ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ
ಪಠ್ಯ ಪುಸ್ತಕ, ಬೋಧನೆ, ಪರೀಕ್ಷೆಯಂತಹ ಸಂಗತಿಗಳು ಯಾವಾಗಲೂ ವಿವಾದಾತೀತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲವನ್ನು ಅವು ಅದಮ್ಯವಾಗಿರುವಂತೆ ವಿನ್ಯಾಸಗೊಂಡಿರಬೇಕು. ಶಾಲಾ ಕಾಲೇಜುಗಳಿಗೆ ಹೋಗುವುದು ಎಂದರೆ ಪಠ್ಯಗಳನ್ನು ಬಾಯಿಪಾಠ ಮಾಡುವುದು, ನೆನಪಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು, ಅದನ್ನು ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ದಾಖಲಿಸಿ ಎಲ್ಲವನ್ನೂ ಮರೆತವರಂತೆ ಇರುವುದು ಸಾಮಾನ್ಯವಾಗಿದೆ. ತಿಳಿವು, ಅದರ ಅನ್ವಯಶೀಲತೆ, ಅದರಿಂದ ಸಿಗುವ ಫಲಿತ, ಈ ಪ್ರಕ್ರಿಯೆಯಲ್ಲಿ ಆಗುವ ಬುದ್ಧಿಯ ಸಂಚಲನೆಗಳನ್ನು ಗಂಭೀರವಾಗಿ ಪರಿಗಣಿಸುವುದು ತೀರ ಅಲ್ಪ. ಇಂಥ ಮನೋಪ್ರವೃತ್ತಿಗೆ ತಾಜಾ ನಿದರ್ಶನವೆಂದರೆ ೯ ಮತ್ತು ೧೦ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಿಂದ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸವಾದ ಸಿದ್ಧಾಂತವನ್ನು ರಾಷ್ಟ್ರೀಯ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿ ಇ ಆರ್ ಟಿ) ತೆಗೆದು ಹಾಕಿದೆ. ಕೋವಿಡ್ ೧೯ ಸಾಂಕ್ರಾಮಿಕ ರೋಗದ ನಂತರ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪಠ್ಯಕ್ರಮ ತರ್ಕಬದ್ಧಗೊಳಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ವಿಜ್ಞಾನ ಪಠ್ಯಪುಸ್ತಕದ ೯ನೇ ಅಧ್ಯಾಯವಾದ ‘ಅನುವಂಶಿಕತೆ ಮತ್ತು ವಿಕಸನ' ವನ್ನು ‘ಅನುವಂಶಿಕತೆ' ಎಂದು ಬದಲಿಸಿದೆವು ಎಂದು ಅದು ಹೇಳಿಕೊಂಡಿದೆ. ಎನ್ ಸಿ ಇ ಆರ್ ಟಿ ಈ ಧೋರಣೆಯಲ್ಲಿ ಯಾವುದೇ ಹುರುಳಿಲ್ಲ. ಇದು ದೇಶಾದ್ಯಂತ ಭಾರಿ ಟೀಕೆಗೆ ಗುರಿಯಾಗಿದೆ. ಈ ತಪ್ಪನ್ನು ಸರಿಪಡಿಸಿಕೊಂಡು ಡಾರ್ವಿನ್ ವಿಕಾಸವಾದ ಪಠ್ಯವನ್ನು ಸೇರಿಸಿ ಎಂದು ೧,೮೦೦ಕ್ಕೂ ಹೆಚ್ಚು ವಿಜ್ಞಾನಿಗಳು ಎನ್ ಸಿ ಇ ಆರ್ ಟಿ ಗೆ ಬಹಿರಂಗ ಪತ್ರ ಬರೆದಿದ್ದಾರೆ.
ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ವಿಜ್ಞಾನ ಉತ್ಸಾಹಿಗಳು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ವೈಜ್ಞಾನಿಕ ಆವಿಷ್ಕಾರಕ್ಕೆ ಒಡ್ಡಿಕೊಳ್ಳದೆ ವಿದ್ಯಾರ್ಥಿಗಳು ತಮ್ಮ ಆಲೋಚನಾ ಪ್ರಕ್ರಿಯೆಗಳಲ್ಲಿ ಅಂಗವಿಕಲರಾಗುತ್ತಾರೆ. ಜೈವಿಕ ವಿಕಾಸ ಸಿದ್ಧಾಂತ ಕೈ ಬಿಟ್ಟಿರುವುದು ನಮ್ಮನ್ನು ದಿಗ್ಭ್ರಮೆಗೊಳಿಸಿದೆ ಎಂದಿದ್ದಾರೆ. ಡಾರ್ವಿನ್ ಅವರ ನೈಸರ್ಗಿಕ ಆಯ್ಕೆಯ ಸಿದ್ಧಾಂತವು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತದೆ. ಜೀವಿಯ ಬೆಳವಣಿಗೆ ಮತ್ತು ಸಾಮರ್ಥ್ಯವು ಅದು ವಾಸಿಸುವ ಪ್ರದೇಶ ಮತ್ತು ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿರುತ್ತದೆ. ಮನುಷ್ಯನ ಸಾಮರ್ಥ್ಯ ಇಷ್ಟೇ ಎಂದು ಹೇಳಲಾಗುವುದಿಲ್ಲ. ವಿಶ್ವ ಕ್ರೀಡಾಕೂಟಗಳಲ್ಲಿ ಪ್ರತಿವರ್ಷ ಹೊಸ ದಾಖಲೆಗಳು ಆಗುತ್ತಲೇ ಇರುತ್ತವೆ. ಮನುಷ್ಯನ ಮನೋಬಲದ ಎಲ್ಲೆಗಳು ವಿಸ್ತರಿಸುತ್ತಿರುತ್ತವೆ. ಈ ಸಂಗತಿಗಳು ಕೂಡ ವಿಕಾಸವಾದದಲ್ಲಿ ಅಡಕವಾಗಿದೆ. ಪಠ್ಯಗಳನ್ನು ಆಧಾರವಾಗಿಟ್ಟುಕೊಂಡು ಬೋಧಕರು ಅದನ್ನು ಸೃಜನಶೀಲವಾಗಿ ಬೆಳೆಸಬೇಕು. ಎನ್ ಸಿ ಇ ಆರ್ ಟಿ ತನ್ನ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕು. ಒಂದು ಪಠ್ಯವನ್ನು ನೆಪವಾಗಿಟ್ಟುಕೊಂಡು ಅದಕ್ಕೆ ಪ್ರತಿಭೆಯ ವಿವಿಧ ಆಯಾಮಗಳನ್ನು ಶಿಕ್ಷಕರು ನೀಡಬೇಕು. ಇದಕ್ಕಾಗಿ ಅವರು ನಿರಂತರ ಅಧ್ಯಯನಶೀಲರಾಗಿರಬೇಕು. ಇಂಥ ಪ್ರವೃತ್ತಿಗಳಿಗೆ ಪಠ್ಯಗಳು ಒತ್ತಾಸೆ ನೀಡಬೇಕು. ಈ ಕಾರ್ಯ ಎನ್ ಸಿ ಇ ಆರ್ ಟಿ ಎಂಬ ಸಂಸ್ಥೆಗಳ ದೊಡ್ದ ಹೊಣೆಗಾರಿಕೆಯಾಗಿರುತ್ತದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೦೪-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ