ಟ್ರಾಯ್

ಟ್ರಾಯ್

ಪುಸ್ತಕದ ಲೇಖಕ/ಕವಿಯ ಹೆಸರು
ಗಾಯತ್ರಿ ರಾಜ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೨೦೨೨

ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್‌ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿತ್ವಗಳೇ ಆಗಿದ್ದರೂ ಅವರು ಮಾತನಾಡುವಾಗ ನಮ್ಮವರೇ ಅನಿಸಿಬಿಡುತ್ತದೆ. ಇಷ್ಟವಾಗಿಬಿಡುತ್ತದೆ” ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಎಂ.ಎಲ್. ಪ್ರಸನ್ನ. ಅವರು ಗಾಯತ್ರಿ ರಾಜ್ ಅವರ ʻಟ್ರಾಯ್ʼ ಪುಸ್ತಕದಲ್ಲಿ ಬರೆದ ಮುನ್ನುಡಿಯ ಸಾಲುಗಳು ನಿಮ್ಮ ಓದಿಗಾಗಿ...

“ಮೊದಲಿಗೇ ಒಂದು ಮಾತು ಹೇಳಿಬಿಡುತ್ತೇನೆ. ಗಾಯತ್ರಿ ರಾಜ್ ಅವರು, ಅವರ ಪ್ರೇಮಬರಹಗಳ ಮೂಲಕವೇ ನನಗೆ ಚೆನ್ನಾಗಿ ಪರಿಚಿತರು. ಅವರ ಬರಹದಲ್ಲಿ ನನಗೆ ತುಂಬ ಇಷ್ಟವಾದ ಚಿತ್ರಕ ಶಕ್ತಿಯಿದೆ. ವಿಶೇಷವಾಗಿ ಪ್ರೇಮವನ್ನು ಆಸ್ವಾದಿಸುವ, ಅನುಭಾವಿಸುವ, ನವಿರು ಚಿತ್ರಗಳನ್ನು ಕಟ್ಟಿಕೊಟ್ಟ ಬರಹಗಳನ್ನು ಅದೆಷ್ಟು ಓದಿದ್ದೀನೋ. ಬರೆಯುವುದಾದರೆ ಒಂದೊಳ್ಳೆ ಪ್ರೇಮಕಥೆಯನ್ನೇ ಕಾದಂಬರಿಯಾಗಿಸಿ ಬರೆಯಿರಿ ಎಂದಿದ್ದೆ. ಅವರು ʻಟ್ರಾಯ್' ಕುರಿತ ಕಾದಂಬರಿ ಬರೆದಿದ್ದೇನೆ ಎಂದಾಗ ನಿಜಕ್ಕೂ ಏನೋ ಕಸಿವಿಸಿ. ಆದರೆ, ತೆರೆದು ಓದಿದಾಗ.....ಇದು ಯುದ್ಧದ ಕಥೆ ಮಾತ್ರ ಅಲ್ಲ. ಪ್ರೇಮಕಥೆ ಕೂಡಾ!

"ಟ್ರಾಯ್' ಎಂಬ ಈ ಕಥಾವಸ್ತುವಿನ ಬಗ್ಗೆ ಹೇಳಿಬಿಡುತ್ತೇನೆ. ಗ್ರೀಕ್ ಪುರಾಣಕಥೆಗಳು ನಮ್ಮ ಪುರಾಣಗಳಿಗಿಂತಲೂ ಹೆಚ್ಚು ರೋಮಾಂಚಕ ಮತ್ತು ಅಸಂಬದ್ದ. ಹೂ! ಇದ್ಯಾವ ಸೀಮೆ ದೇವತೆಗಳಪ್ಪಾ? ಮನುಷ್ಯರಿಗಿರೋ ಕಾಮನ್ ಸೆನ್ಸ್ ಕೂಡಾ ಇಲ್ಲದ ಈ ಅಮರ ದೇವತೆಗಳೆಲ್ಲ ಈಗ ಅದೆಲ್ಲಿ ಹೋಗಿ ಸತ್ತಿದ್ದಾರೋ ಎನಿಸುತ್ತದೆ. ಆದರೂ ಅದಕ್ಕೆ 'ಇಂಟರ್‌ ನ್ಯಾಷನಲ್ ಮಾರ್ಕೆಟ್' ಇದೆ. ಹಾಗೆಯೇ, ನಮ್ಮ ಎಲ್ಲ ಪುರಾಣಗಳನ್ನೂ ಅಸಡ್ಡೆಯಿಂದ ಹೀಗಳೆದು ಮಾತನಾಡುವ ಬದಲು, ಫ್ಯಾಂಟಿಸಿ ಅಂತಲೇ ನೋಡಿದ್ದರೆ ಚೆಂದಿರುತ್ತಿತ್ತು. ಏಕೆಂದರೆ ಈಗ ಹಾಲಿವುಡ್ಡನ್ನು ಆಳುತ್ತಿರುವುದು ಬಹುತೇಕ ಗ್ರೀಕ್ ಪೌರಾಣಿಕ ಕಥೆಗಳೇ. ಅದರ ಆಧಾರದಲ್ಲಿಯೇ ಹೊಸಬಗೆಯ ಕಾಮಿಕ್ಸ್ ಹೀರೋಗಳೂ ಬಂದಿದ್ದಾರೆ. ಅದಿರಲಿ.

ನಮ್ಮ ಭಾರತದ ವ್ಯಾಸನ ಹಾಗೆ ಗ್ರೀಕ್ ಇತಿಹಾಸದಲ್ಲಿ ಹೋಮರ್ ಮಹಾಕವಿ. ಆತ ಬರೆದ 'ಇಲಿಯಡ್' ಮತ್ತು 'ಒಡಿಸ್ಸಿ' ಮಹಾಕಾವ್ಯಗಳು ಇತಿಹಾಸಕ್ಕಿಂತ ಹೆಚ್ಚಾಗಿ ಪುರಾಣವಾಗಿಯೇ ಅತ್ಯಂತ ಜನಪ್ರಿಯ. ಅದರಲ್ಲಿ ಇದೊಂದು ಭಾಗ ಇದೆ... ಟ್ರಾಯ್ ಯುದ್ಧ! ಒಂದು ದೇಶದ ರಾಣಿಯೊಬ್ಬಳನ್ನು ಮತ್ತೊಂದು ದೇಶದ ರಾಜ ಹೊತ್ತೊಯ್ದಾಗ ಆ ಎರಡೂ ದೇಶಗಳ ನಡುವೆ ಆ ಕಾರಣಕ್ಕಾಗಿ ಘನಘೋರ ಯುದ್ಧ ನಡೆಯುತ್ತದೆ. ಯುದ್ಧದ ಭೀಕರತೆ ಮತ್ತು ದುರಂತ ಅಂತ್ಯವನ್ನು ಪ್ರತಿಬಿಂಬಿಸುವ ಕಥೆ ಅದು. ಇದನ್ನಿಟ್ಟುಕೊಂಡು ಬಂದಿರುವ ನಾಟಕ, ಸಿನಿಮಾ, ಸೀರಿಯಲ್‌ಗಳಿಗೆ ಲೆಕ್ಕವಿಲ್ಲ. ಪ್ರತಿಯೊಂದರಲ್ಲೂ ಯುದ್ಧದ ವೈಭವೀಕತೆಯೇ ಇದೆ. ಆದರೆ... ಗಾಯತ್ರಿ ರಾಜ್ ಅವರು ಇದನ್ನು ಪ್ರೇಮಕಥೆಯನ್ನಾಗಿಸಿದ್ದಾರೆ!

ಇಲ್ಲಿ ಅವರು ನೋಡಿರುವ ದೃಷ್ಟಿಕೋನವೇ ವಿಭಿನ್ನವಾಗಿದೆ. ಅವರು ಹೆಲೆನ್ ಪಾತ್ರವನ್ನು ಅಸಹಾಯಕ ಹೆಣ್ತನದ, ಪ್ರತಿಭಟನೆಯ, ಹೋರಾಟದ, ಪ್ರೇಮರಾಹಿತ್ಯದಲ್ಲಿ ಬಳಲಿದ, ಇಂದಿನ ನವ್ಯಚಿಂತನೆಯಲ್ಲಿ ಕಾಣಿಸುವ ಸ್ತ್ರೀಧ್ವನಿ ಹೇಗಿರಬೇಕೋ ಅದೆಲ್ಲವೂ ಆಗಿರುವ ಹಾಗೆ ಚಿತ್ರಿಸಿದ್ದಾರೆ. ಹೌದು, ಚಿ. ಉದಯಶಂಕರ್ ಅವರು ಕಾಳಿದಾಸನ ನಿಜವಾದ ಹೆಂಡತಿಯನ್ನೇ ಕರೆತಂದು ಕಾಳಿದಾಸ ಒಲಿದ ವೇಶ್ಯೆಯಾಗಿ ಚಿತ್ರಿಸಿ ವಿಮರ್ಶಕರ ಮನಸ್ಸು ಗೆದ್ದರಲ್ಲ, ಅಂತಹಾ ಕವಿಸ್ವಾತಂತ್ರ್ಯ ಇದು. ಇಲ್ಲಿ ಗಾಯತ್ರಿ ರಾಜ್ ಅವರು ಬರೀ ಕಥೆ ಹೇಳುತ್ತಿಲ್ಲ, ಪದಗಳಲ್ಲಿ ದೃಶ್ಯರೂಪಕವಾಗಿ ಚಿತ್ರಿಸಿಕೊಟ್ಟಿದ್ದಾರೆ. ಹಾಗಾಗಿಯೇ ಈ ಕಾದಂಬರಿ ನಮಗೆ ಹೆಲೆನ್ ಮತ್ತು ಪೆರಿಸ್‌ ನಡುವಿನ ಪ್ರೇಮ ಮಾತ್ರವಲ್ಲ, ದಾರುಣವಾದ ಯುದ್ಧದ ಭೀಕರತೆಯನ್ನು ಕೂಡಾ ಬಿಂಬಿಸುತ್ತದೆ. ರಕ್ಕಸನಂತಿದ್ದ ಅಖಿಲೀಸ್ ಕೊನೆಗೆ ಪ್ರೀತಿಗಾಗಿ ಹಂಬಲಿಸುವುದು, ಹೆಲೆನ್ ಮತ್ತು ಪೆರಿಸ್‌ ಪ್ರೀತಿ, ಅದಿಷ್ಟೇ ಅಲ್ಲ. ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ತಾಗಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರ ಬರಹ ನಿಜವಾಗಿ ಗೆಲ್ಲುವುದು ಇಲ್ಲಿಯೇ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿತ್ವಗಳೇ ಆಗಿದ್ದರೂ ಅವರು ಮಾತನಾಡುವಾಗ ನಮ್ಮವರೇ ಅನಿಸಿಬಿಡುತ್ತದೆ. ಇಷ್ಟವಾಗಿಬಿಡುತ್ತದೆ.

ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗಬಲ್ಲ ಚೆಂದದ ಕಾದಂಬರಿ ಇದು. ಈ ಮೊದಲೇ ಹೇಳಿದಂತೆ ಮೊದಲ ಇಪ್ಪತ್ತೈದು ಭಾಗ ಹೆಲೆನ್ ಮತ್ತು ಪೆರಿಸ್‌ ಪ್ರೇಮವೇ ಇದನ್ನು ಆವರಿಸಿಕೊಂಡಿದೆ. ನಿಧಾನಕ್ಕೆ ಕಥೆ ದ್ವೇಷ ವೈಷಮ್ಯಗಳಿಗೆ ತಿರುಗುವಾಗ ಎಲ್ಲ ಪಾತ್ರಗಳೂ ಒಂದೊಂದಾಗಿ ತಮ್ಮ ಹಿನ್ನಲೆಗಳೊಂದಿಗೆ ಪರಿಚಯವಾಗುತ್ತಾ ಹೋಗುತ್ತವೆ. ಆ ಲೆಕ್ಕದಲ್ಲಿ ಇವರ ನಿರೂಪಣೆಯು ಯಾವುದೇ ಸಿನಿಮಾ ಅಥವಾ ಧಾರಾವಾಹಿಗೆ ಕಮ್ಮಿ ಇಲ್ಲ ಎನ್ನಬಹುದು. ಕಾದಂಬರಿ ಬರೆಯುವ ಮೊದಲು ಇದೆಲ್ಲವನ್ನೂ ಅವರು ಅಧ್ಯಯನ ಮಾಡಿದ್ದೇನೆ ಎಂದು ಹೇಳಿರುವುದರಿಂದ ಆ ನೆರಳು ಇಲ್ಲಿ ಕಾಣಿಸಿದರೆ ಅಚ್ಚರಿಯೇನಿಲ್ಲ. ಇದು ಪಕ್ಕಾ ಒಂದು ಹಾಲಿವುಡ್ ಚಿತ್ರದ ಹಾಗೆಯೇ ಭಾಸವಾಗುತ್ತದೆ. ಆದರೆ.. ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರತಿಹಂತದಲ್ಲೂ ಭಾವುಕಗೊಳಿಸುತ್ತದೆ. ಪ್ರೀತಿಯಲ್ಲಿ ಹೇಗೆ ತಲ್ಲಣಗಳನ್ನು ಸುಂದರವಾಗಿ ಚಿತ್ರಿಸಿದ್ದಾರೋ ಹಾಗೆಯೇ ಯುದ್ಧ ಮತ್ತು ಇತರೆ ಪಾತ್ರಗಳ ಚಿತ್ರಣಗಳಲ್ಲಿ ಕೂಡಾ ಅವರು ಇಂಥದ್ದೇ ಚಿತ್ರಕ ಶಕ್ತಿಯನ್ನು ಬಳಸಿಕೊಂಡಿರುವುದು ಗಮನಾರ್ಹ. ಟ್ರಾಯ್ ಕುರಿತ ಸಿನಿಮಾ ನೋಡಿಲ್ಲದವರಿಗೆ ಮಾತ್ರವಲ್ಲ, ನೋಡಿರುವವರಿಗೂ ಕೂಡಾ ಇದು ಒಂದು ಅದ್ಭುತ ರಸಾನುಭವವನ್ನು ನೀಡಬಲ್ಲುದು ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.

ಈ ಕಥೆಯನ್ನು ನಿರೂಪಿಸುವ ಮೊದಲೇ ಗಾಯತ್ರಿ ರಾಜ್ ಅವರು ಒಂದು ಸ್ಪಷ್ಟನೆ ನೀಡಿಬಿಟ್ಟಿದ್ದಾರೆ. ಈ ಕಥೆ ಪುರಾಣ, ಇತಿಹಾಸ ಮತ್ತು ಜಾನಪದ ಎಲ್ಲ ಸೇರಿರುವ ಕಥೆ. ಪುರಾಣ ಏಕೆಂದರೆ ಈ ಕಥೆಯಲ್ಲಿ ದೇವತೆಗಳೇ ಸ್ವರ್ಗದಿಂದ ಇಳಿದುಬಂದು ಮಾನವರ ಜೊತೆ ಸೇರಿ ಯುದ್ಧ ಮಾಡುತ್ತಾರೆ. ತಮ್ಮ ತಮ್ಮಲ್ಲಿ ಹೊಡೆದಾಡುತ್ತಾರೆ. ಇತಿಹಾಸಕಾರರು ಇದು ಸತ್ಯಕಥೆ ಎಂದು ಪ್ರತಿಪಾದಿಸುತ್ತಾ ಈಗಿನ ಟರ್ಕಿಯೇ ಆಗಿನ ಟ್ರಾಯ್ ಆಗಿತ್ತು ಎಂದು ನಮ್ಮ ದ್ವಾರಕೆಯನ್ನು ಹೋಲಿಸುವ ರೀತಿ ವಾದ ಮುಂದಿಡುತ್ತಾರೆ. ಜಾನಪದ ವಿದ್ವಾಂಸರು ಇದನ್ನು ಒಂದು ಅಪ್ಪಟ ಜಾನಪದ ಕಥೆ ಎಂದು ಸಾಕ್ಷೀಕರಿಸುತ್ತಾರೆ. ಆದರೆ, ಗಾಯತ್ರಿ ರಾಜ್ ಅವರ ಪಾಲಿಗೆ ಇದು ಒಂದು ಕಥೆ ಅಷ್ಟೇ... ಕೇವಲ ಕಥೆ, ಅದರಲ್ಲೂ ಅವರ ಕಣ್ಣಲ್ಲಿ, ಇರುವ ಪಾತ್ರಗಳಿಗೆ ಹೊಸ ದೃಷ್ಟಿಕೋನ ಹರಿಸಿದಾಗ ಕಾಣುವ ಪ್ರೇಮಕಥೆ. ಹಾಗಾಗಿ ಇದರಲ್ಲಿ ಅನಗತ್ಯವಾದ ಇತಿಹಾಸ, ತತ್ವಜ್ಞಾನ, ಸಂದೇಶಗಳನ್ನು ಹುಡುಕಿ ಹೋಗಬೇಕಾಗಿಲ್ಲ. ಇದ್ದ ಹಾಗೆ ಕಥೆಯಾಗಿ ಒಪ್ಪಿಕೊಂಡರೆ ಚೆನ್ನ.

ನಿಜವಾಗಿ ಇದು ಬೇಕಿತ್ತು ಎನಿಸುತ್ತದೆ. ಜನ್ನನ ಯಶೋಧರ ಚರಿತೆಯ ಅಮೃತಮತಿಯ ಪ್ರೇಮವನ್ನು ಇನ್ನೂ ಸಹ ಅರ್ಥ ಮಾಡಿಕೊಳ್ಳಲಾಗದಂಥಹಾ ಮನೋವಿದ್ವಾಂಸರಿಗೆ ಹೆಲೆನ್‌ಳ ಪ್ರೀತಿ ಕಬ್ಬಿಣದ ಕಡಲೆಯಲ್ಲ. ಆದರೆ, ಒಂದು ರೀತಿಯಲ್ಲಿ ಗಂಡನನ್ನು ಬಿಟ್ಟು ಯಾರೊಂದಿಗೋ ಓಡಿಹೋದವಳು ಎಂಬ ಅಪಖ್ಯಾತಿಯ ಹೆಲೆನ್‌ಳನ್ನು ಗಾಯತ್ರಿ ರಾಜ್ ಅವರು ಅಸಹಾಯಕತೆಯ, ಪ್ರತಿಭಟನೆಯ ಹೆಣ್ಣಾಗಿ ಚಿತ್ರಿಸಿರುವುದು ಗಮನಿಸಬೇಕಾದ ಅಂಶ. ಪ್ರೇಮ ಮತ್ತು ಭಾವುಕತೆಗೆ ಅವರು ಆದ್ಯತೆ ನೀಡಿದ್ದಾರೆ. ಈ ವಿಭಿನ್ನ ನೋಟವನ್ನಿಟ್ಟುಕೊಂಡು ಅವರು ನಿಮ್ಮನ್ನು ಭಾವುಕ ಪ್ರಪಂಚವೊಂದಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತಾರೆ. ಆದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಇದು ಖಂಡಿತವಾಗಿ ದೊಡ್ಡವರಿಗಾಗಿ ರಚಿಸಿದ ಫ್ಯಾಂಟಿಸಿ ಕಾದಂಬರಿ. ಚಿಣ್ಣರ ಲೋಕದ ಕಲ್ಪನೆಗಳಿಗೆ ಸಾಟಿಯಾಗಿ ಇಲ್ಲಿ ದೊಡ್ಡವರ ಕಲ್ಪನೆಗಳಲ್ಲಿ ಅರಳುವ ಚಿತ್ರಗಳನ್ನು, ಭಾವನೆಗಳನ್ನು, ಅಂಥದೇ ಫ್ಯಾಂಟಸಿಯ ರೂಪದಲ್ಲಿ ಉಣಬಡಿಸಿದ್ದಾರೆ.

ಪ್ರತಿ ಅಧ್ಯಾಯವು ಕೂಡ ಓದುಗರನ್ನು ಸೆಳೆದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಕಾದಂಬರಿಗೆ ಲೇಖಕಿ ಇನ್ನಷ್ಟು ಸಮಯ ನೀಡಬೇಕಾಗಿತ್ತು. ಏಕೆಂದರೆ, ಕೆಳವೊಂದು ಭಾವುಕಗೊಳಿಸಬೇಕಾದ ಅನೇಕ ಗಟ್ಟಿ ದೃಶ್ಯಗಳು ಹಾಗೇ ಜಾರಿ ಹೋದವೇನೋ, ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಬಹುದೇನೋ ಎನಿಸುತ್ತದೆ. ಇದು ನನ್ನ ವಯಕ್ತಿಕ ಅಭಿಪ್ರಾಯ ಅಷ್ಟೆ. ನಿಮಗೆ ಬೇರೆಯದೇ ರೀತಿಯಲ್ಲಿ ಅದು ತಲುಪಬಹುದು. ಏಕೆಂದರೆ, ಈ ಕಾದಂಬರಿಗೆ ಆ ಶಕ್ತಿ ಇದೆ.” ಎಂದಿದ್ದಾರೆ. ೧೭೬ ಪುಟಗಳ ಈ ರೋಚಕ ಕಾದಂಬರಿಯನ್ನು ಒಮ್ಮೆ ನೀವು ಕೈಗೆತ್ತಿಕೊಂಡಿರೆಂದರೆ ಮತ್ತೆ ಕೆಳಗಿಡಲಾರಿರಿ.