ಡಾ. ಎಂ. ಎಸ್. ವಿಜಯಾ ಹರನ್ ರವರು ಸಂಪಾದಿಸಿ ಹೊರತಂದ ಪುಸ್ತಕ, 'ನಮ್ಮ ಭೈರಪ್ಪನವರು' !
ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ ದಾರಿಯಲ್ಲಿ ಒಬ್ಬರೇ ಸಾಗುತ್ತಾರೆ. ಧರ್ಯ, ಜೀವನಪ್ರೀತಿ ಮತ್ತು ಎಲ್ಲವನ್ನೂ ತನಗೆ ತಾನೇ ಗ್ರಹಿಸಿ ತಿಳಿದುಕೊಳ್ಳುವ ಪರಿ ಅವರ ಜೀವನವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಇಂಗ್ಲಿಷ್ ಶಿಕ್ಷಕ. ಆರಿಸಿಕೊಂಡ ವಿಷಯ : ಫಿಲೊಸೊಫಿ. ಆದರೆ ಅವರು ಮಾಡಿದ ಕೃಷಿ ಕನ್ನಡ ಕಾದಂಬರಿಗಳನ್ನು ರಚಿಸುವುದರ ಮೂಲಕ. ಬರೆದ ೨೪ ಕಾದಂಬರಿಗಳೂ ಅವರ ಜೀವನದ ಅನುಭವದ ಕ್ಷಣಗಳನ್ನು ಹರಳುಗಟ್ಟಿಸಿ ಹೆಣೆದ ದಿವ್ಯ ವಸ್ತ್ರಗಳು.
ಈಗ ಭೈರಪ್ಪನವರ ಅಸಂಖ್ಯ ಓದುಗರು ತಮ್ಮ ಪ್ರೀತಿಯ ಧಾರೆಯನ್ನು ಒಂದು ಪುಸ್ತಕದಲ್ಲಿ ಅಡಗಿಟ್ಟಿಸಿರುವ ಹೊತ್ತಿಗೆ ಎಂದರೆ ಡಾ. ಎಂ. ಎಸ್. ವಿಜಯಾ ಹರನ್ ರವರು ಸಂಪಾದಿಸಿ ಹೊರತಂದ 'ನಮ್ಮ ಭೈರಪ್ಪನವರು' ! ಇವರ ಬಗ್ಗೆ ಬರೆದ ನುಡಿನಮನ. ಇದರಲ್ಲಿ ಕೇವಲ ೧೦೬ ಪ್ರೀತಿಯ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಬಂದ ಪತ್ರಗಳು ಅಪಾರ ಸಂಖ್ಯೆಯಲ್ಲಿ. ಹಿರಿಯ ಕನ್ನಡ ವಿದ್ವಾಂಸ, ಭಾಷಾಂತರ ತಜ್ಞ ಡಾ. ಪ್ರಧಾನ ಗುರುದತ್ತರು ಹಿನ್ನುಡಿ ಬರೆದಿದ್ದಾರೆ. ಪುಸ್ತಕದಲ್ಲಿ ವಿದ್ವಾನ್ ಡಾ. ಎಚ್. ವಿ. ನಾಗರಾಜರಾವ್, ಡಾ. ವಸುಂಧರಾ ದೊರೈಸ್ವಾಮಿ, ಡಾ. ಉಮಾ. ವಿ. ಕುಲಕರ್ಣಿ,ಉಮಾ ರಾಮರಾವ್,ನಾಗಲಕ್ಷ್ಮೀ ಹರಿಹರೇಶ್ವರ, ಸಂಸ್ಕೃತಿ ಸುಬ್ರಹ್ಮಣ್ಯ, ವಿದ್ವಾನ್ ಜಿ. ಎಸ್. ನಟೇಶ್, ಮೊದಲಾದರು ಭೈರಪ್ಪನವರ ಕೃತಿಗಳನ್ನು ಓದಿ ಅದರ ಬಗ್ಗೆ ತಮ್ಮ ಅನುಭವಗಳನ್ನು ಬರೆದಿದ್ದಾರೆ.
೨೦೧೯ ರಲ್ಲಿ ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ರೂಪುಗೊಂಡಿದೆ. ಶಿಕ್ಷಣ, ಸಾಹಿತ್ಯ, ಕಲಾಕ್ಷೇತ್ರಗಳಲ್ಲಿ ಜ್ಞಾನ ಪ್ರಸರಣ ಹೆಚ್ಚಿಸುವುದು ಮತ್ತು ಭೈರಪ್ಪನವರ ಅಮೋಘ ಕಾದಂಬರಿಗಳನ್ನು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಹೊರತರುವ ಮಹಾದೋದ್ದೇಶವಿದೆ.
ಡಾ. ಭೈರಪ್ಪನವರ ಪ್ರಿಯ ಓದುಗರು ಬೇಕಾದರೆ ಕೆಳಗೆ ಕೊಟ್ಟಿರುವ ಪುಸ್ತಕ ವ್ಯಾಪಾರಿಗಳನ್ನು ಸಂಪರ್ಕಿಸಿ ಮೇಲಿನ ಪುಸ್ತಕವನ್ನು ಅಂಚೆಯಲ್ಲಿ ಪಡೆಯಬಹುದು.
ಸಂಕೃತಿ ಬುಕ್ ಪ್ಯಾರಡೈಸ್
# ೯೦೯ /೧ ಬಿ. ಪದ್ಮ, ಮೊದಲನೆಯ ಮಹಡಿ.
೧ ನೆಯ ಮುಖ್ಯ ರಸ್ತೆ, ಲಕ್ಷ್ಮೀ ಪುರಂ, ಮೈಸೂರು -೫೭೦ ೦೦೪
ಮೊ : ೯೮೮೬೧೭೫೦೧೦/೯೪೪೮೦ ೩೭೭೬೨
e-mail : samskruthisubramanya@gmail.com
Comments
'ನಮ್ಮ ಭೈರಪ್ಪನವರು'
ಕನ್ನಡದ ಅತ್ಯಂತ ಪ್ರಭಾವಿ ಜನಪ್ರಿಯ ಕಾದಂಬರಿಗಾರ ಡಾ. ಎಸ್ ಎಲ್ ಭೈರಪ್ಪನವರು, ಭಾರತದಾದ್ಯಂತ ಅಖಿಲ ಭಾರತ ಸ್ತರದ ಲೇಖಕರಾಗಿ ಹಲವು ದಶಕಗಳಿಂದ ಕಾದಂಬರಿ ಕೃಷಿಮಾಡುತ್ತಾ, ೨೪ ಅಮೂಲ್ಯ ಪುಸ್ತಕಗಳನ್ನು ಕೊಟ್ಟಿದ್ದಾರೆ. ವಂಶವೃಕ್ಷ ಬರೆದಮೇಲೆ ಅವರ ಕೀರ್ತಿ ಬಹಳವಾಗಿ ದೇಶದಾದ್ಯಂತ ಹೆಚ್ಚಿತು. ಮುಂದೆ ರಚಿಸಿದ ಸಾಮಾಜಿಕ, ಮನೋವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ, ವೈಜ್ಞಾನಿಕ, ಸಮಕಾಲೀನ, ಮೊದಲಾದ ಪ್ರಕಾರಗಳಲ್ಲಿ ಭೈರಪ್ಪನವರು ಗಮನಾರ್ಹ ಕೊಡುಗೆ ಕೊಟ್ಟಿದ್ದಾರೆ.
ಒಂದು ಕಾದಂಬರಿಯ ಒಳನೋಟಗಳನ್ನು ಚಿತ್ರಿಸುವಾಗ, ಅಧ್ಯಯನ, ಮತ್ತು ಅನುಸಂಧಾನವೆಷ್ಟು ಪ್ರಾಮುಖ್ಯತೆ ವಹಿಸುತ್ತದೆ, ಎನ್ನುವ ವಿಚಾರವನ್ನು ಅವರ 'ಪರ್ವ' ಕಾದಂಬರಿ ಬರೆಯುವಾಗ ನಾವು ಅವಲೋಕಿಸಬಹುದು ( ತಮ್ಮ ಕಾರ್ಯಾಲಯಕ್ಕೆ ವೇತನವಿಲ್ಲದೆ ಒಂದು ವರ್ಷ ರಜೆ ಪಡೆದು, ಕಾದಂಬರಿಯನ್ನು ಪೂರ್ಣಗೊಳಿಸುತ್ತಾರೆ) ಇವುಗಳ ಅನುವಾದಿತ ಕೃತಿಗಳು ಭಾರತದ ಕನ್ನಡೇತರರನ್ನೂ ಚಕಿತಗೊಳಿಸಿದೆ. ಉತ್ತರಾಖಂಡ, ಯಾನ,ಆವರಣ, ಮಂದ್ರ, ಸಾರ್ಥ, ತಂತು, ಪರ್ವ, ದಾಟು, ಗೃಹಭಂಗ, ತಬ್ಬಲಿಯು ನೀನಾದೆ ಮಗನೆ, ಪುಸ್ತಕಗಳು ಜನಮಾನಸದ ಜನಪ್ರಿಯತೆಯನ್ನು ಕಂಡಿವೆ.
ಭೈರಪ್ಪನವರ ತತ್ವ ಶಾಸ್ತ್ರ ಸಂಬಂಧಿ ಅಧ್ಯಯನ,ಮತ್ತು ಅದರ ಹಿನ್ನೆಲೆಯಲ್ಲಿ ಮಾಡಿದ ಸಾಹಿತ್ಯಿಕ ಸಾಧನೆಗಳನ್ನು ಕಣ್ಣಾರೆ ಅವಲೋಕಿಸಿದ ಅಮೆರಿಕೆಯ ಮಹಿಳೆಯೋರ್ವಳು, ಭೈರಪ್ಪನವರಿಗೆ 'ವಿಶ್ವಕವಿ ಪ್ರಶಸ್ತಿ'ಯನ್ನು ಪ್ರಧಾನಿಸಿ ಗೌರವಿಸಲು ಹೆಣಗುತ್ತಿದ್ದಾಗ ಅದನ್ನು ತಿಳಿದ ಭೈರಪ್ಪನವರು ಅದನ್ನು ನಿರಾಕರಿಸಿದರು. ಹಲವಾರು ಪ್ರಶಸ್ತಿಗಳನ್ನು ಅವರು ಒಪ್ಪಿಕೊಳ್ಳಲಿಲ್ಲ. ಎಂದೋ ಅವರಿಗೆ ಸಲ್ಲಬೇಕಾಗಿದ್ದ 'ಜ್ಞಾನ ಪೀಠ ಪ್ರಶಸ್ತಿ' ಯನ್ನೂ ಅವರು ತಲೆಗೆ ಹಚ್ಚಿಕೊಳ್ಳುವುದೇ ಇಲ್ಲ. ರವೀಂದ್ರನಾಥ ಠಾಕೂರ್, ಬಂಕಿಮ್,ಚಂದ್ರ ಛಟರ್ಜಿ, ಶರಶ್ಚಂದ್ರ, ಪ್ರೇಮಚಂದ್ ರ ನಂತರ ನಮ್ಮ ಭೈರಪ್ಪನವರೇ ಆ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲುತ್ತಾರೆ.
ಭೈರಪ್ಪನವರ ಜೀವನ ಚರಿತ್ರೆಯನ್ನು ತಿಳಿಸುವ 'ಭಿತ್ತಿ'ಯನ್ನು ಓದಿ ಅದೆಷ್ಟು ಜನರ ಜೀವನದಲ್ಲಿ ಪ್ರಗತಿಯತ್ತ, ಗಮನಾರ್ಹ ಬದಲಾವಣೆಗಳಾಗಿವೆ ಎನ್ನುವುದನ್ನು ನೋಡಿದರೆ ವಿಸ್ಮಯವಾಗುತ್ತದೆ. ಭೈರಪ್ಪನವರೇ ಹೇಳುವಂತೆ, "ಒಬ್ಬ ಕವಿ ಸಮಾಜವನ್ನು ಬದಲಾಯಿಸಲಾರ; ಸಾಧ್ಯವಾದರೆ, ಓದುಗರ ಸಂವೇದನೆಗಳನ್ನು ಸೂಕ್ಷ್ಮವಾಗಿಸಬಹುದು ಅಷ್ಟೆ" ಎನ್ನುತ್ತಾರೆ. ಆದರೆ ನಾವೇ ನಮ್ಮ ಭೈರಪ್ಪನವರು ಪುಸ್ತಕದ ಓದುಗರ ಅನಿಸಿಕೆಗಳನ್ನು ಗಮನಿಸಿದರೆ, ಕೆಲವರ ಜೀವನದ ದಾರಿಯೇ ಬದಲಾಯಿಸಿ ಅವರನ್ನು ಸ್ವಾವಲಂಬಿ, ಉನ್ನತ ಆದರ್ಶಗಳ ಪ್ರತಿಪಾದಕರಾಗಿ ಬೆಳೆಯಲು ಸಾಧ್ಯವಾಯಿತು ಎನ್ನುವ ವಿಚಾರ ಗಮನಕ್ಕೆ ಬರುತ್ತದೆ.
"ನಮ್ಮ ಭೈರಪ್ಪನವರು"- "ಓದುಗರ ಮನದಾಳದ ಮಾತು"
ಕನ್ನಡ ನಾಡಿನ ಅತ್ಯಂತ ಜನಪ್ರಿಯತೆಯ ಉತ್ತುಂಗದಲ್ಲಿರುವ ಡಾ. ಎಸ್ ಎಲ್. ಭೈರಪ್ಪನವರು ೯೦ ವರ್ಷದ ಹೊಸ್ತಿಲಿನಲ್ಲಿ ಕಾಲಿಡುತ್ತಿದ್ದಾರೆ. ಅವರ ಸಮರ್ಥ ಹೋರಾಟಮಯ ಬದುಕಿನಲ್ಲಿ ಯಾವುದಕ್ಕೂ ಜಗ್ಗದೆ ಸತ್ಯಾನ್ವೇಷಣೆಯನ್ನೇ ತಮ್ಮ ಪ್ರಮುಖ ಆದ್ಯತೆಗಳೊಂದಾಗಿ ಆರಿಸಿಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ಅನುಪಮಕೊಡುಗೆಯನ್ನು ಕೊಟ್ಟಿದ್ದಾರೆ. ಈ ಸಮಯದಲ್ಲಿ ಡಾ. ಎಂ ಎಸ್ ವಿಜಯಾ ಹರನ್ ಮತ್ತು ಸಂಗಡಿಗರು ಮುಂದಾಳತ್ವವಹಿಸಿ "ನಮ್ಮ ಭೈರಪ್ಪನವರು"- "ಓದುಗರ ಮನದಾಳದ ಮಾತು" ಎನ್ನುವ ಉತ್ತಮ ಹೊತ್ತಿಗೆಯನ್ನು ಹೊರತಂದಿದ್ದಾರೆ. ಇದನ್ನು ಕನ್ನಡಿಗರು ಆಸ್ವಾದಿಸಿ, ಭೈರಪ್ಪನವರ ಸಾಹಿತ್ಯದ ಎಲ್ಲಾ ಪ್ರಾಕಾರಗಳನ್ನು ಅವಲೋಕಿಸಬೇಕಾಗಿ ವಿನಂತಿ.
ನನ್ನಿಂದಾದ ದೊಡ್ಡ ತಪ್ಪು..
ಡಾ. ಎಸ್. ಎಲ್. ಭೈರಪ್ಪನವರ ಅತ್ಯಂತ ಮಹತ್ವದ ಕೃತಿಗಳಲ್ಲೊಂದಾದ 'ಉತ್ತರಕಾಂಡ' ಪ್ರಮಾದವಶಾತ್ 'ಉತ್ತರಾಖಂಡ' ವೆಂದು ಬರೆಯಲ್ಪಟ್ಟಿದೆ. (ಉತ್ತರಭಾರತದ ಉತ್ತರ ಖಂಡ/'ಉತ್ತರಾಖಂಡ' ಕ್ಕೂ ನಮ್ಮ ಪ್ರೀತಿಯ ಭೈರಪ್ಪನವರ ರಾಮಾಯಣದ ಪ್ರಸಂಗ ನಿರೂಪಣೆಗೂ ಯಾವುದೇ ಸಂಬಂಧವಿಲ್ಲ) 'ಅದು ನನ್ನಿಂದಾದ ದೊಡ್ಡ ತಪ್ಪು' ಎಂದು ತಮ್ಮೆಲ್ಲರಿಗೆ ಮನವರಿಕೆ ಮಾಡುತ್ತೇನೆ. "ಉತ್ತರ ಕಾಂಡ"ದಲ್ಲಿನ ವೈದೇಹಿಯ ಪಾತ್ರ ರಚನೆ ಅದ್ಭುತವಾಗಿದೆ. ಪದೇ ಪದೇ ಜನಜನಿತವಾಗಿರುವ ರಾಮಾಯಣ ಮಹಾಕಾವ್ಯವನ್ನು ಓದಿದಾಗಲೆಲ್ಲ, 'ಸೀತೆ' ಏನೋ ಒಂದು ತರಹದ ಕನಿಕರಕ್ಕೆ ಪಾತ್ರಳಾದವಳು ಎನ್ನುವ ಪ್ರಜ್ಞೆಯಿಂದ ನಾವು ಹೊರಗೆ ಬರುತ್ತೇವೆ. ಅವಳದು ಗಟ್ಟಿ ಪಾತ್ರ.