ಟೊರಾಂಟೋ ನಗರದ ಕಾಸಲೋಮ ಕೋಟೆ ಪ್ಯಾಲೇಸ್ ಅತಿ ಸುಂದರ !
ನಾವು, ಅಂದರೆ ನಾನು ನನ್ನ ಪತ್ನಿ, ಮತ್ತು ಮಗ, ಈಗಾಗಲೇ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಕಾಲಿಟ್ಟು ೫ ನೇದಿನದ ಸಂಭ್ರಮದಲ್ಲಿದ್ದೇವೆ. ನಾವು ಮುಂಬೈ ಬಿಟ್ಟು ೨೦೧೨ ರ ಜೂನ್ ೩ ನೆಯ ತಾರೀಖು ಈ ಸುಂದರ ನಗರಕ್ಕೆ ಪಾದಾರ್ಪಣೆ ಮಾಡಿದೆವು ರಾಷ್ಟ್ರದ ರಾಜಧಾನಿ ಬೇರೆಯಾದರೂ ಟೊರಾಂಟೋ ಮಾತ್ರ ತನ್ನ ಭವ್ಯ ಅಸ್ತಿತ್ವದಿಂದ ಬೀಗುತ್ತಿರುವ ಯುವಜನರ ಬೇಡಿಕೆಗಳನ್ನು ದಿವ್ಯವಾಗಿ ಈಡೇರಿಸಿಕೊಡಲು ಮಂಚೂಣಿಯಲ್ಲಿ ಓಡುತ್ತಿರುವ, ಇಂದಿನ ಜಾಗತಿಕ ಇಷ್ಟಾರ್ಥಗಳಿಗೆ ಸ್ಪಷ್ಟವಾಗಿ ಸ್ಪಂದಿಸುತ್ತಿರುವ ಜೀವಂತ ನಗರವಾಗಿದೆ. ಪ್ರತಿ ದಿನ ಟೊರಾಂಟೋ ನಗರದ ಯಾವುದಾದರೊಂದು ಸ್ಥಳಗಳನ್ನು ನೋಡಿಕೊಂಡು ಬರುತ್ತಿದ್ದೇವೆ,
ನಾವು ಭೆಟ್ಟಿಮಾಡಿದ 'ಕಾಸಲೋಮ ಕ್ಯಾಸಲ್ ನಿಜ'ಕ್ಕೂ ಟೊರಾಂಟೋ ನಗರ ನಗರದ ಒಂದು ಸುಂದರ ಪರಿಸರ. ಹಲವಾರು ಉದ್ಯಮಗಳ ಸ್ಥಾಪಕ ಸಮರ್ಥ ಆಡಳಿತಗಾರ, ಹೆನ್ರಿ ಪೆಲ್ಲಾಟ್ ಟೊರಾಂಟೋ ದ ಅತ್ಯಂತ ದೊಡ್ಡ ಉದ್ಯಮಿ ಮತ್ತು ನಗರ ಪ್ರೇಮಿ, ಹಾಗೂ ಕೆನಡಾ ದೇಶಕ್ಕೆ ಪಾದಾರ್ಪಣೆಮಾಡಿದ ಮೂಲ ಪುರುಷರ ಪರಿವಾರಗಳ ಸಾಲಿನಲ್ಲಿ ಮೊದಲಿಗ, ಸರ್ ಹೆನ್ರಿ ಪೆಲ್ಲಾಟ್ ನ ಕನಸಿನ ಅರಮನೆಯಾಗಿ ಕಂಗೊಳಿಸಿದ ಸೊಗಸಿನ ತಾಣ ! ನಯಾಗರಾ ಜಲಪಾತದ ದೈತ್ಯ ಶಕ್ತಿಯನ್ನು ಬಳಸಿ ವಿದ್ಯುತ್ಛಕ್ತಿಯನ್ನು ಉತ್ಪಾದಿಸಲು ಪ್ರಯತ್ನಿಸಿ ಸಫಲರಾದ ಮೊದಲಿಗರಲ್ಲಿ ಅಗ್ರಮಾನ್ಯ ವ್ಯಕ್ತಿ.
ಎಡ್ವರ್ಡಿಯನ್ ಕಾಲದ ಶೈಲಿಯಲ್ಲಿ ನಿರ್ಮಿಸಿದ ಈ ಅರಮನೆಯ ಸೌಂದರ್ಯಕ್ಕೆ ಎಣೆಯಿರಲಿಲ್ಲ. ಹಲವಾರು ರೂಂಗಳು ಅತಿ ಹೆಚ್ಚಿನ ಕಲಾವಸ್ತುಗಳಿಂದ ಕಂಗೊಳಿಸುತ್ತಿದ್ದವು. ಈಗಲೂ ಕಂಗೊಳಿಸುತ್ತಿವೆ. ( ೯೮ ಕೊಠಡಿಗಳಿವೆ ಎನ್ನುತ್ತಾರೆ, ಆ ಚಿಕ್ಕ ಅರಮನೆಯಲ್ಲಿ !) ಟವರ್ ಗಳು, ಹಾಗೂ ೮೦೦ ಅಡಿ ಉದ್ದದ ಕಂದಕದ ಸುರಂಗ ಮಾರ್ಗದಿಂದ ಕುದುರೆ ಲಾಯಕ್ಕೆ ನಿರ್ಮಿಸಿದ ಮಾರ್ಗ ಭವ್ಯವಾಗಿದೆ. ಇಂಗ್ಲೆಂಡ್ ರಾಜಪರಿವಾರಕ್ಕೆ ಅತಿ ನಿಕಟವಾಗಿದ್ದ ಹೆನ್ರಿಯವರಿಗೆ ಬ್ರಿಟಿಷ್ ಸರಕಾರ, 'ಸರ್' ಪದವಿಯನ್ನು ಪ್ರದಾನಿಸಿ ಗೌರವಿಸಿತು. ಆದರೆ ತಾವು ಇನ್ನೂ ಪೂರ್ತಿಯಾಗಿ ನಿರ್ಮಿಸದ ಕ್ಯಾಸಲ್ ನಲ್ಲಿ(ವಿಶ್ವ ಯುದ್ಧದಿಂದಾಗಿ ಅರಮನೆ ಕಟ್ಟುವ ಕೆಲಸ ಸ್ಥಗಿತವಾಗಿತ್ತು). ಹೆನ್ರಿ, ತಮ್ಮ ಪ್ರೀತಿಯ ಪತ್ನಿಯಜೊತೆ ಕಳೆದ ೧೦ ವರ್ಷಗಳ ಬಳಿಕ ದಿವಾಳಿಯಾದರು. ಹೆನ್ರಿಯ ಪ್ರೀತಿಯ ಪತ್ನಿ ಮರಣಿಸಿದರು. ಅರಮನೆಗೆ ತಗುಲಿದ ಖರ್ಚು ಅತಿಯಾಗಿ ಕೊನೆಗೆ ಮಾರುವ ಸ್ಥಿತಿಗೆ ಬಂದಾಗ ಟೊರಾಂಟೋ ನಗರದ ನಗರ ಸಭೆ ಅದನ್ನು ಖರೀದಿಸಿ ಸಾರ್ವಜನಿಕರ ವೀಕ್ಷಣೆಗೆ ಮುಡುಪಾಗಿಟ್ಟಿತು. ರಾಜಭವನವನ್ನು ನಿರ್ಮಿಸುವ ಹುಚ್ಚು ಹೆನ್ರಿಯರಿಗೆ ಬಂತೋ ; ಅದೊಂದು ವಿಪರೀತವಾಗಿ ತಮ್ಮ ಆಸ್ತಿಯನ್ನೆಲ್ಲಾ ಕಳೆದುಕೊಂಡು ಕಷ್ಟ ಅನುಭವಿಸಬೇಕಾಯಿತು..
ಕೆನಡಾದಲ್ಲೇ ಅತಿ ಸಾಹುಕಾರನಗಿದ್ದ ಹೆನ್ರಿ ಪಲ್ಲಾಟ್, ಹಣದ ಅಭಾವದಿಂದ ಚಿಕ್ಕ ಮನೆಯೊಂದರಲ್ಲಿ ಜೀವನನಡೆಸಬೇಕಾಯಿತು. ಜೀವನ ಸಂಗಾತಿಯೆಂದು, ಮತ್ತೊಬ್ಬ ಮಹಿಳೆಯನ್ನು ಅವರು ವಿವಾಹವಾದರು. ಕ್ಯಾಸಲ್ ನ ಪ್ರತಿ ಕೊಠಡಿಗೆ ಪ್ರವೇಶಿಸಿದಾಗ ನಮಗೆ ಒದಗಿಸಿರುವ ಪೂರ್ವ ಧ್ವನಿಮುದ್ರಿತ ರೆಕಾರ್ಡರ್ ನ ಗುಂಡಿಯನ್ನು ಅದುಮಿದರೆ, ಕ್ಯಾಸಲ್ ನ ಪೂರ್ತಿ ಮಾಹಿತಿ ಪಡೆಯಬಹುದು
ಇವೆಲ್ಲಾ ವಿಷಯಗಳನ್ನು ಸವಿಸ್ತಾರವಾಗಿ ಪರಿಚಯಿಸುವ ವೃತ್ತ ಚಿತ್ರದ ಪ್ರದರ್ಶನ, ಮುದಕೊಟ್ಟಿತು. ಬದಿಯಲ್ಲಿರುವ ಉದ್ಯಾನವನದ ಬಣ್ಣ-ಬಣ್ಣದ ವೈವಿಧ್ಯಮಯ ಸುಮರಾಶಿಯನ್ನು ನೋಡಲು ಕಣ್ಣುಸಾಲದು. ವಿಂಟರ್ ಬರುವ ಮೊದಲು, ಅಂದರೆ, ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಈ ಸೌಲಭ್ಯ ವೀಕ್ಷಕರಿಗೆ ಲಭ್ಯ.
-ಚಿತ್ರ ಲೇಖನ , ಹೊರಂಲವೆಂ