ಡಾ.ಬಿ.ಸಿ.ರಾಯ್ ನೆನಪಿನಲ್ಲಿ ‘ವೈದ್ಯರ ದಿನ'

Submitted by Ashwin Rao K P on Wed, 07/01/2020 - 08:48

ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತಾರೆ. ಇದು ನಮ್ಮ ದೇಶದ ಹೆಮ್ಮೆಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ. ಅವರು ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ‘ವೈದ್ಯರ ದಿನ' ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದು ದಿನವೂ ವೈದ್ಯರ ದಿನವೇ. ಯಾಕೆಂದರೆ ವೈದ್ಯ ದೇವರ ಅವತಾರವೆಂದೇ ಒಂದು ಮಾತಿದೆ. ರೋಗಿಗಳು ವೈದ್ಯರಲ್ಲಿ ದೇವರನ್ನೇ ಕಾಣುತ್ತಾರೆ. ಅವರನ್ನು ನಂಬುತ್ತಾರೆ ಮತ್ತು ಅವರಿಂದ ತಮ್ಮ ಅಥವಾ ತಮ್ಮ ಕುಟುಂಬದವರ ರೋಗಗಳು ಗುಣವಾಗುತ್ತವೆ ಎಂದು ತಿಳಿಯುತ್ತಾರೆ.

ಬಿಧಾನ್ ಚಂದ್ರ ರಾಯ್ ಅಥವಾ ಬಿ.ಸಿ.ರಾಯ್ ಜುಲೈ ೧, ೧೮೮೨ರಲ್ಲಿ ಬಿಹಾರದ ಪಾಟ್ನಾದಲ್ಲಿರುವ ಬಂಕಿಪುರದಲ್ಲಿ ಜನಿಸಿದರು. ಇವರ ತಂದೆ ಪ್ರಕಾಶ್ ಚಂದ್ರ ಇವರು ಸುಂಕ ವಸೂಲಾತಿ ಅಧಿಕಾರಿಯಾಗಿದ್ದರು. ಐದು ಜನ ಮಕ್ಕಳಲ್ಲಿ ಬಿಧಾನ್ ಕೊನೆಯವರಾಗಿದ್ದರು. ಇವರು ತಮ್ಮ ೧೪ನೇ ವಯಸ್ಸಿನಲ್ಲಿ ತಾಯಿಯಾದ ಅಘೋರ ಕಾಮಿನಿ ದೇವಿಯನ್ನು ಕಳೆದುಕೊಂಡಾಗ, ಅವರ ತಂದೆಯವರು ತಾಯಿಯ ಸ್ಥಾನದಲ್ಲಿ ನಿಂತು ತಮ್ಮಎಲ್ಲಾ ಮಕ್ಕಳನ್ನು ಬೆಳೆಸಿದನ್ನು ಬಿಧಾನ್ ಮರೆಯುದಿಲ್ಲ. ತಂದೆಯವರ ಕರುಣೆ, ಸರಳತೆ ಮತ್ತು ಶಿಸ್ತು ಬಾಲ್ಯದಿಂದಲೇ ಬಿಧಾನ್ ಅವರ ಮೇಲೆ ಪರಿಣಾಮ ಬೀರಿತ್ತು. ಬಿಧಾನ್ ಅವರು ತಮ್ಮ ಬಿ.ಎ.ಪದವಿಯನ್ನು ಪಾಟ್ನಾ ಕಾಲೇಜಿನಲ್ಲಿ ಪೂರೈಸುತ್ತಾರೆ. ನಂತರ ಅವರಿಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅವಕಾಶ ದೊರೆಯದ ಕಾರಣ ವೈದ್ಯಕೀಯ ಪದವಿ ಪಡೆಯುವತ್ತ ಮನಸ್ಸು ಮಾಡುತ್ತಾರೆ. ವಿಧಿಯ ಆಟವೆಂದರೆ ಇದೇ ಇರಬಹುದಲ್ಲವೇ? ಇಲ್ಲವಾದರೆ ನಮ್ಮ ದೇಶಕ್ಕೆ ಓರ್ವ ಅತ್ಯುತ್ತಮ ವೈದ್ಯರು ಸಿಗುತ್ತಿರಲಿಲ್ಲ. 

ತಮ್ಮ ವೈದ್ಯಕೀಯ ಕಲಿಕೆಯ ಪ್ರಥಮ ವರ್ಷದಲ್ಲಿ ತಂದೆಯವರ ನೆರವು ಸಿಗದ ಕಾರಣ ಶಿಕ್ಷಣ ವೇತನವನ್ನು ಅವಲಂಬಿಸುತ್ತಾರೆ ಮತ್ತು ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಪಡೆದು ಓದುತ್ತಾರೆ. ಬಿಧಾನ್ ಅವರು ಕಾಲೇಜಿನಲ್ಲಿ ಕಲಿಯುತ್ತಿರುವ ಸಮಯದಲ್ಲೇ ಬಂಗಾಳದ ವಿಭಜನೆಯ ಘೋಷಣೆಯಾಗುತ್ತದೆ. ಓದು ಬಿಟ್ಟು ಚಳುವಳಿಯತ್ತ ಮನಸ್ಸು ವಾಲುತ್ತಿದ್ದರೂ ಪದವಿಯನ್ನು ಪಡೆದೇ ಬೇರೊಂದು ರೀತಿಯಲ್ಲಿ ಹೋರಾಟ ಮಾಡುತ್ತೇನೆಂದು ನಿರ್ಧಾರ ಮಾಡುತ್ತಾರೆ. ವೈದ್ಯಕೀಯ ಪದವಿಯನ್ನು ಪಡೆದ ನಂತರ ತಮ್ಮ ವೃತ್ತಿ ಜೀವನವನ್ನು ಪ್ರಾದೇಶಿಕ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಸ್ವತಂತ್ರವಾಗಿ ಚಿಕಿತ್ಸೆ ನೀಡುತ್ತಾರೆ ಮತ್ತು ಅದಕ್ಕೆ ಕನಿಷ್ಟ ಶುಲ್ಕವನ್ನು ಮಾತ್ರ ತೆಗೆದುಕೊಂಡು ಬಡವರಿಗೆ ನೆರವಾಗುತ್ತಾರೆ. ೧೯೧೧ರಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರೈಸಿ ಭಾರತಕ್ಕೆ ಮರಳುತ್ತಾರೆ. ಈ ಉನ್ನತ ಶಿಕ್ಷಣವನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ಅಲ್ಲಿಯ ಕಾಲೇಜು ಅವರ ಅರ್ಜಿಯನ್ನು ಅನೇಕ ಬಾರಿ ತಿರಸ್ಕರಿಸಿತ್ತು. ಆದರೂ ಪಟ್ಟು ಬಿಡದ ಬಿಧಾನ್ ತಮ್ಮ ಅರ್ಜಿಯನ್ನು ಸಲ್ಲಿಸುತ್ತಲೇ ಇದ್ದರು. ಕೊನೆಗೊಮ್ಮೆ ಆಡಳಿತ ಮಂಡಳಿಯು ಇವರ ಅರ್ಜಿಯನ್ನು ಪುರಸ್ಕರಿಸಲೇ ಬೇಕಾಗುತ್ತದೆ. 

ಭಾರತಕ್ಕೆ ಬಂದ ನಂತರ ಇವರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವ ಮನಸ್ಸಾಗುತ್ತದೆ. ಸಂಪೂರ್ಣ ಸ್ವರಾಜ್ಯದ ಕನಸೂ ಇವರನ್ನು ಕಾಡುತ್ತದೆ. ಇದು ಸಾಕಾರವಾಗ ಬೇಕಾದರೆ ಜನರು ಆರೋಗ್ಯವಂತರೂ, ಮಾನಸಿಕವಾಗಿ ಧೃಢವಾಗಿಯೂ ಇರಬೇಕಾಗುವುದೆಂದು ಡಾ. ರಾಯ್ ಅರಿತುಕೊಳ್ಳುತ್ತಾರೆ. ಅದಕ್ಕಾಗಿ ಅವರು ತಮ್ಮ ಸಿದ್ಧತೆಯನ್ನು ಮಾಡುತ್ತಾರೆ. ೧೯೨೬ರಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾ ಸದನ್ ಪ್ರಾರಂಭಿಸುತ್ತಾರೆ. ೧೯೪೨ರಲ್ಲಿ ರಂಗೂನ್ ಜಪಾನೀಯರ ದಾಳಿಗೆ ತುತ್ತಾದಾಗ ಕಲ್ಕತ್ತಾವೂ ಸಹ ದಾಳಿಗೆ ತುತ್ತಾಗಬಹುದೆಂಬ ಭೀತಿಯು ಕಾಡತೊಡಗಿತ್ತು. ಆ ಸಮಯದಲ್ಲಿ ಡಾ. ರಾಯ್ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ಇವರು ಗಾಂಧೀಜಿಯವರ ತತ್ವಗಳಲ್ಲಿ ನಂಬಿಕೆಯನ್ನು ಇಟ್ಟಿದ್ದರು. ಸ್ವಾತಂತ್ರ್ಯಕ್ಕಾಗಿ ದೊಂಬಿ ಹಾಗೂ ಗಲಾಟೆ ಮಾಡುವುದರಲ್ಲಿ ಇವರಿಗೆ ವಿಶ್ವಾಸವಿರಲಿಲ್ಲ. ಗಾಂಧೀಜಿಯವರ ಆತ್ಮೀಯರೂ ಹಾಗೂ ಅವರ ವೈದ್ಯರೂ ಆಗಿದ್ದ ಡಾ. ರಾಯ್ ಅವರು ‘ಕ್ವಿಟ್ ಇಂಡಿಯಾ’ ಸಮಯದಲ್ಲಿ ಗಾಂಧೀಜಿಯವರನ್ನು ಉಪಚರಿಸಿದ್ದರು. 

ಡಾ.ಬಿ.ಸಿ.ರಾಯ್ ಅವರಿಗೆ ರಾಜಕೀಯದಲ್ಲೂ ಆಸಕ್ತಿ ಮೂಡ ತೊಡಗಿತು. ೧೯೨೫ರಲ್ಲೇ ಬಂಗಾಳದ ವಿಧಾನ ಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಾರಕ್ ಪುರ ಕ್ಷೇತ್ರದಲ್ಲಿ ವಿಜಯಿಯಾಗಿದ್ದರು. ಅವರು ಅಂದಿನ ಖ್ಯಾತ ರಾಜಕಾರಣಿ ಸುರೇಂದ್ರ ಬ್ಯಾನರ್ಜಿಯವರನ್ನು ಸೋಲಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಬೆಂಬಲಿಸಿತ್ತು. ನಂತರದ ದಿನಗಳಲ್ಲಿ ಡಾ. ರಾಯ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ. ವಿವಿಧ ಹುದ್ದೆಗಳಲ್ಲಿ ದುಡಿಯುತ್ತಾರೆ. ಸ್ವಾತಂತ್ರ್ಯಾ ನಂತರ ಗಾಂಧೀಜಿಯವರ ಒತ್ತಾಯದ ಮೇರೆಗೆ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬಂಗಾಳವು ವಲಸಿಗರು, ನಿರಾಶ್ರಿತರು, ಬಡವರು ಹಾಗೂ ನಿರುದ್ಯೋಗಿಗಳಿಂದ ತುಂಬಿಹೋಗಿತ್ತು. ಆಹಾರದ ಸಮಸ್ಯೆಯೂ ಕಾಡತೊಡಗಿತ್ತು. ಡಾ. ರಾಯ್ ಅವರು ಇದನ್ನೆಲ್ಲಾ ನಿವಾರಿಸಲು ಪ್ರಯತ್ನ ಪಟ್ಟರು. 

ಇವರ ಸೇವೆಯನ್ನು ಗಮನಿಸಿದ ಭಾರತ ಸರಕಾರವು ಇವರಿಗೆ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ'ವನ್ನು ೧೯೬೨ರ ಫೆಬ್ರವರಿ ೪ ರಂದು ನೀಡಿ ಗೌರವಿಸಿತು. ಡಾ.ಬಿ.ಸಿ. ರಾಯ್ ಅವರು ಅದೇ ವರ್ಷ ತಮ್ಮ ೮೦ನೇ ವರ್ಷದಲ್ಲಿ ಅವರು ಹುಟ್ಟಿದ ದಿನವಾದ ಜುಲೈ ೧ರಂದೇ ಇಹಲೋಕ ತ್ಯಜಿಸಿದ್ದು ಸೋಜಿಗವೇ ಸರಿ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಭಾರತ ಸರಕಾರ ವೈದ್ಯಕೀಯ, ರಾಜಕೀಯ, ವಿಜ್ಞಾನ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. 

ಡಾ. ಬಿ.ಸಿ.ರಾಯ್ ಅವರು ಉತ್ತಮ ವೈದ್ಯರೂ, ಚತುರ ರಾಜಕಾರಣಿಯೂ ಆಗಿದ್ದರು. ಬಂಗಾಳದಲ್ಲಿ ಕಲ್ಯಾಣಿ ಮತ್ತು ಬಿಧಾನ್ ಎಂಬ ಎರಡು ನಗರಗಳ ಹುಟ್ಟಿಗೆ ಇವರು ಕಾರಣೀಕರ್ತರಾಗಿದ್ದಾರೆ. ಇವರ ಜನ್ಮ ದಿನವಾದ ಜುಲೈ ೧ ವೈದ್ಯರ ದಿನ ಎಂದು ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. 

ಈ ವರ್ಷ ಕೊರೋನಾ ಮಹಾಮಾರಿ ವಿಶ್ವದಾದ್ಯಂತ ಹರಡಿರುವುದರಿಂದ ವೈದ್ಯರ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಕೊರೋನಾ ಯೋಧರು ಅಥವಾ ವಾರಿಯರ್ಸ್ ಅವರನ್ನು ನಾವು ಈ ದಿನದಂದು ಸ್ಮರಿಸಲೇ ಬೇಕು. ಇಂದಿನ ಸಂದರ್ಭದಲ್ಲಿ ವೈದ್ಯರು ನಿಜಕ್ಕೂ ಯೋಧರೇ ಆಗಿದ್ದಾರೆ. ತಮ್ಮ ಕುಟುಂಬವನ್ನು ದೂರವಿಟ್ಟು, ಕೊರೋನಾ ರೋಗಿಗಳ ಶುಶ್ರೂಷೆಯನ್ನು ಮಾಡುತ್ತಿದ್ದಾರೆ. ದಿನಗಟ್ಟಲೇ, ವಾರಗಟ್ಟಲೇ ಇವರು ತಮ್ಮ ರಜೆಯನ್ನು, ಆರಾಮವನ್ನು ಮರೆತು ಸೇವೆ ಮಾಡುತ್ತಿದ್ದಾರೆ. ವೈದ್ಯರ ದಿನವಾದ ಜುಲೈ ೧ ರಂದು ವೈದ್ಯರಿಗೆ ಮತ್ತೊಮ್ಮೆ ಜೈ ಎನ್ನೋಣ.

ಚಿತ್ರ ಕೃಪೆ: ಅಂತರ್ಜಾಲ ತಾಣ