ಡಬ್ಲ್ಯೂಎಚ್ಒನಿಂದ ಆಶಾ ಗೌರವ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ-WHO) ಭಾರತದ ‘ಆಶಾ’ (ಅಕ್ರಿಡೇಟೆಡ್ ಸೋಶಿಯಲ್ ಹೆಲ್ತ್ ಆಕ್ಟಿವಿಸ್ಟ್) ಕಾರ್ಯಕರ್ತೆಯರು ಕೋವಿಡ್ ಕಾಲದಲ್ಲಿ ನಿರ್ವಹಿಸಿದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಧಾನ ನಿರ್ದೇಶಕರ ‘ಜಾಗತಿಕ ಆರೋಗ್ಯ ನಾಯಕತ್ವ ಪ್ರಶಸ್ತಿ' ನೀಡಿ ಗೌರವಿಸಿದೆ. ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಜಾಗತಿಕ ಮನ್ನಣೆ ದೊರೆತಿರುವುದು ಭಾರತೀಯರಾಗಿ ನಾವು ಹೆಮ್ಮೆ ಪಡುವ ಸಂಗತಿಯಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಭಾರತದಂಥ ಬೃಹತ್ ದೇಶದಲ್ಲಿನ ಗ್ರಾಮೀಣ ಭಾಗದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಒಬ್ಬ ಆಶಾ ಕಾರ್ಯಕರ್ತೆಯು ೧೦ ಲಕ್ಷ ಮಹಿಳಾ ಸ್ವಯಂ ಸೇವಕರಿಗೆ ಸಮನಾಗಿದ್ದಾರೆ ಎಂದು ಡಬ್ಲ್ಯೂಎಚ್ಒ ಪ್ರಶಂಸೆ ವ್ಯಕ್ತ ಪಡಿಸಿದೆ. ಗರ್ಭಿಣಿಯರಿಗೆ ಆರೋಗ್ಯ ಸಲಹೆ, ನೆರವು, ಮಕ್ಕಳ ಲಸಿಕೆ, ಸಮುದಾಯ ಆರೋಗ್ಯದ ಸಂರಕ್ಷಣೆ, ಅಪೌಷ್ಟಿಕತೆ ನಿರ್ಮೂಲನೆ, ಸ್ವಚ್ಛತೆ, ಕ್ಷಯ ರೋಗ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಭಿಪ್ರಾಯ ಪಟ್ಟಿದೆ.
ಸರಕಾರಿ ಸೌಲಭ್ಯಗಳನ್ನು ಕಟ್ಟಕಡೆಯ ಫಲಾನುಭವಿಗೆ ತಲುಪಿಸುವ ಮಹತ್ಕಾರ್ಯದ ಹೊಣೆ ಹೊತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಾಡಿ ಹೊಗಳಿರುವುದು ಅತಿಶಯೋಕ್ತಿ ಏನಿಲ್ಲ. ಆಶಾ ಕಾರ್ಯಕರ್ತೆಯರ ರೀತಿಯಲ್ಲೇ ಅಂಗನವಾಡಿ ಕಾರ್ಯಕರ್ತೆಯರೂ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದಾರೆ. ಕೋವಿಡ್ - ೧೯ ಮೊದಲನೆಯ ಹಾಗೂ ಎರಡನೇಯ ಅಲೆಯ ನಿರ್ವಹಣೆ ವೇಳೆ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆಂಬುದು ಸೂರ್ಯನಷ್ಟೇ ಸತ್ಯ. ಸಾಂಕ್ರಾಮಿಕ ದಿನಗಳಲ್ಲಿ ದಿನಕ್ಕೆ ಹತ್ತರಿಂದ ಹನ್ನೆರಡು ಗಂಟೆಗಳಷ್ಟು ಕೆಲಸ ಮಾಡಿದ್ದಾರೆ. ನಿತ್ಯ ೧ ಕಿ ಮೀ ನಿಂದ ೬ ಕಿ ಮೀ ವರೆಗೂ ಸಂಚರಿಸಿದ್ದಾರೆ. ಗ್ರಾಮಗಳಿಂದ ಜಿಲ್ಲಾಸ್ಪತ್ರೆಗಳ ಮಧ್ಯೆ ಓಡಾಡಿದ್ದಾರೆ. ಲಸಿಕೆ, ಔಷಧ, ಆಹಾರ ಕಿಟ್ ಗಳನ್ನು ವಿತರಿಸಿದ್ದಾರೆ. ಕೋವಿಡ್ ಕಾಲದಲ್ಲಿ ಅವರು ಮಾಡದೇ ಇರುವ ಕೆಲಸಗಳಿಲ್ಲ. ಅವರು ನಿಜಾರ್ಥದಲ್ಲಿ ಕೋವಿಡ್ ವಾರಿಯರ್ಸ್. ಆದರೆ, ಅವರಿಗೆ ಎಷ್ಟು ಗೌರವ ಸಿಗಬೇಕಿತ್ತೋ ಅಷ್ಟು ಸಿಕ್ಕಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಗೌರವದ ಮೂಲಕ ಆ ಕೊರಗು ನಿವಾರಣೆಯಾಗಿರುವಂತಿದೆ.
ಡಬ್ಲ್ಯೂಎಚ್ಒ ನೀಡಿರುವ ಈ ಗೌರವವನ್ನು ನಾವು ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಮೊದಲನೆಯದು- ಆಶಾ ಕಾರ್ಯಕರ್ತೆಯರು ಕೋವಿಡ್ ಕಾಲದಲ್ಲಿ ತೋರಿದ ದಿಟ್ಟತನ ಹಾಗೂ ಸೇವಾ ಮನೋಭಾವಕ್ಕೆ ದೊರೆತ ಜಾಗತಿಕ ಮನ್ನಣೆ. ಎರಡನೆಯದು - ಆಶಾ ಕಾರ್ಯಕರ್ತೆಯರಿಗೆ ಘನತೆಯುಳ್ಳ ಸೌಲಭ್ಯಗಳನ್ನು ಸರಕಾರ ಇನ್ನಾದರೂ ನೀಡಲಿ ಎಂಬ ಪರೋಕ್ಷ ಸಂದೇಶ. ಅವರಿಗೆ ಈಗಲೂ ಕನಿಷ್ಟ ಸಂಭಾವನೆ ನೀಡುತ್ತಿಲ್ಲ. ಭತ್ಯೆಗಳನ್ನು ಹೊರತುಪಡಿಸಿ ತಿಂಗಳಿಗೆ ೧೨ ಸಾವಿರ ರೂ. ನೀಡಬೇಕು ಎನ್ನುವ ಬೇಡಿಕೆ ಈಡೇರಿಲ್ಲ. ಅವರಿಗೆ ಸಮವಸ್ತ್ರ ನೀಡಿ ಎರಡೂ ವರ್ಷಗಳೇ ಕಳೆದಿವೆ. ಜತೆಗೆ, ನಿಗದಿ ಪಡಿಸಿರುವ ಸೇವಾ ಕಾರ್ಯಗಳು ಮಾತ್ರವಲ್ಲದೇ, ಅಧಿಕಾರಿಗಳು ಇರೋಬರೋ ಎಲ್ಲ ಕೆಲಸಗಳನ್ನು ಅವರಿಂದಲೇ ಮಾಡಿಸುತ್ತಾರೆ. ಆದರೆ, ಅವರಿಗೆ ಸಲ್ಲಬೇಕಾದ ಗೌರವ ಆಗಲೀ, ಸಂಭಾವನೆಯಾಗಲಿ ಸಲ್ಲುತ್ತಿಲ್ಲ. ಇದು ನಮ್ಮ ವ್ಯವಸ್ಥೆಯ ದ್ರೋಹಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನಾದರೂ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಅವರಿಗೆ ಕನಿಷ್ಟ ಸಂಭಾವನೆಯನ್ನು ನೀಡುವ ಕೆಲಸ ಮಾಡಲಿ. ಅವರಿಗೂ ಒಂದು ಘನತೆಯ ಬದುಕನ್ನು ಸಾಗಿಸಲು ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ನೀಡಲಿ. ಎಲ್ಲಕ್ಕಿಂತ ಹೆಚ್ಚಾಗಿ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವವರು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಎಂಬುದನ್ನು ಮರೆಯಬಾರದು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೫-೦೫-೨೦೨೨
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ