ಟ್ಯಾಂಕರ್ ನೀರು ಸರಬರಾಜಿನ ದಂಧೆ

ಟ್ಯಾಂಕರ್ ನೀರು ಸರಬರಾಜಿನ ದಂಧೆ

ನಮ್ಮ ಮನೆಗಳಿಗೆ ನಳ್ಳಿ ನೀರು ಸರಬರಾಜು ಇಲ್ಲವೆಂದಾದರೆ ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಅಥವಾ ಮಹಾನಗರಪಾಲಿಕೆ ಟ್ಯಾಂಕರಿನಲ್ಲಿ ನೀರು ಒದಗಿಸಬೇಕು ಎಂಬ ನಿರೀಕ್ಷೆ ನಮ್ಮದು.

ನೀರಿನ ಅಭಾವ ಇದ್ದಲ್ಲಿ ಇದು ಸರಿ. ಆದರೆ ಕರಾವಳಿ ಜಿಲ್ಲೆಗಳಲ್ಲಿ? ಇಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ,೪೦೦ ಮಿಮೀ. ಅಂದರೆ ಸೆಂಟ್ಸಿನ ಮನೆಸೈಟಿನಲ್ಲಿ ವರುಷಕ್ಕೆ ಸುರಿಯುವ ಮಳೆ ಲಕ್ಷ ಲೀಟರ್. ಇದು ೨೦ ಜನರಿಗೆ ಒಂದು ವರುಷಕ್ಕೆ ಧಾರಾಳ ಸಾಕು. ಇಂಥಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಏನೆನ್ನಬೇಕು?

ಕೇವಲ ೫೪೦ ಮಿಮೀ ವಾರ್ಷಿಕ ಮಳೆ ಬೀಳುವ ಬಾಗಲಕೋಟೆಯಲ್ಲಿ ಮಳೆನೀರು ಕೊಯ್ಲು ಮಾಡಿ ಬಳಸುತ್ತಾರೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಮಾರ್ಚ್ ತಿಂಗಳಿನಲ್ಲಿಯೇ ಟ್ಯಾಂಕರ್ಗಳಲ್ಲಿ ನೀರಿನ ಸರಬರಾಜು ಆರಂಭ! ಮಂಗಳೂರಿನ ಕೆಲವು ಪ್ರದೇಶಗಳಿಗೂ ಬೇಸಗೆಯಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು. ಆದರೆ ಯಾರಿಗೂ ಏನೂ ಅನಿಸುವುದಿಲ್ಲ.

ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ನೀರು ಒದಗಿಸಲಿಕ್ಕಾಗಿ ೨೦೦೮ - ೦೯ರಲ್ಲಿ ಜಿಲ್ಲಾ ಪಂಚಾಯತಿ ಮಾಡಿದ ವೆಚ್ಚ ರೂಪಾಯಿ ೧೩ ಕೋಟಿ. (ಹೊಸ ಬೋರ್ವೆಲ್ ಕೊರೆಸುವುದು, ಪೈಪ್ಲೈನ್ ಜೋಡಣೆ, ಹ್ಯಾಂಡ್ಪಂಪ್ ರಿಪೇರಿ ಇತ್ಯಾದಿ ಉದ್ದೇಶಗಳಿಗಾಗಿ) ಆದರೆ ಯಾರಿಗೂ ಏನೂ ಅನಿಸುವುದಿಲ್ಲ.

ಮಧ್ಯಪ್ರದೇಶದ ಸೆಹೊರೆ ಪಟ್ಟಣವಾಸಿ ಅನುಪ್ ಚೌಧರಿ. ಸೈಕಲಿನಲ್ಲಿ ಸುತ್ತಾಡಿ ಹಾಲು ಮಾರಿ ಜೀವನ ನಡೆಸುವವರು. ಅವರು ಎಲ್ಲರಂತಲ್ಲ. ಪ್ರತಿ ವರುಷ ಬೇಸಗೆಯಲ್ಲಿ ಅವರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತತ್ವಾರ. ಆಗ ಟ್ಯಾಂಕರ್-ಲಾರಿಗಳಲ್ಲಿ ನೀರಿನ ಸರಬರಾಜು. ಇದರಿಂದ ಕೆಲವು ಕಾರ್ಪೊರೇಟರ್ಗಳಿಗೆ ಹಣ ಲಪಟಾಯಿಸಲು ಅವಕಾಶ. ಆದರೆ ಪ್ರತಿಯೊಂದು ಟ್ಯಾಂಕರ್ ನೀರು ಸರಬರಾಜು ಮಾಡಿದಾಗ, ಅದರಿಂದ ನೀರು ಪಡೆದ ಐವರು ಸ್ಥಳೀಯರು ರಶೀದಿಗೆ ಸಹಿ ಮಾಡಬೇಕು ಎಂಬುದು ನಿಯಮ. ಹಾಗಾಗಿ, ಅನುಪ್ ಚೌಧರಿ "ಮಾಹಿತಿ ಹಕ್ಕು ಕಾಯಿದೆ" ಪ್ರಕಾರ ರೂ.೧೦ ಶುಲ್ಕ ಪಾವತಿಸಿ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಕೇಳಿದರು; ರಶೀದಿಗಳ ಯಥಾಪ್ರತಿಗಳನ್ನು ಕೇಳಿದರು.

ಆಗ ಭ್ರಷ್ಟಾಚಾರ ಬಯಲಾಯಿತು. ಯಾಕೆಂದರೆ ಅವರೇ ವಾಸ ಮಾಡುವ ವಾರ್ಡಿಗೆ ಸರಬರಾಜು ಮಾಡಿದ್ದು ಕೇವಲ ಎರಡು ಟ್ಯಾಂಕರ್ ನೀರು. ಆದರೆ, ನಾಲ್ಕು ಟ್ಯಾಂಕರ್ ನೀರು ಸರಬರಾಜು ಮಾಡಿದ್ದೆಂದು ಸುಳ್ಳು ರಶೀದಿ ಸಲ್ಲಿಸಿ ಹಣ ಪಡೆಯಲಾಗಿತ್ತು. ರಶೀದಿಗಳಲ್ಲಿ ಹಲವಾರು ಸುಳ್ಳು ಸಹಿಗಳು. ಹಾಗಾಗಿ ಹಗರಣದ ಬಗ್ಗೆ ಜಿಲ್ಲಾಧಿಕಾರಿಗೆ ಅನುಪ್ ಚೌಧರಿ ದೂರು ನೀಡಿದರು. ಆಗ ಜಿಲ್ಲಾಧಿಕಾರಿ ತನಿಖೆ ನಡೆಸಲೇ ಬೇಕಾಯಿತು. ಸಾರ್ವಜನಿಕ ಹಣ ಲಪಟಾಯಿಸುವುದಕ್ಕೆ ತಡೆ ಬಿತ್ತು.

ಟ್ಯಾಂಕರ್ಗಳಲ್ಲಿ ನೀರು ಸರಬರಾಜು ದಂಧೆ ಇನ್ನೊಂದು ರೀತಿಯಲ್ಲಿ ಕೂಡ ಜನವಿರೋಧಿ. ಎರಡು ಪ್ರಕರಣಗಳನ್ನು ಗಮನಿಸಿರಿ: ಕೊಂಕಣ್ ರೈಲ್ವೇಯ ಗೋವಾ ಕಚೇರಿಗೆ ಸರಬರಾಜು ಆಗುತ್ತಿದ್ದ ನೀರಿಗೆ ವರುಷಕ್ಕೆ ಪಾವತಿಯಾಗುತ್ತಿದ್ದ ಹಣ ಸುಮಾರು ರೂಪಾಯಿ ಲಕ್ಷ. ಅಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದಾಗ, ನೀರು ಸರಬರಾಜಿನ ಕಾಂಟ್ರಾಕ್ಟರ್ನಿಂದ ಬೆದರಿಕೆ! (ಮಳೆನೀರು ಕೊಯ್ಲು ಮಾಡಬಾರದೆಂದು) ಇನ್ನೊಂದು ಪ್ರಕರಣ ಮಂಗಳೂರು ವಿಶ್ವವಿದ್ಯಾಲಯದ ಹತ್ತಿರದ ಹಳ್ಳಿಯದು. ಅಲ್ಲಿ ಒಬ್ಬರು ಟ್ಯಾಂಕರಿನಲ್ಲಿ ನೀರು ಸರಬರಾಜು ಆರಂಭಿಸಿದ ನಂತರ ಸುತ್ತಮುತ್ತಲಿನ ಹಲವು ಬಾವಿಗಳು ಬತ್ತಿಹೋದವು. ಆಗ ತಮ್ಮ ನೀರಿನ ಆಸರೆಗೆ ಧಕ್ಕೆ ಆಗಬಾರದೆಂದು ತಮ್ಮ "ಕುಡಿಯುವ ನೀರಿನ ಹಕ್ಕು" ರಕ್ಷಣೆಗಾಗಿ ಗ್ರಾಮ ಪಂಚಾಯತಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರಿಗೂ ಬೆದರಿಕೆ!

ಟ್ಯಾಂಕರ್ಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಆರಂಭಿಸಿದ್ದು ಯಾಕಾಗಿ? ಜನರಿಗೆ ತುರ್ತಿನ ಸಂದರ್ಭಗಳಲ್ಲಿ ಕುಡಿಯುವ ನೀರು ಒದಗಿಸಲಿಕ್ಕಾಗಿ. ಆದರೆ ಈಗ ಅದರ ಉದ್ದೇಶಗಳೇ ಬದಲಾಗಿವೆ. ಇದನ್ನು ಸರಿಪಡಿಸಬೇಕಾದವರು ಆಡಳಿತದ ಸೂತ್ರ ಹಿಡಿದವರು. ಅವರು ಕ್ರಮ ಕೈಗೊಳ್ಳಬೇಕಾದರೆ ಅನುಪ್ ಚೌಧರಿ ಮಾಡಿದಂತೆ ಜಾಗೃತ ನಾಗರಿಕರು ಇದನ್ನು ಪ್ರಶ್ನಿಸಬೇಕಾಗಿದೆ.