ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ

ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ

ಡಾ. ಜಿ. ಕೆ. ವೀರೇಶ್ ಅವರು ಫೆಬ್ರವರಿ ೬, ೨೦೨೪ರಂದು ವಿಧಿವಶರಾದರು. ಸುಮಾರು ಒಂಭತ್ತು ದಶಕಗಳ ತುಂಬು ಜೀವನ ನಡೆಸಿದ ಅವರು ನನ್ನ ಗುರುಗಳು. ಅವರನ್ನು ನನ್ನ ಸಹಪಾಠಿಗಳಾದ ಹಲವು ಬಿ. ಎಸ್ಸಿ. (ಕೃಷಿ) ಪದವೀಧರರು "ನಿಜವಾದ ಮಾರ್ಗದರ್ಶಕ" ಎಂದು ಸ್ಮರಿಸಿದ್ದಾರೆ.

ಅವರ ನಿಧನದ ಸುದ್ದಿ ತಿಳಿದಾಗ, ಬೆಂಗಳೂರಿನ ಗಂಗಾನಗರದ ನಾಲ್ಕನೇ ಮುಖ್ಯರಸ್ತೆಯ "ಶ್ರೀನಿಧಿ" ಮನೆಯಲ್ಲಿ ಆರು ವರುಷಗಳ ಮುಂಚೆ ಅವರನ್ನು ಕೊನೆಯ ಬಾರಿ ಭೇಟಿಯಾದದ್ದು ನನಗೆ ನೆನಪಾಯಿತು. ಅದು, ಅವರು ಮತ್ತು ನಾನು ಸಹಲೇಖಕರಾಗಿದ್ದ "ಕೃಷಿ ವಿಜ್ಞಾನ" ಎಂಬ ಪುಸ್ತಕದ ಪ್ರಕಟಣೆಯ ನಂತರದ ಭೇಟಿ. ಎಂತಹ ಸರಳ, ಸಜ್ಜನ ವ್ಯಕ್ತಿ ಅವರು!

ಡಾ. ಗೊದ್ದು ವೀರೇಶ್ ಅವರು ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಆಡಳಿತಗಾರರಾಗಿ ವೃತ್ತಿ ಬದುಕಿನ ಪ್ರತೀ ಹಂತದಲ್ಲಿ ತಮ್ಮ ಛಾಪು ಮೂಡಿಸಿದವರು. ನಾಲ್ಕು ದಶಕಗಳ ಸೇವೆ ಸಲ್ಲಿಸಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಸ್ಥಾನದಿಂದ ೧೯೮೮ರಲ್ಲಿ ನಿವೃತ್ತರಾದರು.

ತನ್ನ ಸೇವಾವಧಿಯಲ್ಲಿ ಅವರು ಪ್ರಕಟಿಸಿದ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆ ೨೦೦ ದಾಟಿತ್ತು. ಹಲವು ಪುಸ್ತಕಗಳನ್ನು ಬರೆದು ತಮ್ಮ ಅಧ್ಯಯನ ಮತ್ತು ಅನುಭವಗಳನ್ನು ಧಾರೆ ಎರೆದಿದ್ದಾರೆ. ಮೂವತ್ತು ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಕೀಟಶಾಸ್ತ್ರದಲ್ಲಿ ನಾಲ್ಕು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಜರಗಿಸಿದ್ದು ಅವರ ಹೆಗ್ಗಳಿಕೆ.  

ಇಂಡಿಯನ್ ಸೊಸೈಟಿ ಆಫ್ ಸಾಯಿಲ್ ಬಯಾಲಜಿ ಅಂಡ್ ಇಕಾಲಜಿ; ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಸ್ಟಡಿ ಆಫ್ ಸೋಶಿಯಲ್ ಇನ್-ಸೆಕ್ಟ್ಸ್ (ಇಂಡಿಯನ್ ಚಾಪ್ಟರ್); ಯು. ಎ . ಎಸ್. ಅಲ್ಯುಮ್ನಿ ಅಸೋಸಿಯೇಷನ್; ಅಸೋಸಿಯೇಷನ್ ಫಾರ್ ಪ್ರೊಮೋಷನ್ ಆಫ್ ಆರ್ಗಾನಿಕ್ ಫಾರ್ಮಿಂಗ್ - ಈ ನಾಲ್ಕು ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು ಡಾ. ವೀರೇಶ್ ಎಂಬುದು ಅವರ ಸಂಘಟನಾ ಸಾಮರ್ಥ್ಯದ ಪುರಾವೆ. ಜೊತೆಗೆ, ಇಂಟರ್ ನ್ಯಾಷನಲ್ ಪಾರ್ಟಿಸಿಪೇಶನ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ (ಯು. ಎಸ್. ಎ.) ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರು ಹಾಗೂ ಅನೇಕ ವಿಜ್ಞಾನ ಸಂಘಸಂಸ್ಥೆಗಳ ಸಲಹೆಗಾರರಾಗಿದ್ದರು.

ಪತ್ನಿ ಶಾರದಾ, ಪುತ್ರಿಯರಾದ ಕವಿತಾ ಮತ್ತು ಸವಿತಾ ಹಾಗೂ ಮಗ ಭರತ್ - ಇವರನ್ನು ಅಗಲಿದ್ದಾರೆ.

ಡಾ. ವೀರೇಶ್ ಅವರು ಸಮಾಜಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿದ ಬಹು ದೊಡ್ಡ ಸೇವೆ ಬೆಂಗಳೂರಿನ ಜಿ. ಕೆ. ವಿ. ಕೆ. ಕ್ಯಾಂಪಸ್ ಮತ್ತು ಕರ್ನಾಟಕದ ಹಲವಾರು ಕೃಷಿ ಸಂಶೋಧನಾ ಕೇಂದ್ರಗಳಿಗೆ ಸರಕಾರದಿಂದ ಮಂಜೂರಾಗಿದ್ದ ಜಮೀನುಗಳಲ್ಲಿ ಅತಿಕ್ರಮಣದಿಂದಾಗಿ ಕೈತಪ್ಪಿ ಹೋಗಲಿದ್ದ ಜಮೀನುಗಳನ್ನೆಲ್ಲ ಕಾನೂನಾತ್ಮಕ ಕ್ರಮಗಳ ಮೂಲಕ ಮರಳಿ ವಶಕ್ಕೆ ಪಡೆದದ್ದು. ಜಿ. ಕೆ. ವಿ. ಕೆ. ಕ್ಯಾಂಪಸಿನಲ್ಲಿ ಒಬ್ಬ ಬಿಲ್ಡರ್ ಆವರಣ ಗೋಡೆ ಕಟ್ಟಿ ಅತಿಕ್ರಮಣ ಮಾಡಿದ್ದ ಸುಮಾರು ಅರುವತ್ತು ಎಕರೆ ಜಮೀನನ್ನು ದಿಟ್ಟ ಕ್ರಮ ಕೈಗೊಂಡು ಕೃಷಿ ವಿಶ್ವ ವಿದ್ಯಾಲಯಕ್ಕೆ ಉಳಿಸಿದ್ದಂತೂ ಚಿರಸ್ಮರಣೀಯ. ಇದರಿಂದಾಗಿ, ಆ ಜಮೀನುಗಳು ಕೃಷಿ ಸಂಶೋಧನೆಗಳನ್ನು ಜರಗಿಸಲಿಕ್ಕಾಗಿ ಇಂದು ಲಭ್ಯವಾಗಿವೆ ಎಂಬುದನ್ನು ಗಮನಿಸಬೇಕು.

"ಬಯಸದೆ ಬಂದದ್ದು" ಅವರ ಆತ್ಮ ಕಥನ. ಇದನ್ನು ಬರೆದ ಹಿನ್ನೆಲೆಯ ಬಗ್ಗೆ ಅವರು ದಾಖಲಿಸಿದ ಮಾಹಿತಿ: "ನಾನು ಕುಲಪತಿ ಸ್ಥಾನದಿಂದ ನಿವೃತ್ತಿಯಾದ ತಕ್ಷಣ ತುರ್ತಾಗಿ ಅಮೆರಿಕಾಕ್ಕೆ ಹೋಗಬೇಕಾದ ಸಂದರ್ಭ, ಮಗಳ ಮನೆಯಲ್ಲಿ ಮುಂಜಾನೆಯಿಂದ ಸಂಜೆಯ ವರೆಗೆ ನಾನೊಬ್ಬನೇ ವಿನಾಕಾರಣ ಕಾಲ ಕಳೆಯಬೇಕಾದ ಅನಿವಾರ್ಯತೆಯಿಂದ .... ನೆನಪಿನಲ್ಲಿರುವುದಷ್ಟನ್ನು ಬರೆಯಲು ಪ್ರಾರಂಭಿಸಿದೆ. ಸುಮಾರು ಅರವತ್ತು ವರುಷಗಳ ನೆನಪು ಮರುಕಳಿಸಿ ಕೈ ತಪ್ಪುವ ಮುಂಚೆಯೇ ಮನಸ್ಸಿಗೆ ತೋಚಿದ ಹಾಗೆ ಬರೆದಿದ್ದರಿಂದ ಭಾಷೆ, ಸಾಹಿತ್ಯ, ಒಕ್ಕಣೆಗಳಿಗೆ ಅಷ್ಟಾಗಿ ಒತ್ತು ಕೊಡಲಾಗಿಲ್ಲ. ಆದರೆ ವಿಷಯಗಳನ್ನು ಸತ್ಯಾಂಶಗಳಿಂದ ದೂರವಿಡಲಿಲ್ಲ. ಅಂತೂ ಮುಕ್ಕಾಲು ಭಾಗ ನಾಲ್ಕೈದು ವಾರದಲ್ಲಿ ಬರೆದಿದ್ದಾಯಿತು..."

ಇದು ಕನ್ನಡದಲ್ಲಿ ಡಾ. ವೀರೇಶರ ಮೊದಲ ಕೃತಿ. ಅವರ ಸತ್ಯನಿಷ್ಠೆ, ನೇರಮಾತು ಹಾಗೂ ಸರಳ ನಿರೂಪಣೆಯಿಂದಾಗಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. "ನನ್ನ ಹುಟ್ಟೂರು" ಎಂಬ ಅಧ್ಯಾಯದಲ್ಲಿ ಅವರ ಬಾಲ್ಯದ ನೆನಪುಗಳನ್ನು ಬರೆದಿದ್ದಾರೆ. ಅದು ಆಗಿನ ಗ್ರಾಮೀಣ ಬದುಕಿನ ಒಂದು ಅಪೂರ್ವ ದಾಖಲೆ. "ವಿದ್ಯಾರ್ಜನೆ" ಅಧ್ಯಾಯದಲ್ಲಿ ಹೆಬ್ಬಾಳದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಸಿಗುವ ವರೆಗಿನ ವಿಧಿಯಾಟಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಮುಂದಿನ ಅಧ್ಯಾಯಗಳಲ್ಲಿ ತನ್ನ ವೃತ್ತಿ ಜೀವನದ ಅನುಭವ ಹಾಗೂ ಸವಾಲುಗಳನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಇದು ಈಗಿನ ತಲೆಮಾರಿನ ಯುವಜನರಿಗೆ ಪ್ರೇರಣೆಯಾಗಬಲ್ಲ ಆತ್ಮಕಥನ.

ಆತ್ಮಕಥನದ ಕೊನೆಯ (೧೧ನೇ) ಅಧ್ಯಾಯ "ಸಂಪ್ರಾಪ್ತಿ"ಯಲ್ಲಿ ಡಾ. ಜಿ. ಕೆ. ವೀರೇಶ್ ಬರೆದಿರುವ ಸಂಗತಿಯೊಂದು ಅವರ ಬದುಕಿನ ಧೋರಣೆಯ ಬಗ್ಗೆ ಬೆಳಕು ಚೆಲ್ಲುತ್ತದೆ: "ಜೀವನದಲ್ಲಿ ನಾನು ಹೇಳಿಕೊಳ್ಳುವಂತಹದ್ದೇನನ್ನೂ ಗಳಿಸದಿದ್ದರೂ ನನ್ನ ಪುಟ್ಟ ಪುಸ್ತಕ ಭಂಡಾರ ನನ್ನ ಸರ್ವಸ್ವವಾಗಿದೆ. ಆತ್ಮ ಚೈತನ್ಯ ಕುಗ್ಗಿದಾಗ ಅದು ನನ್ನ ಸಹಾಯಕ್ಕೆ ಬರುತ್ತದೆ.... ನನ್ನ ಬೋಧನೆ ಮತ್ತು ಸಂಶೋಧನೆಯ ವಿಷಯಗಳಿಗೆ ಸಂಬಂಧಪಟ್ಟ ಲೇಖನ, ಪುಸ್ತಕ, ಪ್ರಬಂಧಗಳನ್ನು ಓದುವುದನ್ನು ಬಿಟ್ಟರೆ ಬೇರೆ ಪುಸ್ತಕಗಳನ್ನು ಗಾಢವಾಗಿ ಓದುವ ಅವಕಾಶ ಅಷ್ಟಾಗಿ ಇರಲಿಲ್ಲವೆಂದೇ ಹೇಳಬೇಕು. ಆದರೂ ಆಗಾಗ ಒಳ್ಳೊಳ್ಳೆಯ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ಓದಿದ ನೆನಪಿದೆ. ಮನೆಯಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ನೂರಾರು ಪುಸ್ತಕಗಳ ಜೊತೆ ತತ್ವಜ್ಞಾನಕ್ಕೆ ಸಂಬಂಧಪಟ್ಟ ಹಲವು ಕೃತಿಗಳು, ಕಾದಂಬರಿಗಳು, ಆತ್ಮಕಥೆ ಇದ್ದರೂ ಪುನಃ ಪುನಃ ನೋಡುತ್ತಿರುವಂತಹವು ಕೆ. ವಿ. ಪುಟ್ಟಪ್ಪನವರ ರಾಮಾಯಣ ದರ್ಶನ, ಡಿ. ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಮತ್ತು ಥಾಮಸ್ ಆ. ಕೆಂಪಿಸ್ ಅವರ "ಆಫ್ ದಿ ಇಮಿಟೇಷನ್ ಆಫ್ ಕ್ರಿಸ್ತ್ ".... "

ನಮ್ಮ ಗುರುಗಳಾದ ಡಾ. ಜಿ. ಕೆ. ವೀರೇಶ್ ಈಗ ನಮ್ಮೊಂದಿಗಿಲ್ಲ. ನುಡಿದಂತೆ ನಡೆದ, ನಡೆದಂತೆ ಬರೆದ ಅವರ ಬದುಕು ಹಾಗೂ ಸಾಧನೆ, ಅಂತಹ ಉನ್ನತಿಗೇರಲು ನಮಗೆಲ್ಲರಿಗೂ ಪ್ರೇರಣೆಯಾಗಲಿ.

ಡಾ. ಜಿ. ಕೆ. ವೀರೇಶರ ಫೋಟೋ ಕ್ರೆಡಿಟ್: ಎಚ್. ಪಿ. ನಾಡಿಗ್
ಫೋಟೋ ೨: "ಬಯಸದೆ ಬಂದದ್ದು" ಆತ್ಮಕಥನದ ಮುಖಪುಟ
ಫೋಟೋ ೩: "ಕೃಷಿ ವಿಜ್ಞಾನ" ಪುಸ್ತಕದ ಮುಖಪುಟ