ಡಬ್ಬಿಂಗ್ ನಿಷೇಧ ಅವೈಜ್ಞಾನಿಕ

ಡಬ್ಬಿಂಗ್ ನಿಷೇಧ ಅವೈಜ್ಞಾನಿಕ

ಬರಹ

ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಕನ್ನಡ ಚಲನಚಿತ್ರಗಳ ಸಮೀಕ್ಷೆ ವರದಿಯನ್ನು ಹೊರತಂದಿದ್ದರು. ಆ ವರದಿಯಲ್ಲಿ ಹೇಳಿದ್ದ ಡಬ್ಬಿಂಗ್ ಪರವಾದ ನಿಲುವಿನ ಬಗ್ಗೆ ಹಲವರಿಗೆ ಪ್ರಶ್ನೆ ಇದ್ದಂತಿದೆ. ಒಬ್ಬ ಗ್ರಾಹಕನ ದೃಷ್ಟಿಯಲ್ಲಿ ನನಗೆ ಅನ್ನಿಸುವ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧಿಸಿರುವ ಕನ್ನಡ ಚಿತ್ರರಂಗದ ನಿಲುವನ್ನು ನಾವು ವಿಮರ್ಶಿಸಬೇಕಿದೆ. ಅವತಾರ್, 2012, ಮೇಟ್ರಿಕ್ಷ್ , ಜುರ್ರಸ್ಸಿಕ್ ಪಾರ್ಕ್ ಮುಂತಾದ ಹಲವು ಇಂಗ್ಲಿಷ್ ಚಿತ್ರಗಳನ್ನು ಕನ್ನಡದಲ್ಲಿ ಮಾಡುವುದು ಇಂದಿನ ಮಟ್ಟಿಗೆ ಅಸಾಧ್ಯವಾದ ಕೆಲಸ. ಅದಕ್ಕೆ ಬೇಕಾಗಿರುವ ತಂತ್ರಜ್ಞಾನ, ತಗಲುವ ವೆಚ್ಚವನ್ನು ಭಾರಿಸಿವ ಶಕ್ತಿ ಎರಡೂ ಕನ್ನಡ ಚಿತ್ರರಂಗಕ್ಕೆ ಇಂದಿಲ್ಲ ಅನ್ನುವುದು ವಾಸ್ತವ. ಆ ಕಾರಣಕ್ಕಾಗಿ ಈ ಉತ್ತಮ ಚಿತ್ರಗಳನ್ನು ಡಬ್ ಮಾಡಲು ಅವಕಾಶ ಕೊಟ್ಟರೆ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನೂ ಈ ಚಿತ್ರಗಳನ್ನು ನೋಡಬಹುದು. ಪ್ರಪಂಚದ ಆಗುಹೋಗುಗಳನ್ನು ಕೂತಲ್ಲೇ ಕನ್ನಡದಲ್ಲಿ ನೋಡಬಹುದು. ಹಾಸನ, ಶಿವಮೊಗ್ಗ ಜಿಲ್ಲೆಗಳ ಹಳ್ಳಿಗಳಲ್ಲಿ  ವಾಸವಿರುವ ನಮ್ಮ ನೆಂಟರು ಇಂಗ್ಲಿಷ್ ಬಾರದ ಕಾರಣ ಈ ಉತ್ತಮ ಚಿತ್ರಗಳನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಅನ್ನುವುದು ಡಬ್ಬಿಂಗ್ ವಿರೋಧಿಸುವವರಿಗೆ ಅರಿವಾಗಬೇಕಿದೆ. ನನ್ನ ಮಕ್ಕಳು ಕನ್ನಡದಲ್ಲಿ ಕಾರ್ಟೂನ್ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಾರ್ಟೂನ್ ನೆಟ್ವರ್ಕ್,ಡಿಸ್ಕವರಿ ಚ್ಯಾನಲಗಳಲ್ಲಿ ನೋಡಬಯಸಿದರೆ, ಅದು ಕನ್ನಡದಲ್ಲಿಲದ ಕಾರಣ ಇಂಗ್ಲಿಷ್ನಲ್ಲಿಯೇ ನೋಡಬೇಕಿರುವ ಅನಿವಾರ್ಯತೆ ಇವತ್ತಿನ ಮಟ್ಟಿಗೆ ಇದೆ. ಜನ ತಮ್ಮ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ನೋಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಅಧಿಕಾರ ಕನ್ನಡ ಚಿತ್ರರಂಗದ ಗಣ್ಯರಿಗೆ ಕೊಟ್ಟವರು ಯಾರು? ಕಡೆಯದಾಗಿ ಒಂದು ಮಾತು. ಡಬ್ಬಿಂಗ್ ಮಾಡಬಾರದೆಂದು ಯಾವ ಕಾನೂನು ಇಲ್ಲ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಯಾರಾದರು ಡಬ್ಬಿಂಗ್ ನಿಷೇಧವನ್ನು ಕಾನೂನಿನಡಿ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಡಬ್ಬಿಂಗ್ ನಿಷೇಧ ಅವೈಜ್ಞಾನಿಕ ಎಂದು ಸಾಬೀತಾಗುವುದು ಶತಸಿದ್ಧ. ಇನ್ನಾದರು ತಮ್ಮ ಸ್ವಾರ್ಥಕ್ಕಾಗಿ ಡಬ್ಬಿಂಗ್ ಅಸ್ತ್ರವನ್ನು ಉಪಯೋಗಿಸುವುದನ್ನು ನಿಲ್ಲಿಸಿ ಕನ್ನಡ ಚಿತ್ರರಂಗದ, ಕನ್ನಡ ಸಮಾಜದ ಒಳಿತಿನತ್ತ ಎಲ್ಲರು ಚಿಂತಿಸಬೇಕಿದೆ.