ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಮತ್ತು ಭಾರತದ 2024 ಲೋಕಸಭಾ ಚುನಾವಣೆ....
ಎನ್ಡಿಎ ಮತ್ತು ಯುಪಿಎ, ಜೊಕೊವಿಕ್ ಮತ್ತು ಆಲ್ಕರಾಜ್. ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ. ಕ್ರೀಡೆ ಮತ್ತು ರಾಜಕೀಯ. ದ್ವೇಷ ಮತ್ತು ಪ್ರೀತಿ.. ಈ ವಿಂಬಲ್ಡನ್ ಫೈನಲ್ ನಲ್ಲಿ ಸೋತ ನೋವಾಕ್ ಜೋಕೋವಿಕ್ ಮಾತುಗಳು." WE LOVE EACH OTHER " ( ನಾವು ಒಬ್ಬರಿಗೊಬ್ಬರು ಪ್ರೀತಿಸೋಣ )
ಕಳೆದ ಸುಮಾರು 45 ವರ್ಷಗಳಿಂದ ಪ್ರತಿ ವರ್ಷ ಟಿನಿಸ್ ನ 4 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫೈನಲ್ ಗಳನ್ನು ನೋಡುತ್ತಾ ಬಂದಿದ್ದೇನೆ. ಆಸ್ಟ್ರೇಲಿಯಾ, ಫ್ರೆಂಚ್, ವಿಂಬಲ್ಡನ್ ( ಇಂಗ್ಲೇಂಡ್ ) ಮತ್ತು ಅಮೆರಿಕ ಓಪನ್ ಸ್ಪರ್ಧೆಗಳು. ಪುರುಷ ಅಥವಾ ಮಹಿಳಾ ಫೈನಲ್ ಗೆದ್ದ ನಂತರ ಇಬ್ಬರೂ ಸ್ಪರ್ಧಿಗಳ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇದು ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಫೈನಲ್ ನಲ್ಲಿ ಅತ್ಯಂತ ರೋಚಕ ಹಣಾಹಣಿ ಮತ್ತು ಜಿದ್ದಾಜಿದ್ದಿಯ ನಂತರ ಅದೇ ಕ್ಷಣದಲ್ಲಿ ಸೋತವರು ಮತ್ತು ಗೆದ್ದವರು ವ್ಯಕ್ತಪಡಿಸುವ ಭಾವನಾತ್ಮಕ ಮಾತುಗಳು ಕ್ರೀಡಾ ಚರಿತ್ರೆಯಲ್ಲಿ ಮನುಷ್ಯ ಪ್ರೀತಿಯ ಮತ್ತು ಸ್ಪರ್ಧಾ ಮನೋಭಾವದ ಉತ್ಕಟತೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ಗಂಡು ಹೆಣ್ಣಿನ ಪ್ರೀತಿ, ತಂದೆ ತಾಯಿ ಮಕ್ಕಳ ಪ್ರೀತಿ, ಅಣ್ಣ ತಂಗಿ ತಮ್ಮ ಅಕ್ಕನ ಪ್ರೀತಿ, ಪ್ರಾಣಿ ಪ್ರೀತಿಯ ಉತ್ಕಟತೆ ಎಲ್ಲವೂ ಒಂದು ತೂಕದ ಸಹಜ ಸ್ವಾಭಾವಿಕ ಮತ್ತು ಅನಿವಾರ್ಯ ಎನಿಸಬಹುದು. ಆದರೆ ಇಬ್ಬರು ಕ್ರೀಡಾ ಸ್ಪರ್ಧಿಗಳ ನಡುವೆ ಸ್ಪರ್ಧೆಯ ನಂತರ ವ್ಯಕ್ತಪಡಿಸುವ ಪ್ರೀತಿ ತುಂಬಿದ ಅಭಿಮಾನದ ಮಾತುಗಳು ನಾಗರಿಕ ಪ್ರಜ್ಞೆಯ ಉತ್ತುಂಗದಂತೆ ಭಾಸವಾಗುತ್ತದೆ. ಹೌದು ಕೆಲವೊಮ್ಮೆ ಸೋಲಿನ ಕಹಿಯ ನೋವು ಮೇಲ್ನೋಟಕ್ಕೆ ಕಾಣದೆ ಮಾತುಗಳು ಔಪಚಾರಿಕವಾಗಬಹುದು. ಆದರೂ ಅದನ್ನು ಮೀರಿದ ಮಾನವ ಪ್ರೀತಿಯನ್ನು ನಾನು ಬಹುತೇಕ ಕ್ರೀಡಾಪಟುಗಳಲ್ಲಿ ಕಂಡಿದ್ದೇನೆ.
" ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ " ಎಂಬ ಮಾತುಗಳ ಹಿನ್ನೆಲೆಯಲ್ಲಿ ಸದ್ಯ ಭಾರತದ ರಾಜಕೀಯದಲ್ಲಿ ಎನ್ ಡಿ ಎ ಮತ್ತು ಯು ಪಿ ಎ ಎಂಬ ಎರಡು ರಾಜಕೀಯ ಒಕ್ಕೂಟಗಳು ಇಡೀ ದೇಶದ ಮತದಾರರ ಮನ ಒಲಿಸಲು ಒಂದುಗೂಡುತ್ತಿರುವ ಸಮಯದಲ್ಲಿ, ಸಾಮಾನ್ಯ ಮತದಾರರಾದ ನಾವು ನಮ್ಮ ನಮ್ಮ ನಡುವೆಯೇ ದ್ವೇಷದ ಅಸೂಯೆಯ ಸೇಡಿನ ರಾಜಕೀಯಕ್ಕೆ ಬಲಿಯಾಗದೆ, ರಾಜಕಾರಣಿಗಳ ದುಷ್ಟತನದ ಮುಖವಾಡಗಳನ್ನು ಕಳಚಿ ಆರೋಗ್ಯಕಾರಿ ಪ್ರೀತಿಯ ಮನಸ್ಸುಗಳನ್ನು ಬೆಂಬಲಿಸೋಣ. ಕಾರಣವೇನೇ ಇರಲಿ ಪಶ್ಚಿಮ ಬಂಗಾಳದ ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಜನ ಅನಾವಶ್ಯಕವಾಗಿ ಬಲಿಯಾದ ದುರಂತದ ನಡುವೆ ಒಡೆದ ಭಾರತೀಯ ಮನಸ್ಸುಗಳನ್ನು ಮತ್ತಷ್ಟು ಹಾಳಾಗಲು ಬಿಡದೆ ಒಂದುಗೂಡಿಸುವ ಜವಾಬ್ದಾರಿ ನಮ್ಮೆಲ್ಲರದು.
ಟೆನಿಸ್ ದಿಗ್ಗಜರಾದ ರಾಡ್ ಲೆವರ್, ಅರ್ಥರ್ ಆಷ್, ಬ್ಯೋನ್ ಬೋರ್ಗ್, ಬಿಲ್ಲಿ ಜೀನ್ ಕಿಂಗ್, ಕ್ರಿಸ್ ಎವರ್ಟ್ ಲಾಯ್ಡ್, ಜಿಮ್ಮಿ ಕಾರ್ನಸ್, ಜಾನ್ ಮೆಕೆನ್ರೋ ವರೆಗೆ ಭಾರತದಲ್ಲಿ ನಮ್ಮಂತ ಸಾಮಾನ್ಯ ಜನರು ಟಿವಿಗಳಲ್ಲಿ ಆಟವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಕೇವಲ ಪತ್ರಿಕೆಗಳ ವರದಿಗಳನ್ನು ಮಾತ್ರ ಓದಬಹುದಿತ್ತು. 1980 ರ ನಂತರ ದೂರದರ್ಶನ ನಿಧಾನವಾಗಿ ಭಾರತದ ಹಳ್ಳಿಗಳನ್ನು ತಲುಪತೊಡಗಿತು.
14 ಗ್ರ್ಯಾಂಡ್ ಸ್ಲ್ಯಾಮ್ ಗಳ ದಾಖಲೆಯ ಪೀಟ್ ಸಾಂಪ್ರಾಸ್ ದಾಖಲೆಯನ್ನು ಮುರಿದು 15 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ರೋಜರ್ ಫೆಡರರ್ ಅಂದು ಬಹುಶಃ ಆಂಡಿ ರಾಡಿಕ್ ಅವರನ್ನು ಸೋಲಿಸಿದರು. ಆಗ ರಾಡಿಕ್ ಹೇಳಿದ ಮಾತು. ಸಾಂಪ್ರಾಸ್ ಸಹ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು. " ಕ್ಷಮಿಸಿ ಪೀಟ್. ನಿಮ್ಮ ದಾಖಲೆಯನ್ನು ರಕ್ಷಿಸಲು ನನಗೆ ಸಾಧ್ಯವಾಗಲಿಲ್ಲ. ಈ ಫೆಡರರ್ ನನ್ನು ಟಿನಿಸ್ ನಲ್ಲಿ ನನಗೆ ಸೋಲಿಸಲು ಆಗುವುದಿಲ್ಲ. ಬಹುಶಃ ಹೊಡೆದಾಟದಲ್ಲಿ ಗೆಲ್ಲುತ್ತೇನೆ " ಎಂದು ಹಾಸ್ಯಮಯವಾಗಿ ಹೇಳಿದ. ಫೆಡರರ್ ಸಹ " ಸಾಂಪ್ರಾಸ್ ಇಂದು ದಾಖಲೆ ನನ್ನ ಹೆಸರಿಗೆ ಬರೆದಿರಬಹುದು. ಆದರೆ ಮೊದಲು 14 ಪ್ರಶಸ್ತಿಯ ದಾಖಲೆ ನಿನ್ನ ಹೆಸರಲ್ಲೇ ಇರುತ್ತದೆ. ನೀನೇ ನಿಜವಾದ ಚಾಂಪಿಯನ್. ನಿನ್ನ ಆಟವೇ ನನಗೆ ಸ್ಪೂರ್ತಿ " ಎಂದು ಮನಸಾರೆ ಕೊಂಡಾಡಿದ.
ಇನ್ನೊಮ್ಮೆ ಫೆಡರರ್ ಉತ್ತುಂಗದಲ್ಲಿದ್ದಾಗ ಒಂದು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ನಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋಲುತ್ತಾನೆ. ರನ್ನರ್ ಅಪ್ ಪ್ರಶಸ್ತಿ ಪಡೆದು ಮಾತನಾಡುವಾಗ ದುಃಖಿತನಾಗಿ ಮಗುವಿನಂತೆ ಅಳುತ್ತಾನೆ. ಆಗ ಚಾಂಪಿಯನ್ ಆದ ನಡಾಲ್ ಆತನನ್ನು ಕುರಿತು " ಫೆಡರರ್ ಇಂದು ಈ ಪಂದ್ಯದಲ್ಲಿ ನಾನು ಗೆದ್ದಿರಬಹುದು. ಆದರೆ ಟಿನಿಸ್ ಲೋಕದಲ್ಲಿ ನೀನೇ ನಿಜವಾದ ಚಾಂಪಿಯನ್. ಟಿನಿಸ್ ನಲ್ಲಿ ನಿನ್ನ ಹೆಸರು ಅಜರಾಮರ " ಎಂದು ಮುಕ್ತ ಮನಸ್ಸಿನಿಂದ ಹೊಗಳಿದ.
ಇನ್ನೊಮ್ಮೆ ರೋಜರ್ ಫೆಡರರ್ ಮತ್ತೊಂದು ಪ್ರಶಸ್ತಿಯನ್ನು ಎತ್ತಿ ಹಿಡಿಯುತ್ತಾ ಸೋತವನಿಗೆ " ಗೆಳೆಯ ಇವತ್ತಿನ ದಿನ ನನ್ನದಾಗಿರಬಹುದು. ಆದರೆ ನಾಳೆ ನಿನ್ನದೂ ಆಗಬಹುದು. ಆತ್ಮವಿಶ್ವಾಸದಿಂದ ಮುನ್ನಡೆ " ಎಂದು ಹುರಿದುಂಬಿಸಿದ. ನಿನ್ನೆ ಜೊಕೊವಿಕ್ ತನ್ನ ಎದುರಾಳಿಯನ್ನು ಅತ್ಯಂತ ಪ್ರೀತಿಯಿಂದ ಆತನ ಶಕ್ತಿ ಸಾಮರ್ಥ್ಯವನ್ನು ಹೊಗಳಿದ. ಆ ಸಂದರ್ಭದಲ್ಲಿ ಅಳುತ್ತಾ ತನ್ನ ಕಿರಿಯ ಮಗನನ್ನು ನೋಡಿ " ನಾವು ಒಬ್ಬರಿಗೊಬ್ಬರು ಪ್ರೀತಿಸೋಣ " ಎಂದು ಸೋಲಿನ ನಿರಾಸೆ ಮತ್ತು ದುಃಖದ ನಡುವೆ ಹೇಳಿದ. ಪ್ರೀತಿ ನೆನಪಾಗುವುದು ನೋವಿನ ಕ್ಷಣದಲ್ಲಿಯೇ ಹೆಚ್ಚು ಎಂದು ಎಲ್ಲಾ ಹೃದಯವಂತರಿಗೂ ಅರ್ಥವಾಗಿರುತ್ತದೆ.
ಇದನ್ನು ಪ್ರಸ್ತಾಪಿಸಲು ಕಾರಣ ಮುಂದಿನ ಲೋಕಸಭಾ ಚುನಾವಣೆಯನ್ನು ಮಾಧ್ಯಮಗಳು ಒಂದು ಕುರುಕ್ಷೇತ್ರ ಯುದ್ಧವೆಂದು ಜನ ಮಾನಸದಲ್ಲಿ ದ್ವೇಷದ ಮನೋಭಾವ ಬಿತ್ತುತ್ತಿದ್ದಾರೆ. ಒಂದು ಸಾಮಾನ್ಯ ಚುನಾವಣೆ ಇಡೀ ದೇಶದ ಜನರ ಮನಸ್ಸುಗಳನ್ನು ಒಡೆಯಲು ಬಿಡಬಾರದು. ಚುನಾವಣಾ ರಾಜಕೀಯ ಪಕ್ಷಗಳ ಒಂದು ತಿಂಗಳ ಸ್ಪರ್ಧೆ ಮಾತ್ರ. ಕೆಲವರು ಗೆಲ್ಲುತ್ತಾರೆ ಕೆಲವರು ಸೋಲುತ್ತಾರೆ. ಆದರೆ ಭಾರತ ಮತ್ತು ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕು. ಯಾರೇ ಗೆದ್ದರು ಜನರ ಜೀವನಮಟ್ಟ ಸುಧಾರಿಸಬೇಕು. ಎಲ್ಲಾ ನಾಯಕರು ಕ್ರೀಡಾ ಸ್ಪೂರ್ತಿ ಮೆರೆಯಬೇಕು.
ಮುಖ್ಯವಾಗಿ ಮಾಧ್ಯಮಗಳು ರಾಜಕೀಯ ಪಕ್ಷಗಳ ನಾಯಕರ ಬೆಂಕಿಯಂತ ಮಾತುಗಳಿಗೆ ಮತ್ತಷ್ಟು ತುಪ್ಪ ಸುರಿಯಬಾರದು. ಸಾಮಾನ್ಯ ಜನ ಮತ್ತು ಪಕ್ಷಗಳ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಿನಿಸ್ ಅಥವಾ ಇತರ ಕ್ರೀಡೆಗಳ ಕ್ರೀಡಾ ಮನೋಭಾವ ಹೆಚ್ಚು ತಲುಪುವಂತೆ ಮಾಡಬೇಕು. ಅತಿಮುಖ್ಯವಾಗಿ ಮೋದಿ ರಾಹುಲ್ ಮತ್ತು ಇತರ ಪಕ್ಷಗಳ ಮುಖ್ಯಸ್ಥರು ಮತದಾರರಿಗೆ " ನಾವು ಶತ್ರುಗಳಲ್ಲ ಅಥವಾ ವಿರೋಧಿಗಳಲ್ಲ. ಜನರ ಸೇವೆ ಮಾಡಲು ನಿಮ್ಮ ಪ್ರತಿನಿಧಿಯಾಗಿ ಆಯ್ಕೆಯಾಗಲು ನಮ್ಮ ನಮ್ಮ ವಿಚಾರಗಳ ಮೂಲಕ ಮತ ಯಾಚನೆ ಮಾಡುತ್ತೇವೆ. ನೀವು ನಿಮಗೆ ಇಷ್ಟವಾದವರಿಗೆ ಮತ ನೀಡಿ.
ಇದು ಸುಮಾರು ಒಂದು ತಿಂಗಳ ಪ್ರಕ್ರಿಯೆ. ಫಲಿತಾಂಶದ ನಂತರ ಅದನ್ನು ಒಪ್ಪಿಕೊಂಡು ನಾವೆಲ್ಲರೂ ಮತ್ತೆ ನಮ್ಮ ನಮ್ಮ ಸ್ಥಾನ ನಿರ್ಧರಿಸಿಕೊಂಡು ಜನ ಸೇವೆ ಮಾಡುತ್ತೇವೆ. ಅದಕ್ಕಿಂತ ಹೆಚ್ಚಿನ ಮಹತ್ವ ಏನೂ ಇಲ್ಲ. ದಯವಿಟ್ಟು ಮಾಧ್ಯಮ ಅಥವಾ ಇನ್ಯಾವುದೇ ಸಂಘ ಸಂಸ್ಥೆಗಳ ಪ್ರಚೋದನೆಗೆ ಒಳಗಾಗದೆ ಎಲ್ಲರೂ ಭಾರತೀಯರಾಗಿ ಒಟ್ಟಾಗಿ ಇರೋಣ " ಎಂಬ ಸಂದೇಶವನ್ನು ಯುಪಿಎ ಮತ್ತು ಎನ್ಡಿಎ ಇಬ್ಬರೂ ನೀಡಲಿ. ಇದರಿಂದ ಮಾಧ್ಯಮಗಳ ಟಿ ಆರ್ ಪಿ ಕಡಿಮೆ ಆಗಬಹುದು. ಆದರೆ ಪೋಲೀಸ್ ಮತ್ತು ಜನ ಸಾಮಾನ್ಯರ ಹಾಗು ಭಾರತದ ಘನತೆಯ ಟಿ ಆರ್ ಪಿ ಖಂಡಿತ ಹೆಚ್ಚಾಗುತ್ತದೆ. ಒಳ್ಳೆಯತನ ಇರುವುದು ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಮಾತ್ರವಲ್ಲ. ಅದನ್ನು ನಡವಳಿಕೆಯಾಗಿ ರೂಪಿಸಿಕೊಳ್ಳುವುದಕ್ಕೆ ಎಂಬುದನ್ನು ಮರೆಯದಿರಿ. ಅದೇ ನಿಜವಾದ ಮಾನವೀಯತೆ...
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ