ಟ್ರೈನ್ ಟು ಪಾಕಿಸ್ತಾನ್

ಟ್ರೈನ್ ಟು ಪಾಕಿಸ್ತಾನ್

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಖುಷ್ವಂತ್ ಸಿಂಗ್, ಕನ್ನಡಕ್ಕೆ: ಡಾ. ಎಂ.ಬಿ.ರಾಮಮೂರ್ತಿ
ಪ್ರಕಾಶಕರು
ಲಂಕೇಶ್ ಪ್ರಕಾಶನ, ಬಸವನಗುಡಿ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೫.೦೦, ಮುದ್ರಣ: ೨೦೦೯

ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ. ಎಂ.ಬಿ.ರಾಮಮೂರ್ತಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪುಸ್ತಕಕ್ಕೆ ಪಿ. ಲಂಕೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ “ಈ ಸರ್ದಾರ್ಜಿ (ಖುಷ್ವಂತ್ ಸಿಂಗ್) ಬಗ್ಗೆ ವಿಶೇಷವೇನೆಂದರೆ, ಜೀವನವನ್ನು ಬಹುವಾಗಿ ಪ್ರೀತಿಸುವ ಈತ ಎಲ್ಲ ಜಾತಿಯ ಜನರನ್ನು ಪ್ರೀತಿಸುತ್ತಾನೆ. ಎಲ್ಲ ಜಾತಿಯ ಜನರ ದೌರ್ಬಲ್ಯ, ಪ್ರೀತಿ, ದಾಕ್ಷಿಣ್ಯ ಎಲ್ಲವನ್ನೂ ಬಲ್ಲ. ನಿರೀಶ್ವರವಾದಿಯಾದ್ದರಿಂದ ಈತನಿಗೆ ಧರ್ಮದ ಮಿತಿ ಗೊತ್ತು; ಜನಸಾಮಾನ್ಯರಿಗೆ ಧರ್ಮ ಎಷ್ಟು ಮುಖ್ಯ ಎಂಬುದೂ ಗೊತ್ತು. ಹೀಗಾಗಿ ಖುಷ್ವಂತ್ ಸಿಖ್ ಜನರ ಶಕ್ತಿ ಮತ್ತು ಅಸಹಾಯಕತೆ, ಮುಸ್ಲಿಮರ ತ್ರಾಣ ಮತ್ತು ಹುಂಬತನ, ಹಿಂದೂಗಳ ಗುಣ ಮತ್ತು ದೋಷ- ಎಲ್ಲವನ್ನೂ ಬಲ್ಲ. ಈ ಖುಷ್ವಂತ್ ಸಿಂಗ್ ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಇದನ್ನು ಸರ್ದಾರ್ಜಿ ಗಂಭೀರವಾಗಿ, ಅಳುಮೋರೆಯಿಂದ ಮಾಡಿಲ್ಲ ; ಈತ ನಗುನಗುತ್ತಲೇ, ಕುಡಿಯುತ್ತಲೇ, ಬದುಕನ್ನು ಪ್ರೀತಿಸುತ್ತಲೇ ಮಾಡಿದ್ದಾನೆ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ (ಈಚಿನ ವರ್ಷಗಳಲ್ಲಿ) ಸಿಗಬೇಕಾಗಿದ್ದರೆ ಅದು ಸಿಗಬೇಕಾದ್ದು ಖುಷ್ವಂತ್ ಗೆ. “ ಎಂದಿದ್ದಾರೆ.

ಕಾದಂಬರಿಯ ಕನ್ನಡ ಅನುವಾದಕರಾದ ಡಾ. ಎಂ. ಬಿ. ರಾಮಮೂರ್ತಿಯವರು ತಮ್ಮ ಹಾಗೂ ಖುಷ್ವಂತ್ ಸಿಂಗ್ ಅವರ ಒಡನಾಟದ ಕುರಿತು ಬರೆದು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅವರು ತಮ್ಮ ಮಾತಿನಲ್ಲಿ “ಖುಷ್ವಂತ್ ರ ಮೊದಲ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್' ನನ್ನು ಕನ್ನಡದ ಓದುಗರ ಮುಂದಿಡುವ ಸದವಕಾಶ ನನಗೆ ದೊರೆತದ್ದು ನನ್ನ ಸುದೈವವೆಂದೇ ತಿಳಿಯುವೆ. 

ಖುಷ್ವಂತರ ಈ ಅಭಿಜಾತ ಸಾಹಿತ್ಯಕೃತಿಯನ್ನು ಕೈಗೆತ್ತಿಕೊಂಡಿರೆಂದಾದರೆ ನೀವು ವಿಶಿಷ್ಟ ಅನುಭೂತಿಗೊಳಗಾಗಿ ಮುಗಿಸುವ ತನಕ ಇದರ ಗುಂಗಿನಿಂದ ಹೊರಬರಲಾರಿರಿ ಎಂದೇ ನಾನು ಭಾವಿಸುವೆ. ಕಾಲ್ಪನಿಕ ಎಂದು ಅನ್ನಿಸದೆ ಇತಿಹಾಸದ ಘಟನೆಗಳನ್ನು (ಪ್ರಸ್ತುತವನ್ನೂ ಸಹ!) ಅರ್ಥೈಸಿಕೊಳ್ಳುವುದಕ್ಕೆ ಹಾಗೂ ವಿಶ್ಲೇಷಿಸುವುದಕ್ಕೆ ಮಾದರಿಯನ್ನು ಹುಟ್ಟುಹಾಕುವಂಥ, ಮನುಷ್ಯರಲ್ಲಿ ಒಳ್ಳೆಯ ಅಂಶಗಳು ಮೊಳಕೆಯೊಡೆಯಲು ಸಹಕಾರಿಯಾಗುವಂಥ, ನಮ್ಮಲ್ಲಿ ಪರಿಹಾರಕಾರಿಯಾಗುವಂಥ ಸಂಸ್ಕಾರ ಬೆಳೆಯಲು ನೆರವಾಗುವಂಥ ಅದ್ಭುತ ಕೃತಿ ಇದು. ಅತ್ಯಂತ ವಿನೀತವಾದ ಹಾಗೂ ಜಾಗತಿಕ ಸತ್ಯಗಳನ್ನು ತೋರುವುದರೊಂದಿಗೇ ಹಿಂಸೆಯನ್ನು ಮೀರುವ ಹಾದಿಯನ್ನು ಹುಡುಕುತ್ತದೆ ಈ ಕೃತಿ.” ಹೇಳುತ್ತಾರೆ.

ಲಂಕೇಶ್ ಪತ್ರಿಕೆಯ ಸಂಪಾದಕರಾದ ಪಿ.ಲಂಕೇಶ್ ಅವರು ಖುಷ್ವಂತ್ ಸಿಂಗ್ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಲಂಕೇಶರ ಮಗಳು ಗೌರಿ ಲಂಕೇಶ್ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ‘ಟ್ರೈನ್ ಟು ಪಾಕಿಸ್ತಾನ್' ಪುಸ್ತಕದ ಮೊದಲೆರಡು ಪ್ರಾರಾಗಳೇ ನಿಮ್ಮನ್ನು ಇಡೀ ಪುಸ್ತಕ ಓದಿವಂತೆ ಮಾಡಿ ಬಿಡುತ್ತದೆ. ಮೊದಲ ಪ್ಯಾರಾ ಹೀಗಿದೆ ನೋಡಿ…

“೧೯೪೭ ರ ಬೇಸಿಗೆ, ಭಾರತದ ಇತರ ಬೇಸಿಗೆ ಕಾಲಗಳಂತಿರಲಿಲ್ಲ. ಆ ವರ್ಷ ಭಾರತದಲ್ಲಿನ ಹವಾಮಾನ ಕೂಡ ಬೇರೆಯೇ ತರಹದ್ದಾಗಿದೆಯೆಂಬಂತೆ ಭಾಸವಾಗುತ್ತಿತ್ತು. ಮಾಮೂಲಿಗಿಂತ ಕೊಂಚ ಹೆಚ್ಚಿನ ಸೆಖೆ ಇದ್ದು ಧೂಳು, ಒಣಹವೆಯಿಂದ ಕೂಡಿದ ಬೇಸಿಗೆ ದೀರ್ಘವಾಗಿದೆಯೆಂದೆನಿಸುತ್ತಿತ್ತು. ಮುಂಗಾರು ಮಳೆ ಇಷ್ಟೊಂದು ತಡವಾಗಿದ್ದುದು ಯಾರಿಗೂ ನೆನಪಿಲ್ಲ. ವಾರಗಳಿಂದಲೂ ಚೆದುರಿದ ಮೋಡಗಳು ನೆರಳಿನಷ್ಟೇ ಚೆಲ್ಲಿದ್ದವೇ ವಿನಃ ಮಳೆ ಬಿದ್ದದ್ದಿಲ್ಲ. ತಾವು ಮಾಡಿದ ಪಾಪಕೃತ್ಯಗಳಿಗಾಗಿಯೇ ದೇವರು ತಮ್ಮನ್ನು ಶಿಕ್ಷಿಸುತ್ತಿದ್ದಾನೆಂದು ಜನರು ಮಾತಾಡಿಕೊಳ್ಳ ಹತ್ತಿದ್ದರು.

ತಾವು ಪಾಪ ಮಾಡಿರಬೇಕೆಂದು ಕೆಲವರಿಗೆ ಅನ್ನಿಸುತ್ತಿದ್ದುದು ಸಕಾರಣವಾಗಿಯೇ ಇತ್ತು. ಹೋದ ವರ್ಷ ದೇಶವು ಹಿಂದೂ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನವಾಗಿ ವಿಭಜನೆ ಹೊಂದಲಿರುವ ಬಗ್ಗೆ ಹರಡಿದ ವರದಿಗಳಿಂದ ಕಲ್ಕತ್ತಾದಲ್ಲಿ ಕೋಮುಗಲಭೆಗಳು ಭುಗಿಲೆದ್ದು ಕೆಲವೇ ತಿಂಗಳುಗಳಲ್ಲಿ ಸಾವಿರಾರು ಜನರು ಮರಣ ಹೊಂದಿದ್ದರು. ಹಿಂದೂಗಳು ಸರಿಯಾಗಿ ಯೋಜಿಸಿಕೊಂಡೇ ಈ ರೀತಿ ಹತ್ಯೆಗೈಯ್ಯಲು ಪ್ರಾರಂಭಿಸಿದ್ದಾರೆಂದು ಮುಸ್ಲಿಮರು ದೂರಿದರು. ಮುಸ್ಲಿಮರೇ ಇದಕ್ಕೆ ಪೂರ್ತಿ ಹೊಣೆ ಎಂದು ಹಿಂದೂಗಳು ವಾದಿಸಿದರು. ಸತ್ಯ ಸಂಗತಿ ಎಂದರೆ ಎರಡೂ ಕಡೆಯವರೂ ಕೊಂದಿದ್ದರು. ಎರಡೂ ಕಡೆಯವರು ಕೈಗೆ ಸಿಕ್ಕಿದ್ದರಲ್ಲಿ ಇರಿಯುತ್ತ, ತಿವಿಯುತ್ತ, ದೊಣ್ಣೆಗಳಿಂದ ಬಡಿಯುತ್ತ, ಗುಂಡು ಹಾರಿಸಿ ಕೊಂದಿದ್ದರು...." 

ಸುಮಾರು ೧೮೫ ಪುಟಗಳ ಈ ಕಾದಂಬರಿಯನ್ನು ಅನುವಾದಕರು ತಮ್ಮ ಗುರು ಪಿ.ಲಂಕೇಶ್, ಅಭಿಮಾನಮೂರ್ತಿ ಖುಷ್ವಂತ್ ಸಿಂಗ್, ಅಪ್ಪಟ ರೈತ ಮಹಿಳೆಯಾಗಿದ್ದ ತಮ್ಮ ಅಮ್ಮ ಪುಟ್ಟಮ್ಮ ಮತ್ತು ಅಪ್ಪ ಕೆ.ಆರ್.ಬಸಪ್ಪ ಇವರಿಗೆ ಅರ್ಪಿಸಿದ್ದಾರೆ. ಪುಸ್ತಕದ ತುಂಬೆಲ್ಲಾ ರೇಖಾ ಚಿತ್ರಗಳು ಇರುವುದು ಕಥೆಗೆ ಪೂರಕವಾಗಿವೆ. ಉತ್ತಮ ಓದಿಗೆ ಒಂದು ಒಳ್ಳೆಯ ಪುಸ್ತಕ ಇದು ಎಂಬುವುದರಲ್ಲಿ ಎರಡು ಮಾತಿಲ್ಲ.