ಠೇವಣಿ

ಠೇವಣಿ

ಠೇವಣಿಯೆಂದೊಡನೆ ಸ್ಮೃತಿಪಟಲದಲ್ಲಿ ಬ್ಯಾಂಕ್ ಗಳು, ಸಹಕಾರಿ ಸಂಘಗಳು, ಅಂಚೆ ಕಛೇರಿ, ನಾನಾ ಹಣಕಾಸು ಸಂಸ್ಥೆಗಳು ನೆನಪಿಗೆ ಬರುತ್ತವೆ. ಮಿಗತೆಯಾದ ಹಣವನ್ನು ನಿರ್ದಿಷ್ಟ ಅವಧಿಗೆ ಬ್ಯಾಂಕ್‌ನಲ್ಲಿರಿಸುವುದೇ ಠೇವಣಿ. ಕಷ್ಟಕಾಲ ಅಥವಾ ಅಗತ್ಯ ಬಂದ ದಿನಗಳಿಗೆ ಇರಲಿ ಎಂದು ಮಂಜಾಗರೂಕವಾಗಿ ಈ ಠೇವಣಿಯನ್ನಿರಿಸುತ್ತಾರೆ. ನಿಗದಿತ ದರದ ಬಡ್ಡಿ ಸೇರಿ ಈ ಹುಂಡಿಯು ಬೆಳೆಯತೊಡಗುವುದು ಆರ್ಥಿಕವಾಗಿ ವರದಾನ. ಈ ಠೇವಣಿ ಮೊಬಲಗು ಭವಿಷ್ಯದ ಭದ್ರತೆ ಎಂದೇ ಪರಿಗಣಿಸಲ್ಪಡುತ್ತದೆ. ಠೇವಣಿದಾರ ನಿಧನರಾದರೆ ಆ ಮೊಬಲಗು ಮೃತರ ವಾರಸುದಾರರಿಗೆ ಸಂದಾಯವಾಗುತ್ತದೆ. ಆದುದರಿಂದ ಠೇವಣಿಯು ಮುಂದಿನ ಪೀಳಿಗೆಗೂ ಭದ್ರತೆಯನ್ನು ನೀಡುತ್ತದೆ.

ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಟ್ಟು ಸುಂದರ ನಾಳೆಗಳ ಕನಸು ಕಾಣುವ ಕೆಲವರಿದ್ದರೆ ಒಂದು ಹೊತ್ತಿನ ಗಂಜಿಗೂ ಪರದಾಟ ನಡೆಸುವ ಹಲವರಿದ್ದಾರೆ. ಅವರಲ್ಲಿ ಬ್ಯಾಂಕ್ ಠೇವಣಿಯಿರುವುದಿಲ್ಲ. ಆದರೆ ಅವರ ಹೃದಯದಲ್ಲಿ ಭಾವನೆಗಳ ಠೇವಣಿಯಿರುತ್ತದೆ. ಭಾವನೆಗಳ ಠೇವಣಿಯುಳ್ಳವರನ್ನು ಹೃದಯ ಶ್ರೀಮಂತರು ಎನ್ನುವರು. ಬ್ಯಾಂಕ್ ಠೇವಣಿದಾರರು ಸಿರಿವಂತರು ಖಂಡಿತ. ಅವರ ಹೃದಯ ಸಿರಿವಂತಿಕೆ ಪ್ರಶ್ನಾರ್ಹ, ಹೊಟ್ಟೆ ಬಟ್ಟೆಯ ಖರ್ಚುಗಳಿಗೆ ಜಿಪುಣತನ ತೋರಿಸಿ ಸುಂದರ ನಾಳೆಗಳಿಗಾಗಿ ಪರಿತಪಿಸುವುದಕ್ಕಿಂತ ಇಂದಿನ ದಿನವನ್ನು ಹೆಚ್ಚು ಸಂತಸದಿಂದ, ಬೇಕಷ್ಟು ತಿಂದುಟ್ಟು ಇಂದಿನ ದಿನವನ್ನು ಸುಂದರಗೊಳಿಸುವುದೂ ಹೆಚ್ಚು ಸಮಂಜಸ. ಮಿಗತೆಯಿದ್ದರೆ ಅಗತ್ಯವಿರುವವರತ್ತ ಗಮನಿಸಿ ಅವರಿಗೆ ಕನಿಷ್ಠ ಪ್ರಮಾಣದಲ್ಲಾದರೂ ಸಹಕರಿಸಿದರೆ ಅವರೂ ಹೃದಯ ಶ್ರೀಮಂತರು. ತಾನುಂಡುಟ್ಟು ಉಳಿದುದರಲ್ಲಿ ಪುಟ್ಟದಾದ ಅಂಶವನ್ನಾದರೂ ಸಮಾಜಕ್ಕೆ ವಿತರಿಸಿ ಉಳಿದುದನ್ನು ಬ್ಯಾಂಕ್ ಠೇವಣಿಯಿಟ್ಟರೆ ಭಗವದನುಗ್ರಹ ಖಂಡಿತ.

ಭಗವಂತನು ಮನುಷ್ಯನ ಬ್ಯಾಂಕ್ ಠೇವಣಿಯನ್ನು ನೋಡುವುದಿಲ್ಲ. ಅವನ ಪುಣ್ಯದ ಹುಂಡಿಯನ್ನು ಗಮನಿಸುತ್ತಾನೆ. ಭಾವ ಶುದ್ಧವಾಗಿದ್ದರೆ ಅದೂ ಪುಣ್ಯವೇ. ತನಿಖಾ ದಳಗಳು ದಿನಾ ನಾನಾ ಅಧಿಕಾರಿಗಳು, ದಲ್ಲಾಳಿಗಳು,, ರಾಜಕೀಯ ನಾಯಕರು ಮೊದಲಾದವರನ್ನು ಶೋಧಿಸಿ ಕೊಟ್ಯಂತರ ರೂಪಾಯಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುತ್ತಾರೆ. ಅವರ ಠೇವಣಿಗಳೇನೋ ದೊಡ್ಡ ಪ್ರಮಾಣದಲ್ಲಿದ್ದರೆ, ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಗೋಣಿ ಚೀಲಗಳಲ್ಲಿ ಮನೆಯೊಳಗೂ ತುಂಬಿಟ್ಟಿರುತ್ತಾರೆ. ಆ ಸಂಪತ್ತು (ಪಾಪದ) ಬಡ ಬಗ್ಗರನ್ನು ದೋಚಿಯೇ ಗಳಿಸಿದುದಾಗಿರುತ್ತದೆ. ಅಂತಹ ಠೇವಣಿಗೆ ಭಗವಂತನ ದೃಷ್ಟಿಯಲ್ಲಿ ಕಿಮ್ಮತ್ತೂ ಬೆಲೆ ಇರುವುದಿಲ್ಲ. ಭಾವಶೂನ್ಯನಾದವನು ಎಷ್ಟು ಗಳಿಸಿದರೂ ದೇವರ ದೃಷ್ಟಿಯಲ್ಲಿ ದಟ್ಟ ದರಿದ್ರನೇ ಆಗಿರುತ್ತಾನೆ.

ಮನಸ್ಸಿನ ಸಿರಿವಂತಿಕೆಗೆ ನಾಶವಿಲ್ಲ. ನಾವು ಇತರರಿಗೆ ನಮ್ಮ ಹೃದಯದಿಂದ ಪ್ರೀತಿಯನ್ನು ಕೊಟ್ಟರೆ ಅವನ ಹೃದಯ ಇನ್ನೂ ಶ್ರೀಮಂತವಾಗುತ್ತದೆಯೇ ಹೊರತು ಬಡವಾಗುವುದಿಲ್ಲ. ಶಾಶ್ವತವಾದ ಶ್ರೀಮಂತಿಕೆಯ ಠೇವಣಿಗಳು ನಮ್ಮಲ್ಲಿರುವ ಕರುಣೆ, ದಯೆ, ಅನುಕಂಪ, ಸಹಕಾರಗಳೆ ಹೊರತು ಬ್ಯಾಂಕ್ ಠೇವಣಿ ಅಥವಾ ಇತರ ಸಂಪತ್ತುಗಳಲ್ಲ. ಒಳ್ಳೆಯ ಮನಸ್ಸಿನವನಿಗೆ ನಾಳೆಯೂ ಸುಖ ಕಾದಿರುತ್ತದೆ. ಎಲ್ಲ ದಿನಗಳೂ ಸುಂದರವೇ ಆಗಿರುತ್ತದೆ. ಆರ್ಥಿಕ ಶ್ರೀಮಂತನಿಗೆ ಇಂದೂ ಭಯ, ನಾಳೆಯೂ ಭಯ ಕಾದಿದೆ.

ಪುಣ್ಯ ಸಂಚಯಕ್ಕೆ ಸದ್ಭಾವನೆ ಮುಖ್ಯವೇ ಹೊರತು ಲೌಕಿಕ ಸಂಪತ್ತಲ್ಲ. ಲೌಕಿಕ ಸಂಪತ್ತು ಪಾರಮಾರ್ಥಿಕ ಭದ್ರತೆಗೆ ಠೇವಣಿಯಾಗದು. ಪಾರಮಾರ್ಥಿಕ ಭದ್ರತೆಯು ಪುಣ್ಯದ ಗಂಟನ್ನು ಆಧರಿಸಿದೆ. ಪಾರಮಾರ್ಥಿಕ ಠೇವಣಿಯಲ್ಲಿ ಪಾಪವೂ ಸೇರಿರುತ್ತದೆ. ಪಾಪವು ದಾರಿದ್ರ್ಯಕ್ಕೆ ಸಮಾನವಾಗಿದೆ. ಪಾಪ ಸಂಚಯನ ಸುಲಭ ಮತ್ತು ಪುಣ್ಯಸಂಚಯನ ಅತ್ಯಂತ ಕಠಿಣ. ಕಠಿಣವಾದುದನ್ನು ಆಯ್ದು ಶಾಶ್ವತ ಸುಖವನ್ನು ಅನುಭವಿಸುವುದು ಶ್ರೇಯಸ್ಕರ. ಶಾಶ್ವತವಾದ ದುಃಖ ಯಾರಿಗೂ ಅನಪೇಕ್ಷಣೀಯ. ಪುಣ್ಯ ಸಂಚಯನಕ್ಕೆ ದಾನ ಮಾಡು, ಪೂಜೆ ಮಾಡು, ಹೋಮ ಮಾಡು ಎಂದು ಯಾರೂ ಹೇಳಿಲ್ಲ. ಇವೆಲ್ಲವೂ ಅವನವನಲ್ಲಿರುವ ಶಕ್ತಿಗನುಗುಣವಾಗಿರುತ್ತದೆ. ಸಹಾಯ ಮಾಡು, ಉಪಕಾರಮಾಡು, ಸೇವೆ ಮಾಡು, ಜಪಿಸು, ಒಳ್ಳೆಯ ಮಾತಿರಲಿ, ಮೋಸ ಮಾಡ ಬೇಡ, ಕದಿಯಬೇಡ, ನೋಯಿಸ ಬೇಡ ಹೀಗೆ ಯಾವುದೇ ವೆಚ್ಚವಿಲ್ಲದ ಜೀವನಕ್ರಮವು ಪುಣ್ಯದ ಠೇವಣಿಯನ್ನು ಬೆಳೆಸುತ್ತಾ ಹೋಗುತ್ತದೆ. ಪುಣ್ಯದ ಠೇವಣಿಯು ಬಹಳ ದೊಡ್ಡದಾದ ಮೇಲೆ, ಮತ್ತೆ ಪಾಪಕರ ಕೃತ್ಯಗಳು ನಮ್ಮಿಂದ ಘಟಿಸಲು ತೊಡಗಿದರೆ ಪುಣ್ಯದ ಗಂಡು ಕ್ಷಯಿಸಲು ಆರಂಭಿಸುತ್ತದೆ. ಆದುದರಿಂದ ಪುಣ್ಯದ ಠೇವಣಿ ಸೊರಗದಂತೆ ಸಜ್ಜನಿಕೆಯಿಂದ ಬಾಳುವುದೇ ಮಾಧವತ್ವ ಪಡೆಯಲು ರಾಜರಸ್ತೆಯಾಗಿದೆ. 

ದಿನಾ ಮಕ್ಕಳಿಗೆ ಕಥೆ ಹೇಳೋಣ, ಇತರರ ಮನಸನ್ನು ರಂಜಿಸೋಣ, ಜ್ಞಾನ ಪ್ರಸಾರದ ಯಜ್ಞದಲ್ಲಿ ತೊಡಗೋಣ, ಪರಿಸರವನ್ನು ಶುಚಿಯಾಗಿಡೋಣ, ದರ್ಪರಹಿತವಾಗಿ ನಗುನಗುತ್ತಾ ಮಾತನಾಡೋಣ……. ಇಂತಹ ನಡೆನುಡಿಗಳು ನಮ್ಮನ್ನು ಎತ್ತರಿಸುವುದರಲ್ಲಿ ಮತ್ತು ಪುಣ್ಯದ ಠೇವಣಿ ಬಲಗೊಳಿಸುವಲ್ಲಿ ಸಹಾಯವಾಗುತ್ತವೆ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ