ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ

ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ

 ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ

ಟೆಕ್‌ಸಾವಿ ಜನರನ್ನು ಇತರರು ಪ್ರಶಂಸಿಸುತ್ತಾರೆ.ಆದರಿದು ನಮ್ಮ ಶಾಸಕರಿಗೆ ಅನ್ವಯವಾಗದು.ಐಪ್ಯಾಡ್ ಬಳಸುತ್ತಿದ್ದ ಗುಜರಾತಿನ ಶಾಸಕರು ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪಕ್ಕೀಡಾದರು.ನಂತರ ಅವರ ಐಪ್ಯಾಡ್‌ನ್ನು ಪರೀಕ್ಷೆಗೊಳಿಸಿದ ಫೋರೆನ್ಸಿಕ್ ಪ್ರಯೋಗಾಲಯದವರು ಶಾಸಕರುಗಳು ಅಶ್ಲೀಲ ಚಿತ್ರವನ್ನು ಕಲಾಪದ ವೇಳೆ ನೋಡಿದ ಹಾಗಿಲ್ಲ,ಎಂದು ಅವರುಗಳಿಗೆ ಕ್ಲೀನ್ ಚಿಟ್ ನೀಡಿದೆ.ಆದರೆ ಕಲಾಪದ ವೇಳೆ ಐಪ್ಯಾಡ್ ಬಳಸುತ್ತಿದ್ದದ್ದೇಕೆ ಎನ್ನುವುದಕ್ಕೆ ಯಾವ ಸಮರ್ಥನೆಯೂ ಇದ್ದ ಹಾಗಿಲ್ಲ.ಕಲಾಪದ ಕಡೆ ಗಮನ ಕೊಡದೆ,ವಿವೇಕಾನಂದರದ್ದೋ ಇನ್ನಾರದ್ದೋ ಚಿತ್ರವನ್ನು ನೋಡುವುದೂ ಸಾಧನದ ದುರ್ಬಳಕೆಯೇ ಆಗುತ್ತದೆ.ಕರ್ನಾಟಕದ ಟೆಕ್‌ಸಾವಿ(ಹೌದೇ?) ಶಾಸಕರ ಪೈಕಿ ಲಕ್ಷಣ ಸವದಿ ವಿರುದ್ಧ ಮಾತ್ರಾ ಅಶ್ಲೀಲ ಚಿತ್ರ ನೋಡಿದ್ದಕ್ಕೆ ಪುರಾವೆ ಇದ್ದು,ಉಳಿದವರು ಬಚಾವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.ಇನ್ನು ಟೆಕ್‌ಸಾವಿ ಎಂದು ಯಾರು ಪರಿಗಣಿಸದವರೂ,ಕಂಪ್ಯೂಟರೀಕರಣ ಕೆಲಸದಲ್ಲಿ ದೊಡ್ಡ ಹೆಜ್ಜೆಗೆಳನ್ನಿರಿಸಿದ ಉದಾಹರಣೆಯೂ ಕರ್ನಾಟಕದಲ್ಲೇ ಇದೆ.ಸಚಿವೆ ಶೋಭಾ ಕರಂದಾಜ್ಲೆ ಪಡಿತರ ಮತ್ತು ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆ ಮಾಡಿ ಜನರ ಪ್ರಶಂಸೆ ಗಳಿಸಿದ್ದು ಒಂದು ಉದಾಹರಣೆಯಷ್ಟೆ.
----------------------------------------------------
ಕಂಪ್ಯೂಟರೀಕರಣ ಮತ್ತು ಆರಂಭಿಕ ಸಮಸ್ಯೆಗಳು
ವಿಟಿಯು ತಾಂತ್ರಿಕ ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನಕ್ಕೆ ವ್ಯವಸ್ಥೆ ಅಳವಡಿಸಿಕೊಂಡೂ,ಕೆಲವು ಪ್ರಾದೇಶಿಕ ಕೇಂದ್ರಗಳ ಫಲಿತಾಂಶ ವಿಳಂಬವಾಗಿದೆ.ಉತ್ತರಪತ್ರಿಕೆಗಳ ಹಾಳೆಗಳನ್ನು ಪ್ರತ್ಯೇಕಿಸಿ,ಅವನ್ನು ಸ್ಕ್ಯಾನ್ ಮಾಡುವ ಕೆಲಸ ಈ ವ್ಯವಸ್ಥೆಯಲ್ಲಿ ಅಗತ್ಯ.ಹೀಗಾಗಿ,ಲಕ್ಷಗಟ್ಟಲೆ ಪುಟಗಳನ್ನು ಸ್ಕ್ಯಾನ ಮಾಡುವಾಗ,ಉತ್ತರ ಪತ್ರಿಕೆಯ ಹಾಳೆಗಳು ಮಿಶ್ರವಾಗದಂತೆ ಮತ್ತು ಒಬ್ಬ ಅಭ್ಯರ್ಥಿಯ ಹಾಳೆಗಳ ಬದಲು ಇನ್ನೋರ್ವನದ್ದು ಸ್ಕ್ಯಾನ್ ಮಾಡದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.ಇಂತಹ ಸ್ಕ್ಯಾನಿಂಗ್ ಕೆಲಸ ಹಾಳೆ ಕೀಳದೆ ಸಾಧ್ಯವಾಗುವಂತಹ ಸ್ಕ್ಯಾನಿಂಗ್ ಯಂತ್ರಗಳ ಬಳಕೆ ಮಾಡುವುದೂ ಇಂತಹ ಕೆಲಸದಲ್ಲಿ ಗೊಂದಲವಾಗದಂತೆ ಅಥವಾ ಕನಿಷ್ಠ ತಪ್ಪುಗಳಾಗುವಂತೆ ಮಾಡಬಲ್ಲುದು.ಡಿಜಿಟಲ್ ಲೈಬ್ರೇರಿ ಯೋಜನೆಯಲ್ಲಿ ಬಳಸಲಾಗುತ್ತಿರುವ ಸ್ಕ್ಯಾನಿಂಗ್ ಯಂತ್ರ ಪುಸ್ತಕದ ಹಾಳೆಗಳನ್ನು ತಾನೇ ತಿರುವಿ ಸ್ಕ್ಯಾನಿಂಗ್ ಮಾಡಬಲ್ಲುದು ಎಂದು ವರದಿಯಾಗಿತ್ತು.ಉತ್ತರ ಬರೆಯುವುದನ್ನೂ ಕಂಪ್ಯೂಟರೀಕರಣಗೊಳಿಸುವುದು ಸ್ಕ್ಯಾನಿಂಗ್ ವ್ಯವಸ್ಥೆಯನ್ನು ನಿವಾರಿಸಲು ಸಹಾಯ ಮಾಡಬಹುದು.
-------------------------------------------------------------
ಟ್ವಿಟರ್:ಸಾರ್ಥಕ ಆರು ವರ್ಷಗಳು
ಟ್ವಿಟರ್ ತಾಣಕ್ಕೀಗ ಆರುವರ್ಷಗಳು.ಅದು ತನ್ನ ಯಶಸ್ಸು ಮತ್ತು ಜನಪ್ರಿಯತೆಯ ಬಗ್ಗೆ ಹೆಮ್ಮೆ ಪಡುವ ಸಾಧನೆ ಮಾಡಿದೆ.ಸರಳ ಅಂತರ್ಜಾಲ ಪುಟವನ್ನು ಬಳಸಿಯೂ ಮೂರು ದಿನಗಳಿಗೊಮ್ಮೆ ಒಂದು ಬಿಲಿಯನ್ ಸಂದೇಶಗಳು ಟ್ವಿಟರ್ ಮೂಲಕ ಬಳಕೆದಾರರು ಕಳಿಸುತ್ತಾರೆ.ಹಲವು ರಾಜಕೀಯ ಘಟನೆಗಳು ಮತ್ತು ಕ್ಷಿಪ್ರ ಕ್ರಾಂತಿಗಳಿಗೆ ಟ್ವಿಟರ್ ಸಂದೇಶಗಳು ಹೇತುವಾಗಿವೆ.ಇತರ ಮಾಧ್ಯಮಗಳಿಗೆ ಸೆನ್ಸಾರ್ ಇದ್ದಾಗ,ಟ್ವಿಟರ್ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಜನರಿಗೆ ಸಾಧ್ಯವಾಗಿದೆ.ಇತರ ಸಾಮಾಜಿಕ ಜಾಲತಾಣಗಳು ಟ್ವಿಟರ್‌ಗಿಂತ ಹೆಚ್ಚು ಜನಪ್ರಿಯವಾಗಿದ್ದರೂ,ಟ್ವಿಟರ್ ಇಷ್ಟ ಪಡುವ ಬಳಕೆದಾರರು ಅಧಿಕವೇ ಇದ್ದಾರೆ.ಟ್ವಿಟರ್‌ನಲ್ಲಿ ಹಾಕಿದ ಸಂದೇಶಗಳು ಇತರ ಸಾಮಾಜಿಕ ಜಾಲತಾಣಗಳಲ್ಲಿ ಮಾರ್ದನಿಸಲು ಅವುಗಳು ಅವಕಾಶ ನೀಡಿರುವುದು ಟ್ವಿಟರ್ ಹೆಗ್ಗಳಿಕೆ.ಟ್ವಿಟರಿಗೆ ಹದಿನಾಲ್ಕು ಕೋಟಿ ಸಕ್ರಿಯ ಬಳಕೆದಾರರ ಗಡಣವೇ ಇದೆ.
---------------------------------------------------------------
ಹವಾಮಾನ ಆಧಾರಿತ ಜಾಹೀರಾತು
ಗೂಗಲ್ ಸ್ಥಳೀಯ ಹವಾಮಾನದ ಆಧಾರದ ಮೇಲೆ ಅಂತರ್ಜಾಲ ಪುಟದ ಜಾಹೀರಾತು ಪ್ರದರ್ಶಿಸುವ ತನ್ನ ಯೋಜನೆಗೆ ಹಕ್ಕುಸ್ವಾಮ್ಯ ಪಡೆದಿದೆ.ಮಳೆ ಬರುತ್ತಿರುವಾಗ ಕೊಡೆಗೆ ಸಂಬಂಧಿಸಿದ,ಸೆಕೆಗೆ ತಂಪು ಪಾನೀಯಗಳ ಜಾಹೀರಾತು ಪ್ರದರ್ಶಿಸುವಂತಹ ಯೋಜನೆಯನ್ನು ಗೂಗಲ್ ಹೊಂದಿದೆ.ವ್ಯಕ್ತಿಯಿರುವ ಸ್ಥಾನದ ತಿಳಿವಳಿಕೆ ಇದ್ದು,ಅಲ್ಲಿನ ಹವಾಮಾನದ ವಿವರವನ್ನು ಕಲೆಹಾಕಿ ಈ ನಮೂನೆ ಜಾಹೀರಾತು ಪ್ರದರ್ಶಿಸಬಹುದು ತಾನೇ?
-------------------------------------------------------
ಹಚ್ಚೆ ಮೂಲಕ ಮೊಬೈಲ್ ಕರೆ ಬಗ್ಗೆ ಸೂಚನೆಹಚ್ಚೆ ಹಾಕಿಸಿಕೊಳ್ಳುವ ಹುಚ್ಚಿನ ಯುವಜನರಿಗೆ ಸೂಕ್ತವಾದ ಮೊಬೈಲ್ ಸಾಧನವನ್ನು ನೋಕಿಯಾ ತಯಾರಿಸಿದೆ.ಇದರಲ್ಲಿ ಮೊಬೈಲ್ ಕರೆಯು ಧ್ವನಿ ಅಥವಾ ಅಲುಗಾಟದ ಬದಲು,ಹಚ್ಚೆಯ ಮೂಲಕ ಬಳಕೆದಾರನಿಗೆ ಸಿಗುತ್ತದೆ.ಹಚ್ಚೆಯನ್ನು ಕಾಂತೀಯ ಶಾಯಿಯಲ್ಲಿ ಹಾಕಿಸಿಕೊಳ್ಳುವುದು ಮುಖ್ಯ.ಮೊಬೈಲ್ ಸಾಧನ ಕರೆ ಬಂದಾಗ ಕಾಂತಕ್ಷೇತ್ರವನ್ನು ಉತ್ಪಾದಿಸುತ್ತದೆ.ಅಯಸ್ಕಾಂತೀಯ ಗುಣವುಳ್ಳ ಹಚ್ಚೆ ಹಾಕಿಸಿಕೊಂಡವರ ಶರೀರದಲ್ಲಿ ಈ ಮೊಬೈಲ್ ಕಾಂತಕ್ಷೇತ್ರ ಒಂದು ವಿಶಿಷ್ಟ ಸ್ಪರ್ಶದ ರೀತಿಯ ಅನುಭವ ನೀಡುವುದರಿಂದ ಕರೆ ಬಂದದ್ದು ತಿಳಿಯುತ್ತದೆ.ಹಚ್ಚೆಯ ಬದಲು ಕಾಂತೀಯ ಬೆಲ್ಟ್,ಅಥವಾ ಬ್ಯಾಂಡೇಜ್ ಪಟ್ಟಿಯ ಬಳಕೆಗೂ ಅನುವು ನೀಡುವ ತಂತ್ರಜ್ಞಾನಕ್ಕಾಗಿ ಸಂಶೋಧನೆಯನ್ನು ನೋಕಿಯಾ ಮಾಡುತ್ತಿದೆ.ಇದರ ಬಗ್ಗೆ ಅದೀಗಲೇ ಹಕ್ಕುಸ್ವಾಮ್ಯ ಪಡೆದೂ ಆಗಿದೆ.
-----------------------------------------------------
ಟೊಶಿಬಾದ ಎಕ್ಸೈಟ್ ಟ್ಯಾಬ್ಲೆಟ್
ಐಪ್ಯಾಡ್‌ನ ಹೊಸ ಆವೃತ್ತಿ ಬಿಡುಗಡೆಯಾಗುತ್ತಿದ್ದಂತೆ ಟೊಶಿಬಾವೂ ತನ್ನ ಎಕ್ಸೈಟ್ ಟ್ಯಾಬ್ಲೆಟನ್ನು ಬಿಡುಗಡೆ ಮಾಡಿದೆ.ಇದು ಏಳೂವರೆ ಸೆಂಟಿಮೀಟರ್‌ನಷ್ಟು ಮಾತ್ರಾ ದಪ್ಪವಿದ್ದು,ಅತ್ಯಂತ ತೆಳುವಾದ ಟ್ಯಾಬ್ಲೆಟ್ ಆಗಿ ಹೊರಹೊಮ್ಮಿದೆ.ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಇದರಲ್ಲಿದ್ದರೂ ಇದು,ಹಳೆಯ ಆಂಡ್ರಾಯಿಡ್ ಹನಿಕೂಂಬನ್ನು ಬಳಸುತ್ತಿದೆ-ಹೊಸ ಆಂಡ್ರಾಯಿಡ್ ಐಸ್‌ಕ್ರೀಮನಲ್ಲ ಎನ್ನುವುದು ಬಳಕೆದಾರರಿಗೆ ನಿರಾಸೆ ತರುವಂತದ್ದು.ಅಲ್ಲದೆ ಐಪ್ಯಾಡಿನ ರೆಟಿನಾ ತೆರೆಗೆ ಇದರ ತೆರೆಯ ಸ್ಪಷ್ಟತೆಯನ್ನು ಹೋಲಿಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ.ಐಪ್ಯಾಡಿನ ತೆರೆಯ ಸ್ಪಷ್ಟತೆ ಹೈಡೆಫಿನಿಶನ್ ಟಿವಿಯ ಸ್ಪಷ್ಟತೆಗಿಂತಲೂ ಹೆಚ್ಚಾಗಿದೆ.ಅಲ್ಲದೆ,ಅದು ಹತ್ತಿಂಚು ತೆರೆಯಲ್ಲಿ ಆ ಸ್ಪಷ್ಟತೆಯನ್ನು ಹೊಂದಿರುವುದರಿಂದ,ಇದು ಮುದ್ರಿತ ಪುಟದ ಅನುಭವ ನೀಡುವಷ್ಟು ಸ್ಪಷ್ಟತೆ ಹೊಂದಿದೆ.ಅಂತರ್ಜಾಲ ಪುಟಗಳು ಕಡಿಮೆ ಸ್ಪಷ್ಟತೆಯ ಚಿತ್ರಗಳನ್ನೇ ಹೆಚ್ಚಾಗಿ ಬಳಸುವುದರಿಂದ,ಜಾಲಾಟಕ್ಕೆ ಈ ಸ್ಪಷ್ಟತೆ ಅನಗತ್ಯ ಎನಿಸುವುದೂ ಕಂಡು ಬಂದಿದೆ.ಅಂತರ್ಜಾಲ ಪುಟಗಳನ್ನು ಎಲ್ಲಾ ಸಾಧನಗಳನ್ನೂ ಗಮನದಲ್ಲಿರಿಸಿ ರೂಪಿಸುವುದರಿಂದ,ಐಪ್ಯಾಡಿನ ಅಧಿಕ ಸ್ಪಷ್ಟತೆ ಇಲ್ಲಿ ಉಪಯುಕ್ತವೆನಿಸದು.ಹಾಗೆಯೇ ಹೆಚ್ಚು ಸ್ಪಷ್ಟತೆಯುಳ್ಳ ಚಿತ್ರಗಳನ್ನು ಬಳಸಿದರೆ,ಪುಟಗಳು ಲೋಡ್ ಆಗಲು ಹೆಚ್ಚು ದತ್ತಾಂಶವನ್ನು ವರ್ಗಾಯಿಸಬೇಕಾಗುತ್ತದೆ.ಇದಕ್ಕೆ ಬೇಕಾದ ಬ್ಯಾಂಡ್‌ವಿಡ್ತ್ ಕೂಡಾ ಹೆಚ್ಚು.ಐಪ್ಯಾಡಿನ ಬೆಲೆಗಿಂತ ಎಕ್ಸೈಟ್ ಬೆಲೆ ತುಸು ಹೆಚ್ಚು ಎನ್ನುವುದು ಇನ್ನೊಂದು ಹಿನ್ನಡೆಯಾಗಲಿದೆ.ಐಪ್ಯಾಡ್ ಹೊಸ ಆವೃತ್ತಿ ಹೆಚ್ಚು ದಪ್ಪವಾಗಿದ್ದು,ಭಾರವಾಗಿದ್ದೂ,ತನ್ನ ಅನುಪಮ ಸ್ಪಷ್ಟತೆಯಿಂದ ಜನರ ಗಮನ ಸೆಳೆದಿದೆ.ಅಂದ ಹಾಗೆ ಐಪ್ಯಾಡ್ ಬೇಗ ಬಿಸಿಯಾಗುತ್ತದೆ ಎನ್ನುವ ದೂರುಗಳೂ ಕೇಳಿಬರುತ್ತಿವೆ.ಐಪ್ಯಾಡಿನಲ್ಲಿ ಬಳಕೆಯಾಗಿರುವ ನಾಲ್ಕು ಕೋರ್‌ನ ಸಂಸ್ಕಾರಕ ಅಧಿಕ ಸಂಸ್ಕರಣಾ ಸಾಮರ್ಥ್ಯದ್ದಾಗಿದೆ.
------------------------------------------------------------------------
ಮೊಬೈಲ್ ಕಳಕೊಳ್ಳುವ ಸಂದರ್ಭ ಯಾವುದು?
ಸೆಲ್‌ಪೋನುಗಳನ್ನು ಕಳಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.ಹೆಚ್ಚಿನವರು ರಾತ್ರಿಯ ವೇಳೆಯೇ ಸೆಲ್‌ಫೋನ್ ಕಳಕೊಳ್ಳುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.ಹಬ್ಬಹರಿದಿನಗಳ ವೇಳೆಯೇ ಸೆಲ್‌ಪೋನ್ ನಾಪತ್ತೆಯಾಗುವುದು ಸಾಮಾನ್ಯವಾಗಿದೆ.ಹೆಚ್ಚಿನವರು ತಮ್ಮ ಪೋನ್‌ಗಳನ್ನು ಬಾರ್‌ನಲ್ಲಿ ಕಳಕೊಳ್ಳುವುದು ಹೆಚ್ಚು-ಇದಕ್ಕೆ ಕಾರಣವನ್ನು ಊಹಿಸುವುದು ಕಷ್ಟವಲ್ಲವಷ್ಟೇ?ಇನ್ನು ಹೋಟೆಲ್,ಲಾಜು,ಪ್ರಯಾಣದ ವೇಳೆ ಸೆಲ್‌ಪೋನ್ ಕಳಕೊಳ್ಳುವ ಸಾಧ್ಯತೆ ಹೆಚ್ಚು.
------------------------------------------------------UDAYAVANI 
ಅಶೋಕ್‌ಕುಮಾರ್ ಎ