ಟೈಂಪಾಸ್ ಮಾಡಲು ಇದೋ ಎರಡು ಸ್ವಾರಸ್ಯಕರ ಸುದ್ದಿಗಳು!
ಸುದ್ದಿ ೧: ಪೂಜಾರಿಯ ಈ ಕವರ್ ಡ್ರೈವ್ ಮಾಡಿತು ನೋಡಿ ಮೋಡಿ!
ಕ್ರಿಕೆಟ್ ಆಟವೇ ಒಂದು ಮೋಜು. ಯಾವ ಕ್ಷಣದಲ್ಲಿ ಯಾವ ರೀತಿ ಆಟ ಬದಲಾಗುತ್ತೆ ಹೇಳಲಿಕ್ಕಾಗದು. ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಹೊಡೆದ ಆ ಒಂದು ಕವರ್ ಡ್ರೈವ್ ಜ್ಯೋತಿ ಪೂಜಾರಿ ಎಂಬ ಕಾರ್ಕಳ ಮೂಲದ ಹುಡುಗಿಯನ್ನು ರಾತೋ ರಾತ್ರಿ ಫೇಮಸ್ ಮಾಡಿತು ನೋಡಿ. ಮೂಲತಃ ಮುಂಬೈ ವಾಸಿಯಾಗಿರುವ ಜ್ಯೋತಿ ಪೂಜಾರಿ ತನ್ನ ಊರಾದ ಕಾರ್ಕಳ ತಾಲೂಕಿನ ಕೆರ್ವಾಶೆಗೆ ಬಂದಿದ್ದಳು. ಮುಂಬೈಯಿಂದ ಬಂದುದಕ್ಕಾಗಿ ಕ್ವಾರಂಟೈನ್ ಮುಗಿಸಿ ಮನೆಯಂಗಳದಲ್ಲೇ ತನ್ನ ಮನೆಯವರೊಂದಿಗೆ ಕ್ರಿಕೆಟ್ ಆಡುತ್ತಿದ್ದಳು. ಆಗ ಅವಳು ಬಾರಿಸಿದ ಒಂದು ಕವರ್ ಡ್ರೈವ್ ಹೊಡೆತ ಅವಳನ್ನು ದಿನ ಬೆಳಗಾಗುವಷ್ಟರಲ್ಲೇ ಎಲ್ಲಾ ಅಂತರ್ಜಾಲ ತಾಣಗಳಲ್ಲಿ ಫೇಮಸ್ ಮಾಡಿದೆ.
ಅಂದು ಆದದ್ದೇನು? ಜ್ಯೋತಿ ಪೂಜಾರಿ ಕ್ರಿಕೆಟ್ ಆಡುವಾಗ ಲೆಗ್ ಸೈಡ್ ಹೆಜ್ಜೆ ಇಟ್ಟು ಒಂದು ಕವರ್ ಡ್ರೈವ್ ಶಾಟ್ ಹೊಡೆಯುತ್ತಾಳೆ. ಅದೂ ಟೆನ್ನಿಸ್ ಬಾಲ್ ನಲ್ಲಿ. ಅದನ್ನು ರಂಜಿತ್ ಪೂಜಾರಿ ರೆಕಾರ್ಡ್ ಮಾಡಿ ತನ್ನ ಫೇಸ್ ಬುಕ್ ಖಾತೆಗೆ ಹಾಕಿದ್ದ. ಅದನ್ನು ಗಮನಿಸಿದ ESPNcricinfo ಈ ಶಾಟ್ ನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ ಮತ್ತು ಅಪೂರ್ವ ಹೊಡೆತ ಎಂದು ಕೂಡಾ ಬರೆದಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಈ ಶಾಟ್ ನ್ನು ವೀಕ್ಷಿಸಿದ್ದಾರೆ. ಹಲವಾರು ಕಮೆಂಟ್ ಗಳನ್ನೂ ಮಾಡಿದ್ದಾರೆ. ಸುಮ್ಮನೇ ಟೈಂಪಾಸ್ ಗೆ ಆಡಿದ ಆಟ ಹೇಗೆ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯುತ್ತದೆ ನೋಡಿದಿರಲ್ಲವೇ? ಎಲ್ಲವೂ ಇಂಟರ್ ನೆಟ್ ಮಹಾತ್ಮೆ.
ಸುದ್ದಿ ೨: ಪಾಕಿಸ್ತಾನ ಭಾರತದಲ್ಲಿದೆಯೇ?
ಮೇಲಿನ ಶೀರ್ಷಿಕೆ ನೋಡಿ ಪಾಕಿಸ್ತಾನವನ್ನು ಭಾರತ ತನ್ನ ಹಿಡಿತಕ್ಕೆ ತೆಗೆದುಕೊಂಡೇ ಬಿಟ್ಟಿತಾ ಎಂದು ಆಶ್ಚರ್ಯ ಪಡಬೇಡಿ. ಇದು ಭಾರತದಲ್ಲಿರುವ ‘ಪಾಕಿಸ್ತಾನ' ಎಂಬ ಊರಿನ ಕಥೆ. ನಮ್ಮ ದೇಶದ ಬಿಹಾರ ರಾಜ್ಯದಲ್ಲಿರುವ ಪೂರ್ನಿಯಾ ಎಂಬ ಜಿಲ್ಲೆಯಲ್ಲಿ ಪಾಕಿಸ್ತಾನ ಎಂಬ ಹಳ್ಳಿ ಇದೆ. ಈ ಊರಿಗೆ ಆ ಹೆಸರು ಏಕೆ ಬಂತು ಎಂಬುದರ ಒಂದು ಸ್ವಾರಸ್ಯಕರ ಅಂಶವೂ ಇದೆ.
೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿಯೇ ಭಾರತ ಮತ್ತು ಪಾಕಿಸ್ತಾನದ ವಿಭಜನೆಯಾಗಿತ್ತು. ಆಗ ಈ ಊರಿನಿಂದ ಪಾಕಿಸ್ತಾನಕ್ಕೆ ಹಲವಾರು ಮಂದಿ ವಲಸೆ ಹೋಗಿದ್ದರಂತೆ. ಅದರ ಸ್ಮರಣಾರ್ಥ ಈ ಊರಿಗೆ ಪಾಕಿಸ್ತಾನ ಎಂಬ ಹೆಸರು ಬಂತಂತೆ. ವಿಷಯ ಏನೇ ಇರಲಿ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಹೆಸರಿನಲ್ಲಿ ನಮ್ಮ ದೇಶದಲ್ಲೇ ಒಂದು ಊರು ಇರುವುದು ಒಂದು ಸ್ವಾರಸ್ಯಕರವಾದ ಸಂಗತಿಯೇ ಅಲ್ಲವೇ?
ಕೊನೇ ಸುದ್ದಿ: ಪ್ರಧಾನಿ ಎಂಬ ಹೆಸರಿನ ಊರು ಉತ್ತರಕನ್ನಡ ಜಿಲ್ಲೆಯಲ್ಲಿದೆ. ದಾಂಡೇಲಿಯಿಂದ ೮ ಕಿ.ಮೀ ದೂರವಿರುವ ಈ ಹಳ್ಳಿ ತನ್ನ ವಿಶಿಷ್ಟ ಹೆಸರಿನಿಂದಲೇ ಗಮನ ಸೆಳೆಯುತ್ತಿದೆ.