ಟೈಟನ್ ನತ್ತ ಊಜಿ ನೊಣ (ಭಾಗ ೧)

ಟೈಟನ್ ನತ್ತ ಊಜಿ ನೊಣ (ಭಾಗ ೧)

ಮಾನವ ಅಂತರ್ ಗ್ರಹ ಯಾತ್ರಿಯಾಗಿ ಚಂದ್ರನನ್ನು ಮುಟ್ಟಿದ್ದೇ ಒಂದು ಸಾಹಸಗಾಥೆ. ಕಳೆದ ಕೆಲವು ವರ್ಷಗಳಿಂದ ರೋಬೋಗಳು ಮಂಗಳ ಗ್ರಹದ ಮೇಲೆ ಇಳಿದು ಜೀವಿಗಳಿಗಾಗಿ ಜಾಲಾಡುತ್ತಿರುವ ವಿಷಯ ನಮಗೆ ತಿಳಿದೇ ಇದೆ. ಇಂಥ ಬೆಳವಣಿಗೆಗಳ ಸಂದರ್ಭದಲ್ಲಿ ಯಕಶ್ಚಿತ್ ಒಂದು ‘ಊಜಿ ನೊಣ' (ಒಂದು ಜಾತಿಯ ದೊಡ್ದ ನೊಣ) ಪ್ರಪ್ರಥಮ ಅಂತ್ ಗ್ರಹ ಯಾತ್ರಿಯಾಗಲಿದೆಯೆಂದರೆ ನೀವು ನಂಬುತ್ತೀರಾ? ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಭೂಮಿಯಿಂದ ಬಹುದೂರದಲ್ಲಿರುವ ಶನಿ ಗ್ರಹದ ಉಪಗ್ರಹ ‘ಟೈಟಾನ್' ಗೆ ಈ ಊಜಿ ನೊಣದ ಮಹಾನ್ ಪಯಣ !

ಊಜಿ ನೊಣ ಟೈಟಾನ್ ಗೆ ಭೇಟಿ ನೀಡಿದಾಗ ನೀವೇನು ನೋಡಬಹುದು? ಸದ್ಯಕ್ಕೆ ಭೂಮಿಯ ಮೇಲೆ ಟೈಟಾನ್ ಉಪಗ್ರಹದ ವಾತಾವರಣವನ್ನು ಕೃತಕವಾಗಿ ನಿರ್ಮಾಣ ಮಾದಲಾಗಿದೆ. ಈ ವಾತಾವರಣದಲ್ಲಿ ಊಜಿ ನೊಣಗಳನ್ನು ಉಪಸ್ಥಿತಿಗೊಳಿಸುವ ವಿವಿಧ ಸನ್ನಿವೇಶಗಳನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಈ ಕೃತಕ ವಾತಾವರಣದಲ್ಲಿ ಈ ಊಜಿ ನೊಣದ ಪ್ರಥಮ ಸಂತತಿಗಳ ಸತ್ತ ಪಳೆಯುಳಿಕೆಗಳನ್ನು ಹರಡಲಾಗಿರುತ್ತದೆ. ಈ ಎಲ್ಲ ಕೃತಕ ವಾತಾವರಣಗಳೂ ಊಜಿ ನೊಣಕ್ಕೆ ಕೃತಕ ಟೈಟಾನನ್ನು ನಿರ್ಮಾಣ ಮಾಡಿಕೊಡಲಿವೆ. ಈ ಪ್ರಥಮ ಹಂತದ ಪ್ರಯೋಗ ಇನ್ನು ಕೆಲವೇ ವರ್ಷಗಳಲ್ಲಿ ಕೈಗೊಡಲಿದೆ.

ಟೈಟಾನ್ ಅನ್ನೇ ವಿಜ್ಞಾನಿಗಳು ಏಕೆ ಆರಿಸಿದ್ದಾರೆ? : ನಿಮಗೆ ತಿಳಿದಿರಲಿ, ಟೈಟಾನ್ ಉಪಗ್ರಹದ ವಾತಾವರಣ ಬಹುಮಟ್ಟಿಗೆ ಭೂಮಿಯ ವಾತಾವರಣಕ್ಕೆ ಸರಿಹೊಂದಬಲ್ಲದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಟೈಟಾನ್ ನಲ್ಲಿ ಸಾಕಷ್ಟು ಉಷ್ಣತೆ ಏರಿಕೆಯಾದರೆ ಜೀವಿಗಳು ಉಳಿದು ಬೆಳೆಯುವ ಸಾಧ್ಯತೆಗಳು ಕಂಡು ಬಂದಿವೆ. ಮುಂದೊಂದು ದಿನ ಇದು ಜೀವಿಗಳ ನೆಲೆಗೆ ಪ್ರಾಶಸ್ತ್ಯ ಉಪಗ್ರಹವಾಗಬಲ್ಲದು ಎಂದು ವಿಜ್ಞಾನಿಗಳು ಯೋಚಿಸಿದ್ದಾರೆ.

ಸೂರ್ಯನ ಕೆಂಪು ದೈತ್ಯ ಸ್ಥಿತಿಯ ನಂತರದ ಬಹುಮುಖ್ಯ ಸಂಗತಿಯೆಂದರೆ, ಸುಮಾರು ೪೦೦ ಕೋಟಿ ವರ್ಷಗಳ ನಂತರ ಸೂರ್ಯ ಕೆಂಪು ದೈತ್ಯ ಸ್ಥಿತಿಯನ್ನು ತಲುಪಲಿದ್ದಾನೆ. ಈ ಸ್ಥಿತಿಯ ನಂತರ ಸೂರ್ಯ ಉಬ್ಬಿ ದೊಡ್ಡವನಾಗಲಿದ್ದಾನೆ. ಆಗ ಭೂಮಿಯ ಉಷ್ಣತೆ ಅಪಾರವಾಗಿ ಹೆಚ್ಚಿ ಇಡೀ ಜೀವ ಸಂಕುಲ ನಿರ್ನಾಮವಾಗಲಿದೆ. ಇದೇ ಸಂದರ್ಭದಲ್ಲಿ ಸೂರ್ಯನಿಂದ ಬಹುದೂರದಲ್ಲಿರುವ ಟೈಟಾನ್ ಉಪಗ್ರಹದ ಉಷ್ಣತೆಯಲ್ಲಿ ಸಾಕಷ್ಟು ಏರಿಕೆಯಾಗಲಿದೆ. ಅಂದ ಹಾಗೆ ‘ಟೈಟಾನ್' ನ ಈಗಿನ ಉಷ್ಣತೆ ಮೈನಸ್ ೧೯೦ ಡಿಗ್ರಿ ಸೆಲ್ಸಿಯಸ್, ಸೂರ್ಯ ಕೆಂಪು ದೈತ್ಯ ಸ್ಥಿತಿಯಲ್ಲಿ ಹಬ್ಬಿದ ನಂತರ ಅದರ ಉಷ್ಣತೆ ಭೂಮಿಯ ಈಗಿನ ಉಷ್ಣತೆಯಷ್ಟು ಹೆಚ್ಚಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಜಾಚಾರ. ಇದಕ್ಕೆ ಪೂರಕವಾಗಿ ಇಲ್ಲಿಯ ವಾತಾವರಣ ಒತ್ತಡ ಭೂಮಿಯ ವಾತಾವರಣದ ಒತ್ತಡದ ಶೇ.೫೦ರಷ್ಟು  ಹೆಚ್ಚಾಗಿದೆ.

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ