ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 2)

ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 2)

ಒಕ್ಕುಂಟಿ ಮಗು
ಜಾಸ್ತಿ ಟಿವಿ ಅಥವಾ ಮೊಬೈಲ್ ಬಳಸುವ ಮಗು ತನ್ನದೇ ಕುಟುಂಬ ಹಾಗೂ ಸಾಮಾಜಿಕ ಪರಿಸರಕ್ಕೆ ಪರಕೀಯವಾಗಬಹುದು. ಇದರಿಂದ ಕುಟುಂಬದ ಸದಸ್ಯರೊಂದಿಗೆ, ನೆರೆಕರೆಯವರೊಂದಿಗೆ ಮತ್ತು ಗೆಳೆಯರೊಂದಿಗೆ ಮಗುವಿನ ಸಂಬಂಧಗಳು ಕೆಟ್ಟು ಹೋಗಬಹುದು. ಬೆಳೆಯುತ್ತಿರುವ ಮಗುವಿನ ಮೇಲೆ ಹೆತ್ತವರ ಪ್ರಭಾವವೇ ಅತ್ಯಂತ ಮುಖ್ಯ. ಆದರೆ ಟಿವಿ ಅಥವಾ ಮೊಬೈಲ್ ನೋಡುತ್ತಾ ಕೂರುವ ಮಗು ತನ್ನ ಹೆತ್ತವರೊಂದಿಗಿನ ಒಡನಾಟದ ಸಮಯವನ್ನು ಕಳೆದುಕೊಳ್ಳುತ್ತದೆ. ಆಟವಾಡುವ ಸಮಯವನ್ನೂ ಕಳೆದುಕೊಳ್ಳುತ್ತದೆ.

ಇವೆರಡೂ ಚಟುವಟಿಕೆಗಳು ಮಗುವಿನ ಬುದ್ಧಿವಂತಿಕೆ ಮತ್ತು ಕಲ್ಪನಾಶಕ್ತಿ ಬೆಳೆಯಲು ಅತ್ಯಗತ್ಯ ಹಾಗೂ ಸಮತೋಲನದ ಬೆಳವಣಿಗೆಗೆ ಪೂರಕ. ಬಾಲ್ಯದಲ್ಲಿ ತಾಳ್ಮೆ ಹಾಗೂ ಸಮಾಧಾನ ಕಲಿಯದ ಮಗು, ಸಾಮಾಜಿಕವಾಗಿ ಹೊಂದಾಣಿಕೆಯಾಗದ ವ್ಯಕ್ತಿಯಾಗಿ ಬೆಳೆಯಬಹುದು. ಅದಲ್ಲದೆ, ಟಿವಿ ಅಥವಾ ಮೊಬೈಲಿನ ಪರದೆಯಲ್ಲಿ ಜಾಹೀರಾತುಗಳನ್ನು ನೋಡುತ್ತಾ ಬೆಳೆಯುವ ಮಗು ಅನಗತ್ಯ ಬಯಕೆಗಳನ್ನು ಬೆಳೆಸಿಕೊಳ್ಳಬಹುದು.

ವಾಸ್ತವ ಮತ್ತು ಭ್ರಮೆ
ವಾಸ್ತವ ಮತ್ತು ಭ್ರಮೆಯನ್ನು ಬೇರ್ಪಡಿಸಲು ಮಕ್ಕಳಿಗೆ ಕಷ್ಟವಾಗುವುದು ಸಹಜ. ಟಿವಿ ಅಥವಾ ಮೊಬೈಲಿನ ಆಟನೋಟಗಳಿಂದಾಗಿ ಅವರಿಗೆ ಇನ್ನಷ್ಟು ಗೊಂದಲವಾಗುತ್ತದೆ. ಉದಾಹರಣೆಗೆ ಅವುಗಳ ಪರದೆಯಲ್ಲಿ ಕಾಣುವ ಹಿಂಸೆ ಮಕ್ಕಳಿಗೆ ಜಗತ್ತಿನ ವಾಸ್ತವದ ಬಗ್ಗೆ ತಿಳಿಸುವ ಬದಲಾಗಿ ಭ್ರಮಾಲೋಕವನ್ನು ತೋರಿಸುತ್ತದೆ.

ಅದೇ ರೀತಿಯಲ್ಲಿ ಕಾರ್ಟೂನ್ ಫಿಲ್ಮುಗಳೂ ಮಕ್ಕಳಲ್ಲಿ ಗೊಂದಲ ಹೆಚ್ಚಿಸುತ್ತವೆ. ಒಂದು ಅಧ್ಯಯನದಲ್ಲಿ, ಹಲವು ಮಕ್ಕಳನ್ನು “ಕಲಿಯುವುದರಲ್ಲಿ ನಿರುತ್ಸಾಹಿಗಳು” ಎಂದು ಅವರ ಶಿಕ್ಷಕರು ಗುರುತಿಸಿದರು. ಆ ಮಕ್ಕಳ ಹಿನ್ನೆಲೆ ಪರಿಶೀಲಿಸಿದಾಗ, ಅವರು ಟಿವಿಯಲ್ಲಿ ಅತಿಯಾಗಿ ಕಾರ್ಟೂನ್ ಫಿಲ್ಮುಗಳನ್ನು ನೋಡುವ ಮಕ್ಕಳೆಂದು ತಿಳಿದು ಬಂತು! ಕಾದಂಬರಿ ಓದುವಾಗ, ಪಾತ್ರ, ಸನ್ನಿವೇಶ ಹಾಗೂ ಘಟನೆಗಳನ್ನು ಕಲ್ಪಿಸಿಕೊಳ್ಳುವಾಗ ಅಗತ್ಯವಾದ ಸೃಜನಾತ್ಮಕ ಪ್ರಕ್ರಿಯೆಗೆ ಟಿವಿ ಅಥವಾ ಮೊಬೈಲ್ ವೀಕ್ಷಣೆಯಲ್ಲಿ ಅವಕಾಶವೇ ಇಲ್ಲ.

ಟಿವಿ ಅಥವಾ ಮೊಬೈಲನ್ನು ಕಡಿಮೆ ಬಳಸುವ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಅಧಿಕ ಆಸಕ್ತಿ ತೋರುತ್ತಾರೆ ಮತ್ತು ಭಾಗವಹಿಸುತ್ತಾರೆ. ಈ ಚಟುವಟಿಕೆಗಳಿಂದಾಗಿ ಅವರು ಇತರ ಮಕ್ಕಳೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಒಡನಾಟ ಕಲಿಯುತ್ತಾರೆ.

ಜಾಸ್ತಿ ಹೊತ್ತು ಟಿವಿ ಅಥವಾ ಮೊಬೈಲ್ ವೀಕ್ಷಿಸಿದರೆ ಮತ್ತು ಟಿವಿ ಪರದೆಗೆ 10 ಅಡಿಗಳಿಗಿಂತ ಹತ್ತಿರ ಕುಳಿತರೆ ಮಕ್ಕಳ ಕಣ್ಣುಗಳಿಗೆ ತ್ರಾಸವಾಗುತ್ತದೆ. ಇದರಿಂದಾಗಿ ಶಾಲಾ ಪಾಠದ ಬಗ್ಗೆ ಏಕಾಗ್ರತೆಗೂ ತೊಡಕಾಗುತ್ತದೆ.

ಟಿವಿ ಅಥವಾ ಮೊಬೈಲ್ ನೋಡುವುದರಿಂದ ನಿದ್ದೆಗೂ ತೊಂದರೆಯಾಗುತ್ತದೆ. ಅದರಿಂದಾಗಿ ಮಗುವಿಗೆ ಶಾಲಾ ಪಾಠಗಳಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೋಂವರ್ಕ್ ಮಾಡಲು ಕಷ್ಟವಾಗುತ್ತದೆ. ಇದರಿಂದಾಗಿ ಶಾಲಾ ಕಲಿಕೆಯಲ್ಲಿ ಮಗುವಿನ ಪ್ರಗತಿ ಕುಂಠಿತವಾಗುತ್ತದೆ.

ಬೊಜ್ಜು ಮತ್ತು ಚಲನರಾಹಿತ್ಯ
ಮಕ್ಕಳ ಬೊಜ್ಜು ಕರಗಿಸಲು ಟೆಲಿವಿಷನ್/ ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು ಒಳ್ಳೆಯ ಉಪಾಯ. ಅವುಗಳ ಪರದೆ (ಸ್ಕ್ರೀನ್) ನೋಡುತ್ತಾ ಸುಮ್ಮನೆ ಕೂರುವುದು ಹಾಗೂ ಅವುಗಳ ಜಾಹೀರಾತುಗಳ ಪ್ರೇರಣೆಯಿಂದ ಆರೋಗ್ಯಕ್ಕೆ ಬಾಧಕವಾದ ತಿನ್ನುವ ಅಭ್ಯಾಸಗಳನ್ನು ಕಲಿಯುವುದು - ಇವು ಮಕ್ಕಳಲ್ಲಿ ಬೊಜ್ಜು ಬೆಳೆಯಲು ಕಾರಣ. ಬಾಲ್ಯದಲ್ಲೇ ಬೊಜ್ಜು ಬೆಳೆದರೆ, ಆ ಮಕ್ಕಳಿಗೆ ವಯಸ್ಸಾದಾಗ ಹೃದಯ ಕಾಯಿಲೆ ಮತ್ತು ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾದೀತು.    

ಅತಿಯಾದ ಟಿವಿ/ ಮೊಬೈಲ್ ವೀಕ್ಷಣೆ ಮಕ್ಕಳಿಗೆ ಹಾನಿಕರ - ಯಾಕೆ?
1)ಮಕ್ಕಳು ತಡವಾಗಿ ಮತ್ತು ತಪ್ಪಾಗಿ ಮಾತು ಕಲಿಯುತ್ತಾರೆ.
2)ಮಕ್ಕಳಿಗೆ ಯೋಚಿಸುವ ಅವಕಾಶ ಕಳೆದುಹೋಗುತ್ತದೆ.
3)ಮಕ್ಕಳ ಸೃಜನಶೀಲತೆಗೆ ಮಾರಕ.
4)ಮಕ್ಕಳ ಏಕಾಗ್ರತೆಗೆ ಬಾಧಕ. ನಿದ್ದೆಗೆ ತೊಂದರೆಯಾಗಿ ಏಕಾಗ್ರತೆ ಇನ್ನಷ್ಟು ಕುಂಠಿತ. ಇದರಿಂದಾಗಿ ಶಾಲಾ ಕಲಿಕೆಯ ಪ್ರಗತಿಯು ಕುಂಠಿತ.
5)ಅಟೆನ್-ಷನ್ ಡಿಫಿಸಿಟ್ ಡಿಸ್-ಆರ್ಡರಿಗೆ ಕಾರಣವಾಗಬಹುದು.
6)ಮಕ್ಕಳಲ್ಲಿ ಅತಿ ಚಟುವಟಿಕೆಗೆ ಮತ್ತು ಗೊಂದಲಮಯ ವರ್ತನೆಗೆ ಕಾರಣವಾಗುತ್ತದೆ.
7)ಮಕ್ಕಳಲ್ಲಿ ಹಿಂಸಾತ್ಮಕ ಮತ್ತು ದಬ್ಬಾಳಿಕೆಯ ವರ್ತನೆಗೆ ಪ್ರಚೋದನೆ.
8)ಟಿವಿ/ ಮೊಬೈಲ್ ನೋಡುವಾಗ ಶರೀರದ ಆಂತರಿಕ ಕ್ರಿಯೆಗಳು ಮಲಗಿದಾಗ ಇರುವುದಕ್ಕಿಂತಲೂ ಶೇ.14.5 ಕಡಿಮೆ.
9)ಮಕ್ಕಳನ್ನು ಕುಟುಂಬ ಹಾಗೂ ಸಾಮಾಜಿಕ ಪರಿಸರಕ್ಕೆ ಪರಕೀಯವಾಗಿಸುತ್ತದೆ.
10)ಮಕ್ಕಳ ಕಣ್ಣುಗಳ ತ್ರಾಸಕ್ಕೆ ಕಾರಣವಾಗುತ್ತದೆ.

ನಾವೇನು ಮಾಡಬಹುದು?
ಕೆಲವು ಪರಿಣತರ ಅನುಸಾರ ಐದು ವರುಷ ವಯಸ್ಸಿನ ವರೆಗೆ ಮಕ್ಕಳು ಟಿವಿ/ ಮೊಬೈಲ್ ಬಳಸಬಾರದು. ಇದು ಕಷ್ಟಸಾಧ್ಯ ಕ್ರಮ. ಯಾಕೆಂದರೆ ಕೆಲವು ತಾಯಂದಿರು ಮಕ್ಕಳಿಗೆ ಟಿವಿ ಅಥವಾ ಮೊಬೈಲಿನಲ್ಲಿ ಏನಾದರೂ ತೋರಿಸುತ್ತಲೇ ಆಹಾರ ತಿನ್ನಿಸುತ್ತಾರೆ! ಇದರ ಬದಲಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಪ್ರತಿ ದಿನ ಗರಿಷ್ಠ ಒಂದು ಗಂಟೆ ಅವಧಿ ವೀಕ್ಷಿಸಲು ಅವಕಾಶ ನೀಡಬಹುದು. ಯಾಕೆಂದರೆ, ಟಿವಿ ಅಥವಾ ಮೊಬೈಲ್ ಉತ್ತಮ ಶಿಕ್ಷಕನಂತೆ ಬಳಸಬಹುದು. ಆದರೆ ಅತಿಯಾಗಿ ಬಳಸಿದರೆ ಲಾಭಕ್ಕಿಂತ ಹಾನಿಯೇ ಜಾಸ್ತಿ.

ಗಮನಿಸಿ: ಮನೆಗಳಲ್ಲಿ ಟಿವಿ/ ಮೊಬೈಲ್ ವೀಕ್ಷಣೆ ಬಗ್ಗೆ ಮಕ್ಕಳಲ್ಲಿ ಶಿಸ್ತು ಇರಬೇಕಾದರೆ, ಹಿರಿಯರು ತಾವು ಶಿಸ್ತಿಗೆ ಬದ್ಧರಾಗಬೇಕು. ತಾವು ಗಂಟೆಗಟ್ಟಲೆ ಟಿವಿ/ ಮೊಬೈಲ್ ನೋಡುತ್ತಾ ಮಕ್ಕಳಿಗೆ “ಟಿವಿ/ ಮೊಬೈಲ್ ನೋಡಬೇಡಿ” ಎಂದು ಹಿರಿಯರು ಉಪದೇಶ ನೀಡಿದರೆ ಮಕ್ಕಳು ಕೇಳುತ್ತಾರೇನು?

ಅದಲ್ಲದೆ, ಮನರಂಜನೆ, ವ್ಯಕ್ತಿತ್ವ ವಿಕಸನ ಮತ್ತು ಹೊತ್ತು ಕಳೆಯಲಿಕ್ಕಾಗಿ ಟಿವಿ/ ಮೊಬೈಲ್ ನೋಡುವುದಕ್ಕಿಂತ ಉತ್ತಮ ದಾರಿಗಳನ್ನು ಕಿರಿಯರಿಗೆ ಹಿರಿಯರೇ ತೋರಿಸಿಕೊಡಬೇಕಾಗಿದೆ. ಟಿವಿ/ ಮೊಬೈಲ್ ಬಳಸದೆ ಬೆಳೆದ ನಮ್ಮ ಹಿಂದಿನ ತಲೆಮಾರಿನವರು ಎಷ್ಟು ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು!

ಒಳ್ಳೆಯ ಪುಸ್ತಕಗಳು, ಒಳ್ಳೆಯ ಸಂಗೀತ, ಒಳ್ಳೆಯ ಸಂವಾದ, ಒಳ್ಳೆಯ ಸಂಗತಿಗಳು, ಮುಂಜಾವ ಅಥವಾ ಸಂಜೆಯ ನಡಿಗೆ, ಪ್ರಕೃತಿ ವೀಕ್ಷಣೆ - ಇವೆಲ್ಲವೂ ಮಕ್ಕಳ ಹೂಮನಸ್ಸನ್ನು ಅರಳಿಸಬಲ್ಲವು. ನಮ್ಮ ಮಕ್ಕಳು ಟಿವಿ/ ಮೊಬೈಲ್ ವೀಕ್ಷಣೆಯ ಚಟ ತೊರೆದು, ಇಂಥವುಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕಾದರೆ, ಮಕ್ಕಳಿಗೆ ಹಿರಿಯರೇ ಮಾದರಿಯಾಗಬೇಕು, ಅಲ್ಲವೇ?

ಮಕ್ಕಳ ವಿಕಸನಕ್ಕಾಗಿ ಐದು ದಾರಿಗಳು
*ಮಕ್ಕಳಿಗೆ ಹಲವಾರು ಪುಸ್ತಕಗಳನ್ನು ಓದಿ ಹೇಳಿ.
*ಮಕ್ಕಳನ್ನು ಪ್ರಕೃತಿ ವೀಕ್ಷಣೆಗೆ ಕರೆದೊಯ್ಯಿರಿ.
*ಮಕ್ಕಳು “ಬೋರಾಗುತ್ತದೆ” ಎಂದಾಗ ಸಿಡುಕಬೇಡಿ. ಅವರ ಸೃಜನಶೀಲತೆಗೆ ಸವಾಲೆಸೆಯುವ ಯಾವುದೇ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಿ: ಓದು, ಬರಹ, ಪತ್ರ ಬರಹ, ಭಾವಗೀತೆ, ಸಂಗೀತ, ರಂಗೋಲಿ, ಚಿತ್ರರಚನೆ, ಅಭಿನಯ, ಚದುರಂಗ, ಜಾಣ್ಮೆಯ ಆಟಗಳು, ಪದಬಂಧ, ಕಾಗದದ ಆಟಿಕೆ/ ಗೊಂಬೆ ರಚನೆ, ಪಕ್ಷಿ ವೀಕ್ಷಣೆ, ಅಂಚೆಚೀಟಿ/ ನಾಣ್ಯ ಸಂಗ್ರಹ ಇತ್ಯಾದಿ.
*ಮಕ್ಕಳನ್ನು ಅವರ ಕೈಗಳು, ಕಾಲುಗಳು ಹಾಗೂ ಇಡೀ ಶರೀರ ಬಳಕೆಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿ: ನಡಿಗೆ, ಓಟ, ಈಜಾಟ, ನಾಟ್ಯ, ಕುಣಿತ, ವ್ಯಾಯಾಮ, ಯೋಗಾಸನಗಳು, ಸೈಕಲ್ ಸವಾರಿ, ಕ್ರೀಡೆಗಳು, ಉದ್ಯಾನಗಾರಿಕೆ ಇತ್ಯಾದಿ.
*ಟಿವಿ/ ಮೊಬೈಲಿನಲ್ಲಿ ಯಾವುದೇ ಕಾರ್ಯಕ್ರಮ ವೀಕ್ಷಿಸುವಾಗ ಅದರ ಬಗ್ಗೆ ಮಕ್ಕಳೊಂದಿಗೆ ಮಾತಾಡುತ್ತಾ, ಅವರ ಎಳೆ ಮನಸ್ಸಿನ ಮೇಲೆ ಅದರ ಪ್ರಭಾವ ಕಡಿಮೆ ಮಾಡಿ.