ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಸಫಲ ಯಾನ
ಹಲವಾರು ವರ್ಷಗಳಿಂದ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಹೆಚ್ಚು ಪದಕಗಳನ್ನು ಗಳಿಸುವುದು ಒಂದು ಕನಸಾಗಿಯೇ ಉಳಿದಿತ್ತು. ನಮಗೇನಿದ್ದರೂ ಒಂದು ಅಥವಾ ಎರಡು ಪದಕಗಳು. ಅಮೇರಿಕಾ, ಚೀನಾ, ಜಪಾನ್, ಇಂಗ್ಲೆಂಡ್ ಮುಂತಾದ ದೇಶದ ಕ್ರೀಡಾ ಪಟುಗಳು ಪದಕಗಳ ಶತಕವನ್ನೇ ಹೊಡೆಯುವಾಗ ನಾವು ಕೇವಲ ಬೆರಳೆಣಿಕೆಯ ಪದಕಗಳನ್ನು ಗಳಿಸಿ ಹಿಂದೆ ಬರುವುದು ಸಾಮಾನ್ಯ ಸಂಗತಿಯೇ ಆಗಿತ್ತು. ಶತಮಾನಗಳಷ್ಟು ಇತಿಹಾಸವಿರುವ ಒಲಂಪಿಕ್ಸ್ ಕ್ರೀಡೆಗಳಲ್ಲಿ ಒಂದೇ ವರ್ಷ ಭಾರತ ಗೆದ್ದ ಗರಿಷ್ಟ ಪದಕಗಳ ಸಂಖ್ಯೆ ೬. ಆದರೆ ಈ ವರ್ಷ ೭ ಪದಕಗಳನ್ನು ಗೆದ್ದದ್ದು ಮಾತ್ರವಲ್ಲ, ಹಲವಾರು ಕ್ರೀಡೆಗಳಲ್ಲಿ ಪದಕದ ಸನಿಹಕ್ಕೆ ತಲುಪಿದ ಶ್ರೇಯ ನಮ್ಮ ಕ್ರೀಡಾಳುಗಳದ್ದು. ಮಹಿಳಾ ಹಾಕಿ, ಗಾಲ್ಫ್, ಕುದುರೆ ಸವಾರಿ, ಡಿಸ್ಕಸ್ ಮುಂತಾದ ಕ್ರೀಡೆಗಳಲ್ಲಿ ಪದಕ ಗೆಲ್ಲದಿದ್ದರೂ ಭವಿಷ್ಯದಲ್ಲಿ ಉತ್ತಮ ಆಟದ ಭರವಸೆಯನ್ನಂತೂ ಮೂಡಿಸಿದ್ದಾರೆ. ಭಾರತದ ಈ ಒಲಂಪಿಕ್ಸ್ ಯಾನದ ಬಗ್ಗೆ ಒಂದು ಪುಟ್ಟ ಮಾಹಿತಿ.
ಟೋಕಿಯೊ ಒಲಂಪಿಕ್ಸ್ ೨೦೨೦ರಲ್ಲಿ ನಡೆಯಬೇಕಾಗಿತ್ತು. ಆದರೆ ಪ್ರಪಂಚದಾದ್ಯಂತ ಹರಡಿ ಅಟ್ಟಹಾಸ ಮೆರೆಯುತ್ತಿದ್ದ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಅದನ್ನು ೨೦೨೧ಕ್ಕೆ ಮುಂದೂಡಲಾಯಿತು. ಈ ವರ್ಷ ಒಲಂಪಿಕ್ಸ್ ನಡೆಯದೇ ಇದ್ದಲ್ಲಿ ಅದು ಖಾಯಂ ರದ್ದಾಗುವ ಸಾಧ್ಯತೆ ಇತ್ತು. ಕೊರೋನಾ ಅಟ್ಟಹಾಸ ಇನ್ನೂ ಕಡಿಮೆಯಾಗಿರಲಿಲ್ಲ. ಜಪಾನ್ ಆಡಳಿತ ಇವೆಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗಿ ಒಲಂಪಿಕ್ಸ್ ಕ್ರೀಡೆಯನ್ನು ಸಂಘಟಿಸಿತು. ಭಾರತ ಬರೋಬ್ಬರಿ ೧೧೯ ಜನ ಕ್ರೀಡಾ ಪಟುಗಳ ಜೊತೆಗೆ ಜಪಾನ್ ಬಂದಿಳಿಯಿತು. ಹಳೆಯ ಆಟಗಾರರ ಜೊತೆ ಹೊಸ ಆಟಗಾರರ ಸಮತೋಲಿತ ತಂಡವಾಗಿದ್ದ ಭಾರತಕ್ಕೆ ಈ ವರ್ಷವಾದರೂ ಎರಡಂಕಿಯ ಪದಕಗಳನ್ನು ಗೆಲ್ಲುವ ನಿರೀಕ್ಷೆಯಿತ್ತು.
ಒಲಂಪಿಕ್ಸ್ ಪ್ರಾರಂಭದ ಮೊದಲ ದಿನವೇ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ನಿರೀಕ್ಷೆಯಂತೆ ಪದಕ ಗೆದ್ದರು. ಅವರು ಗಳಿಸಿದ ರಜತ ಪದಕ ಉಳಿದ ಕ್ರೀಡಾಳುಗಳಿಗೆ ಸ್ವಲ್ಪ ಮಟ್ಟಿಗೆ ಪ್ರೇರಣೆಯಾಯಿತು. ಆದರೆ ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಸೋತರು. ಭರವಸೆಯಿಟ್ಟಿದ್ದ ಆಟಗಳಾದ ಶೂಟಿಂಗ್ ಮತ್ತು ಬಿಲ್ಗಾರಿಕೆಯಲ್ಲಿ ಪದಕಗಳು ಒಲಿಯಲಿಲ್ಲ. ಕುಸ್ತಿ ಹಾಗೂ ಬಾಕ್ಸಿಂಗ್ ನಲ್ಲಿ ಚಿನ್ನ, ಬೆಳ್ಳಿ ಗೆಲ್ಲದೇ ಹೋದರೂ ಕಂಚಿನ ಪದಕ ಸಿಕ್ಕಿತು. ಬಾಕ್ಸಿಂಗ್ ೬೯ ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೇನ್ ಹಾಗೂ ೫೭ ಕೆಜಿ ಕುಸ್ತಿಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಮತ್ತು ೬೫ ಕೆಜಿ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಕಂಚು ಗೆದ್ದರು. ಈ ಸಲ ಚಿನ್ನದ ಭರವಸೆ ಮೂಡಿಸಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಕಂಚಿಗೆ ತೃಪ್ತಿ ಪಟ್ಟುಕೊಂಡರು.
ಐತಿಹಾಸಿಕ ಸಾಧನೆ ಮಾಡಿದ್ದು ಮಾತ್ರ ಉಭಯ ಹಾಕಿ ತಂಡಗಳು. ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳೆರಡೂ ಸೆಮಿಫೈನಲ್ ಹಂತಕ್ಕೆ ತಲುಪಿದ್ದು ಬಹುದೊಡ್ಡ ಸಾಧನೆ. ಎರಡೂ ತಂಡಗಳು ಸೆಮಿಫೈನಲ್ ನಲ್ಲಿ ಸೋತರೂ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಮಹಿಳಾ ಹಾಕಿ ತಂಡ ಕಂಚಿನ ಪದಕ ಸೋತರೂ ಅಸಂಖ್ಯಾತ ಭಾರತೀಯರ ಪ್ರೀತಿಯನ್ನು ಗೆದ್ದುಕೊಂಡಿತು. ಸುಮಾರು ೪೧ ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡ ಪದಕವೊಂದನ್ನು ಗೆದ್ದುಕೊಂಡಿತು. ಒಂದು ಸಮಯದಲ್ಲಿ ನಿರಂತರ ಚಿನ್ನವನ್ನೇ ಗೆಲ್ಲುತ್ತಿದ್ದ ಭಾರತೀಯ ಪುರುಷರ ಹಾಕಿ ತಂಡ ೧೯೮೦ರ ಬಳಿಕ ಒಂದೇ ಒಂದು ಪದಕ ಗೆಲ್ಲದೇ ಬರವನ್ನು ಅನುಭವಿಸಿತ್ತು. ಆದರೆ ಈ ಬಾರಿ ಕಂಚು ಗೆದ್ದು ಇನ್ನೂ ನಮ್ಮಲ್ಲಿ ಗೆಲ್ಲುವ ಸಾಮರ್ಥ್ಯವಿದೆ ಎಂದು ಸಾಬೀತು ಪಡಿಸಿದ್ದಾರೆ.
ಆದರೆ ಇದೆಲ್ಲಕ್ಕೂ ಮಿಗಿಲಾದ ಪ್ರದರ್ಶನ ನೀಡಿ ದಿನ ಬೆಳಗಾಗುವಷ್ಟರಲ್ಲಿ ಖ್ಯಾತಿ ಪಡೆದದ್ದು ನೀರಜ್ ಚೋಪ್ರಾ ಎಂಬ ಯೋಧ. ಅತ್ಲೆಟಿಕ್ಸ್ ನಲ್ಲಿ ಯಾವುದೇ ಭಾರತೀಯ ಆಟಗಾರರಿಗೆ ಕಳೆದ ಒಂದು ಶತಮಾನದಿಂದ ಪದಕ ದೊರೆತಿರಲಿಲ್ಲ. ಆದರೆ ನೀರಜ್ ಚೋಪ್ರಾ ಜಾವಲಿನ್ (ಈಟಿ) ಎಸೆತದಲ್ಲಿ ಬಂಗಾರದ ಪದಕವನ್ನೇ ಗಳಿಸಿಕೊಂಡರು. ಬೆಳ್ಳಿಯಿಂದ ಪ್ರಾರಂಭವಾದ ಭಾರತದ ಒಲಂಪಿಕ್ಸ್ ಅಭಿಯಾನ ಚಿನ್ನದೊಂದಿಗೆ ಮುಕ್ತಾಯವಾದದ್ದು ಮಾತ್ರ ಹೆಮ್ಮೆಯ ಸಂಗತಿ. ಭಾರತದ ಪದಕ ವೀರ ಕ್ರೀಡಾಳುಗಳ ಸಾಧನೆಯ ಪುಟ್ಟ ಪರಿಚಯವನ್ನು ಮಾಡಿಕೊಳ್ಳುವ.
ನೀರಜ್ ಚೋಪ್ರಾ: ಭಾರತೀಯ ಸೇನೆಯಲ್ಲಿ ನ್ಯಾಬ್ ಸುಬೇದಾರ್ ಹುದ್ದೆಯಲ್ಲಿರುವ ೨೩ ವರ್ಷ ಪ್ರಾಯದ ಯುವಕ ಟೋಕಿಯೋ ಒಲಂಪಿಕ್ಸ್ ಗೆ ತೆರಳುವಾಗ ಯಾರಿಗೂ ಹೆಚ್ಚಿನ ಪರಿಚಯವಿರಲಿಲ್ಲ. ಬಹುತೇಕರಿಗೆ ಅತ್ಲೆಟಿಕ್ಸ್ ಸ್ಪರ್ಧೆ ಎಂದರೆ ಓಟದ ಸ್ಪರ್ಧೆ ಎಂದು ಮಾತ್ರ ಅನಿಸಿಕೆ ಇತ್ತು. ಜಾವಲಿನ್ ಎಸೆತ ಎಂಬ ಅಪರಿಚಿತ ಆಟದ ಮೂಲಕ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಕೀರ್ತಿ ನೀರಜ್ ಚೋಪ್ರಾ ಇವರದ್ದು. ಹರಿಯಾಣದ ಪಾಣಿಪತ್ ಸಮೀಪದ ಖಾಂದ್ರಾ ಎಂಬ ಪುಟ್ಟ ಊರಿನ ಕೃಷಿಕ ಸತೀಶ್ ಚೋಪ್ರಾ ಇವರ ಮಗನೇ ನೀರಜ್ ಚೋಪ್ರಾ. ಇವರ ತಂದೆಗೆ ಮಗ ಖಂಡಿತವಾಗಿಯೂ ಪದಕವೊಂದನ್ನು ಗೆಲ್ಲುತ್ತಾನೆ ಎಂಬ ಭರವಸೆ ಇತ್ತಂತೆ. ಮೊದಲ ಎಸೆತದಲ್ಲೇ ೮೭.೦೩ ಮೀಟರ್ ದೂರಕ್ಕೆ ಜಾವಲಿನ್ ಎಸೆದ ನೀರಜ್ ಆಗಲೇ ಚಿನ್ನದ ಪದಕವನ್ನು ಗೆಲ್ಲುವ ಭರವಸೆ ಮೂಡಿಸಿದ್ದರು. ನಂತರದ ಎಸೆತ ೮೭.೫೮ ಮೀ. ಇದು ಮೊದಲ ಎಸೆತಕ್ಕಿಂತಲೂ ಸ್ವಲ್ಪ ಅಧಿಕ. ನಂತರದ ಎಸೆತಗಳು ಈ ದೂರಕ್ಕೆ ತಲುಪದೇ ಇದ್ದರೂ ಬಂಗಾರ ಒಲಿಯಲು ಇವರ ಎರಡನೇಯ ಎಸೆತವೇ ಸಾಕಾಯಿತು.
ನೀರಜ್ ತಮ್ಮ ೧೧ನೇಯ ವಯಸ್ಸಿನಲ್ಲಿ ಬರೋಬ್ಬರಿ ೯೦ ಕೆಜಿ ಇದ್ದರಂತೆ. ಎಲ್ಲರೂ ಇವರನ್ನು ಗುಂಡಪ್ಪ ಎಂದೇ ಕರೆಯುತ್ತಿದ್ದರು. ಆದರೆ ಒಂದು ದಿನ ವಾಕಿಂಗ್ ಹೋಗುವಾಗ ಜಾವಲಿನ್ ಎಸೆತವನ್ನು ಅಭ್ಯಾಸ ಮಾಡುತ್ತಿದ್ದ ಕೆಲವು ಹುಡುಗರನ್ನು ಗಮನಿಸಿ ಇವರಿಗೂ ಆ ಕ್ರೀಡೆಯಲ್ಲಿ ಆಸಕ್ತಿ ಮೂಡಿತು. ನಂತರ ತಮ್ಮ ತೂಕವನ್ನು ಕರಗಿಸಿಕೊಂಡದ್ದೇ ಅಲ್ಲದೇ, ಜಾವಲಿನ್ ಎಸೆತದಲ್ಲೂ ಪರಿಣತಿಯನ್ನು ಪಡೆದರು. ಕರ್ನಾಟಕದ ಜಾವಲಿನ್ ಎಸೆತಗಾರ ಕಾಶಿನಾಥ್ ನಾಯ್ಕ್ ಇವರ ಪ್ರಾರಂಭದ ದಿನಗಳ ತರಭೇತುದಾರರಾಗಿದ್ದರು.
ಚಿನ್ನದ ಪದಕ ಗೆದ್ದ ನೀರಜ್ ಈ ಪದಕವನ್ನು ‘ಹಾರುವ ಸಿಖ್' ಎಂದೇ ಖ್ಯಾತಿ ಪಡೆದ, ಇತ್ತೀಚೆಗೆ ನಮ್ಮನ್ನು ಅಗಲಿದ ಒಲಂಪಿಕ್ ಓಟಗಾರ ಮಿಲ್ಖಾ ಸಿಂಗ್ ಗೆ ಅರ್ಪಿಸಿದ್ದಾರೆ. ಏಕೆಂದರೆ ೧೯೬೦ರ ರೋಮ್ ಒಲಂಪಿಕ್ಸ್ ನಲ್ ೪೦೦ ಮೀ. ಓಟದ ಸ್ಪರ್ಧೆಯಲ್ಲಿಮಿಲ್ಖಾ ಸಿಂಗ್ ಕೂದಲೆಳೆಯ ಅಂತರದಿಂದ ಕಂಚಿನ ಪದಕವನ್ನು ತಪ್ಪಿಸಿಕೊಂಡಿದ್ದರು. ಅವರಿಗೆ ತಮ್ಮ ಜೀವಿತಾವಧಿ ಮುಗಿಯುವ ಮೊದಲು ಅತ್ಲೆಟಿಕ್ಸ್ ನಲ್ಲಿ ಭಾರತೀಯನೊಬ್ಬ ಪದಕ ಗೆಲ್ಲಬೇಕೆಂಬ ಆಸೆ ಇತ್ತು. ಕಳೆದ ವರ್ಷ ಒಲಂಪಿಕ್ಸ್ ನಡೆದು ನೀರಜ್ ಚೋಪ್ರಾ ಪದಕ ಗೆಲ್ಲುತ್ತಿದ್ದಿದ್ದರೆ ಮಿಲ್ಖಾ ಸಿಂಗ್ ನಿಜಕ್ಕೂ ಸಂಭ್ರಮ ಪಡುತ್ತಿದ್ದರು. ನೀರಜ್ ಚೋಪ್ರಾ ಭವಿಷ್ಯದಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲಿ ಎಂಬುದೇ ನಮ್ಮ ಶುಭ ಹಾರೈಕೆ.
ಮೀರಾಬಾಯಿ ಚಾನು: ಈ ಸಾಧಕಿಯ ಬಗ್ಗೆ ‘ಸಂಪದ'ದಲ್ಲಿ ಸವಿಸ್ತಾರವಾದ ಮಾಹಿತಿ ಲೇಖನ ಈಗಾಗಲೇ ಪ್ರಕಟವಾಗಿದೆ. ೪೯ ಕೆಜಿ ವಿಭಾಗದಲ್ಲಿ ಭಾರ ಎತ್ತುವ (ವೇಟ್ ಲಿಫ್ಟಿಂಗ್) ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಧೀರ ಮಹಿಳೆ ಈಕೆ. ಮಣಿಪುರ ರಾಜ್ಯದ ಇಂಫಾಲ ಊರಿನ ಬಳಿಯ ಪುಟ್ಟ ಗ್ರಾಮದ ಮಹಿಳೆ ಮೀರಾಬಾಯಿ ಚಾನು.
ರವಿಕುಮಾರ್ ದಹಿಯಾ: ಬಂಗಾರದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರೂ ಕೊನೆಗೆ ಬೆಳ್ಳಿಯ ಪದಕಕ್ಕೆ ತೃಪ್ತಿ ಹೊಂದಿದ ಕ್ರೀಡಾ ಪಟು ರವಿಕುಮಾರ್ ದಹಿಯಾ. ಹರಿಯಾಣದ ನಹ್ರಿ ಎಂಬ ಗ್ರಾಮದ ಈ ಯುವಕ ೫೭ ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್ ಪಂದ್ಯದಲ್ಲಿ ರಷ್ಯಾ ದೇಶದ ಝೂವುರ್ ಉಗ್ವೆ ಎದುರು ಸೋತು ರಜತ ಪದಕ ಪಡೆದುಕೊಂಡರು. ಇದು ಒಲಂಪಿಕ್ಸ್ ಕುಸ್ತಿ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಎರಡನೇ ರಜತ ಪದಕ. ಮುಂದಿನ ದಿನಗಳಲ್ಲಿ ಇವರೂ ಭರವಸೆಯ ಬೆಳಕಾಗಿದ್ದಾರೆ ಭಾರತಕ್ಕೆ.
ಪಿ.ವಿ.ಸಿಂಧು: ಬಂಗಾರದ ಪದಕದ ಭರವಸೆ ಮೂಡಿಸಿದ್ದ ಪಿ.ವಿ.ಸಿಂಧು ಕಂಚಿನ ಪದಕಕ್ಕೇ ತೃಪ್ತಿ ಪಟ್ಟರು. ಹಿಂದಿನ ರಿಯೋ ಒಲಂಪಿಕ್ಸ್ ನಲ್ಲಿ ರಜತ ಪದಕ ಗೆದ್ದಿದ್ದ ಸಿಂಧು, ಈ ಬಾರಿ ಬಂಗಾರ ಗೆಲ್ಲತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಸೋತು, ನಂತರ ಕಂಚಿಗಾಗಿ ನಡೆದ ಹೋರಾಟದಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ವಿರುದ್ಧ ಗೆದ್ದರು. ಒಲಂಪಿಕ್ಸ್ ನ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯೆಂಬ ಕೀರ್ತಿ ಸಿಂಧುಗೆ ಲಭಿಸಿದೆ.
ಭಜರಂಗ್ ಪೂನಿಯಾ: ವಿಶ್ವದ ಶ್ರೇಷ್ಟ ಕುಸ್ತಿ ಪಟುಗಳಲ್ಲಿ ಓರ್ವರಾದ ಭಜರಂಗ್ ಅವರಿಗೆ ಟೋಕಿಯೊದಲ್ಲಿ ಕಾಡಿದ ಮಂಡಿನೋವಿನ ಸಮಸ್ಯೆಯು ಅವರನ್ನು ಕಂಚಿನ ಪದಕಕ್ಕೇ ತೃಪ್ತಿ ಪಡೆಯುವಂತೆ ಮಾಡಿತು. ೬೫ ಕೆಜಿ ಕುಸ್ತಿ ಆಟದಲ್ಲಿ ಕಜಗಿಸ್ತಾನದ ನಿಯಾಜ್ ಚೆಕೊವ್ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಕಂಚು ಪಡೆದುಕೊಂಡರು.
ಲವ್ಲಿನಾ ಬೊರ್ಗೊಹೇನ್: ಅಸ್ಸಾಂನ ಮಹಿಳಾ ಬಾಕ್ಸರ್ ಲವ್ಲಿನಾ ೬೯ ಕೆಜಿ ಬಾಕ್ಸಿಂಗ್ ನಲ್ಲಿ ಅನಿರೀಕ್ಷಿತವಾಗಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಸೆಮಿಫೈನಲ್ ನಲ್ಲಿ ಅವರು ಸೋತ ಕಾರಣ ಕಂಚಿನ ಪದಕಕ್ಕೇ ತಲೆಯೊಡ್ಡಬೇಕಾಯಿತು. ಈ ಬಾರಿ ಬಾಕ್ಸಿಂಗ್ ನಲ್ಲಿ ಪದಕದ ಭರವಸೆಯಾಗಿದ್ದ ಮೇರಿ ಕೋಮ್ ಸೋತ ಕಾರಣ ಲವ್ಲಿನಾ ಏಕೈಕ ಪದಕದ ವಿಜೇತರಾದರು. ಹಿಂದಿನ ಒಲಂಪಿಕ್ಸ್ ಗಳಲ್ಲಿ ವಿಜೇಂದರ್ ಸಿಂಗ್ ಹಾಗೂ ಮೇರಿಕೋಮ್ ಕಂಚು ಗೆದ್ದಿದ್ದರು.
ಪುರುಷರ ಹಾಕಿ ತಂಡ: ೪೧ ವರ್ಷಗಳ ಹಾಕಿ ಒಲಂಪಿಕ್ಸ್ ಪದಕದ ಬರಗಾಲವನ್ನು ಈ ಬಾರಿ ನೀಗಿಸಿದರು. ಚಿನ್ನ ಅಥವಾ ಬೆಳ್ಳಿ ಪದಕದ ಭರವಸೆ ಮೂಡಿಸಿದ್ದ ಹಾಕಿ ತಂಡ ಕೊನೆಗೆ ಕಂಚಿನ ಪದಕ ಪಡೆದುಕೊಳ್ಳುವಂತಾಯಿತು. ಆದರೆ ಕಳೆದ ೪೦ ವರ್ಷಗಳಲ್ಲಿ ಮೊದಲ ಸುತ್ತುಗಳಲ್ಲೇ ಹೊರಬೀಳುತ್ತಿದ್ದ ಭಾರತ ಪುರುಷರ ಹಾಕಿ ತಂಡ ಈ ಬಾರಿ ಸೆಮಿಫೈನಲ್ ತನಕ ಸಾಗಿ ಬಂದದ್ದು ಇತಿಹಾಸ. ಇದು ಹಾಕಿಯ ಪುನರುತ್ಥಾನಕ್ಕೆ ನಾಂದಿಯಾಗಬಹುದು ಎನ್ನುವುದು ಸರ್ವ ಕ್ರೀಡಾಪ್ರೇಮಿಗಳ ನಿರೀಕ್ಷೆ. ಕಂಚಿಗಾಗಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡದ ಎದುರು ೫-೪ ಅಂತರದಲ್ಲಿ ಜಯಶಾಲಿಯಾದ್ದು ಬಹಳ ಅದ್ಭುತ ಸಂಗತಿ. ೪೧ ವರ್ಷಗಳ ಹಿಂದಿನ ಹಾಕಿ ಸುವರ್ಣ ಯುಗ ಮುಂದಿನ ದಿನಗಳಲ್ಲಿ ಮತ್ತೆ ಬರಲಿದೆ ಎಂಬ ಆಶಾಭಾವನೆ ಎಲ್ಲರಲ್ಲೂ ಮೂಡಿದೆ.
ಈ ಮೇಲಿನ ಪದಕ ವೀರರಲ್ಲದೇ ಇನ್ನೂ ಹಲವಾರು ಮಂದಿ ಪದಕದ ಸಮೀಪಕ್ಕೆ ಬಂದು ಪದಕ ಸಿಗದೇ ನಿರಾಶೆಗೊಂಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರ ಮೇಲೆ ಭರವಸೆಯನ್ನು ಇಡಬಹುದಾಗಿದೆ. ಗಾಲ್ಫ್ ಎಂಬ ಆಟದಲ್ಲಿ ಕರ್ನಾಟಕದ ಅದಿತಿ ಅಶೋಕ್ ಫೈನಲ್ ತನಕ ಸಾಗಿದ ಹಾದಿ ಅದ್ಭುತ. ಸಣ್ಣ ಅಂತರದಲ್ಲಿ ಪದಕವನ್ನು ಮಿಸ್ ಮಾಡಿಕೊಂಡರೂ ಅವರ ಸಾಧನೆ ಸಾಮಾನ್ಯವಲ್ಲ. ಹಾಗೆಯೇ ಭಾರತೀಯ ಮಹಿಳಾ ಹಾಕಿ ತಂಡ. ಮೊದಲ ಲೀಗ್ ಪಂದ್ಯಾವಳಿಗಳಲ್ಲಿ ಸೋತು, ನಂತರ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ತನಕ ಸಾಗಿ ಬಂದ ಹಾದಿ ಮರೆಯಲಾಗದ್ದು. ಕೇವಲ ಮೂರನೇಯ ಬಾರಿ ಒಲಂಪಿಕ್ಸ್ ಪಂದ್ಯಾವಳಿಗಳಲ್ಲಿ ಆಡಲಿಳಿದ ರಾಣಿ ರಾಂಪಾಲ್ ಸಾರಥ್ಯದ ಈ ತಂಡ ಬಹಳ ಮಂದಿಗೆ ಪದಕದ ಆಸೆ ಮೂಡಿಸಿದ್ದು ಸುಳ್ಳಲ್ಲ.
ಡಿಸ್ಕಸ್ ಎಸೆತದಲ್ಲಿ ಪದಕದ ಭರವಸೆ ಮೂಡಿಸಿದ ಕಮಲ್ ಪ್ರೀತ್ ಕೌರ್, ಕುದುರೆ ಸವಾರಿಯಲ್ಲಿ ಪೌವಾದ್ ಮಿರ್ಜಾ ಎಡವಿದರೂ ಮುಂದಿನ ದಿನಗಳಲ್ಲಿ ಇವರಿಗೆಲ್ಲಾ ಉಜ್ವಲ ಭವಿಷ್ಯವಿದೆ. ೨೦೨೪ರಲ್ಲಿ ಪ್ಯಾರಿಸ್ ನಲ್ಲಿ ಒಲಂಪಿಕ್ಸ್ ಕೂಟ ನಡೆಯಲಿದೆ. ಈಗಲೇ ಎಲ್ಲಾ ಕ್ರೀಡಾಳುಗಳ ಜೊತೆಗೆ ಭಾರತ ಸರಕಾರದ ಕ್ರೀಡಾ ಇಲಾಖೆಯೂ ಸರಿಯಾದ ಸವಲತ್ತು ಮತ್ತು ಪ್ರೋತ್ಸಾಹ ನೀಡಿದರೆ ಭವಿಷ್ಯದ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಇನ್ನಷ್ಟು ಪದಕಗಳು ದೊರೆತಾವು. ಅಲ್ಲವೇ?
ಚಿತ್ರ ಕೃಪೆ: ಅಂತರ್ಜಾಲ ತಾಣ