ಟೈಂ ಪಾಸ್‌ಗೆ ಒಂದು ಕಥೆ: ಅಂತರಾಳ

ಟೈಂ ಪಾಸ್‌ಗೆ ಒಂದು ಕಥೆ: ಅಂತರಾಳ

 ಫೋನ್ ಒಂದೇ ಸಮನೇ ರಿ೦ಗಾಗುತ್ತಿತ್ತು. ಗಂಟೆ ಒಂಬತ್ತಾದರೂ ನಾನು ಮಲಗಿದಲ್ಲಿಯೇ ಇದ್ದೆ. ಸಿಕ್ಕಿದ್ದ ಎಲ್ಲಾ ಕೆಲಸವನ್ನೂ ನನ್ನ ಬೇಜವಾಬ್ದಾರಿತನದಿ೦ದ ಬಿಟ್ಟು ಮನೆಯಲ್ಲಿಯೇ ಇದ್ದುದರಿ೦ದ ಬೇಗನೇ ಎದ್ದು ನಾನು ಮಾಡ ಬೇಕಾದುದು ಏನೂ ಇರಲಿಲ್ಲವಾದುದರಿ೦ದ ತಡವಾಗಿಯೇ ಏಳುವುದು ಅಭ್ಯಾಸವಾಗಿ ಹೋಗಿತ್ತು. ಅಪ್ಪ, ಅಮ್ಮ ಕೆಲಸಕ್ಕೆ ತಮ್ಮ ಕಾಲೇಜಿಗೆ ಹೋಗಿದ್ದುದರಿ೦ದ ಫೋನ್ ಎತ್ತುವುದಕ್ಕೆ ನಾನೇ ಹೋಗಬೇಕಾಯಿತು.      

 ಅಣ್ಣಾ, ನಮ್ಮ ಮದುವೆಗೆ ಮಧುಕರ್ ಮನೆಯವರು ಒಪ್ಪಿರುವರು, ನಾಡಿದ್ದೇ ಮದುವೆ. ಸರಳವಾಗಿ ದೇವಸ್ಥಾನದಲ್ಲೇ ಮದುವೆಯಾಗುತ್ತಿದ್ದೇವೆ. ನೀನು ಬರ್‍ಲೇ ಬೇಕು ಎ೦ದು ಒ೦ದೇ ಉಸಿರಿನಲ್ಲಿ ಅತ್ತಕಡೆಯಿ೦ದ ರೇಖಾ ಉತ್ಸಾಹದಿ೦ದ ಮಾತನಾಡುತ್ತಿದ್ದಳು. ಖ೦ಡಿತಾ ಬರುತ್ತೇನೆ೦ದು ಫೋನ್ ಇಟ್ಟು ಬಿಟ್ಟೆ. ಮನಸ್ಸು ನಿಧಾನವಾಗಿ ಹಿ೦ದಿನ ದಿನಗಳತ್ತ ವಾಲ ತೊಡಗಿತು.

*******

 ರೇಖಾ ನನ್ನ ಸ್ವ೦ತ ತ೦ಗಿಯಲ್ಲ. ಹಾಗೆ೦ದು ದೂರದ ಸ೦ಬ೦ಧಿಯೂ ಅಲ್ಲ. ಕಾಲೇಜಿನಲ್ಲಿ ನಾನು ಡಿಗ್ರಿ ಕಲಿಯುತ್ತಿರುವಾಗ ನನ್ನ ಜ್ಯೂನಿಯರ್. ಒ೦ದು ಕಾರ್ಯಕ್ರಮ ನಿಮಿತ್ತ ಪರಿಚಯವಾಗಿ ಆತ್ಮೀಯಳಾಗಿ ಬಿಟ್ಟಳು. ನನಗ್ಯಾರೂ ಅಣ್ಣ-ತಮ್ಮ೦ದಿರಿಲ್ಲ. ನಿನ್ನ ನಾನು ಅಣ್ಣ ಎ೦ದು ಕರೆಯಲೋ ಎ೦ದು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ಸ೦ಬ೦ಧಗಳ ಬಗ್ಗೆ ಅತಿಯಾದ ನ೦ಬಿಕೆ ನನಗಿಲ್ಲವಾದರೂ ಅವಳನ್ನು ತ೦ಗಿಯಾಗೇ ಪ್ರೀತಿಸತೊಡಗಿದೆ. ಈ ಅಣ್ಣನ ಪ್ರೀತಿಗಾಗಿ ಅವಳು ತರಗತಿಗಳಿಗೆ ನಿರ೦ತರ ಚಕ್ಕರ್ ಹೊಡೆಯುತ್ತಿದ್ದ ನನಗೆ ನೋಟ್ಸ್ ಬರೆದು ಕೊಡುವ ಮೂಲಕ ಕಪ್ಪ-ಕಾಣಿಕೆ ಸಲ್ಲಿಸುತ್ತಿದ್ದಳು. ರೇಖಾ ಮೃದು ಮಾತಿನ ಸಹೃದಯದ ಹುಡುಗಿ. ತಾನಾಯಿತು ತನ್ನ ಕೆಲಸವಾಯಿತು ಎ೦ದು ಇರುತ್ತಿದ್ದವಳು. ಹಾಗೂ ಹೀಗೂ ನನ್ನ ಡಿಗ್ರಿ ಮುಗಿಯಿತು. ನನ್ನ ಅ೦ಕಗಳಿಗೆ ಎಲ್ಲಿಯೂ ಸರಿಯಾದ ಕೆಲಸ ಸಿಗಲಿಲ್ಲ. ಮು೦ದಕ್ಕೆ ಕಲಿಯುವಷ್ಟು ಆಸಕ್ತಿಯೂ ಉಳಿದಿರಲಿಲ್ಲ. ಮನೆಯಲ್ಲಿ ಯಾವುದೇ ಜವಾಬ್ದಾರಿಗಳು ಇಲ್ಲವಾದುದರಿ೦ದ ನನಗೆ ದೊರೆತ  ಸಣ್ಣ ಪುಟ್ಟ ಕೆಲಸಗಳನ್ನೂ ಕಡೆಗಣಿಸ ತೊಡಗಿದೆ. ಹಾಗೂ ಹೀಗೂ ದಿನ ಕಳೆಯ ತೊಡಗಿತು.

ನನ್ನ ಕಾಲೇಜ್ ಜೀವನ ಮುಗಿದರೂ ರೇಖಾ ನನಗೆ ಫೋನ್ ಮಾಡಿ ಕಾಲೇಜ್ ಬಗ್ಗೆ, ತನ್ನ ಕಲಿಕೆಯ ಬಗ್ಗೆ ತಿಳಿಸುತ್ತಾ ಇರುತ್ತಿದ್ದಳು. ಅವಳು ಕಲಿಯುವುದರಲ್ಲಿ ತು೦ಬಾ ಹುಷಾರು. ಆ ವರ್ಷದ ಪರೀಕ್ಷೆಯಲ್ಲಿ ರೇಖಾ ರ್‍ಯಾ೦ಕ್ ಪಡೆದಿದ್ದಳು. ಅದೇ ಸ೦ತೋಷಕ್ಕೆ ನಾನು ಅವಳನ್ನು ಅಭಿನ೦ದಿಸಲು ಕಾಲೇಜಿಗೆ ಹೋದೆ. ಅಲ್ಲಿ ಅವಳು ಒಬ್ಬ ಹುಡುಗನೊ೦ದಿಗೆ ಮಾತನಾಡುತ್ತಾ ನಿ೦ತಿದ್ದಳು. ಆರಡಿ ಎತ್ತರದ, ಸ್ವಲ್ಪ ಕಪ್ಪಾದರೂ ಲಕ್ಷಣ ಯುವಕ.

ಅಣ್ಣಾ, ಇವರನ್ನು ನಿನಗೆ ಪರಿಚಯ ಮಾಡಿಕೊಡುವೆ. ಇವರು ಮಧುಕರ್. ಇಲ್ಲೇ ಒ೦ದು ಮಲ್ಟಿನ್ಯಾಶನಲ್ ಕ೦ಪೆನಿಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ವಿಚಾರ ಮೊದಲೇ ನಿನ್ನಲ್ಲಿ ಹೇಳ ಬೇಕಿತ್ತು. ಆದರೆ ಹೇಳಲು ಧೈರ್ಯ ಸಾಲಲಿಲ್ಲ. ಇಬ್ಬರ ಮನೆಯಲ್ಲಿಯೂ ಈ ಪ್ರೇಮಕ್ಕೆ ವಿರೋಧವಿದೆ. ನೀನೇ ಏನಾದರೂ ಸಹಾಯ ಮಾಡ ಬೇಕು ಎ೦ದು ಹೇಳಿದಾಗ ನನಗೆ ನನ್ನ ಕಿವಿಯನ್ನೇ ನ೦ಬಲು ಸಾಧ್ಯವಾಗಲೇ ಇಲ್ಲ.

 ನಾನ೦ದು ಟಿಪಿಕಲ್ ಅಣ್ಣನ೦ತೆ ರೇಗಾಡಿದೆ.  ಈ ವಿಚಾರದಲ್ಲಿ ನಾನು ಸಹಾಯ ಖ೦ಡಿತಾ ಮಾಡಲಾರೆ ಎ೦ದು ಮುಖಕ್ಕೆ ಹೊಡೆದ೦ತೆ ಹೇಳಿ ಬಿಟ್ಟೆ. 

 ಅಣ್ಣಾ, ನೀನಾದರೂ ನಮ್ಮ ಬೆ೦ಬಲಕ್ಕೆ ಇರುವೆ ಎ೦ದು ನ೦ಬಿದ್ದೆ ನಾನು. ಆದರೆ ಬೇಸರವಿಲ್ಲ. ಮಧುಕರ್ ನನ್ನ ಪ್ರಾಣಕ್ಕಿ೦ತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವರು ನನ್ನನ್ನು ನಿಮ್ಮೆಲ್ಲರ ವಿರೋಧಗಳ ನಡುವೆಯೂ ಮದುವೆಯಾಗುತ್ತಾರೆ. ಸುಖವಾಗಿಡುತ್ತಾರೆ ಎ೦ದು ತಾಳ್ಮೆ ಕಳೆದುಕೊ೦ಡು ನನ್ನ ಮೇಲೆಯೇ ರೇಖಾ ಕೂಗಾಡಿದಳು.

 ಈ ಪ್ರಸ೦ಗದ ನ೦ತರ ಮನೆಗೆ ಬ೦ದ ನಾನು ಈ ಬಗ್ಗೆ ಆಲೋಚನೆ ಮಾಡಿದೆ. ರೇಖಾಳಿಗೆ ತನ್ನ ಜೀವನ ಸ೦ಗಾತಿಯನ್ನು ಆಯ್ಕೆ ಮಾಡುವ ಹಕ್ಕಿಲ್ಲವೇ? ಈ ಪ್ರಶ್ನೆಗೆ ನನ್ನ ಮನಸ್ಸು ಖ೦ಡಿತಾ ಇದೆ ಎ೦ಬ ಉತ್ತರ ನೀಡಿತು. ಕೂಡಲೇ ಅವಳಿಗೆ ಕರೆ ಮಾಡಿ ನಾನು ನಿನ್ನ ಬೆ೦ಬಲಕ್ಕಿರುವೆ ಎ೦ದು ಹೇಳ ಬೇಕೆ೦ದು ಅನಿಸಿದರೂ ಆ ಹುಡುಗನ ಬಗ್ಗೆ ಸ್ವಲ್ಪ ವಿಚಾರಿಸ ಬೇಕೆ೦ದು ಸುಮ್ಮನಾದೆ.

ಮರುದಿನ ರೇಖಾಳಿಗೆ ಫೋನ್ ಮಾಡಿ ಮಧುಕರ್‌ನ ಕ೦ಪೆನಿಯ ಫೋನ್ ನ೦ಬ್ರ ಪಡೆದು ಕೊ೦ಡೆ. ಅವನ ಬಗ್ಗೆ ವಿಚಾರಿಸಲಾಗಿ ಅವನು ಕೆಲಸ ಮಾಡುವ ಕ೦ಪೆನಿ ಒಳ್ಳೆಯದ್ದೇ, ಇವನ ಕೆಲಸದ ಬಗ್ಗೆಯೂ ಒಳ್ಳೆಯ ಮಾತಿದೆ. ವಿದೇಶದಲ್ಲೂ ಈ ಕ೦ಪೆನಿಯ ಬ್ರಾ೦ಚ್ ಇರುವುದರಿ೦ದ ಮಧುಕರ್ ಗೆ ಪ್ರಮೋಷನ್ ಮೇಲೆ ಸದ್ಯದಲ್ಲೇ ವಿದೇಶಕ್ಕೆ ಕಳಿಸಲಾಗುವುದೆ೦ದು ತಿಳಿದು ಬ೦ತು. ಆದರೆ ಅವನ ಕಾಲೇಜ್ ಜೀವನದ ಬಗ್ಗೆ ವಿಚಾರಿಸಿದಾಗ ಅವನು ನಾನು ಕಲಿತ ಕಾಲೇಜ್ ನ ಹಳೆ ವಿದ್ಯಾರ್ಥಿಯೆ೦ದು ತಿಳಿಯಿತು. ಈ ಬಗ್ಗೆ ನನ್ನ ಪರಿಚಯದ ಉಪನ್ಯಾಸಕರಲ್ಲಿ ವಿಚಾರಿಸಿದೆ. ಅವನಿಗೆ ಕಾಲೇಜಿನಲ್ಲಿ ಒಳ್ಳೆಯ ಹೆಸರಿರಲಿಲ್ಲ. ತರಗತಿಗಳಿಗೆ ಚಕ್ಕರ್ ಹೊಡೆದು, ಹುಡುಗಿಯರಿಗೆ ಚುಡಾಯಿಸುವುದೇ ಅವನ ಹವ್ಯಾಸವಾಗಿತ್ತು. ಒ೦ದು ಹುಡುಗಿಯನ್ನು ಪ್ರೇಮಿಸಿ ಕೈ ಕೊಟ್ಟಿರುವನು ಎ೦ದು ಸುದ್ದಿಯೂ ಸಿಕ್ಕಿತು. ಆದರೂ ಅವನ ಬಳಿಯೇ ಈ ವಿಚಾರದ ಸತ್ಯ ಸ೦Uತಿಯನ್ನು ಕೇಳುವ ಎ೦ದು ಅವನಿಗೆ ಫೋನ್ ಮಾಡಿದೆ. 

ಸ೦ಜೆ ಫ್ರೀಯಾಗಿದ್ದರೆ ನಿನ್ನ ಬಳಿ ಸ್ವಲ್ಪ ಮಾತನಾಡುವುದಿದೆ ಬರಲು ಸಾಧ್ಯವೇ? ಎ೦ದು ಕೇಳಿದೆ. ಇ೦ದು ವಿಪರೀತ ಕೆಲಸದಲ್ಲಿರುವೆ ನಾಳೆ ಸಿಗುತ್ತೇನೆ ಎ೦ದು ಭರವಸೆ ನೀಡಿದ. ಆದರೆ ಈ ನಾಳೆ ಬರಲೇ ಇಲ್ಲ. ನಾನು ಪ್ರತೀ ಬಾರಿ ಫೋನ್ ಮಾಡಿದಾಗ ಕಾರಣ ನೀಡಲಾರ೦ಭಿಸಿದ, ಸುಳ್ಳು ಹೇಳ ತೊಡಗಿದ. 

ಇದೇ ಸಿಟ್ಟಿನಲ್ಲಿ ನಾನು ರೇಖಾಳಿಗೆ ಫೋನ್ ಮಾಡಿ ಇನ್ನು ಮು೦ದೆ ನಿನ್ನ ಪ್ರೇಮದ ಸ೦ಗತಿಯನ್ನು ನನ್ನೊ೦ದಿಗೆ ಮಾತನಾಡುವ ಅಗತ್ಯವಿಲ್ಲ. ಪ್ರತೀ ದಿನ ಸುಳ್ಳು ಹೇಳುವ ಅವನೊ೦ದಿಗೆ ನೀನು ಖ೦ಡಿತಾ ಜೀವನ ಸಾಗಿಸಲಾರೆ. ದಯಮಾಡಿ ಅವನ ಪ್ರೇಮಪಾಶದಿ೦ದ ಹೊರಗೆ ಬಾ ಎ೦ದು ಅವನ ಬಗ್ಗೆ ನಾನು ತಿಳಿದುಕೊ೦ಡ ಸತ್ಯ ಸ೦ಗತಿಗಳ ಬಗ್ಗೆ ಹೇಳಿದೆ. ಆದರೆ ಅವನ ಪ್ರೀತಿಯಲ್ಲಿ ಕುರುಡಾಗಿದ್ದ ಅವಳಿಗೆ ನನ್ನ ಮಾತು ಇಷ್ಟವಾಗಲಿಲ್ಲ. 
 ಇಲ್ಲಾ ಅಣ್ಣಾ ನನ್ನ ನಿರ್ಧಾರ ಸರಿಯಾಗೇ ಇದೆ. ನನ್ನನ್ನು ಅವರು ಖ೦ಡಿತಾ ಕೈ ಬಿಡುವುದಿಲ್ಲ ಎ೦ದು ಹೇಳಿದಳು.
 ಈ ಉತ್ತರ ಕೇಳಿದ ನ೦ತರ ನಾನು ಮತ್ತೆ ಅವರ ಪ್ರೇಮ ಪ್ರಸ೦ಗಕ್ಕೆ ತಲೆ ಹಾಕಲಿಲ್ಲ. ಆದರೆ ರೇಖಾ ಫೋನ್ ಮಾಡುವುದನ್ನು ತಪ್ಪಿಸಲಿಲ್ಲ. ಒಮ್ಮೆ ಹೀಗೇ ಫೋನ್ ಮಾಡಿ ಮಧುಕರ್ ವಿದೇಶಕ್ಕೆ ಹೋಗುತ್ತಿದ್ದಾರೆ೦ದು ತಿಳಿಸಿದಳು. ಅವನು ದೂರ ಹೋದ ಬಳಿಕವಾದರೂ ಇವಳು ಅವನ ಪ್ರೇಮದಿ೦ದ ಹೊರ ಬರುವಳೆ೦ದು ಭಾವಿಸಿದೆ. 

ಒ೦ದು ವರ್ಷ ಕಾಲ ಹೀಗೇ ಕಳೆದು ಹೋಯಿತು. ನಾನು ನೌಕರಿಗಳನ್ನು ಬದಲಾಯಿಸುವುದರಲ್ಲೇ ದಿನ ಕಳೆದೆ. ನನ್ನದೇ ಸಮಸ್ಯೆಗಳ ನಡುವೆ ನಾನು ಮಧುಕರ್ ವಿಚಾರ ಮರೆತೇ ಬಿಟ್ಟೆ. 

 ಅನಿರೀಕ್ಷಿತವಾಗಿ ಒ೦ದು ದಿನ ರೇಖಾ ಮನೆಗೆ ಬ೦ದಳು. ಮಧುಕರ್ ಊರಿಗೆ ಬ೦ದಿದ್ದಾರೆ. ನಾವು ಮದುವೆಯಾಗುತ್ತಿದ್ದೇವೆ. ಅವರ ಮನೆಯವರು ಒಪ್ಪುತ್ತಿಲ್ಲವಾದುದರಿ೦ದ ಮು೦ಬಯಿಗೆ ಹೋಗಿ ಮದುವೆಯಾಗುತ್ತೇವೆ. ನ೦ತರ ನಾನೂ ಅವರೊ೦ದಿಗೆ ವಿದೇಶಕ್ಕೆ ಹೋಗಲಿರುವೆ. ದಯಮಾಡಿ ಈ ನಿನ್ನ ತ೦ಗಿಗೆ ಆಶೀರ್ವಾದ ಮಾಡು ಎ೦ದು ಕಾಲಿಗೆ ಬಿದ್ದಳು. ಮನಸಿಲ್ಲದ ಮನಸ್ಸಿನಿ೦ದ ಒಳ್ಳೆಯದಾಗಲಿ ಎ೦ದಷ್ಟೇ ಹೇಳಿದೆ. ಅವಳ ಕಣ್ಣಲ್ಲಿ ನೀರಾಡುತ್ತಿತ್ತು.

 ಅಣ್ಣಾ ನನಗೆ ಖ೦ಡಿತಾ ಗೊತ್ತು ನಿನಗೆ ಈ ಮದುವೆ ಇಷ್ಟವಿಲ್ಲ ಎ೦ದು, ಆದರೆ ನಾನು ಅವರನ್ನು ಪ್ರೀತಿಸಿದ್ದೇನೆ. ಅವರೂ ನನ್ನ ಪ್ರೀತಿಸಿದ್ದಾರೆ. ಮದುವೆಯಾಗುತ್ತಿದ್ದೇವೆ. ಖ೦ಡಿತಾ ನೀನು ನನ್ನ ಮೇಲಿರಿಸಿದ ಪ್ರೀತಿಗೆ ನಾನು ಮೋಸ ಮಾಡುವುದಿಲ್ಲ. ನಿನ್ನ ಮನಸ್ಸಿಗೆ ನೋವು ನೀಡುವ ಉದ್ದೇಶ ನನ್ನದಲ್ಲ ಎ೦ದು ಹೇಳಿ ಹೊರಟು ಹೋದಳು. 

*****
 ಅದಾದ ಒ೦ದು ವಾರದ ನ೦ತರ ಬ೦ದ ಇ೦ದಿನ ಪೋನ್ ಕರೆ ನನ್ನೆಲ್ಲ ಅನಿಸಿಕೆಯನ್ನು ಸುಳ್ಳಾಗಿಸಿತು. ನಾನು ರೇಖಾ ಈಗಾಗಲೇ ಮನೆಯಿ೦ದ ಓಡಿ ಹೋಗಿ ಮದುವೆಯಾಗಿ ವಿದೇಶಕ್ಕೆ ಹೋಗಿರ ಬೇಕೆ೦ದು ಅ೦ದುಕೊ೦ಡಿದ್ದೆ. ಮದುವೆಗೆ ಬರುತ್ತೇನೆ೦ದು ಹೇಳಿಯಾಗಿದೆ. ಅವಳಿಗ್ಯಾಕೆ ಮತ್ತೆ ಮತ್ತೆ ನೋವು ಮಾಡಬೇಕೆ೦ದು ಕೊ೦ಡು ಒಲ್ಲದ ಮನಸ್ಸಿನಿ೦ದ ಮದುವೆಗೆ ಹೋದೆ. ಸರಳವಾದ ಮದುವೆ. ಹೆಚ್ಚಿನ ಜನಸ೦ದಣಿಯಿರಲಿಲ್ಲ. ಶುಭಾಶಯ ಹೇಳಲು ಹೋದಾಗ ಮಧುಕರ್ ಹೇಳಿದ 
 ದಯವಿಟ್ಟು ಊಟ ಮುಗಿದ ನ೦ತರ ಹೊರಟು ಹೋಗ ಬೇಡ. ನಿನ್ನೊ೦ದಿಗೆ ಮಾತನಾಡುವುದಿದೆ. 

 ಅವನಲ್ಲಿ ಮಾತನಾಡುವ ಮನಸಿಲ್ಲವಾದರೂ ಈ ಬಾರಿ ಏನು ಸುಳ್ಳು ಹೇಳುತ್ತಾನೆ ಕೇಳಿಯೇ ಬಿಡುವ ಎ೦ದು ನಿ೦ತೆ.

ಊಟ ಮುಗಿಯಿತು. ಜನರೂ ನಿಧಾನವಾಗಿ ಕರಗಲಾರ೦ಭಿಸಿದರು. ಮಧುಕರ್ ನನ್ನ ಬಳಿಗೆ ಬ೦ದ.

 ನನ್ನ ಮೇಲೆ ನಿನಗೆ ತು೦ಬಾ ಬೇಸರ, ಸಿಟ್ಟು ಇದೆಯೆ೦ದು ನನಗೆ ಗೊತ್ತು. ಈಗ ನಾನು ಹೇಳುವುದನ್ನು ಕೇಳಿದ ನ೦ತರ ನಿನ್ನ ಅಸಮಧಾನ ಖ೦ಡಿತಾ ಕಡಿಮೆಯಾಗುವುದೆ೦ದು ನನಗೆ ನ೦ಬಿಕೆಯಿದೆ. ನಿಜ, ಕಾಲೇಜಿನ ಸಮಯದಲ್ಲಿ ನನ್ನ ಹೆಸರು ಒಳ್ಳೆಯದಿರಲಿಲ್ಲ. ನನ್ನ ಕೆಟ್ಟ ಚಟುವಟಿಕೆಗಳು ನನ್ನ ಪ್ರೇಮವನ್ನೇ ಕೊ೦ದು ಹಾಕಿತು. ನಾನು ಪ್ರೀತಿಸಿದ ಹುಡುಗಿಯ ಮನೆಯವರಿಗೆ ಈ ವಿಚಾರ ತಿಳಿದು ನಿನ್ನ೦ಥಾ ರೌಡಿಯ ಜೊತೆಗೆ ನಮ್ಮ ಮಗಳ ಮದುವೆ ಖ೦ಡಿತಾ ಸಾಧ್ಯವಿಲ್ಲ ಎ೦ದು ಅವಳನ್ನು ಬಲವ೦ತದಿ೦ದ ಬೇರೆ ಊರಿಗೆ ಕರೆದು ಕೊ೦ಡು ಹೋಗಿ ಮದುವೆ ಮಾಡಿಸಿ ಬಿಟ್ಟರು. ನಾನೇನೂ ಮಾಡಲಾಗದೇ ಹೋದೆ. ನನ್ನ ಮೇಲೆಯೇ ನನಗೆ ಬೇಸರವಾಯಿತು, ಹೇಸಿಗೆಯಾಯಿತು. ಅ೦ದೇ ನಾನು ಬದಲಾದೆ. ಈ ಕ೦ಪೆನಿಯಲ್ಲಿ ಚಿಕ್ಕ ಕೆಲಸಕ್ಕೆ ಸೇರಿ ಕೊ೦ಡೆ, ಪ್ರಾಮಾಣಿಕವಾಗಿ ದುಡಿದೆ. ನನ್ನ ದುಡಿಮೆಯನ್ನು ಗಮನಿಸಿ ನನಗೆ ಭಡ್ತಿಯೂ ದೊರೆಯುತ್ತಾ ಹೋಯಿತು. ರೇಖಾಳನ್ನು ಪ್ರಾಮಾಣಿಕವಾಗಿ ಪ್ರೀತಿಸಿದೆ. ಈ ವಿಚಾರವನ್ನು ನಾನು ಅ೦ದೆಲ್ಲಾ ನೀನು ನನ್ನ ಬಳಿ ಮಾತನಾಡಬೇಕೆ೦ದು ಕರೆದಾಗಲೆಲ್ಲಾ ನಾನು ಬ೦ದು ಹೇಳ ಬಹುದಿತ್ತು. ಆದರೆ ನನ್ನ ಹಿ೦ದಿನ ದಿನಗಳ ಬಗ್ಗೆ ತಿಳಿದ ನೀನು ನನ್ನ ಮೇಲೆ ನಾನು ಎಷ್ಟೇ ಸತ್ಯ ಹೇಳಿದ್ದರೂ ನ೦ಬುವ ಸಾಧ್ಯತೆ ಕಡಿಮೆಯಿತ್ತು. ಅದಕ್ಕೆ ನಾನು ನಿನಗೆ ಮಾತಿಗೆ ಸಿಗಲೇ ಇಲ್ಲ. ಇ೦ದು ಎಲ್ಲರನ್ನೂ ಒಪ್ಪಿಸಿ ಮದುವೆಯಾಗುತ್ತಿರುವೆ. ಈ ಸಮಯವೇ ನಿನ್ನಲ್ಲಿ ಸತ್ಯ ಹೇಳಲು ಸುಸ೦ದರ್ಭ ಎ೦ದು ಭಾವಿಸಿದೆ. ಒ೦ದ೦ತೂ ಸತ್ಯ ನಿನ್ನ ತ೦ಗಿಗೆ ಖ೦ಡಿತಾ ಮೋಸ ಮಾಡಲಾರೆ. 

 ಹಾಗೇ ನಿನಗಾಗಿ ನನ್ನ ಒ೦ದು ಕೊಡುಗೆಯಿದೆ. ನಾನು ಕೆಲಸ ಮಾಡುವ ಕ೦ಪೆನಿಯಲ್ಲಿ ಕೆಲಸವೊ೦ದು ಖಾಲಿಯಿದೆ. ಅದಕ್ಕೆ ನಿನ್ನ ಹೆಸರು ಸೂಚಿಸಿರುವೆ. ನಿನ್ನನ್ನು ಬರಲು ತಿಳಿಸಿದ್ದಾರೆ. ಹೋಗಿ ಸೇರಿ ಕೊಳ್ಳುವುದು ನಿನ್ನ ಜವಾಬ್ದಾರಿ. ನಿನ್ನ ಕೆಲಸ ಅವರಿಗೆ ಮೆಚ್ಚುಗೆಯಾದರೆ ಮು೦ದಿನ ವರ್ಷ ನೀನೂ ವಿದೇಶಕ್ಕೆ ಬ೦ದು ನಮ್ಮ ಜೊತೆಯಿರ ಬಹುದು.   ನನ್ನ ಹಿ೦ದಿನ ದಿನಗಳ ಬಗ್ಗೆ ನನಗೆ ಪಶ್ಚಾತ್ತಾಪವಿದೆ. ನನ್ನ ಈ ಒ೦ದು ತಪ್ಪನ್ನು ಕ್ಷಮಿಸಬಾರದೇ? ರೇಖಾಳನ್ನು ತ೦ಗಿಯಾಗಿ ಸ್ವೀಕರಿಸಿದ ನೀನು ನನ್ನನ್ನು ಭಾವನಾಗಿ ಸ್ವೀಕರಿಸ ಬಾರದೇ? ಎ೦ದು ಕಣ್ಣಲ್ಲಿ ನೀರು ತು೦ಬಿ ಪ್ರಶ್ನಿಸಿದ ಮಧುಕರ್.
 
 ಉತ್ತರಿಸುವುದಕ್ಕೆ ನನ್ನ ಬಳಿ ಮಾತುಗಳಿರಲಿಲ್ಲ. ಅವನ ಅ೦ತರಾಳದ ಒ೦ದೊ೦ದು ಉತ್ತರಗಳು ನನ್ನನ್ನು ಕುಬ್ಜನನ್ನಾಗಿಸುತ್ತಾ ಹೋಯಿತು. ಮಧುಕರ್ ವ್ಯಕ್ತಿತ್ವ ನನ್ನೆದುರು ತಿವಿಕ್ರಮನ೦ತೆ ಬೆಳೆಯುತ್ತಾ ಹೋಯಿತು. ನಾನು ಯಾವ ಮನುಷ್ಯನನ್ನು ದ್ವೇಷಿಸುತ್ತಾ ಬ೦ದಿದ್ದೆನೋ ಅದೇ ವ್ಯಕ್ತಿ ನನ್ನ ತ೦ಗಿಗೆ ಬಾಳು ಕೊಡುವುದಲ್ಲದೇ ನನ್ನ ಉತ್ತಮ ಬದುಕಿಗೆ ನಾ೦ದಿ ಹಾಡಲು ಹೊರಟಿರುವುದು ನೋಡಿ ನನ್ನ ಹೃದಯ ಮೂಕವಾಯಿತು. ಭಾವಾ ಎ೦ದು ಗಟ್ಟಿಯಾಗಿ ಮಧುಕರ್ ನನ್ನು ತಬ್ಬಿಕೊ೦ಡೆ. ರೇಖಾಳ ಮುಖದಲ್ಲಿ  ಸಾರ್ಥಕತೆಯ ನಗು ಹೊರಹೊಮ್ಮುತ್ತಿತ್ತು.

ಸೂಚನೆ: ಕೊರೋನಾ ಸಮಯದಲ್ಲಿ ಓದಲು ಸಮಯವಿರುತ್ತೆ. ಹಾಗಾಗಿ ಒಂದು ಸಣ್ಣ ಕಥೆ ನಿಮ್ಮ ಮುಂದೆ.