ಟೈಟಾನ್ ನತ್ತ ಊಜಿ ನೊಣ (ಭಾಗ ೨)

ಟೈಟಾನ್ ನತ್ತ ಊಜಿ ನೊಣ (ಭಾಗ ೨)

ಈ ಊಜಿ ನೊಣ ಜೀವ ವಿಜ್ಞಾನದಲ್ಲೇ ಒಂದು ಮಾದರಿ ಜೀವಿಯಾಗಿದೆ. ಇದರ ದೇಹದಲ್ಲಿರುವ ಜೀನ್ಸ್ ಗಳು ಮಾನವ ದೇಹದಲ್ಲಿರುವ ಕೆಲವು ಜೀನ್ಸ್ ಗಳಿಗೆ ಹೊಂದಿಕೆಯಾಗುತ್ತಿವೆ. ಈ ಊಜಿ ನೊಣ ನಮಗೆ ಗೊತ್ತಿರುವ ಜೀವಿಗಳಲ್ಲೇ ಅತ್ಯಂತ ಕರಾರುವಕ್ಕಾದ ಜೈವಿಕ ಲಕ್ಷಣಗಳನ್ನು ಪ್ರದರ್ಶಿಸುತ್ತಿದೆ. ಅಲ್ಲದೆ ಇದನ್ನು ಒಂದು ಯಂತ್ರಕ್ಕೆ ಹೋಲಿಸಬಹುದು ! ಇದರಿಂದಾಗಿ ಈ ಊಜಿ ನೊಣದ ಮೇಲಿನ ಟೈಟಾನ್ ಪ್ರಯೋಗಗಳು ಮಾನವನ ದೇಹದ ಮೇಲೆಯೇ ನಡೆಸಿದ ಪ್ರಯೋಗಗಳೆಂದೇ ಭಾವಿಸಬಹುದು.

ಟೈಟಾನ್ ಗ್ರಹದ ವಾತಾವರಣವನ್ನು ಹೇಗೆ ಪುನರ್ ನಿರ್ಮಾಣ ಮಾಡಲಾಗಿದೆ? : ಭೂಮಿಯ ಮೇಲಿನ ಟೈಟಾನ್ ಕೃತಕ ವಾತಾವರಣದಲ್ಲಿ ಒಂದು ದೊಡ್ಡ ಸಿಲಿಂಡರ್ ಆಕೃತಿಯ ಕೋಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಗಾಳಿಯಂತ್ರದ ಸಹಾಯದಿಂದ ಒತ್ತಡವನ್ನು ಹೆಚ್ಚಿಸಲಾಗುತ್ತದೆ. ಮೈನಸ್ ೧೯೦ ಡಿ. ಸೆಂ. ಉಷ್ಣತೆಯಲ್ಲಿ ಎಲ್ಲ ನೊಣಗಳು ಸತ್ತೇ ಹೋಗುತ್ತವೆ. ಆದ್ದರಿಂದ ಉಷ್ಣತೆಯನ್ನು ಕ್ರಮೇಣವಾಗಿ ಮತ್ತು ಹಂತಹಂತವಾಗಿ ಕಡಿಮೆ ಮಾಡುತ್ತಾ ಹೋಗಲಾಗುತ್ತದೆ. ಎಲ್ ಇ ಡಿ ಅಲ್ಟ್ರಾವಯಲೆಟ್ ಬೆಳಕನ್ನು ಚೆಲ್ಲಿ ಕೃತಕ ವಿಕಿರಣಗಳನ್ನು ಈ ವಾತಾವರಣದಲ್ಲಿ ಬೀಳುವಂತೆ ಮಾಡಲಾಗುತ್ತದೆ. ಟೈಟಾನ್ ಉಪಗ್ರಹ ಆಕಾಶ ಕಿತ್ತಳೆ ಬಣ್ಣದಿಂದ ಕೂಡಿದೆ, ಇದನ್ನು ಎಲ್ ಇ ಡಿ ಗಳನ್ನು ಬಳಸಿ ಕಿತ್ತಳೆ ಬಣ್ಣದ ಆಕಾಶವನ್ನೇ ಸೃಷ್ಟಿಸಲಾಗುತ್ತದೆ. ಟೈಟಾನ್ ನಲ್ಲಿ ಕಡಿಮೆ ತರಂಗಾಂತರದ ‘ರೇಡಿಯೋ ತರಂಗಗಳು' ಕಂಡು ಬಂದಿವೆ. ಇವುಗಳನ್ನು ಆಂದೋಲನ (ಆಸಿಲೇಟರ್) ಬಳಸಿ ಉತ್ಪಾದಿಸಲಾಗುತ್ತದೆ. 

ಈ ಕೃತಕ ಸಿಲಿಂಡರ್ ನ ವಾತಾವರಣದಲ್ಲಿ ಬೇರೆ ಬೇರೆ ಉಷ್ಣತೆ, ಒತ್ತಡ ಮತ್ತು ಇತರೆ ಬದಲಾವಣೆಗಳನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಕ್ರಮೇಣ ಬದಲಾಯಿಸುತ್ತಾ ಹೋಗಲಾಗುತ್ತದೆ. ಇದರಲ್ಲಿ ಗಂಡು ಮತ್ತು ಹೆಣ್ಣು ನೊಣಗಳನ್ನು ಬೇರೆ ಬೇರೆಯಾಗಿ ಇಟ್ಟು ಅನೇಕ ಪ್ರಯೋಗಗಳನ್ನು ನಡೆಸಲಾಗುತ್ತದೆ. ಈ ಎಲ್ಲಾ ಪ್ರಯೋಗಗಳ ನಂತರ ಕೊನೆಯಲ್ಲಿ ಉಳಿಯುವ ಊಜಿ ನೊಣವೇ ನಮ್ಮ ಟೈಟಾನ್ ಉಪಗ್ರಹದ ಗಗನಯಾತ್ರಿಯಾಗಲಿದೆ ! ಒಂದು ವೇಳೆ ಒಂದಕ್ಕಿಂತ ಹೆಚ್ಚು ನೊಣಗಳೇನಾದರೂ ಉಳಿದರೆ ಅವುಗಳಲ್ಲಿ ಅತ್ಯಂತ ಚುರುಕಾದ ನೊಣವೇ ಕೊನೆಯಲ್ಲಿ ಗಗನಯಾತ್ರಿಯಾಗಿ ಆಯ್ಕೆಯಾಗಲಿದೆ.

ಒಬ್ಬ ವ್ಯಕ್ತಿ ಗಗನಯಾತ್ರಿಯಾಗಿ ಆಯ್ಕೆಯಾಗಬೇಕಾದರೆ ಆತ ಅನೇಕ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಬೇಕಾಗುತ್ತದೆ. ಬಹುಮುಖ್ಯವಾಗಿ ಆತನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳು, ಆರೋಗ್ಯ, ಧೃಢತೆ ಮುಂತಾದ ವಿಷಯಗಳು ಆಯ್ಕೆಯ ಮಾನದಂಡಗಳಾಗಿರುತ್ತವೆ. ಒಟ್ಟಿನಲ್ಲಿ ಆತ ಶಿಸ್ತಿನ ಸಿಪಾಯಿಯಾದಲ್ಲಿ ಮಾತ್ರ ಆಯ್ಕೆ ಖಚಿತ. ಇಲ್ಲಿ ಊಜಿ ನೊಣ ಒಬ್ಬ ಶಿಸ್ತಿನ ಸಿಪಾಯಿಯ ಎಲ್ಲಾ ಗುಣಗಳನ್ನು ಪ್ರದರ್ಶಿಸುತ್ತಿರುವುದರಿಂದ ಇದರ ಆಯ್ಕೆ ಅತ್ಯಂತ ಸೂಕ್ತ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ