ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 1)
“ಸೋಮೂ, ಟಿವಿ ನೋಡಿದ್ದು ಸಾಕು. ಇನ್ನು ಹೋಂವರ್ಕ್ ಶುರು ಮಾಡು. ಇಲ್ಲದಿದ್ದರೆ …" ಎಂದು ಅಮ್ಮ ಮೂರನೆಯ ಸಲ ಅಡುಗೆ ಕೋಣೆಯಿಂದ ಬೊಬ್ಬೆ ಹಾಕುತ್ತಾಳೆ.
ಆದರೆ ಟಿವಿ ಕಾರ್ಯಕ್ರಮಗಳ ಗದ್ದಲದಲ್ಲಿ ಮುಳುಗಿರುವ ಸೋಮುವಿಗೆ ಅಮ್ಮನ ಏರುದನಿಯ ಎಚ್ಚರಿಕೆ ಕೇಳಿಸುವುದೇ ಇಲ್ಲ. ಅಲ್ಲೇ ಡ್ರಾಯಿಂಗ್ ರೂಂನಲ್ಲಿ ಕುಳಿತು ಟಿವಿ ನೋಡುತ್ತಿರುವ ತಂದೆಯ ಸಿಟ್ಟಿನ ನೋಟವೂ ಅವನಿಗೆ ಕಾಣಿಸುವುದಿಲ್ಲ.
ಸೋಮು 10 ವರುಷ ವಯಸ್ಸಿನ ಬಾಲಕ. ಟಿವಿ ಪರದೆಯಲ್ಲಿ ಸಿನಿಮಾ ಹೀರೋಗಳನ್ನು ನೋಡುವುದೆಂದರೆ ಅವನಿಗೆ ಪಂಚಪ್ರಾಣ. ಟಿವಿಯ ಮಾರಾಮಾರಿ ಹೊಡೆದಾಟದ ದೃಶ್ಯಗಳು ಅವನಿಗೆ ಅಚ್ಚುಮೆಚ್ಚು. ಕಾರ್ಟೂನ್ ಸರಣಿಗಳನ್ನಂತೂ ಅವರು ಕುಳಿತು ಚಪ್ಪರಿಸುತ್ತಾನೆ. ಟಿವಿ ಪರದೆಯಲ್ಲಿ ಏನು ಚಲಿಸಿದರೂ ಅವನಿಗೆ ಆನಂದ. ಅದು ವೇಗವಾಗಿ ಚಲಿಸಿದಷ್ಟೂ ಮಜ. ಟಿವಿಯ ಎದುರೇ ಕುಳಿತಿರುವ ಸೋಮುವಿಗೆ ಗೆಳೆಯರೊಂದಿಗೆ ಆಟವಾಡಲು ಸಮಯವೇ ಇಲ್ಲ. ಹೋಂವರ್ಕ್ ಮಾಡುವಾಗ ಮನಸ್ಸಿಲ್ಲದ ಮನಸ್ಸಿನಿಂದ ಪುಸ್ತಕ ಹಿಡಿಯುತ್ತಾನೆ. ಅದಾದ ನಂತರ ಅವನಿಗೆ ಪುಸ್ತಕಗಳನ್ನು ಕಂಡರಾಗದು. ಮಿದುಳಿಗೆ ಕೆಲಸ ಕೊಡುವ ಯಾವುದೇ ಚಟುವಟಿಕೆ ಅವನಿಗೆ ಬಹಳ ತ್ರಾಸದಾಯಕ. (ಇವೆಲ್ಲ ಹೇಳಿಕೆಗಳು ಮೊಬೈಲಿನಲ್ಲಿ ಮುಳುಗಿರುವ ಬಾಲಕ-ಬಾಲಕಿಯರಿಗೂ ಅನ್ವಯಿಸುತ್ತವೆ.)
ಇಂತಹ ಬಾಲಕ ಸೋಮು ದೊಡ್ಡವನಾದಾಗ ಹೇಗಾದಾನು? ಯೋಚನೆ ಮಾಡುವ ಶಕ್ತಿಯೇ ಇಲ್ಲದ ದಡ್ಡನಾದಾನೇ? ಅವನ ಮಿದುಳಿನ ಬೆಳವಣಿಗೆ ಹಾಗೂ ಕಲಿಕೆಯ ಕೌಶಲ್ಯಗಳಿಗೆ ಟಿವಿ/ ಮೊಬೈಲ್ ವೀಕ್ಷಣೆ ಹಾನಿ ಮಾಡೀತೇ?
ಮಾತಿನ ಕಲಿಕೆ
ಟಿವಿ ವೀಕ್ಷಣೆ ಬಗ್ಗೆ ಹತ್ತು ವರುಷಗಳ ಅವಧಿ ನಡೆಸಿದ ಒಂದು ಅಧ್ಯಯನದ ವರದಿಯ ಅನುಸಾರ ಟಿವಿ ವೀಕ್ಷಣೆಯಿಂದಾಗಿ ಮಕ್ಕಳು ಮಾಟು ಕಲಿಯುವುದು ಬಹಳ ತಡವಾಗುತ್ತದೆ - ಮುಖ್ಯವಾಗಿ 1ರಿಂದ 5 ವರುಷಗಳ ಪ್ರಾಯದ ಮಕ್ಕಳಲ್ಲಿ. ಏಕಪದಗಳನ್ನು ಉಚ್ಚರಿಸುವ ಮೂಲಕ ಮಕ್ಕಳು ಮಾತನಾಡಲು ಶುರು ಮಾಡುತ್ತಾರೆ. ಕ್ರಮೇಣ ಸಣ್ಣ ವಾಕ್ಯಗಳನ್ನು, ಅನಂತರ ವಾಕ್ಯ ಸಮುಚ್ಚಯಗಳನ್ನು ಬಳಸಿ ಮಾತನಾಡುತ್ತಾರೆ.
ಆದರೆ ಟಿವಿ ಅಥವಾ ಮೊಬೈಲ್ ನೋಡುತ್ತಾ ಕುಳಿತಾಗ ಅವರು ಮಾತನಾಡುವುದಿಲ್ಲ ಮತ್ತು ಇದರಿಂದಾಗಿ ಸಂಭಾಷಣೆ ಕಲಿಕೆಗೆ ಅಗತ್ಯವಾದ ಸಮಯವನ್ನೇ ಕಳೆದುಕೊಳ್ಳುತ್ತಾರೆ. ಲೀಲಾಜಾಲವಾಗಿ ಮಾತನಾಡುವುದು ಮತ್ತು ಮಾತಿನ ಸಮರ್ಥ ಬಳಕೆ ಅವರಿಗೆ ಕಷ್ಟದ ಕೆಲಸವಾಗುತ್ತದೆ. ಇಂತಹ ಮಕ್ಕಳನ್ನು ಮಾತನಾಡುತ್ತಲೇ ಇರುವ ಇತರ ಮಕ್ಕಳೊಂದಿಗೆ ಹೋಲಿಸಿದಾಗ, ಸಂಪೂರ್ಣ ವಾಕ್ಯಗಳನ್ನು ಹೇಳುವ ಮತ್ತು ಬರೆಯುವ ಸಾಮರ್ಥ್ಯ ಇವರಲ್ಲಿ ಕಡಿಮೆ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿ ತಿಳಿಯಿತು.
ಯೋಚನಾಶಕ್ತಿ ಮತ್ತು ಕಲಿಕೆ
ನಮಗೆ ತಿಳಿದಿರುವುದನ್ನು ಪೋಣಿಸಿ, ಹೊಸ ಸನ್ನಿವೇಶಕ್ಕೆ ಅದು ಹೇಗೆ ಅನ್ವಯವಾಗುತ್ತದೆ ಎಂದು ಕಂಡುಕೊಳ್ಳುವುದೇ ಯೋಚನಾ ಪ್ರಕ್ರಿಯೆ. ಶಾಲೆಯಲ್ಲಿ ಪಾಠ ಕಲಿಯಲು ಈ ಕೌಶಲ ಅಗತ್ಯ. ಆದರೆ ಟಿವಿ ಅಥವಾ ಮೊಬೈಲಿನ ಪರದೆಯಲ್ಲಿ ಆಟ ಇತ್ಯಾದಿ ನೋಡಲು ಈ ಕೌಶಲ ಅಗತ್ಯವಿಲ್ಲ. ಇದರಿಂದಾಗಿ ಬಹಳ ಚುರುಕಾದ ಮಗು ಕೂಡ ನಿಷ್ಕ್ರಿಯವಾಗಿ ಬಿಡುತ್ತದೆ - ಮಾನಸಿಕವಾಗಿ ಮತ್ತು ದೈಹಿಕವಾಗಿ. ಯಾಕೆಂದರೆ ಟಿವಿ ಅಥವಾ ಮೊಬೈಲ್ ಪರದೆ ನೋಡುತ್ತಿರುವಾಗ ಯೋಚಿಸಬೇಕಾಗಿಯೇ ಇಲ್ಲ. ಯೋಚಿಸದಿರುವ ಮಗು ಕಲಿಯುವುದೂ ಇಲ್ಲ. ಕಲಿಯದಿರುವ ಮಗು ಮಾನಸಿಕವಾಗಿ, ಶೈಕ್ಷಣಿಕವಾಗಿ ಮತ್ತು ಬೌದ್ಧಿಕವಾಗಿ ಬೆಳೆಯುವುದೇ ಇಲ್ಲ.
ಕೆಲವೇ ಕೆಲವು ಸೆಕೆಂಡುಗಳಲ್ಲಿ ಟಿವಿ ಅಥವಾ ಮೊಬೈಲ್ ಪರದೆಯ ಚಿತ್ರ ಬದಲಾಗುತ್ತಾ ಸಾಗುತ್ತದೆ. ಅದನ್ನೇ ನೋಡುತ್ತಿರುವ ಮಗುವಿನ ಮಿದುಳು, ಯೋಚನಾ ಪ್ರಕ್ರಿಯೆ ಬೆಳೆಸಿಕೊಳ್ಳುವ ಬದಲಾಗಿ, ಅಂತಹ ವೇಗವಾದ ಬದಲಾವಣೆಗೆ ಒಗ್ಗಿ ಹೋಗುತ್ತದೆ. ಇದರಿಂದಾಗಿ, ಏಕಾಗ್ರತೆ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಕಲ್ಪನಾ ಸಾಮರ್ಥ್ಯ ಬೆಳೆಸಿಕೊಳ್ಳಲು ಅವಕಾಶವೇ ಇರುವುದಿಲ್ಲ.
ಮಕ್ಕಳಿಗೆ ಕತೆ ಹೇಳುವ ಕಾರ್ಯಕ್ರಮಗಳ ಒಂದು ಸರ್ವೆ ನಡೆಸಲಾಯಿತು. ಅದರಲ್ಲಿ, ಪ್ರತೀ ಏಳು ನಿಮಿಷಕ್ಕೊಮ್ಮೆ ಮಕ್ಕಳು ಅಶಾಂತರಾಗುತ್ತಿದ್ದರು. ಟಿವಿ ಕಾರ್ಯಕ್ರಮಗಳ ನಡುವೆ ಪ್ರತಿ ಏಳು ನಿಮಿಷಗಳಿಗೊಮ್ಮೆ ಬಿತ್ತರಿಸಲ್ಪಡುವ ವಾಣಿಜ್ಯ ಜಾಹೀರಾತುಗಳ ನಿರೀಕ್ಷೆಯ ಪ್ರವೃತ್ತಿಯೇ ಇದಕ್ಕೆ ಕಾರಣವಾಗಿರಬೇಕು. ಮಕ್ಕಳ ಬಾಲ್ಯದಲ್ಲಿ ಪ್ರತಿದಿನವೂ 4 - 5 ಗಂಟೆಗಳ ಅವಧಿಯಲ್ಲಿ (ಟಿವಿ ಅಥವಾ ಮೊಬೈಲ್ ವೀಕ್ಷಿಸುವಾಗ) ಹೀಗೆ ಆಗುತ್ತಿದ್ದರೆ, ಇದರ ಪರಿಣಾಮವಾಗಿ ಮಿದುಳಿನ ಚಟುವಟಿಕೆ ಅನಿಯಂತ್ರಿತವಾಗುತ್ತದೆ.
ಟಿವಿ ಕಾರ್ಯಕ್ರಮಗಳಲ್ಲಿ ಅಥವಾ ಮೊಬೈಲ್ ಆಟಗಳಲ್ಲಿ ವೇಗವಾಗಿ ಬದಲಾಗುವ ಶಬ್ದ ಮತ್ತು ಚಿತ್ರಗಳು ಕೆಲವು ಮಕ್ಕಳ ನರಮಂಡಲಕ್ಕೆ ದಿಗ್ಭ್ರಮೆ ಉಂಟು ಮಾಡಬಲ್ಲವು. ಇದು ಅಟೆನ್‌ಷನ್ ಡಿಫಿಸಿಯನ್ಸಿ ಹೈಪರ್ ಆಕ್ಟಿವಿಟಿ ಡಿಸ್-ಆರ್ಡರ್ (ಎಡಿ ಎಚ್‌ಡಿ) ಎಂಬ ನ್ಯೂನತೆಗೆ ಕಾರಣವಾದೀತು. ಈ ನ್ಯೂನತೆಯ ಮುಖ್ಯ ಲಕ್ಷಣಗಳು:
ಗಮನ ಕೇಂದ್ರೀಕರಿಸಲು ತೊಂದರೆ ಮತ್ತು ಅತಿಯಾದ ಚಟುವಟಿಕೆ ಹಾಗೂ ಅವಸರದ ವರ್ತನೆ.
ಇದರಿಂದಾಗಿ ಮಗುವಿಗೆ ತನ್ನ ಮಿದುಳನ್ನು ಸ್ವತಂತ್ರವಾಗಿ ಉಪಯೋಗಿಸುವ (ಆಟ, ಹವ್ಯಾಸ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ) ಅಭ್ಯಾಸ ತಪ್ಪಿಹೋಗುತ್ತದೆ.
ಬಳಕೆಯಾಗದ ಶಕ್ತಿ
ಟಿವಿ ಅಥವಾ ಮೊಬೈಲ್ ಪರದೆಯ ಚಿತ್ರಗಳ ವೀಕ್ಷಣೆಯಿಂದ ಉಂಟಾಗುವ ಶಕ್ತಿಯು ಬಳಕೆಯಾಗದೆ ಮಗುವಿನ ಶರೀರದಲ್ಲಿ ಶೇಖರಣೆಯಾಗುತ್ತದೆ. ಕೊನೆಗೆ ಟಿವಿ ಅಥವಾ ಮೊಬೈಲನ್ನು ಆಫ್ ಮಾಡಿದಾಗ, ಮಗುವಿನಲ್ಲಿ ಶೇಖರಣೆಯಾದ ಈ ಶಕ್ತಿಯು ವೇಗವಾದ ಹಾಗೂ ಗೊತ್ತುಗುರಿಯಿಲ್ಲದ ಚಟುವಟಿಕೆಯ ರೂಪದಲ್ಲಿ ಒಮ್ಮೆಲೇ ಹೊರನುಗ್ಗುತ್ತದೆ!
(ಈ ಲೇಖನ ಭಾಗ 2ರಲ್ಲಿ ಮುಂದುವರಿಯುತ್ತದೆ.)