ಡಾ.ರಾಜಕುಮಾರ್ ನೆನಪಿನಲ್ಲಿ...

ಡಾ.ರಾಜಕುಮಾರ್ ನೆನಪಿನಲ್ಲಿ...

ಕನ್ನಡ ಭಾಷೆ, ಸಂಸ್ಕೃತಿ, ವ್ಯಾಪಾರ ಮತ್ತು ರಾಜಕೀಯದ ಮೇಲೆ ನಿಧಾನವಾಗಿ ಮತ್ತು ಪರೋಕ್ಷವಾಗಿ ಒಳಸುಳಿಯುವ ಆಕ್ರಮಣದ ಲಕ್ಷಣಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ನಡೆಯುತ್ತಿರುವಾಗ ಡಾಕ್ಟರ್ ರಾಜ್ ಕುಮಾರ್ ನೆನಪಾಗುತ್ತಿದ್ದಾರೆ. ೭೦-೮೦-೯೦ ರ ದಶಕದಲ್ಲಿ ಮನರಂಜನಾ ಮಾಧ್ಯಮದ ಪ್ರಧಾನ ಆಕರ್ಷಣೆ ಚಲನಚಿತ್ರವೇ ಆಗಿತ್ತು. ವಯಸ್ಸು ವರ್ಗ ಜಾತಿ ಲಿಂಗ ವೃತ್ತಿ ಧರ್ಮದ ಯಾವುದೇ ವ್ಯತ್ಯಾಸವಿಲ್ಲದೇ ಬಹುತೇಕ ಎಲ್ಲರನ್ನೂ ಸಿನಿಮಾ ಪ್ರಭಾವಿಸುತ್ತಿತ್ತು. 

ಮದುವೆಯಾಗುವ ಜೋಡಿ ಚಿತ್ರಮಂದಿರದಲ್ಲಿ ಜೊತೆಯಾಗಿ ಕುಳಿತು ಸಿನಿಮಾ ನೋಡುವುದೇ ಒಂದು ದೊಡ್ಡ ಸಂಭ್ರಮ. ಆಗಿನ ಕಾಲದಲ್ಲಿ ಗಂಡ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎನ್ನುವ ಮಾನದಂಡಗಳಲ್ಲಿ ಹೆಂಡತಿಗೆ ತಿಂಗಳಿಗೆ ಒಂದು ಸಿನಿಮಾ ತೋರಿಸುತ್ತಾನೆ ಎನ್ನುವುದೂ ಸೇರಿತ್ತು. ಅದನ್ನು ಎಷ್ಟೋ ಹೆಣ್ಣು ಮಕ್ಕಳು ನೀರು ತರುವಾಗ, ಬಟ್ಟೆ ಒಗೆಯುವಾಗ ಸ್ವತಃ ಮಾತನಾಡಿಕೊಳ್ಳುತ್ತಿದ್ದರು. ಎಷ್ಟೋ ಪ್ರೇಮಿಗಳು, ವಿರಹಿಗಳು, ದುಃಖದಲ್ಲಿ ಇರುವವರು, ನಿರುದ್ಯೋಗಿಗಳು ಎಲ್ಲರಿಗೂ ಒಂದು ರೀತಿಯ ಸಮಾಧಾನಕರ ಸ್ಪೂರ್ತಿ ಸಿಗುತ್ತಿದ್ದುದು ಸಿನಿಮಾ ಕಥೆಗಳಲ್ಲಿ. ತಾವೇ ಅನೇಕ ಪಾತ್ರಗಳಾಗಿ ಒಳಹೊಕ್ಕು ಕನಸು ಕಾಣುತ್ತಿದ್ದರು. ವೇಷ ಭೂಷಣಗಳಲ್ಲಿ ಸಹ ಅನುಕರಣೆ ಇರುತ್ತಿತ್ತು.

ಅಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಡಾಕ್ಟರ್ ರಾಜ್ ಕುಮಾರ್ ಎಂಬ ಮುತ್ತುರಾಜ್ ಸೂಪರ್ ಸ್ಟಾರ್ ಆಗಿ ಪ್ರತಿ ಬಿಂಬಿತರಾಗುತ್ತಾರೆ. ಕನ್ನಡ ಭಾಷೆ ಸಂಸ್ಕೃತಿ ಜನಜೀವನದ ರಾಯಭಾರಿಯಂತೆ ಅವರನ್ನು ಪರಿಗಣಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಅವರ ಯಶಸ್ವಿ ನೇತೃತ್ವ ಅವರನ್ನು ಮುಂಚೂಣಿಯಲ್ಲಿ ತಂದು ನಿಲ್ಲಿಸುತ್ತದೆ. ಆಗಿನಿಂದಲೂ ಸಿನಿಮಾ ಭಾವ ಜಗತ್ತಿನ, ಭ್ರಮಾಲೋಕದ, ಜನಪ್ರಿಯತೆಯ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ‌ಸಿನಿಮಾ ನಟನಟಿಯರು ತಾರೆಗಳಂತೆ ಮಿನುಗುತ್ತಾರೆ. ಅದರಲ್ಲಿ ಡಾಕ್ಟರ್ ರಾಜ್ ಕುಮಾರ್ ಧ್ರುವ ತಾರೆ. ಅವರು ಸಹ ಬಹಳಷ್ಟು ಜವಾಬ್ದಾರಿಯಿಂದ ಸಿನಿಮಾದಲ್ಲಿ ಮತ್ತು ಸಮಾಜದಲ್ಲಿ ವರ್ತಿಸುತ್ತಿದ್ದರು.

ಹಾನಿಕಾರಕ ಮತ್ತು ವಿವಾದಾತ್ಮಕ ವಿಷಯಗಳಲ್ಲಿ ತಟಸ್ಥ ನಿಲುವುಗಳನ್ನು ತೆಗೆದುಕೊಳ್ಳತ್ತಿದ್ದರು.  ಈಗಿನ ಒತ್ತಡದ ಹೇರಿಕೆಗಳ ವಿರುದ್ಧ ಪ್ರಬಲವಾದ ಮತ್ತು ಪರಿಣಾಮಕಾರಿಯಾದ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಡಾಕ್ಟರ್ ರಾಜ್ ಕುಮಾರ್ ಇರಬೇಕಿತ್ತು ಎನಿಸುತ್ತದೆ. ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ತ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ " ಹಳ್ಳಿ ಹೈದ " ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್.

ನೀವು ಹೇಗೇ ನೋಡಿ,  ಹುಟ್ಟಿನಿಂದ ಸಾಯುವತನಕ ಅವರ ಭಾಷೆ, ದೇಹಚಲನೆ, ಉಡುಗೆ ತೊಡುಗೆ, ಊಟ, ಸಾಂದರ್ಭಿಕ ನಿರ್ಧಾರಗಳು ಈ ನೆಲದ ಅಪ್ಪಟ ಮಣ್ಣಿನ ಸೊಗಡಿನ ಗ್ರಾಮೀಣ ಪರಿಸರದ ಹಳ್ಳಿ ಹೈದನಂತೆಯೇ ಕಾಣುತ್ತಾರೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ,

ಎಷ್ಟೋ ಇಲ್ಲಿನ ಮಣ್ಣಿನ ಮಕ್ಕಳು ಬೆಳೆಯುತ್ತಾ ರೈತ ನಾಯಕರೋ, ರಾಜಕಾರಣಿಗಳೋ, ಕ್ರೀಡಾಪಟುಗಳೋ, ವಿಜ್ಞಾನಿಗಳೋ, ಉದ್ಯಮಿಗಳೋ, ಹೀಗೆ ಏನೋ ಆಗಿ ದೊಡ್ಡ ಹೆಸರು ಮಾಡಿ, ಅವರೆಲ್ಲ ಕ್ರಮೇಣ ಹಳ್ಳಿ ಸೊಗಡನ್ನು ಮೇಲ್ನೋಟದ ತೋರಿಕೆಗಾಗಿಯೋ ಅಥವಾ ನೆನಪಿನ ಬುತ್ತಿಯಾಗಿಯೋ ಬಳಸುತ್ತಾರೆ ಮತ್ತು ಬಹುತೇಕರು ನಗರೀಕರಣಗೊಂಡು ತಮ್ಮ ತನ ಕಳೆದುಕೊಂಡಿರುತ್ತಾರೆ. 

ಆದರೆ, ಈ ರಾಜಕುಮಾರ ಅಪ್ಪಟ ಹಳ್ಳಿ ಹೈದನಂತೆಯೇ ಕೊನೆಯವರೆಗೂ ಇದ್ದರು. ಆಂತರಿಕವಾಗಿ ಅವರ ಮನಸ್ಥಿತಿ ಹೇಗಿತ್ತೋ ಅವರೇ ಬಲ್ಲರು. ಆದರೆ  ನಡವಳಿಕೆ ಮಾತ್ರ ಅವರು ಎಷ್ಟು ಮುಗ್ಧರೋ ಅಷ್ಟೇ ಒಬ್ಬ ಹಳ್ಳಿ ಪೆದ್ದು ಎಂದು ನಾವೆಲ್ಲ ಹಾಸ್ಯ ಮಾಡುವ ಗ್ರಾಮ್ಯ ಶೈಲಿಯ ಗುಣ ಅವರಲ್ಲಿ ಅಂತರ್ಗತವಾದಂತೆ ಭಾಸವಾಗುತ್ತದೆ. ನಟನೆಯಲ್ಲೂ ಅದೇ ಮುಗ್ಧತೆ, ಅದೇ ರಸಿಕತೆ, ಭಕ್ತಿಯಲ್ಲೂ ಅದೇ ತನ್ಮಯತೆ, ಹೊಡೆದಾಟಗಳಲ್ಲಿ ಅದೇ ಗ್ರಾಮ್ಯ ಶೈಲಿ, ಕಣ್ಣುಗಳಲ್ಲಿ ಅದೇ ಹಳ್ಳಿಯ ನೋಟ, ಹೊರ ಪ್ರಪಂಚದ ಹಾಗುಹೋಗುಗಳಲ್ಲಿ ಅದೇ ಪೆದ್ದುತನ ಎಲ್ಲವೂ ಹಳ್ಳಿಹೈದನ ಗುಣಲಕ್ಷಣಗಳು ಅವರಲ್ಲಿ ಐಕ್ಯವಾದಂತಿವೆ.

ರಾಜಕೀಯವೆಂದರೆ ಏನೋ ಕೆಟ್ಟದ್ದು ಎಂಬಂತೆ ಅದರಿಂದ ಮಾರು ದೂರ, ಮಾಂಸಹಾರಿ ಊಟವೆಂದರೆ ಪಂಚಪ್ರಾಣ, ಪ್ರಣಯದ ಕಣ್ಣೋಟದಲ್ಲಿ ಅದೇ ಹಳ್ಳಿಯ ಕಿಲಾಡಿತನ, ಹಣದ ವಿಷಯದಲ್ಲಿ ಸ್ವಲ್ಪ ಜಿಪುಣತನ, ಗೊಂದಲವಾದಾಗ ತಲೆ ಕರೆದುಕೊಳ್ಳುವ ಅದೇ ಮಣ್ಣಿನ ಗುಣ ಎಲ್ಲವೂ ಪಕ್ಕಾ ಹಳ್ಳಿ ಹೈದ. ನನಗಂತೂ ವೈಯಕ್ತಿಕವಾಗಿ ಕನ್ನಡ ಮಣ್ಣಿನ ಸಮಷ್ಠಿ ಪ್ರಜ್ಙೆಯಿಂದ ಅವಲೋಕಿಸಿದಾಗ ನಿಜವಾದ ಹಳ್ಳಿ ಹೈದ ಡಾ.ರಾಜ್ ಕುಮಾರ್.

ಕೆಲವೊಂದು ಒಪ್ಪು ತಪ್ಪುಗಳ ನಡುವೆಯೂ ಕನ್ನಡಿಗರು ಹೆಮ್ಮೆ ಪಡುಬಹುದಾದ ಕೆಲವೇ ಅಗ್ರಗಣ್ಯ ವ್ಯಕ್ತಿತ್ವಗಳ ಶ್ರೇಷ್ಠ ಸಾಲಿನಲ್ಲಿ ರಾಜ್ ಕುಮಾರ್ ಅವರೂ ಪ್ರಮುಖವಾಗುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಮಣ್ಣಿನ ಗುಣದಲ್ಲಿ, ಹಳ್ಳಿಯ ಕಣ್ಣುಗಳಲ್ಲಿ, ಗ್ರಾಮೀಣ ಸೊಗಡಿನ ಕಿವಿಗಳಲ್ಲಿ, ಮುಗ್ದತೆಯ ಮನಸ್ಸಿನಲ್ಲಿ ರಾಜಕುಮಾರ ಕಂಡ ಪರಿಯಿದು. ಅವರ ಹುಟ್ಟುಹಬ್ಬದ  ನೆನಪಿನಲ್ಲಿ ಶುಭಾಶಯಗಳೊಂದಿಗೆ… ಕನ್ನಡದ ನೆಲೆ ಜಲ ಮಾತು ಸಂಸ್ಕೃತಿ ಎಲ್ಲವನ್ನೂ ಉಳಿಸಿಕೊಳ್ಳುವ ಸ್ವಾಭಿಮಾನಿ ಕನ್ನಡಿಗರಾಗೋಣ ಎಂದು ಮನವಿ ಮಾಡಿಕೊಳ್ಳುತ್ತಾ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ