಿತು. ಅನುಭವವು ‘ಮಾಗಲು ಮತ್ತು ಬಾಗಲು’ ಕಲಿಸಿತ್ತು! ಹಾಗಾಗಿ ದೀರ್ಘ ಕಾಲ ಮೇಳ ಬಾಳಿತು. ಕಲಾವಿದರಿಗೆ ಬಾಳ್ವೆ ನೀಡಿತು.
ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರ ರಾಮ, ರಾಜ ಯಯಾತಿ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ, ರಾಣಿ ರತ್ನಾವಳಿ.. ಪ್ರಸಂಗಗಳ ಮಾಲೆಗಳು ಮೇಳದ ವಿಜಯಮಾಲೆಗಳಾದುವು. ಜನರ ಮನಸ್ಸನ್ನು ಓದುವ ಸಾಮಥ್ರ್ಯದ ವರದರಾಯ ಪೈಗಳು ಹೊಸ ಪ್ರಸಂಗಗಳ ಹುಡುಕಾಟ ಮಾಡಿದರು. ಯಕ್ಷಗಾನದ ಸ್ವರೂಪಕ್ಕೆ ತೊಂದರೆಯಾಗದಂತೆ ಪರಿಷ್ಕರಿಸಿದರು. ಕಾಲ್ಪನಿಕ ಪ್ರಸಂಗಗಳ ಪ್ರಸ್ತುತಿಗಳು ಕಾಲಧರ್ಮದ ಪಲ್ಲಟ. ಶನೀಶ್ವರ ಮಹಾತ್ಮೆ, ಬಪ್ಪನಾಡು ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳನ್ನು ರಂಗ ಒಪ್ಪಿತು. ಪ್ರೇಕ್ಷಕರು ಸ್ವೀಕರಿಸಿದರು.
ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಧೂರು ಗಣಪತಿ ರಾವ್, ರಾಮದಾಸ ಸಾಮಗ.. ಹೀಗೆ ಹಿರಿಯರಿದ್ದ ಮೇಳವು ‘ಸುಸಂಸ್ಕøತ’ ಪದವ್ಯಾಪ್ತಿಯೊಳಗಿತ್ತು. ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರನ್ನು ‘ಭಾಗವತ’ನನ್ನಾಗಿ ರೂಪಿಸಿದ ಮೇಳವಿದು. ಒಬ್ಬೊಬ್ಬ ಕಲಾವಿದನ ಕೊಡುಗೆಯು ಪ್ರಸಂಗಗಳನ್ನು ಉತ್ತುಂಗಕ್ಕೇರಿಸಿತ್ತು. ಇದರಿಂದಾಗಿ ಕಲಾವಿದರಿಗೆ, ಮೇಳಕ್ಕೆ, ಪ್ರಸಂಗಕ್ಕೆ ತಾರಾಮೌಲ್ಯ ಬಂತು. ಜತೆಗೆ ಯಜಮಾನರಿಗೆ ಕಲೆಕ್ಷನ್ ತುಂಬಿ ಬಂತು.
ಪೈಗಳು ಬಹುಶಃ ವೇಷ ಮಾಡಲಿಲ್ಲ. ಅರ್ಥ ಹೇಳಲಿಲ್ಲ. ಯಾವುದೇ ಪಾತ್ರದ ಆಳೆತ್ತರ, ಅದರ ರಂಗವ್ಯಾಪ್ತಿ, ಪ್ರಸ್ತುತಿಯಲ್ಲಿ ಕಲಾವಿದನ ಜವಾಬ್ದಾರಿಗಳ ಸ್ಪಷ್ಟ ಅರಿವಿತ್ತು, ನಿಲುವಿತ್ತು. ಯಾವ ಕಲಾವಿದನಲ್ಲಿ ಎಷ್ಟು ಅಭಿವ್ಯಕ್ತಿಯಿದೆ ಎನ್ನುವ ಮಾಪಕ ಮತಿಯಲ್ಲಿತ್ತು. ಅದನ್ನು ಹೊರಗೆಳೆವ ಕುಶಾಗ್ರಮತಿ ಅಪೂರ್ವ. ಈ ಮಾಪಕವೇ ಪ್ರದರ್ಶನಗಳ ಯಶಸ್ಸಿನ ಗುಟ್ಟು. ಯಜಮಾನರ ಹಾದಿಯನ್ನು ಅರ್ಥಮಾಡಿಕೊಂಡ ಕಲಾವಿದ ಗಡಣ. ಹಾಗಾಗಿ ನೋಡಿ. ಸುರತ್ಕಲ್ ಮೇಳವು ನಿಲುಗಡೆಯಾಗಿ ಹದಿನಾರು ವರುಷ ಕಳೆದರೂ ಅದರ ಪ್ರದರ್ಶನಗಳು ಕಾಡುತ್ತವೆ.
ಸಾಮಾನ್ಯವಾಗಿ ಚೌಕಿಗೂ ಯಜಮಾನನಿಗೂ ತುಂಬಾ ಅಂತರ. ಪೈಗಳ ಮೇಳದ ಚೌಕಿ ಮನೆಯಿದ್ದಂತೆ! ಕುಟುಂಬ ಸಹಿತವಾಗಿ ಚೌಕಿಯಲ್ಲಿ ಧಾರಾಳವಾಗಿ ಕುಳಿತುಕೊಳ್ಳಬಹುದು! ಕಲಾವಿದರೊಂದಿಗೆ ಮಾತನಾಡಬಹುದು. ಕಲಾವಿದರ ಕುಟುಂಬವು ಚೌಕಿಗೆ ಬಂದರಂತೂ ಎಲ್ಲರಿಗೆ ಖುಷಿ. ಬೆಸೆದುಕೊಳ್ಳುವ ಇಂತಹ ಆಪ್ತತೆಗಳೇ ಮೇಳದ ಗಟ್ಟಿ ಅಡಿಗಟ್ಟು. ಕಲಾವಿದರೊಂದಿಗೆ ಪೈಗಳ ಊಟ, ತಿಂಡಿ, ನಿದ್ದೆ, ಮಾತುಕತೆ, ಸುಖ-ದುಃಖ ವಿನಿಮಯ. “ಮೇಳದ ಯಜಮಾನನಾದವನು ಮೇಳದಲ್ಲೇ ಇರಬೇಕು, ಕಲಾವಿದರೊಂದಿಗೆ ಬೆರೆಯಬೇಕು,” ಎಂದು ಶೇಣಿಯವರೂ ಹೇಳುತ್ತಿದ್ದರು. ಪೈಗಳಿಗೂ ಶೇಣಿಯವರಿಗೂ ಕಳಚದ ನಂಟು. ಶೇಣಿಯವರಿಗೂ ಯಜಮಾನರ ಮೇಲೆ ಗೌರವ. ಮೇಳದ ಕುರಿತು ಬಿಟ್ಟುಕೊಡದ ಪ್ರೀತಿ. ಇಂತಹ ಗುಣಗಳು ಕಲಾವಿದರಿಗೆ ಮೇಲ್ಪಂಕ್ತಿ.
ವರದರಾಯ ಪೈಗಳ ಮೇಳದ ನಿರ್ವಹಣೆ ಜಾಣ್ಮೆಯಿಂದ ಕೂಡಿತ್ತು. ದುಬಾರಿತನದಿಂದ ದೂರ. ಅಡುಗೆಗೆ ಸಾಧ್ಯವಾದಷ್ಟೂ ಸ್ಥಳೀಯ ತರಕಾರಿಗಳ ಅವಲಂಬನೆ. ಮೇಳವು ಊರಿನಿಂದ ಊರಿಗೆ ಹೋಗುವಾಗ ಆ ಊರಿನ ಪಾರಂಪರಿಕ ತರಕಾರಿ ಯಾವುದಿದೆಯೋ ಅದರತ್ತ ಆಸಕ್ತಿ. ಎಲ್ಲೆಲ್ಲಿ ಸಂತೆ ಆಗುತ್ತದೋ ಅ ಜಾಗವೆಲ್ಲಾ ಪೈಗಳಿಗೆ ಪರಿಚಿತ. ಸಂತೆ ಆಗುವಲ್ಲಿ ಸುರತ್ಕಲ್ ಮೇಳದ ಆಟ ಖಚಿತ. ಟೆಂಟ್ ಹೌಸ್ಫುಲ್.
ಬದ್ಧತೆಯ ಮೇಳದಲ್ಲಿ ಸಮಯಕ್ಕೆ ಮಹತ್ವ. ಕಲಾವಿದರೆಲ್ಲರೂ ಎಂಟು ಗಂಟೆಯೊಳಗೆ ಚೌಕಿಯಲ್ಲಿರಬೇಕೆಂಬ ಅಲಿಖಿತ ಶಾಸನ. ಎಂಟೂವರೆಗೆ ಚೌಕಿ ಪೂಜೆ, ಒಂಭತ್ತು ಗಂಟೆಯಿಂದ ಕಟ್ಟುವೇಷ, ನಿತ್ಯ ವೇಷಗಳ ಕುಣಿತ. ಹತ್ತು ಗಂಟೆ ಹತ್ತು ನಿಮಿಷಕ್ಕೆ ಪ್ರಸಂಗ ಶುರು. ಚೌಕಿಯಲ್ಲಿ ದೇವರಿಗೆ ಹೂ, ಹಣ್ಣು ಖಾಯಂ. ಸ್ವತಃ ಪೈಗಳೇ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಪೂಜೆಯ ಬಳಿಕ ಮೇಳದ ಟಿಕೇಟ್ ಕೌಂಟರ್ ತೆರೆದುಕೊಳ್ಳುತ್ತಿತ್ತು. ಸ್ವತಃ ಪೈಗಳೇ ಕೌಂಟರಿನಲ್ಲಿರುತ್ತಿದ್ದರು. ಕಲೆಕ್ಷನ್ ಆದ ಬಳಿಕ ಕೌಂಟರಿಗೆ ಬಾಗಿಲು ಹಾಕಿ ಚೌಕಿಗೆ ಬಂದು ಕಲಾವಿದರೊಂದಿಗೆ ಮಾತನಾಡಿದ ಬಳಿಕವೇ ನಿದ್ದೆ. ಬೆಳಿಗ್ಗೆ ಐದು ಗಂಟೆಗೆ ಸ್ನಾನ. ಚೌಕಿ ಪೂಜೆಗೆ ಅಣಿ. ಈ ನಿಯತ್ತು ಬಹಳ ವರುಷ ಅನುಷ್ಠಾನ ಮಾಡಿದ್ದರು - ಭಾಗವತ ಪದ್ಯಾಣ ಗಣಪತಿ ಭಟ್ಟರು ಪೈಗಳ ಕಾಯಕವನ್ನು ಸ್ಮರಿಸಿಕೊಳ್ಳುತ್ತಾರೆ.
ವರದರಾಯ ಪೈಗಳು 2000ರಲ್ಲಿ ಮೇಳ ನಿಲ್ಲಿಸುವ ಹೊತ್ತಲ್ಲಿ, “ಮೇಳವೇನೋ ನಿಲ್ಲಿಸಬಹುದು. ಕಲಾವಿದರಿಗೆ ಏನು ಗತಿ.” ಎಂದು ಮರುಗಿದ್ದರು. ಕಲಾವಿದರ ಯೋಗಕ್ಷೇಮವು ಪೈಗಳ ‘ಯಜಮಾನಿಕೆಯ’ ವ್ಯಾಪ್ತಿಯೊಳಗಿತ್ತು. ಇಂತಹ ಯಜಮಾನರನ್ನು ಪಡೆದ ಸುರತ್ಕಲ್ ಮೇಳ ಧನ್ಯ. ಕಲಾವಿದರಿಗೂ ಸಾರ್ಥಕ. ಅಗಲಿದ ಪೈಗಳಿಗೆ ಅಕ್ಷರ ನಮನ.
ಚಿತ್ರಗಳು : ಶಾಂತಾರಾಮ ಕುಡ್ವ
ಯಕ್ಷಗಾನದ ಆಸಕ್ತಿ ಮಾತ್ರ. ಬೇರೇನೂ ಇರಲಿಲ್ಲ. ಯಕ್ಷಗಾನ ಒಂದೇ.